ADVERTISEMENT

ಫ್ಲೆಕ್ಸ್‌ ತೆರವು ಚುರುಕುಗೊಳಿಸಿ: ಗೌರವ್‌ ಗುಪ್ತ

ಪೊಲೀಸ್‌ ಇಲಾಖೆಯ ಸಹಕಾರಕ್ಕಾಗಿ ಮನವಿ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2022, 19:29 IST
Last Updated 28 ಫೆಬ್ರುವರಿ 2022, 19:29 IST

ಬೆಂಗಳೂರು: 'ನಗರದಲ್ಲಿ ಅನಧಿಕೃತವಾಗಿ ಅಳವಡಿಸಿರುವ ಫ್ಲೆಕ್ಸ್, ಬ್ಯಾನರ್‌ಗಳು, ಬಂಟಿಂಗ್‌ಗಳನ್ನು ತೆರವುಗೊಳಿಸುವ ಕಾರ್ಯವನ್ನು ಇನ್ನಷ್ಟು ಚುರುಕುಗೊಳಿಸಬೇಕು. ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ತೆರವು ಕಾರ್ಯಾಚರಣೆ ನಡೆಸಬೇಕು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಜಾಹಿರಾತುಗಳ ತೆರವುಗೊಳಿಸುವಿಕೆ ಬಗ್ಗೆ ಸೋಮವಾರ ವರ್ಚುವಲ್ ರೂಪದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಚುನಾವಣೆಯ ಸಂದರ್ಭದಲ್ಲಿ ನಗರವು ಹೇಗೆ ಜಾಹೀರಾತುಗಳಿಂದ ಮುಕ್ತವಾಗಿರುತ್ತದೆಯೋ, ಅಂತಹದ್ದೇ ವಾತಾವರಣ ವರ್ಷ ಪೂರ್ತಿ ಇರಬೇಕು. ಪೊಲೀಸರು ಹಾಗೂ ಮಾರ್ಷಲ್‌ಗಳನ್ನು ಬಳಸಿಕೊಂಡು ಅನಧಿಕೃತ ಜಾಹೀರಾತು ತೆರವು ಕಾರ್ಯಾಚರಣೆ ನಡೆಸಬೇಕು. ಪಾಲಿಕೆಯ ಟ್ರ್ಯಾಕ್ಟರ್, ಪ್ರಹಾರಿ ವಾಹನವನ್ನು ಇದಕ್ಕೆ ಬಳಸಬಹುದು. ಅಗತ್ಯ ಬಿದ್ದರೆ ಹೆಚ್ಚುವರಿಯಾಗಿ ವಾಹನಗಳನ್ನು ಹಾಗೂ ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಳ್ಳಬಹುದು. ಅನಧಿಕೃತ ಬ್ಯಾನರ್ ಹಾಗೂ ಫ್ಲೆಕ್ಸ್‌ಗಳನ್ನು ಅಳವಡಿಸಿದವರ ವಿರುದ್ಧ ಸ್ಥಳೀಯ ಅಧಿಕಾರಿಗಳು ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಿಸಬೇಕು’ ಎಂದರು.

ADVERTISEMENT

‘ನಗರದಲ್ಲಿ ಅನಧಿಕೃತ ಜಾಹೀರಾತು ತೆರವುಗೊಳಿಸುವ ವೇಳೆ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು. ಇದಕ್ಕೆ ಪೊಲೀಸ್ ಇಲಾಖೆಗೆ ಸಹಕಾರ ಒದಗಿಸಬೇಕು’ ಎಂದು ನಗರ ಪೊಲೀಸ್ ಕಮಿಷನರ್‌ ಕಮಲ್ ಪಂತ್ ಅವರಿಗೆ ಗೌರವ ಗುಪ್ತ ಮನವಿ ಮಾಡಿದರು. ‘ತೆರವು ಕಾರ್ಯಾಚರನೆ ವೇಳೆ ಪಾಲಿಕೆ ಅಧಿಕಾರಿಗಳಿಗೆ ಪೊಲೀಸ್‌ ಇಲಾಖೆಯಿಂದ ಅಗತ್ಯ ನೆರವು ನೀಡುತ್ತೇವೆ’ ಎಂದು ಕಮಲ ಪಂತ್‌ ಭರವಸೆ ನೀಡಿದರು.

ಪಾಲಿಕೆಯ ಹಣಕಾಸು ವಿಭಾಗದ ಹೆಚ್ಚುವರಿ ಆಯುಕ್ತ ವೆಂಕಟೇಶ್ ಎಸ್., ಎಲ್ಲ ವಲಯಗಳ ಆಯುಕ್ತರು, ಜಂಟಿ ಆಯುಕ್ತರು, ಮುಖ್ಯ ಎಂಜಿನಿಯರ್‌ಗಳು, ಕಾರ್ಯಪಾಲಕ ಎಂಜಿನಿಯರ್‌ಗಳು ಸಭೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.