ADVERTISEMENT

BBMP | ಬಿಬಿಎಂಪಿ ಚುನಾವಣೆ: ಸದ್ಯಕ್ಕೆ ಅಸಾಧ್ಯ?

ಆರ್. ಮಂಜುನಾಥ್
Published 24 ಅಕ್ಟೋಬರ್ 2023, 23:51 IST
Last Updated 24 ಅಕ್ಟೋಬರ್ 2023, 23:51 IST
-
-   

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಸದ್ಯಕ್ಕೆ ಚುನಾವಣೆ ನಡೆಯುವ ಸಾಧ್ಯತೆ ಕ್ಷೀಣಿಸಿದೆ.

‘ಡಿಸೆಂಬರ್‌ನೊಳಗೆ ಬಿಬಿಎಂಪಿಗೆ ಚುನಾವಣೆ ನಡೆಸುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಅಧಿಕಾರಕ್ಕೆ ಬಂದ ದಿನದಿಂದಲೂ ಹೇಳುತ್ತಿದ್ದಾರೆ. ಆದರೆ, ಅದಕ್ಕೆ ಬೇಕಾದ ಪ್ರಕ್ರಿಯೆಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಂಡಿಲ್ಲ. ಮೀಸಲಾತಿ ನಿಗದಿಪಡಿಸಲು ಜಾತಿ ಗಣತಿ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗದಿರುವುದೂ ಈ ಹಿನ್ನೆಡೆಗೆ ಕಾರಣ ಎಂಬ ಚರ್ಚೆಯೂ ಇದೆ.

ಲೋಕಸಭೆ ಚುನಾವಣೆ ಸಮೀಪವಾಗುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿಗೆ ಚುನಾವಣೆ ನಡೆಸುವುದು ರಾಜಕೀಯ ಪಕ್ಷಗಳಿಗೆ ಬೇಕಿಲ್ಲ. ‘ಲೋಕಸಭೆ ಅವಧಿ 2024ರ ಜೂನ್‌ನಲ್ಲಿ ಅಂತ್ಯಗೊಳ್ಳಲಿದೆ. ಹೀಗಾಗಿ ಚುನಾವಣೆ ನಡೆದರೆ ಡಿಸೆಂಬರ್‌ನೊಳಗೆ ನಡೆಯಬೇಕು. ಇಲ್ಲದಿದ್ದರೆ ಬೇಡ’ ಎಂದು ಪಕ್ಷಗಳ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಡಿಸೆಂಬರ್‌ನೊಳಗೆ  ಚುನಾವಣೆ ಪ್ರಕ್ರಿಯೆ ಮುಗಿಯಬೇಕಿದ್ದರೆ ಒಂದೂವರೆ ತಿಂಗಳ ಮೊದಲು ಚುನಾವಣೆ ಅಧಿಸೂಚನೆ ಪ್ರಕಟವಾಗಬೇಕು. ಅದಕ್ಕಿಂತ ಮೊದಲು ಮತದಾರರ ಪಟ್ಟಿ, ಅಧಿಕಾರಿಗಳ ನೇಮಕ ಸೇರಿದಂತೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಒಂದು ತಿಂಗಳು ಬೇಕಿದೆ.

ADVERTISEMENT

ಗೊಂದಲ ಏನು?: ಬಿಬಿಎಂಪಿ ವ್ಯಾಪ್ತಿಯ 225 ವಾರ್ಡ್‌ಗಳ ಮೀಸಲಾತಿಯನ್ನು 10 ವರ್ಗಗಳಿಗೆ ನೀಡಲಾಗುತ್ತದೆ. ಶೇ 24.10ರಷ್ಟು (54–55 ವಾರ್ಡ್‌) ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ; ಶೇ 34.17ರಷ್ಟು ಹಿಂದುಳಿದ ವರ್ಗಗಳಿಗೆ (ಒಬಿಸಿ) ನೀಡಬೇಕು. 77 ವಾರ್ಡ್‌ಗಳನ್ನು ಹಿಂದುಳಿದ ಪ್ರವರ್ಗ– ಎ (ಬಿಸಿಎ) ಹಾಗೂ 11 ವಾರ್ಡ್‌ಗಳನ್ನು ಹಿಂದುಳಿದ ಪ್ರವರ್ಗ– ಬಿ ಪ್ರವರ್ಗಕ್ಕೆ ಮೀಸಲಿಡಬೇಕಾಗುತ್ತದೆ. ಆದರೆ ಈಗಿನ ಲೆಕ್ಕಾಚಾರದ ಪ್ರಕಾರ, ಒಬಿಸಿಗೆ ಅಷ್ಟೊಂದು ವಾರ್ಡ್‌ ಮೀಸಲು ನೀಡಬೇಕಾದರೆ ಬೆಂಗಳೂರಿನಲ್ಲಿ ಆ ಮಟ್ಟದ ಜನಸಂಖ್ಯೆ ಇಲ್ಲ. ಹೀಗಾಗಿ, ಮೀಸಲಾತಿ ನಿಗದಿಪಡಿಸುವಲ್ಲಿ ಗೊಂದಲವಾಗುತ್ತಿದೆ.

ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಜಾತಿ ಗಣತಿ ವರದಿಯನ್ನು ಸರ್ಕಾರಕ್ಕೆ ಇನ್ನೂ ನೀಡಿಲ್ಲ. ಅದು ಸರ್ಕಾರಕ್ಕೆ ಸಲ್ಲಿಕೆಯಾದ ಮೇಲೆ, ಚರ್ಚೆ, ಸ್ವೀಕಾರದ ಪ್ರಕ್ರಿಯೆ ಮುಗಿಯಬೇಕು. ನಂತರ ಅದರ ಅನುಸಾರ ಬಿಬಿಎಂಪಿ ವಾರ್ಡ್‌ ಮೀಸಲಾತಿ ನಿಗದಿಪಡಿಸಬೇಕು. ಕರಡು ಪಟ್ಟಿ, ಅಂತಿಮ ಪಟ್ಟಿ ಅಧಿಸೂಚನೆಗೆ ಕನಿಷ್ಠ 15 ದಿನದ ಅವಕಾಶ ಬೇಕಿದೆ.

ಆಸಕ್ತಿ ಇಲ್ಲ: ‘ಬಿಬಿಎಂಪಿಗೆ ಚುನಾಯಿತ ಪ್ರತಿನಿಧಿಗಳಿಲ್ಲದೆ ಮೂರು ವರ್ಷ ಮುಗಿದಿದೆ. ಆದರೂ, ರಾಜಕೀಯ ಪಕ್ಷಗಳ ಪ್ರಮುಖ ನಾಯಕರಿಗೆ ಚುನಾವಣೆ ನಡೆಸಲು ಆಸಕ್ತಿ ಇಲ್ಲ. ಶಾಸಕ ಹಾಗೂ ಸಚಿವರ ಆಣತಿಯಂತೆಯೇ ಸ್ಥಳೀಯ ಸಂಸ್ಥೆ ಆಡಳಿತ ನಡೆಯಬೇಕು ಎಂಬ ಹುನ್ನಾರ ಅವರದ್ದಾಗಿದೆ. ಹೀಗಾಗಿ ಒಂದೊಂದು ಬಾರಿ ಒಂದೊಂದು ರೀತಿಯ ಸಬೂಬು ಹೇಳುತ್ತಿದ್ದಾರೆ’ ಎಂದು ಕಾಂಗ್ರೆಸ್‌, ಬಿಜೆಪಿಗಳಲ್ಲಿ ಕಾರ್ಪೊರೇಟರ್‌ ಆಕಾಂಕ್ಷಿಗಳಾಗಿರುವವರು ದೂರುತ್ತಾರೆ.

ಮೀಸಲಾತಿ ನಿಗದಿಯಲ್ಲಿ ಸಮಸ್ಯೆ: ರಾಮಲಿಂಗಾರೆಡ್ಡಿ

‘ವಾರ್ಡ್‌ ಮೀಸಲಾತಿ ನಿಗದಿ ಮಾಡಲು ಒಬಿಸಿ ಮೀಸಲಿನ ಸ್ಪಷ್ಟತೆ ಇಲ್ಲ. ಹೀಗಾಗಿ ಜಾತಿ ವರದಿ ಅಗತ್ಯವಿದೆ. ಇಲ್ಲದಿದ್ದರೆ ಸುಪ್ರೀಂ ಕೋರ್ಟ್‌ ಹಾಗೂ ಇತರೆ ಕೋರ್ಟ್‌ಗಳಲ್ಲಿ ಸಮಸ್ಯೆಯಾಗುತ್ತದೆ. ಸುಪ್ರೀಂ ಕೋರ್ಟ್‌ ಎಲ್ಲವನ್ನೂ ಸಾಮಾನ್ಯ ಮಾಡಿ ಎಂದಿರುವುದರಿಂದ ಮಹಾರಾಷ್ಟ್ರದಲ್ಲಿ ಅದೇ ರೀತಿ ಚುನಾವಣೆ ಮಾಡಿದ್ದಾರೆ. ಮಧ್ಯಪ್ರದೇಶದಲ್ಲಿ ಜಾತಿ ಗಣತಿ ವರದಿಯಂತೆ ಮಾಡಿದ್ದಾರೆ. ಹೀಗಾಗಿ ನಾವೂ ವರದಿಗಾಗಿ ಕಾಯುತ್ತಿದ್ದೇವೆ. ಮೀಸಲಾತಿ ಗೊಂದಲಗಳಿಗೆಲ್ಲ ಸ್ಪಷ್ಟತೆ ದೊರೆಯಬೇಕಿದೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

‘ಒಂದು ತಿಂಗಳಲ್ಲಿ ಸಿದ್ಧತೆ ಸಾಧ್ಯ’

‘ಬಿಬಿಎಂಪಿ ಚುನಾವಣೆಗೆ ಒಂದು ತಿಂಗಳಲ್ಲಿ ಸಿದ್ಧತೆಗಳನ್ನು ಪೂರ್ಣಗೊಳಿಸಿಕೊಳ್ಳಬಹುದು. ವಾರ್ಡ್‌ ಮೀಸಲಾತಿ ಅಂತಿಮಗೊಂಡ ಮೇಲೆ ಮತದಾರರ ಪಟ್ಟಿಯನ್ನು ವಾರ್ಡ್‌ವಾರು ಸಿದ್ಧಪಡಿಸಬೇಕು. ವಾರ್ಡ್‌ ಮರು ವಿಂಗಡಣೆಯಾಗಿರುವುದರಿಂದ ಮತದಾರರ ಕರಡು ಪಟ್ಟಿ ಸಿದ್ಧಗೊಳಿಸಿ ನಂತರ ಅದನ್ನು ಅಂತಿಮಗೊಳಿಸಬೇಕು. ಚುನಾವಣೆಗೆ ಅಧಿಕಾರಿಗಳನ್ನು ಅಂತಿಮಗೊಳಿಸಬೇಕು’ ಎಂದು ರಾಜ್ಯ ಚುನಾವಣೆ ಆಯೋಗದ ಆಯುಕ್ತ ಬಿ. ಬಸವರಾಜು ತಿಳಿಸಿದರು. ‘ಮತದಾರರ ಪಟ್ಟಿ ಅಂತಿಮಗೊಂಡ ಮೇಲೆ ಚುನಾವಣೆ ದಿನಾಂಕ ನಿಗದಿ ಮಾಡಿ ಅಧಿಸೂಚನೆ ಹೊರಡಿಸಬೇಕು. ಮತದಾನದ ಒಂದು ತಿಂಗಳು ಮುನ್ನ ಈ ಅಧಿಸೂಚನೆ ಹೊರಡಿಸಬೇಕಿದೆ. ಒಟ್ಟಾರೆ ಕನಿಷ್ಠ ಎರಡು ತಿಂಗಳು ಬೇಕಾಗುತ್ತದೆ. ಲೋಕಸಭೆ ಚುನಾವಣೆಗಿಂತ ಆರು ತಿಂಗಳೊಳಗೆ ಬಿಬಿಎಂಪಿ ಚುನಾವಣೆ ಮುಗಿಸಬೇಕೆಂದೂ ಇಲ್ಲ. ಆದರೆ ಅದಕ್ಕೆ ತೊಂದರೆಯಾಗದಂತೆ ದಿನಾಂಕ ನಿಗದಿಪಡಿಸಬೇಕು. ಲೋಕಸಭೆಗೆ ಮೇನಲ್ಲಿ ಚುನಾವಣೆ ನಡೆದರೆ ಅವರು ಅಧಿಸೂಚನೆ ಹೊರಡಿಸುವ ಮುನ್ನದ ಒಂದು ತಿಂಗಳಲ್ಲಿ ಇಲ್ಲಿನ ಚುನಾವಣೆ ಪ್ರಕ್ರಿಯೆ ಮುಗಿಯಬೇಕು’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.