ಬೆಂಗಳೂರು: ಬಿಬಿಎಂಪಿಗೆ 12,692 ಪೌರಕಾರ್ಮಿಕರನ್ನು ಅಂತಿಮವಾಗಿ ಆಯ್ಕೆ ಮಾಡಿ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಆಡಳಿತ ವಿಭಾಗದ ವಿಶೇಷ ಆಯುಕ್ತ ಅವಿನಾಶ್ ಮೆನನ್ ರಾಜೇಂದ್ರನ್ ತಿಳಿಸಿದರು.
ಪೌರಕಾರ್ಮಿಕ ಹುದ್ದೆಗಳಿಗೆ ಆಯ್ಕೆಯಾಗಿರುವ ಪೌರಕಾರ್ಮಿಕರ ಕರಡು ಆಯ್ಕೆ ಪಟ್ಟಿಯನ್ನು ಅಕ್ಟೋಬರ್ 9ರಂದು ಪ್ರಕಟಿಸಲಾಗಿತ್ತು. ವೆಬ್‌ಸೈಟ್ ಹಾಗೂ ಆಯಾ ವಲಯ ಜಂಟಿ ಆಯುಕ್ತರ ಕಚೇರಿ, ಘನತ್ಯಾಜ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಚೇರಿಯಲ್ಲೂ ಪ್ರಕಟಿಸಿ, ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು.
ವಲಯವಾರು ಸ್ವೀಕರಿಸಲಾದ ಆಕ್ಷೇಪಣೆಗಳನ್ನು ಪರಿಶೀಲಿಸಿ ಕ್ರಮವಹಿಸಿ ಅಂತಿಮವಾಗಿ 12,692 ಪೌರಕಾರ್ಮಿಕರನ್ನು ಆಯ್ಕೆ ಮಾಡಲಾಗಿದೆ. ಪೌರಕಾರ್ಮಿಕರ ಹುದ್ದೆಗೆ ಆಯ್ಕೆಯಾಗಿರುವವರು ಯಾವುದೇ ಆಮಿಷಗಳಿಗೆ ಒಳಗಾಗಬಾರದು. ಮಧ್ಯವರ್ತಿಗಳ ಮಾತುಗಳನ್ನು ಕೇಳಿ ವಂಚನೆಗಳಿಗೆ ಒಳಗಾಗಬಾರದು. ಘನತ್ಯಾಜ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಚೇರಿಗೆ ಭೇಟಿ ನೀಡಿ ಸಂದೇಹಗಳನ್ನು ಪರಿಹರಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಸರ್ಕಾರದಿಂದ ಮಾನ್ಯತೆ ಪಡೆದ ಜಾತಿ ಮೀಸಲಾತಿ ಪ್ರಮಾಣ ಪತ್ರ, ಕನ್ನಡ ಮಾಧ್ಯಮದ ಪ್ರಮಾಣ ಪತ್ರ, ಗ್ರಾಮೀಣ ಪ್ರಮಾಣ ಪತ್ರ, ಅಂಗವಿಕಲ ಪ್ರಮಾಣ ಪತ್ರ, ಯೋಜನಾ ನಿರಾಶ್ರಿತರ ಪ್ರಮಾಣ ಪತ್ರ, ಮಾಜಿ ಸೈನಿಕ ಪ್ರಮಾಣ ಪತ್ರ, ಕಲ್ಯಾಣ ಕರ್ನಾಟಕ ಪ್ರಮಾಣ ಪತ್ರ, ಲಿಂಗತ್ವ ಅಲ್ಪಸಂಖ್ಯಾತರು ಪ್ರಮಾಣ ಪತ್ರಗಳಲ್ಲಿ ಆಯ್ಕೆಯಾದವರು ಅವರಿಗೆ ಅನ್ವಯವಾಗುವ ದಾಖಲೆಗಳನ್ನು ಸಲ್ಲಿಸಬೇಕು. ವಲಯ ಮಟ್ಟದಲ್ಲಿ ರಚಿಸಲಾಗಿರುವ ದಾಖಲಾತಿ ಪರಿಶೀಲನಾ ತಂಡಗಳು ನ.25ರಿಂದ 30ರವರೆಗೆ ದಾಖಲೆಗಳನ್ನು ಖುದ್ದು ಹಾಜರುಪಡಿಸಬೇಕು ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.