ADVERTISEMENT

ಬಿಬಿಎಂಪಿ ಚುನಾವಣೆ: ಹೆಚ್ಚಿದ ಗೊಂದಲ

ಅಧಿಸೂಚನೆಯಾದ ಮೇಲಷ್ಟೇ ವಾರ್ಡ್‌ನಲ್ಲಿ ಕೆಲಸ ಪ್ರಾರಂಭ: ಆಕಾಂಕ್ಷಿಗಳ ನಿರ್ಧಾರ

ಆರ್. ಮಂಜುನಾಥ್
Published 30 ಸೆಪ್ಟೆಂಬರ್ 2023, 0:30 IST
Last Updated 30 ಸೆಪ್ಟೆಂಬರ್ 2023, 0:30 IST
ಬಿಬಿಎಂಪಿ ಚುನಾವಣೆ: ಏಕ ಸದಸ್ಯ ಪೀಠದ ಆದೇಶ ರದ್ದು
ಬಿಬಿಎಂಪಿ ಚುನಾವಣೆ: ಏಕ ಸದಸ್ಯ ಪೀಠದ ಆದೇಶ ರದ್ದು   

ಬೆಂಗಳೂರು: ಬಿಬಿಎಂಪಿ ಚುನಾವಣೆ ನಡೆಯುತ್ತದೆಯೇ? ಎರಡು ವರ್ಷಗಳಿಂದ ಆಗಾಗ್ಗೆ ಹೆಚ್ಚು ಕೇಳಲಾಗುವ ಈ ಪ್ರಶ್ನೆಗೆ ಇಂದಿಗೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. 243 ವಾರ್ಡ್‌ಗಳನ್ನು 225ಕ್ಕೆ ಇಳಿಸಿ ಅಂತಿಮ ಅಧಿಸೂಚನೆ ಹೊರಡಿಸಿದ್ದರೂ ಗೊಂದಲ ಮತ್ತಷ್ಟು ಹೆಚ್ಚಾಗಿದೆ.

ಕಾಂಗ್ರೆಸ್‌– ಬಿಜೆಪಿ ಸೇರಿದಂತೆ ಕಾರ್ಪೊರೇಟರ್‌ ಆಕಾಂಕ್ಷಿಯಾಗಿರುವವರು ‘ಚುನಾವಣೆ ನಡೆಯುವ ಬಗ್ಗೆ ಫಿಫ್ಟಿ–ಫಿಫ್ಟಿ ಚಾನ್ಸ್‌ ಮಾತ್ರ ಇದೆ. ಮೊದಲು ವಿಧಾನಸಭೆ ಚುನಾವಣೆ ಎನ್ನಲಾಗುತ್ತಿತ್ತು. ಈಗ, ಲೋಕಸಭೆ ಚುನಾವಣೆ ಮುಗಿದ ಮೇಲೆ ಬಿಬಿಎಂಪಿ ಚುನಾವಣೆ ನಡೆಯಬಹುದು’ ಎನ್ನುತ್ತಿದ್ದಾರೆ.

ಕಳೆದ ಬಾರಿ 243 ವಾರ್ಡ್‌ಗಳಿಗೆ ಚುನಾವಣೆ ನಡೆಯುತ್ತದೆ ಎಂದು ಆಕಾಂಕ್ಷಿಗಳು ಸಾಕಷ್ಟು ಕೆಲಸಗಳನ್ನು, ವೆಚ್ಚಗಳನ್ನು ತಮ್ಮ ವ್ಯಾಪ್ತಿಯಲ್ಲಿ ಮಾಡಿದ್ದರು. ಆದರೆ, ‘ಈ ಬಾರಿ ಅಂತಹ ಸಾಹಸ ಮಾಡುವುದಿಲ್ಲ’ ಎಂಬುದು ಅವರ ಸ್ಪಷ್ಟ ಮಾತು.

ADVERTISEMENT

‘ಚುನಾವಣೆ ನಡೆಯುವ ಬಗ್ಗೆ ಚುನಾವಣೆ ಆಯೋಗ ಅಧಿಸೂಚನೆ ಹೊರಡಿಸಿದ ಮೇಲೆ ವಾರ್ಡ್‌ ವ್ಯಾಪ್ತಿಯಲ್ಲಿ ಕೆಲಸ ಆರಂಭಿಸುತ್ತೇವೆ. ಅಲ್ಲಿಯವರೆಗೆ ನಮಗೆ ಯಾರ ಮೇಲೂ ನಂಬಿಕೆ ಇಲ್ಲ. ಬಿಬಿಎಂಪಿ ಚುನಾವಣೆಯನ್ನು ಮುಂದೂಡುವಲ್ಲಿ ನಗರದ ಎಲ್ಲ ಶಾಸಕರೂ ಒಂದಾಗಿಯೇ ಇರುತ್ತಾರೆ. ಒಂದಿಬ್ಬರನ್ನು ಬಿಟ್ಟರೆ ಉಳಿದ ಯಾವ ಶಾಸಕರಿಗೂ ಪಾಲಿಕೆ ಚುನಾವಣೆ ಸದ್ಯಕ್ಕೆ ಬೇಕಾಗಿಲ್ಲ’ ಎಂಬು ಆಕಾಂಕ್ಷಿಗಳು ಹೇಳುತ್ತಾರೆ.

ವಾರ್ಡ್‌ ಗಡಿ ಗೊಂದಲ: ಬಿಜೆಪಿ ಅಧಿಕಾರದಲ್ಲಿದ್ದಾಗ ರಚಿಸಿದ್ದ 243 ವಾರ್ಡ್‌ಗಳನ್ನು ರದ್ದುಪಡಿಸಿ, 225 ವಾರ್ಡ್‌ಗಳನ್ನು ಕಾಂಗ್ರೆಸ್‌ ಸರ್ಕಾರ ಅಧಿಸೂಚಿಸಿದೆ. ‘ಕಾಂಗ್ರೆಸ್‌ ಆಕಾಂಕ್ಷಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಗಡಿಗಳನ್ನು ಬದಲಾಯಿಸಲಾಗಿದೆ’ ಎಂಬುದು ಬಿಜೆಪಿ ದೂರು. ‘ಈ ಹಿಂದೆ ನೀವು ಮಾಡಿಕೊಂಡಿದ್ದೂ ಅದೇ ಅಲ್ಲವೇ’ ಎಂಬುದು ಕಾಂಗ್ರೆಸ್‌ ಪ್ರಶ್ನೆ. ಹೀಗಾಗಿ, ಈ ಗಡಿ ಗೊಂದಲ ಮತ್ತೆ ನ್ಯಾಯಾಲಯದ ಮೆಟ್ಟಿಲೇರುವ ಸಂಭವವೇ ಹೆಚ್ಚಿದೆ.

ಮೀಸಲಾತಿ ಮತ್ತೆ ಗೊಂದಲ: ಬಿಬಿಎಂಪಿ ವ್ಯಾಪ್ತಿಯ 225 ವಾರ್ಡ್‌ಗಳ ಮೀಸಲಾತಿಯನ್ನು 10 ವರ್ಗಗಳಿಗೆ ನೀಡಬೇಕು. ಶೇ 24.10ರಷ್ಟು (54–55 ವಾರ್ಡ್‌) ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ, ಶೇ 34.17ರಷ್ಟು (77 ವಾರ್ಡ್‌) ಹಿಂದುಳಿದ ವರ್ಗ– ಎ ಪ್ರವರ್ಗ (ಬಿಸಿಎ) ಹಾಗೂ 11 ವಾರ್ಡ್‌ಗಳನ್ನು ಹಿಂದುಳಿದ ವರ್ಗ– ಬಿ ಪ್ರವರ್ಗಕ್ಕೆ ಮೀಸಲಿಡಬೇಕಾಗುತ್ತದೆ. 

‘ವಾರ್ಡ್‌ ಮೀಸಲಾತಿಯನ್ನು ಅಂತಿಮಗೊಳಿಸಿ, ಅಧಿಸೂಚಿಸಬೇಕಿದೆ. ಇದನ್ನು ಸರ್ಕಾರ ನ್ಯಾಯಾಲಯಕ್ಕೆ ಸಲ್ಲಿಸುವ ಸಂದರ್ಭದಲ್ಲಿ ಅದನ್ನು ಪ್ರಮಾಣೀಕರಿಸಿ ನೀಡಬೇಕಾಗುತ್ತದೆ. ಈ ಜಾತಿಗಳು, ಉಪ ಪಂಗಡಗಳ ಬಗ್ಗೆ ತಯಾರಿಸಿರುವ ಜಾತಿ ವರದಿಯನ್ನು ಸರ್ಕಾರವೇ ಇನ್ನೂ ಒಪ್ಪಿಕೊಂಡಿಲ್ಲ. ಅದನ್ನು ಸಚಿವ ಸಂಪುಟದಲ್ಲಿ ಒಪ್ಪಿಕೊಂಡು, ನಂತರ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಅದನ್ನು ನ್ಯಾಯಾಲಯ ಒಪ್ಪಿಕೊಳ್ಳಬೇಕು. ಈ ಪ್ರಕ್ರಿಯೆಯೇ ತಿಂಗಳುಗಟ್ಟಲೆ ನಡೆಯುತ್ತದೆ’ ಎಂದು ತಜ್ಞರು ಹೇಳುತ್ತಾರೆ.

‘ಹಿಂದುಳಿದ ವರ್ಗಗಳಿಗೆ ಸೇರಿದ ಜಾತಿಗಳನ್ನು ಅಧಿಸೂಚಿಸಿ ಅದನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಬೇಕಿದೆ. ಕರ್ನಾಟಕ ಸೇರಿದಂತೆ 17 ರಾಜ್ಯಗಳು ಇನ್ನೂ ಈ ವರದಿಯನ್ನು ಸಲ್ಲಿಸಿಲ್ಲ. ಕೇಂದ್ರ ಸಚಿವ ಸಂಪುಟ ಅದನ್ನು ಸ್ಥಿರೀಕರಿಸಿದ ಮೇಲೆ, ರಾಷ್ಟ್ರಪತಿಯವರು ಅಂಕಿತ ಹಾಕಬೇಕು. ಆಗಷ್ಟೇ ಗೊಂದಲ ಪರಿಹಾರವಾಗಲಿದೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.