ಬೆಂಗಳೂರು: ‘ಮಳೆಗಾಲದಲ್ಲಿ ಯಾವುದೇ ತೊಂದರೆ ಉಂಟಾಗದಂತೆ ಕ್ರಮಗಳನ್ನು ಕೈಗೊಳ್ಳಲು ಬಿಬಿಎಂಪಿ ವಲಯಗಳ ಉಪವಿಭಾಗಗಳ ಹಂತದಲ್ಲಿ ವಿಪತ್ತು ನಿರ್ವಹಣಾ ತಂಡಗಳನ್ನು ನಿಯೋಜನೆ ಮಾಡಲಾಗುವುದು‘ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ನಗರದಲ್ಲಿ ವಿಪತ್ತು ನಿರ್ವಹಣೆಗಾಗಿ ತೆಗೆದುಕೊಳ್ಳಬೇಕಾಗಿರುವ ಕ್ರಮಗಳ ಕುರಿತು ಸೋಮವಾರ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.
ಪಾಲಿಕೆ, ಜಲಮಂಡಳಿ, ಬೆಸ್ಕಾಂ, ಮೆಟ್ರೊ, ಅಗ್ನಿಶಾಮಕ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ವಿಪತ್ತು ನಿರ್ವಹಣಾ ತಂಡಗಳನ್ನು ರಚಿಸಲಾಗಿದೆ. ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗುವುದು, ಮ್ಯಾನ್ ಹೋಲ್‌ಗಳು ತೆರೆದುಕೊಳ್ಳುವುದು, ಮರ/ವಿದ್ಯುತ್ ಕಂಬಗಳು ಬೀಳುವಂತಹ ಘಟನೆಗಳು ನಡೆಯುತ್ತಿವೆ. ಮಳೆಯಿಂದಾಗುವ ಅನಾಹುತಗಳನ್ನು ತಡೆಗಟ್ಟಲು ಆಯಾ ವಲಯಗಳ ಉಪ ವಿಭಾಗಗಳಲ್ಲಿ ವಿಪತ್ತು ನಿರ್ವಹಣಾ ತಂಡಗಳು ಸಿದ್ದವಾಗಿರಬೇಕು ಎಂದು ಸೂಚಿಸಿದರು.
ಒಂದು ವಾರದಿಂದ ನಗರದ ವಿವಿಧೆಡೆ ಮಳೆಯಾಗುತ್ತಿದೆ. ಸುಮಾರು 150 ಕಡೆಗಳಲ್ಲಿ ನೀರು ನಿಂತಿತ್ತು. ನಿಂತ ನೀರು ಎರಡು ಗಂಟೆಯೊಳಗಾಗಿ ಹರಿದುಹೋಗಿದ್ದು, ಯಾವುದೇ ರೀತಿಯ ಸಮಸ್ಯೆಯಾಗಿಲ್ಲ. ಇಲ್ಲಿಯವರೆಗೆ 325 ಮರಗಳು ಬಿದ್ದಿದ್ದು, ಅದರಲ್ಲಿ 320 ಮರಗಳನ್ನು ತೆರವುಗೊಳಿಸಲಾಗಿದೆ. 698 ಕೊಂಬೆಗಳು ಬಿದ್ದಿದ್ದು, 650 ತೆರವುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮಳೆ–ಗಾಳಿಯಿಂದಾಗಿ ಮುರಿದು ಬಿದ್ದ ಮರ, ರೆಂಬೆಗಳನ್ನು ತೆರವುಗೊಳಿಸಲು 39 ತಂಡಗಳು ಕಾರ್ಯನಿರ್ವಹಿಸುತ್ತಿವೆ. ರಸ್ತೆ ಬದಿ ಹಾಕಿರುವಂತಹ ರೆಂಬೆಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.
ಪಾಲಿಕೆ ವ್ಯಾಪ್ತಿಯಲ್ಲಿ 225 ವಾರ್ಡ್‌ಗಳಲ್ಲಿ ಚರಂಡಿಯ ಹೂಳೆತ್ತಲು ಪ್ರತಿ ವಾರ್ಡ್‌ಗೆ ತಲಾ ₹ 30 ಲಕ್ಷ ಮೀಸಲಿಡಲಾಗಿದೆ. ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಲ್ಲಿ ವಿಪತ್ತು ನಿರ್ವಹಣೆಗಾಗಿ ಈ ಬಾರಿಯ ಬಜೆಟ್‌ನಲ್ಲಿ ₹10 ಕೋಟಿ ಮೀಸಲಿಡಲಾಗಿದೆ. ಈಗಿರುವ ಸಮಸ್ಯೆಗಳ ನಿವಾರಣೆಗೆ ಈ ಅನುದಾನವನ್ನು ಬಳಕೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಬೇಕಿದೆ 74 ಕಡೆ ಶಾಶ್ವತ ಪರಿಹಾರ: ನಗರದಲ್ಲಿ 198 ಪ್ರವಾಹಪೀಡಿತ ಪ್ರದೇಶಗಳಿದ್ದು, ಅದರಲ್ಲಿ 74 ಪ್ರದೇಶಗಳಲ್ಲಿ ಇನ್ನೂ ಶಾಶ್ವತ ಪರಿಹಾರದ ವ್ಯವಸ್ಥೆಯಾಗಿಲ್ಲ ಎಂದು ತುಷಾರ್ ಗಿರಿನಾಥ್ ಹೇಳಿದರು.
‘124 ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಈಗಾಗಲೇ ಶಾಶ್ವತ ಪರಿಹಾರವನ್ನು ಮಾಡಲಾಗಿದೆ. ಈ ಸ್ಥಳಗಳಿಗೆ ವಲಯ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸಿ ಏನಾದರೂ ಸಮಸ್ಯೆಯಿದ್ದರೆ ಕೂಡಲೇ ಕಾಮಗಾರಿ ಕೈಗೊಂಡು ಸರಿಪಡಿಸಬೇಕು. ಉಳಿದ 74 ಪ್ರದೇಶಗಳಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಶೀಘ್ರ ಶಾಶ್ವತ ಪರಿಹಾರ ಕೈಗೊಳ್ಳಲಾಗುವುದು’ ಎಂದು ವಿವರಿಸಿದರು.
ಸಭೆಯಲ್ಲಿ ಬಿಬಿಎಂಪಿ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಕೆ.ಹರೀಶ್ ಕುಮಾರ್, ಸುರೋಳ್ಕರ್ ವಿಕಾಸ್ ಕಿಶೋರ್, ಶಿವಾನಂದ ಕಲಕೇರಿ, ವಲಯ ಆಯುಕ್ತರಾದ ಆರ್.ಎಲ್ ದೀಪಕ್, ವಿನೊತ್ ಪ್ರಿಯಾ, ರಮೇಶ್, ಶಿವಾನಂದ ಕಾಪಸಿ, ಸ್ನೇಹಲ್, ರಮ್ಯಾ, ಪ್ರೀತಿ ಗೆಹಲೋತ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.