ADVERTISEMENT

ಬಿಬಿಎಂಪಿ ವಿಭಜನೆ: ನೀವೇನನ್ನುತ್ತೀರಿ?

​ಪ್ರಜಾವಾಣಿ ವಾರ್ತೆ
Published 25 ಜೂನ್ 2024, 4:15 IST
Last Updated 25 ಜೂನ್ 2024, 4:15 IST
ಬಿಬಿಎಂಪಿ ಕೇಂದ್ರ ಕಚೇರಿಯ ಸಂಗ್ರಹ ಚಿತ್ರ
ಬಿಬಿಎಂಪಿ ಕೇಂದ್ರ ಕಚೇರಿಯ ಸಂಗ್ರಹ ಚಿತ್ರ   

ಕಾಗಕ್ಕ ಗುಬ್ಬಕ್ಕನ ಕಥೆ ಬೇಡ

ಬಿಬಿಎಂಪಿಯನ್ನು ವಿಭಜನೆ... ವಿಭಜನೆ.. ಮಾಡುತ್ತೇವೆಂಬ ಪರಿಪಾಠದ ಭಜನೆ ಬಿಟ್ಟು ಚುನಾವಣೆ ನಡೆಸಲಿ. ನ್ಯಾಯಾಲಯಗಳು ಛೀಮಾರಿ ಹಾಕಿದರೂ ಹಿಂದಿನ ಹಾಗೂ ಈಗಿನ ಸರ್ಕಾರಗಳು ತಲೆ ಹೋಗುವಂತಹದ್ದು ಏನೇನೂ ಇಲ್ಲವೆಂಬಂತೆ ವರ್ತಿಸುತ್ತಿವೆ. ನ್ಯಾಯಕ್ಕೂ, ನ್ಯಾಯಾಲಯಕ್ಕೂ ಕವಡೆ ಕಾಸಿಗೂ ಬೆಲೆ ಇಲ್ಲದಂತಾಗಿದೆ. ಕಾಗಕ್ಕ ಗುಬ್ಬಕ್ಕನ ಕಥೆ ಹೇಳದೆ ಚುನಾವಣೆ ನಡೆಸಬೇಕು.

ಬಿ.ಕೋ. ರಾಜೀವ, ಬೆಂಗಳೂರು

ವಿಭಜನೆ ಮಾಡಿ ಚುನಾವಣೆ ನಡೆಸಿ

ಪಾಲಿಕೆಯನ್ನು ತಲಾ 80 ವಾರ್ಡ್‌ಗಳ ಐದು ಪಾಲಿಕೆಯನ್ನಾಗಿ ಮಾಡುವ ರಾಜ್ಯ ಸರ್ಕಾರದ ಯೋಚನೆ ಒಳ್ಳೆಯ ನಿರ್ಧಾರ. ಖಜಾನೆಗೆ ಅತಿಹೆಚ್ಚು ವರಮಾನ ತೆರಿಗೆ ತಂದುಕೊಡುವ ಮಹದೇವಪುರ ವಲಯಕ್ಕೆ ಅಭಿವೃದ್ಧಿಗಾಗಿ ಪ್ರತಿ ವರ್ಷ ಕಡಿಮೆ ಹಣ ಹಂಚಲಾಗುತ್ತಿದೆ. ಬೇರೆ ವಲಯಗಳಿಗೆ ಹೋಲಿಸಿದರೆ ಇಲ್ಲಿ ಅಭಿವೃದ್ಧಿ ಹಾಗೂ ಮೂಲಸೌಕರ್ಯ ಕಡಿಮೆ. ವಿಭಜನೆ ಮಾಡಿ, ಪಾಲಿಕೆಗಳಿಗೆ ಚುನಾವಣೆ ನಡೆಸಬೇಕು

ADVERTISEMENT

ಕಿರಣ್ ಕುಮಾರ್ ಜೆ, ಮೇಡಹಳ್ಳಿ, ಕೃಷ್ಣರಾಜಪುರ

ಚುನಾವಣೆ ನಡೆಸದಿರಲು ನೆಪ

ಯಾವುದೇ ಸರ್ಕಾರ ಬಂದರೂ ಬಿಬಿಎಂಪಿಗೆ ಚುನಾವಣೆ ಮಾಡಲ್ಲ. ಇದಕ್ಕೆ ಕಾರಣವಾಗಿ, ಬಿಬಿಎಂಪಿ ವ್ಯಾಪ್ತಿಗೆ ಬರುವ ಪಕ್ಕದ ಪ್ರದೇಶವನ್ನು ಸೇರಿಸುವ ನೆಪ ಹೇಳುತ್ತಾರೆ. ಚುನಾವಣೆ ಮಾಡಲು ಬೆಂಗಳೂರಿನ ಶಾಸಕರಿಗೆ ಇಷ್ಟವಿರುವುದಿಲ್ಲ. ಎಲ್ಲ ಪಕ್ಷದ ಶಾಸಕರಿಗೂ ಬೇರೆಯವರು (ಕಾರ್ಪೊರೇಟರ್‌ಗಳು) ನಗರದಲ್ಲಿ ಅಧಿಕಾರಕ್ಕೆ ಬರುವುದು ಇಷ್ಟವಿಲ್ಲ. ಹೀಗಾಗಿ ವಿಭಜನೆಯ ನೆಪ ಹೇಳುತ್ತಿದ್ದಾರೆ.

ಕೆ.ಎಂ. ನಾಗೇಂದ್ರ, ಕೋನೇನ ಅಗ್ರಹಾರ, ಎಚ್‌ಎಎಲ್‌

ಪ್ರಯೋಜನ ಮುಂದಿಡಲಿ

ವಿಭಜನೆ ಅಂದರೆ ಅಧಿಕಾರಿ ಮತ್ತು ರಾಜಕಾರಣಿಗಳಿಗೆ ಅಚ್ಚುಮೆಚ್ಚು. ಇಂತಹ ವಿಭಜನೆಗಳಿಂದ ಅಧಿಕಾರಿಗಳಿಗೆ ಅನೇಕ ಹೊಸ ಹುದ್ದೆಗಳು ಸೃಷ್ಟಿಯಾಗಿ ಅವರಿಗೆ ಪದೋನ್ನತಿಗಳು ದೊರೆಯುತ್ತವೆ. ಅಸಂತುಷ್ಟ ರಾಜಕಾರಣಿಗಳನ್ನು ಸಂತೃಷ್ಟಗೊಳಿಸಲು ಹೆಚ್ಚು ಮೇಯರ್ ಮುಂತಾದ ಹುದ್ದೆಗಳು ಸೃಷ್ಟಿಯಾಗುತ್ತವೆ. ವಿಭಜನೆಯಿಂದಾಗುವ ಸಕಾರಾತ್ಮಕ ಪರಿಣಾಮಗಳನ್ನು ಜನರ ಮುಂದಿಡಬೇಕು. ಉಪಯೋಗಗಳನ್ನು ಸ್ಪಷ್ಟಪಡಿಸಬೇಕು. ಎಲ್ಲ ಮುಚ್ಚಿಟ್ಟು, ಅನುಕೂಲ ಸಿಂಧು ನೀತಿ ಆಗಬಾರದು.

ಗುರುರಾಜ ಹ. ನಾಯಕ, ರಾಘವೇಂದ್ರ ಬಡಾವಣೆ, ಬನ್ನೇರುಘಟ್ಟ ರಸ್ತೆ

ವಿಭಜನೆಯಿಂದ ಅಪಾಯ

ಬಿಬಿಎಂಪಿಯನ್ನು ಐದು ವಿಭಾಗಳಾಗಿ ಮಾಡಿದರೆ, ಪರಭಾಷಿಕರ ಪ್ರಾಬಲ್ಯ ಹೆಚ್ಚಾಗಿ, ಅವರೇ ಮೇಯರ್‌ಗಳಾಗುತ್ತಾರೆ. ಪರಭಾಷಿಕರ ಆಡಳಿತಕ್ಕೊಳಪಟ್ಟು ನಂತರ ಅವರವರ ವಿಭಾಗದ ಕೌನ್ಸಿಲ್‌ನಲ್ಲಿ ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶಕ್ಕೆ ಸೇರಿಸಬೇಕೆಂಬ ನಿರ್ಣಯವನ್ನೂ ಮಾಡುತ್ತಾರೆ. ನಾವು, ನೀವು ಏನು ಮಾಡೋದು? ಬೇಕಿದ್ದರೆ ಐದು ವಲಯ ಮಾಡಿ, ಐದು ಜನ ಮುಖ್ಯ ಆಯುಕ್ತರನ್ನು ನೇಮಿಸಿ.

ರಕ್ಷಿತ್ ಗೌಡ ಎಂ, ಬೆಂಗಳೂರು

ಕೆಲಸ–ಕಾರ್ಯ ಸುಗಮ

ಬಿಬಿಎಂಪಿಯನ್ನು ಐದು ವಿಭಾಗಗಳಾಗಿ ವಿಂಗಡಿಸುವುದು ಸೂಕ್ತ. ಪೂರ್ಣ ಅಧಿಕಾರವೆಲ್ಲ ಕೇಂದ್ರೀಕೃತಗೊಂಡಿದ್ದು ಸಾರ್ವಜನಿಕರ ಕಾರ್ಯಗಳು ಸುಗಮವಾಗಿ ನಡೆಯಲು ಸಾಧ್ಯವಾಗುತ್ತಿಲ್ಲ. ಪ್ರತಿ ಸಮಸ್ಯೆಗೂ ಮುಖ್ಯ ಆಯುಕ್ತರಿಗೆ ದೂರು ನೀಡಬೇಕಾಗಿದೆ. ಐದು ವಿಭಾಗಗಳಾಗಿ ವಿಂಗಡಿಸಿ ಅಲ್ಲಿಗೆ ಸಮರ್ಥ ಅಧಿಕಾರಿಗಳನ್ನು ನೇಮಿಸಿದಲ್ಲಿ ಅಧಿಕಾರ ವಿಕೇಂದ್ರೀಕರಣಗೊಂಡು ಸಾರ್ವಜನಿಕ ಕೆಲಸಗಳು ಸುಗಮವಾಗುತ್ತದೆ.

ಎಚ್. ದೊಡ್ಡಮಾರಯ್ಯ, ಬಿಟಿಎಂ ಲೇಔಟ್

ವಿಭಜನೆಯಿಂದ ಆರೋಗ್ಯಕರ ಬೆಂಗಳೂರು

ಪ್ರಜೆಗಳ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಲು ಬಿಬಿಎಂಪಿ ವಿಭಜನೆ ಅವಶ್ಯ. ಜನಸಂಖ್ಯೆ ಹೆಚ್ಚುತ್ತಿರುವ ನಮ್ಮ ಕಾಸ್ಮೋಪಾಲಿಟನ್ ಬೆಂಗಳೂರು ನಗರದಲ್ಲಿ ಹೆಚ್ಚಿನ ಸವಲತ್ತುಗಳು ಹಾಗೂ ಅದನ್ನು ನಿರ್ವಹಿಸಲು ಸೂಕ್ತ ಮಾನವ ಸಂಪನ್ಮೂಲ ಅಗತ್ಯ. ವಿಭಜನೆ ಮಾಡಿದರೆ ಆರೋಗ್ಯಕರ ಬೆಂಗಳೂರನ್ನು ನಾವು ನೋಡಬಹುದು ಹಾಗೂ ಉದ್ಯೋಗವೂ ಹೆಚ್ಚುತ್ತದೆ. ವಿಸ್ತಾರವಾಗಿರುವ ಬೆಂಗಳೂರು ಇನ್ನೂ ಹಲವರನ್ನು ಆಕರ್ಷಿಸುತ್ತದೆ.

ರಾಜ್‌ಕುಮಾರ್ ಕೆ, ರಾಮಗೊಂಡನಹಳ್ಳಿ, ಹಗದೂರು

ಬೆಂಗಳೂರು ಒನ್, ಟು, ತ್ರೀ, ಫೋರ್!

ಬೆಂಗಳೂರು ಅಭಿವೃದ್ಧಿ ಹಾಗೂ ಆಡಳಿತ ವಿಕೇಂದ್ರೀಕರಣ ದೃಷ್ಟಿಯಿಂದ ನಾಲ್ಕು ವಿಭಾಗ ಮಾಡುವುದು ಸರಿಯಾದ ನಿರ್ಧಾರ. ಆದರೆ ನಾಲ್ಕು ವಿಭಾಗಗಳಿಗೂ ಒಬ್ಬರೇ ಮೇಯರ್ ಇದ್ದು, ಒಂದೊಂದು ವಿಭಾಗಕ್ಕೆ ಒಬ್ಬೊಬ್ಬ ಉಪಮೇಯರ್ ಆಯ್ಕೆ ಮಾಡಬೇಕು. ಇವರ ಅವಧಿ ಎರಡೂವರೆ ವರ್ಷ ನಿಗದಿಪಡಿಸಬೇಕು. ಐದು ವರ್ಷಕ್ಕೆ ಒಮ್ಮೆ ತಪ್ಪದೇ ಪಾಲಿಕೆ ಚುನಾವಣೆ ನಡೆಸಬೇಕು. ನಾಲ್ಕು ವಿಭಾಗಗಳಿಗೂ ಬೆಂಗಳೂರು ಒನ್, ಟು, ತ್ರೀ, ಫೋರ್ ಎ೦ದು ಕರೆಯಬೇಕು ಒಂದೊಂದು ವಲಯಕ್ಕೆ ಸ್ವತಂತ್ರ ಬಜೆಟ್ ಹಾಗೂ ಆಯುಕ್ತರ ನೇಮಿಸಬೇಕು.

ಎಚ್.ಸಿ. ಶ್ರೀನಿವಾಸ, ಆರ್.ಆರ್. ನಗರ

ಬಿಬಿಎಂಪಿ ವಿಭಜನೆ ಆಗಲೇಬೇಕು

ಬಿಬಿಎಂಪಿ ತನ್ನ ಸ್ವಂತ ಬಲದಿಂದ ಸಂಗ್ರಹಿಸುತ್ತಿರುವ ಆದಾಯ ಸುಮಾರು ಹತ್ತು ಸಾವಿರ ಕೋಟಿ ರೂಪಾಯಿ. ಉಳಿದಿದ್ದು, ರಾಜ್ಯ ಸರ್ಕಾರದ ಅನುದಾನದಿಂದ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು. ಹೀಗಾಗಿ ಬಿಬಿಎಂಪಿ ಅನ್ನು ಐದು ಪ್ರತ್ಯೇಕ ಪಾಲಿಕೆಗಳನ್ನಾಗಿ ವಿಭಜಿಸಲೇಬೇಕು. ಆರ್ಥಿಕ ಕ್ರೋಡೀಕರಣದಲ್ಲಿ ಹಿಂದುಳಿಯುವ ಪಾಲಿಕೆಗಳಿಗೆ ರಾಜ್ಯ ಸರ್ಕಾರವು ಹೆಚ್ಚಿನ ಅನುದಾನ ಬಿಡುಗಡೆಗೊಳಿಸಬೇಕು.

ಡಾ.ವಿಜಯಕುಮಾರ್ ಎಚ್. ಕೆ, ವಿದ್ಯಾರಣ್ಯಪುರ

ಒಂದೇ ಬಿಬಿಎಂಪಿ ಇರಲಿ

ಒಂದೇ ನಗರ, ಒಂದೇ ಬೆಂಗಳೂರು, ಒಂದೇ ಬಿಬಿಎಂಪಿ ಇರಬೇಕು. ವಿಭಜನೆ ಮಾಡದೆ, ಈಗಿರುವಂತೆಯೇ ಚುನಾವಣೆ ನಡೆಸಬೇಕು. ಮಹಾನಗರ ಕೇಂದ್ರ ಬೆಂಗಳೂರು ಈಗ ಹೇಗಿದೆಯೋ ಹಾಗೇ ಇರಲಿ.

ವೀರಕುಮಾರ್, ವಿದ್ಯಾರಣ್ಯಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.