ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆಯ ವೇದಿಕೆ ಸಿದ್ಧವಾಗುತ್ತಿದೆ ಎಂಬ ಸಂದರ್ಭದಲ್ಲೇ ಮತ್ತೆ ವಿಭಜನೆಯ ಮಾತು ಕೇಳಿಬರುತ್ತಿದೆ. ಇದರಿಂದ ಚುನಾವಣೆ ಮತ್ತಷ್ಟು ತಿಂಗಳು ಮುಂದಕ್ಕೆ ಹೋಗಬಹುದೆಂಬ ಸಂಶಯ ದಟ್ಟವಾಗುತ್ತಿದೆ.
ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ತಮ್ಮ ಕಾರ್ಯಕರ್ತರಿಗೆ ವಿಧಾನಸಭೆ, ಲೋಕಸಭೆ ಚುನಾವಣೆ ಮುಗಿಯಲಿ ಎಂಬ ‘ದೂರದ ಬೆಟ್ಟ’ ತೋರಿಸುತ್ತಲೇ, ಬಿಬಿಎಂಪಿ ಚುನಾವಣೆಯನ್ನು ಮುಂದೂಡುತ್ತಲೇ ಬಂದವು. ವಿಧಾನಸಭೆ ಚುನಾವಣೆ ಮುಗಿಯಿತು, ಲೋಕಸಭೆ ಚುನಾವಣೆಯೂ ಅಂತ್ಯಗೊಂಡಿತು. ಆದರೆ ಬಿಬಿಎಂಪಿ ಚುನಾವಣೆ ಬಗ್ಗೆ ಮಾತ್ರ ಇನ್ನೂ ಸ್ಪಷ್ಟ ನಿರ್ಧಾರವಾಗಿಲ್ಲ.
ಲೋಕಸಭೆ ಚುನಾವಣೆ ಮುಗಿದ ಮೇಲೆ ಈ ಬಾರಿ ಇನ್ನೇನು ಚುನಾವಣೆ ನಡೆದೇ ಹೋಗುತ್ತದೆ ಎಂಬ ಮಾತಿತ್ತು. ಆದರೆ, ‘ವಿಭಜನೆ ತಂತ್ರದ’ ಮಾತು ಮತ್ತೆ ಮುನ್ನೆಲೆಗೆ ಬಂದಿದೆ. 2014ರಲ್ಲೂ ಲೋಕಸಭೆ ಚುನಾವಣೆ ನಡೆದ ಮೇಲೆ ಚುನಾವಣೆ ನಡೆಯುತ್ತದೆ ಎಂದು ಹೇಳಲಾಗುತ್ತಿತ್ತು. ಆಡಳಿತದಲ್ಲಿದ್ದ ಕಾಂಗ್ರೆಸ್ ರಾಜ್ಯದಲ್ಲಿ 9 ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರಿಂದ ಬಿಬಿಎಂಪಿ ಚುನಾವಣೆಯನ್ನು ನಡೆಸುವ ಗೋಜಿಗೇ ಹೋಗಲಿಲ್ಲ.
ಚುನಾವಣೆ ಮುಂದೂಡಿಕೆಗಾಗಿ ಬಿಬಿಎಂಪಿಯನ್ನು ಮೂರು ಭಾಗ ಮಾಡುವುದಾಗಿ ಹೇಳಿತ್ತು. ಅದನ್ನು ವಿಧಾನಮಂಡಲದಲ್ಲಿ ಮಂಡಿಸಿ, ಮೂರು ದಿನ ವಾದ–ವಿವಾದಗಳ ನಡುವೆ ಸಮ್ಮತಿಯನ್ನೂ ಪಡೆಯಲಾಗಿತ್ತು. ರಾಷ್ಟ್ರಪತಿಯವರ ಅಂಕಿತಕ್ಕೆ ಹೋದ ಆ ಮಸೂದೆ ವಾಪಸ್ ಬರಲಿಲ್ಲ. ವಿಭಜನೆಗೆ ಸ್ಥಳೀಯವಾಗಿ ವಿರೋಧ ವ್ಯಕ್ತವಾಗಿದ್ದರಿಂದ ಅದು ತಣ್ಣಗಾಯಿತು. ನ್ಯಾಯಾಲಯದ ಆದೇಶದಿಂದ 2015ರಲ್ಲಿ ಚುನಾವಣೆ ನಡೆಸಬೇಕಾಯಿತು. ಜೆಡಿಎಸ್ ಜೊತೆಗೂಡಿ ಕಾಂಗ್ರೆಸ್ ಅಧಿಕಾರಕ್ಕೂ ಬಂತು.
2020ರ ಸೆಪ್ಟೆಂಬರ್‌ನಲ್ಲಿ ಬಿಬಿಎಂಪಿ ಕೌನ್ಸಿಲ್ ಅವಧಿ ಅಂತ್ಯಗೊಂಡಿದೆ. ಬಹುತೇಕ ನಾಲ್ಕು ವರ್ಷವಾಗುತ್ತಿದ್ದರೂ ಇನ್ನೂ ಚುನಾವಣೆ ನಡೆಸುವ ಆಲೋಚನೆ ಮಾತ್ರ ಕೇಳಿಬರುತ್ತಿದೆ. ಚುನಾವಣೆಗಾಗಿ ಸರ್ಕಾರ ನಡೆಸಬೇಕಾದ ಪ್ರಕ್ರಿಯೆಗಳು ನಡೆದರೂ ಅವೆಲ್ಲವೂ ಚುನಾವಣೆಯನ್ನು ಮುಂದೂಡುವಂತಹವೇ ಆಗಿದ್ದವು. ಚುನಾವಣೆ ನಡೆಸಬೇಕಿದ್ದ ಬಿಜೆಪಿ ಸರ್ಕಾರ ವಾರ್ಡ್‌ಗಳನ್ನು ಹೆಚ್ಚಿಸುವ ಬಗ್ಗೆ ಪ್ರಕ್ರಿಯೆ ಆರಂಭಿಸಿತು. ಇದಕ್ಕಾಗಿ ಒಂದು ವರ್ಷಕ್ಕೂ ಹೆಚ್ಚು ಸಮಯ ತೆಗೆದುಕೊಂಡಿತು. 198ರಿಂದ 243 ವಾರ್ಡ್‌ಗಳನ್ನಾಗಿ ಪುನರ್ ವಿಂಗಡಿಸಲಾಯಿತು.
ವಾರ್ಡ್ ವಿಂಗಡಣೆ ಬೇಕಾಬಿಟ್ಟಿಯಾಗಿದ್ದು, ಜನಸಂಖ್ಯೆಗೆ ಅನುಗುಣವಾಗಿ ನಡೆದಿಲ್ಲ ಎಂಬ ಆರೋಪ ಕೇಳಿಬಂತು. ಮಾಜಿ ಕಾರ್ಪೊರೇಟರ್‌ಗಳು ನ್ಯಾಯಾಲಯಕ್ಕೂ ಹೋದರು. 243 ವಾರ್ಡ್‌ಗಳಿಗೆ ಮೀಸಲಾತಿಯನ್ನೂ ಬಿಜೆಪಿ ಸರ್ಕಾರ ಪ್ರಕಟಿಸಿತು. ಇದೂ ಸರಿಯಿಲ್ಲ ಎಂಬ ನ್ಯಾಯಾಲಯದ ಮೊರೆಹೋಗಲಾಯಿತು. ತೆರೆಯ ಹಿಂದೆ ಎಲ್ಲ ಪಕ್ಷಗಳ ಶಾಸಕರೂ ಇದ್ದರು. ಚುನಾವಣೆ ಮುಂದಕ್ಕೆ ಹೋಗುವ ಎಲ್ಲ ತಂತ್ರ– ಮಂತ್ರಗಳನ್ನೂ ಮಾಡಿದ್ದರು.
ಕಾಂಗ್ರೆಸ್ ಸರ್ಕಾರ 2023ರಲ್ಲಿ ಅಧಿಕಾರಕ್ಕೆ ಬಂದ ಮೇಲೆ ಹಿಂದಿನ ವಾರ್ಡ್ ಪುನರ್‌ವಿಂಗಡನೆಯನ್ನೇ ರದ್ದುಪಡಿಸಿ, ಕ್ಷಿಪ್ರಗತಿಯಲ್ಲಿ 225 ವಾರ್ಡ್‌ಗಳನ್ನು ರಚಿಸಿತು. ಚುನಾವಣೆ ನಡೆದೇ ಬಿಡುತ್ತದೇನೋ ಎಂದು ಆಲೋಚಿಸುವ ಸಂದರ್ಭದಲ್ಲೇ, ಮೀಸಲಾತಿ ಪ್ರಕಟಿಸಲು ‘ಜಾತಿ ಗಣತಿ’ ವರದಿ ಬರಬೇಕು ಎಂದು ಸಬೂಬು ಹೇಳಿತು. ಫೆಬ್ರುವರಿ ಅಂತ್ಯದಲ್ಲಿ ಆ ವರದಿ ಸಂದಾಯವಾದಾಗ ಲೋಕಸಭೆ ಚುನಾವಣೆ ಹತ್ತಿರವಿರುವ ಸಂದರ್ಭದಲ್ಲಿ ಬಿಬಿಎಂಪಿ ಚುನಾವಣೆ ಸಾಧ್ಯವಿಲ್ಲ ಎಂದು ಹೇಳಲಾಯಿತು.
ಲೋಕಸಭೆ ಚುನಾವಣೆ ಮುಗಿದ ಮೇಲೆ ಇದೀಗ ಮತ್ತೆ 2014ರ ಪರಿಸ್ಥಿತಿಯಲ್ಲೇ ಕಾಂಗ್ರೆಸ್ ಸರ್ಕಾರವಿದೆ. ಬಿಬಿಎಂಪಿಯ ಮೂರು ಕ್ಷೇತ್ರಗಳು ಸೇರಿದಂತೆ ಅಕ್ಕಪಕ್ಕದ ಎರಡೂ ಕ್ಷೇತ್ರಗಳು ಬಿಜೆಪಿ ಪಾಲಾಗಿವೆ. ಹೀಗಾಗಿ ಚುನಾವಣೆ ಮುಂದೂಡಲು ‘ವಿಭಜನೆ’ ಎಂಬ ಅಸ್ತ್ರ ಪ್ರಯೋಗಿಸಿದೆ ಎಂಬ ಆರೋಪ ಎದುರಾಗಿದೆ.
ಬೆಂಗಳೂರು ಮಹಾನಗರ ಪಾಲಿಕೆಯಿಂದ (ಬಿಎನ್‌ಪಿ) 2007ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾದ ಮೇಲೆ ನ್ಯಾಯಾಲಯದ ಆದೇಶದಿಂದಲೇ ಎರಡೂ ಚುನಾವಣೆ ನಡೆದಿತ್ತು.
100 ವಾರ್ಡ್‌ನಿಂದ 198 ವಾರ್ಡ್‌ಗಳು ಮರು ವಿಂಗಡಣೆಯ ನೆಪವೊಡ್ಡಿ ಅಂದಿನ ಬಿಜೆಪಿ ಸರ್ಕಾರ 2008ರಲ್ಲಿ ನಡೆಯಬೇಕಿದ್ದ ಚುನಾವಣೆಯನ್ನು ಮುಂದೂಡುತ್ತಾ ಬಂದಿತ್ತು. 2011ರ ಜನಸಂಖ್ಯೆ ಆಧಾರದಲ್ಲಿ ಚುನಾವಣೆ ನಡೆಸುತ್ತೇವೆ ಎಂದು ಸರ್ಕಾರ ವಾದಿಸಿತ್ತು. ಆದರೆ, ನ್ಯಾಯಾಲಯ ಆದೇಶ ನೀಡಿ, ಚುನಾವಣೆ ನಡೆಸಲು ಕಟ್ಟಪ್ಪಣೆ ಮಾಡಿತು. ಇದರಿಂದ 2010ರಲ್ಲಿ ಚುನಾವಣೆ ನಡೆದಿತ್ತು.
2014ರಲ್ಲಿ ಬಿಬಿಎಂಪಿ ಕೌನ್ಸಿಲ್ ಅವಧಿ ಮುಗಿದ ಮೇಲೆ ಮತ್ತೆ ಚುನಾವಣೆ ನಡೆಯಬೇಕಿತ್ತು. ಆಗಿದ್ದ ಕಾಂಗ್ರೆಸ್ ಸರ್ಕಾರ ಬಿಬಿಎಂಪಿಯನ್ನು ಮೂರು ಭಾಗವನ್ನಾಗಿ ವಿಭಜಿಸಲಾಗುತ್ತದೆ ಎಂದು ಹೇಳಿ ಚುನಾವಣೆಯನ್ನು ಮುಂದೂಡಲು ಪ್ರಯತ್ನಿಸಿತ್ತು. ಆಗ ನ್ಯಾಯಾಲಯದ ಮಧ್ಯ ಪ್ರವೇಶದಿಂದ 2015ರಲ್ಲಿ ಚುನಾವಣೆ ನಡೆಯಿತು.
‘ನ್ಯಾಯಾಲಯದ ಆದೇಶವಿದೆ, ಚುನಾವಣೆ ನಡೆಸಲೇಬೇಕಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳುತ್ತಿದ್ದಾರೆ. ಆದರೆ, 225 ವಾರ್ಡ್‌ಗಳಿಗೆ ಮೀಸಲಾತಿ ನಿಗದಿಪಡಿಸಬೇಕಾದರೆ ‘ಜಾತಿಗಣತಿ ವರದಿ’ಯನ್ನು ಸರ್ಕಾರ ಒಪ್ಪಬೇಕು. ಅದರಂತೆ ಅಧಿಸೂಚನೆಯಾಗಬೇಕು. ನಂತರ ವಾರ್ಡ್ ಮೀಸಲಾಗಬೇಕು. ಯುದ್ಧೋಪಾದಿಯಲ್ಲಿ ಇದೆಲ್ಲ ಪ್ರಕ್ರಿಯೆ ಮುಗಿದರೂ, ವಾರ್ಡ್ ಮೀಸಲಾತಿ ಪ್ರಕ್ರಿಯೆ ಮುಗಿಯಲು ನಾಲ್ಕು ತಿಂಗಳು ಬೇಕು. ಆ ಮೀಸಲಾತಿಯೂ ಸರಿ ಇಲ್ಲ ಎಂದು ನ್ಯಾಯಾಲಯಕ್ಕೆ ಯಾರಾದರೂ ಹೋದರೆ, ಮತ್ತೆ ಎಲ್ಲಕ್ಕೂ ತಡೆಯಾಗುತ್ತದೆ. ಎಲ್ಲ ಪಕ್ಷಗಳ ಶಾಸಕರು, ಸಚಿವರಿಗೂ ಬೇಕಿರುವುದು ಇದೇ, ತೆರೆಮರೆಯಲ್ಲಿ ಮಾಡುವುದೂ ಅದನ್ನೇ ಎನ್ನಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.