ಬೆಂಗಳೂರು: ಹೇಗಾದರೂ ಮಾಡಿ ಮೇಯರ್ ಹಾಗೂ ಉಪಮೇಯರ್ ಚುನಾವಣೆ ಗೆಲ್ಲುವ ಹಪಾಹಪಿಯಲ್ಲಿದ್ದ ಕಾಂಗ್ರೆಸ್– ಜೆಡಿಎಸ್ ಮೈತ್ರಿಕೂಟ ಹಾಗೂ ಬಿಜೆಪಿ ಸದಸ್ಯರು ಪಾಲಿಕೆ ಸಭೆಯ ಗೌರವವನ್ನು ಗಾಳಿಗೆ ತೂರಿ ಹೊಯ್–ಕೈ ನಡೆಸಿದರು.
ಪಕ್ಷೇತರ ಸದಸ್ಯರನ್ನು ಸೆಳೆಯುವ ಭರದಲ್ಲಿ ಪಾಲಿಕೆ ಸದಸ್ಯರು ಮಾತ್ರವಲ್ಲ, ಶಾಸಕರು ಹಾಗೂ ಸಚಿವರೂ ಈ ರಂಪಾಟದಲ್ಲಿ ಪಾಲ್ಗೊಂಡರು.
ಏಳು ಮಂದಿ ಪಕ್ಷೇತರ ಸದಸ್ಯರ ಪೈಕಿ ಹೊಯ್ಸಳನಗರದ ಎಸ್.ಆನಂದ ಕುಮಾರ್ ಹಾಗೂ ಮಾರತ್ತಹಳ್ಳಿಯ ರಮೇಶ್ ಅವರು ಶನಿವಾರ ಬೆಳಿಗ್ಗೆವರೆಗೂ ಬಿಜೆಪಿಯವರ ಜೊತೆಗಿದ್ದರು. ಪಾಲಿಕೆ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಅವರ ಕೊಠಡಿಯಲ್ಲಿದ್ದ ಆನಂದ್ ಅವರನ್ನು ಕಾಂಗ್ರೆಸ್ ಸದಸ್ಯರು ತಮ್ಮ ಜೊತೆ ಕರೆದೊಯ್ದರು. ಸಭಾಂಗಣದಲ್ಲಿ ಅವರು ಕಾಂಗ್ರೆಸ್‌ನವರ ಜೊತೆ ಕುಳಿತರು.
ಆನಂದ್ ಅವರನ್ನು ಮತ್ತೆ ತಮ್ಮತ್ತ ಸೆಳೆದುಕೊಂಡು ಬರಲು ಬಿಜೆಪಿ ಶಾಸಕರಾದ ಸತೀಶ್ ರೆಡ್ಡಿ, ಎಸ್.ಆರ್.ವಿಶ್ವನಾಥ್ ಅವರಲ್ಲದೆ ಪದ್ಮನಾಭರೆಡ್ಡಿ ಹಾಗೂ ವಿ.ಬಾಲಕೃಷ್ಣ ಅವರತ್ತ ಧಾವಿಸಿದರು. ಆನಂದ್ ಕುಳಿತ ಜಾಗ ತಲುಪಲು ಬಿಜೆಪಿಯವರಿಗೆ ಕಾಂಗ್ರೆಸ್ ಸದಸ್ಯರು ಅವಕಾಶವನ್ನೇ ನೀಡಲಿಲ್ಲ.
ಸಚಿವ ಕೃಷ್ಣ ಬೈರೇಗೌಡ, ಶಾಸಕರಾದ ಬೈರತಿ ಬಸವರಾಜು, ಎನ್.ಎ.ಹ್ಯಾರಿಸ್, ಮುನಿರತ್ನ, ಪಾಲಿಕೆ ಸದಸ್ಯರಾದ ಮೊಹಮ್ಮದ್ ರಿಜ್ವಾನ್ ನವಾಬ್, ಅಬ್ದುಲ್ ವಾಜಿದ್, ವೆಂಕಟೇಶ್ ಅಡ್ಡಗೋಡೆಯಂತೆ ನಿಂತುಬಿಟ್ಟರು. ಆಗ ಉಭಯ ಪಕ್ಷಗಳ ಸದಸ್ಯರ ನಡುವೆ ನೂಕಾಟ ತಳ್ಳಾಟ ನಡೆಯಿತು.
ದುಂಡಾವರ್ತನೆ: ಗದ್ದಲದಲ್ಲಿ ಮುಳುಗಿದ್ದ ಯಾವ ಸದಸ್ಯರೂ, ‘ಮತದಾರರು ತಾಳ್ಮೆ ವಹಿಸಬೇಕು. ಎಲ್ಲರೂ ತಮಗೆ ಕಾಯ್ದಿರಿಸಿದ ಸ್ಥಾನಗಳಿಗೆ ಮರಳಬೇಕು’ ಎಂದು ಚುನಾವಣಾಧಿಕಾರಿ ಶಿವಯೋಗಿ ಕಳಸದ ಅವರ ಮನವಿಗೆ ಕಿವಿಗೊಡಲಿಲ್ಲ.
‘ಮತದಾನ ಪ್ರಕ್ರಿಯೆಯನ್ನು ವೆಬ್‌ಕಾಸ್ಟ್ ಮಾಡುತ್ತಿದ್ದೇವೆ. ತಮ್ಮ ವರ್ತನೆಯನ್ನು ಜನ ನೋಡುತ್ತಿದ್ದಾರೆ’ ಎಂದರೂ ಕೇಳಲಿಲ್ಲ. ಅದರ ಬದಲು ಶಕ್ತಿ ಪ್ರದರ್ಶನಕ್ಕೆ ಮುಂದಾದರು. ಕೆಲವರಂತೂ ಟೇಬಲ್‌ಗಳ ಮೇಲೇರಿ ದುಂಡಾವರ್ತನೆ ತೋರಿದರು. ಒಬ್ಬರ ಬೆನ್ನ ಮೇಲೆ ಹತ್ತಿ ಜಿಗಿದು ಹೊಡೆದಾಟ ನಡೆಸಿದರು. ಪರಸ್ಪರ ಧಿಕ್ಕಾರ ಕೂಗಿದರು. ಬೊಬ್ಬೆ ಹಾಕಿ ಗದ್ದಲ ಎಬ್ಬಿಸಿದರು.
ಅಷ್ಟರಲ್ಲಿ ಆನಂದ್ ಅವರು ಟೇಬಲ್ ಮೇಲೇರಿ ನಿಂತು, ‘ನಾನು ನಿಮ್ಮ ಜೊತೆ ಬರುವುದಿಲ್ಲ’ ಎಂದು ಬಿಜೆಪಿ ಶಾಸಕರಿಗೆ ಸ್ಪಷ್ಟವಾಗಿ ಹೇಳಿದರು. ಆದರೂ ಅವರನ್ನು ಸೆಳೆಯುವ ಯತ್ನವನ್ನು ಬಿಜೆಪಿಯವರು ನಿಲ್ಲಿಸಲಿಲ್ಲ.
ಇನ್ನೊಬ್ಬ ಪಕ್ಷೇತರ ಸದಸ್ಯ ರಮೇಶ್ ಬಿಜೆಪಿಯವರ ಜೊತೆ ಕುಳಿತಿದ್ದರು. ಅಲ್ಲಿಗೆ ಧಾವಿಸಿದ ಕಾಂಗ್ರೆಸ್ ಸದಸ್ಯರು ರಮೇಶ್ ಕೊರಳಿನಲ್ಲಿದ್ದ ಕೇಸರಿ ಶಾಲನ್ನು ತೆಗೆದು ತಾವು ಧರಿಸಿದ್ದ ಶಾಲನ್ನು ಹೊದಿಸಿದರು. ಅವರನ್ನು ತಮ್ಮ ಕಡೆ ಎಳೆದು ತರಲು ಮುಂದಾದಾಗ ಬಿಜೆಪಿ ಸದಸ್ಯರು ಪ್ರತಿರೋಧ ಒಡ್ಡಿದರು. ಆಗಲೂ ಹೊಡೆದಾಟ ನಡೆಯಿತು.
ಇನ್ನೊಂದೆಡೆ ಜೆಡಿಎಸ್‌ನ ಮಂಜುಳಾ ನಾರಾಯಣಸ್ವಾಮಿ ಹಾಗೂ ಕೆ.ದೇವದಾಸ್ ಅವರು ಬಿಜೆಪಿಯವರ ಜತೆ ಕಾಣಿಸಿಕೊಂಡಿದ್ದರು. ಅವರನ್ನು ಕರೆತರಲು ಜೆಡಿಎಸ್‌ನ ಇತರ ಸದಸ್ಯರು ಅತ್ತ ಧಾವಿಸಿದರು. ಅವರು ಬರಲೊಪ್ಪಲಿಲ್ಲ.
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ್ದ ಹಲಸೂರು ವಾರ್ಡ್‌ನ ಪಕ್ಷೇತರ ಸದಸ್ಯೆ ಮಮತಾ ಸರವಣ ಬಿಜೆಪಿ ಜೊತೆ ಕಾಣಿಸಿಕೊಂಡರು.
ಸುಮಾರು ಒಂದು ಗಂಟೆ ಪೌರ ಸಭಾಂಗಣ ಅಕ್ಷರಶಃ ರಣಾಂಗಣದಂತಾಯಿತು. ಅಷ್ಟರಲ್ಲಿ ರಾಷ್ಟ್ರಗೀತೆ ಮೊಳಗಿತು. ಆಗಲೂ ಸದಸ್ಯರ ಹೊಡೆದಾಟ ಮುಂದುವರಿದಿತ್ತು. ರಾಷ್ಟ್ರಗೀತೆ ಬಗ್ಗೆ ಪಕ್ಕದಲ್ಲಿದ್ದವರು ನೆನಪಿಸಿದ ಬಳಿಕವಷ್ಟೇ ಕೆಲವರು ಗದ್ದಲ ನಿಲ್ಲಿಸಿದರು.
ಗದ್ದಲದ ನಡುವೆಯೇ ಸಹಿ: ಗದ್ದಲದ ನಡುವೆಯೇ ಚುನಾವಣಾ ಸಿಬ್ಬಂದಿ ಮತದಾರರ ಸಹಿಯನ್ನು ಪಡೆದರು. ‘ಸಭೆ ಕ್ರಮಬದ್ಧವಾಗಿ ನಡೆಯುತ್ತಿಲ್ಲ. ಸಭೆಯನ್ನು ಕನಿಷ್ಠ ಒಂದು ಗಂಟೆ ಮುಂದೂಡಿ’ ಎಂದು ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಒತ್ತಾಯಿಸಿದರು.
**
ತಡವಾಗಿ ಬಂದು ಮತ ಕಳೆದುಕೊಂಡ ಲಲಿತಾ
ಸಹಿ ಸಂಗ್ರಹ ಮುಗಿದ ತಕ್ಷಣ ಸಭಾಂಗಣದ ಬಾಗಿಲು ಮುಚ್ಚುವಂತೆ ಚುನಾವಣಾಧಿಕಾರಿ ಸೂಚನೆ ನೀಡಿದರು. ಬಾಗಿಲು ಮುಚ್ಚಿದ ಬಳಿಕವೂಕಾಂಗ್ರೆಸ್ ಸದಸ್ಯೆ ಲಲಿತಾ ತಿಮ್ಮನಂಜಯ್ಯ ಅವರು ಸಭಾಂಗಣ ಪ್ರವೇಶಿಸಲು ಅನುವು ಮಾಡಿಕೊಡಲಾಯಿತು. ಇದಕ್ಕೆ ಆಕ್ಷೇಪ ವ್ಯಕ್ತಡಿಸಿದ ಬಿಜೆಪಿ ಸದಸ್ಯರು ಚುನಾವಣಾಧಿಕಾರಿ ಪೀಠದ ಮುಂದೆ ಹೋಗಿ ಪ್ರತಿಭಟಿಸಿದರು. ‘ಯಾರೆಲ್ಲ ಗೈರು ಹಾಜರಾಗಿದ್ದಾರೆ’ ಎಂಬುದನ್ನು ಬಹಿರಂಗಪಡಿಸಿ ಎಂದು ಒತ್ತಾಯಿಸಿದರು.
‘ಸಹಿ ಸಂಗ್ರಹ ಮುಗಿದಿರುವುದರಿಂದ ಲಲಿತಾ ತಿಮ್ಮನಂಜಯ್ಯಗೆ ಮತದಾನಕ್ಕೆ ಅವಕಾಶ ಇಲ್ಲ’ ಚುನಾವಣಾಧಿಕಾರಿ ಸ್ಪಷ್ಟಪಡಿಸಿದರು. ಅವರು ನೇರವಾಗಿ ಚುನಾವಣಾಧಿಕಾರಿ ಬಳಿಗೆ ಬಂದು ಮನವಿ ಮಾಡಿದರೂ ಅವರಿಗೆ ಅವಕಾಶ ನಿರಾಕರಿಸಿದರು.
‘ಅಡುಗೆ ಮಾಡುವಾಗ ಮೈಮೇಲೆ ಸಾಂಬಾರ್ ಚೆಲ್ಲಿತ್ತು. ಹೊಟ್ಟೆ ಹಾಗೂ ಕಾಲಿನಲ್ಲಿ ಬೊಬ್ಬೆಗಳೆದ್ದಿದ್ದವು. ಹಾಗಾಗಿ ಗುರುವಾರ ನಡೆದ ಪಕ್ಷದ ಪಾಲಿಕೆ ಸದಸ್ಯರ ಸಭೆಗೂ ಹಾಜರಾಗಿಲ್ಲ. ಈ ಬಗ್ಗೆ ಪಕ್ಷದ ಮುಖಂಡರಿಗೂ ಮಾಹಿತಿ ನೀಡಿದ್ದೆ. ಇವತ್ತು ಸಮಯಕ್ಕೆ ಸರಿಯಾಗಿ ಮತದಾನಕ್ಕೆ ಹಾಜರಾಗಲು ಸಾಕಷ್ಟು ಪ್ರಯತ್ನ ಪಟ್ಟೆ. ಗೇಟಿನ ಬಳಿ ಒಳಗೆ ಬಿಡಲು ಪೊಲೀಸರು ತಗಾದೆ ತೆಗೆದಿದ್ದರಿಂದ ಸಭಾಂಗಣದ ಒಳಗೆ ಬರುವಾಗ ಐದು ನಿಮಿಷ ತಡವಾಯಿತು’ ಎಂದು ಲಲಿತಾ ‘ಪ್ರಜಾವಾಣಿ’ಗೆ ತಿಳಿಸಿದರು.
‘ನನ್ನ ಹಿರಿಯ ಮಗಳು ಜಾಹ್ನವಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಮತದಾನ ಪ್ರಕ್ರಿಯೆಯಿಂದ ದೂರ ಉಳಿಯಬೇಕಾಗಿ ಬಂತು’ ಎಂದು ಕಾಂಗ್ರೆಸ್‌ನ ಆಶಾ ಸುರೇಶ್ ತಿಳಿಸಿದರು.
**
ತಲ್ಲಣ ಮೂಡಿಸಿದ ಮತ ಸಮೀಕರಣ
ಕಾಂಗ್ರೆಸ್ ಸದಸ್ಯೆ ಆಶಾ ಸುರೇಶ್, ಶಾಸಕ ರೋಷನ್ ಬೇಗ್ ಹಾಗೂ ಜೆಡಿಎಸ್ ಸದಸ್ಯೆ ನಾಜಿಮ್ ಖಾನಮ್, ಬಿಜೆಪಿಯ ಲೋಕಸಭಾ ಸದಸ್ಯ ಅನಂತ ಕುಮಾರ್ ಹಾಗೂ ರಾಜ್ಯಸಭಾ ಸದಸ್ಯೆ ನಿರ್ಮಲಾ ಸೀತಾರಾಮನ್ ಅವರು ಗೈರಾಗುವ ಮೂಲಕ ಮತ ಸಮೀಕರಣ ಬದಲಾಗಿತ್ತು.
ಕಾಂಗ್ರೆಸ್‌ನ ಸದಸ್ಯೆ ಲಲಿತಾ ತಿಮ್ಮನಂಜಯ್ಯ ಅವರಿಗೆ ಮತದಾನದ ಅವಕಾಶವನ್ನು ನಿರಾಕರಿಸಲಾಯಿತು. ಹಾಗಾಗಿ ಒಟ್ಟು ಮತದಾರರ ಸಂಖ್ಯೆ 259ರಿಂದ 253ಕ್ಕೆ ಇಳಿಯಿತು. ಮೇಯರ್ ಆಗಿ ಆಯ್ಕೆ ಆಗಲು 127 ಮತದ ಅಗತ್ಯವಿತ್ತು.
ಏಳು ಮಂದಿ ಪಕ್ಷೇತರ ಸದಸ್ಯರ ಪೈಕಿ ಬಿಜೆಪಿ ಜೊತೆ ಶುಕ್ರವಾರ ಗುರುತಿಸಿಕೊಂಡಿದ್ದ ಆನಂದ್ ಅವರು ಕಾಂಗ್ರೆಸ್ ಜೊತೆ ಬಂದರೆ, ಜೆಡಿಎಸ್‌ನ ದೇವದಾಸ್ ಹಾಗೂ ಮಂಜುಳಾ ನಾರಾಯಣ ಸ್ವಾಮಿ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದರು. ಹಾಗಾಗಿ ಮುಂದೇನಾಗಬಹುದು ಎಂಬ ಕುತೂಹಲ ಗರಿಗೆದರಿತು.
ಕಾಂಗ್ರೆಸ್‌ನ ಪ್ರಮುಖರಾದ ಎಂ.ಶಿವರಾಜ್, ಆರ್.ಎಸ್.ಸತ್ಯನಾರಾಯಣ ಹಾಗೂ ಸಂಪತ್‌ರಾಜ್ ತಮ್ಮ ಬಲಾಬಲದ ಲೆಕ್ಕ ಹಾಕತೊಡಗಿದರು. ಬಿಜೆಪಿಯಲ್ಲೂ ಆರ್.ಅಶೋಕ, ಶಾಸಕ ಅಶ್ವತ್ಥನಾರಾಯಣ, ವಿಧಾನಪರಿಷತ್ ಸದಸ್ಯ ರವಿಕುಮಾರ್, ಸತೀಶ ರೆಡ್ಡಿ, ಪದ್ಮನಾಭ ರೆಡ್ಡಿ ತಮ್ಮ ಸಂಖ್ಯಾಬಲ ಎಷ್ಟಿದೆ ಎಂದು ಮತ್ತೆ ಮತ್ತೆ ಪರಿಶೀಲಿಸಿದರು. ಪಕ್ಷದ ನಾಯಕರು ಲೆಕ್ಕಾಚಾರದಲ್ಲಿ ಮುಳುಗಿದ್ದಾಗ ಸದಸ್ಯರಲ್ಲಿ ಒಳಗೊಳಗೊಳಗೆ, ಮುಂದೇನಾಗುತ್ತದೋ ಎಂಬ ತಳಮಳ ಶುರುವಾಗಿತ್ತು.
**
ಯುದ್ಧಕ್ಕೆ ಮುನ್ನವೇ ಬಿಜೆಪಿ ಶಸ್ತ್ರತ್ಯಾಗ
ಕಾಂಗ್ರೆಸ್‌ನಲ್ಲಿ ಮೂರು ಮತ ಕಡಿಮೆಯಾಗಿದ್ದರಿಂದ ಹಾಗೂ ಜೆಡಿಎಸ್‌ನ ಇಬ್ಬರು ಬಿಜೆಪಿ ಜತೆ ಗುರುತಿಸಿಕೊಂಡಿದ್ದರಿಂದಕಾಂಗ್ರೆಸ್– ಜೆಡಿಎಸ್ ಮೈತ್ರಿಕೂಟದ ಬಲ 127ಕ್ಕೆ ಇಳಿದಿತ್ತು. ಇಬ್ಬರು ಪಕ್ಷೇತರರ ಬೆಂಬಲದಿಂದ ಹಾಗೂ ಜೆಡಿಎಸ್‌ನ ಇಬ್ಬರು ಸದಸ್ಯರ ಬೆಂಬಲದಿಂದ ಬಿಜೆಪಿ ಬಲ 126 ಇತ್ತು.
ಮೈತ್ರಿಕೂಟದಲ್ಲಿ ಯಾರಾದರೂ ಒಂದಿಬ್ಬರು ಅಡ್ಡ ಮತದಾನ ಮಾಡಿದ್ದರೂ ಬಿಜೆಪಿ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಇತ್ತು. ಆದರೆ, ಅಷ್ಟರಲ್ಲೇ ಪಕ್ಷದ ಮುಖಂಡರು ಪರಸ್ಪರ ಮಾತುಕತೆ ನಡೆಸಿ ಮತದಾನ ಪ್ರಕ್ರಿಯೆಯನ್ನೇ ಬಹಿಷ್ಕರಿಸಲು ಮುಂದಾದರು. ಮುಖಂಡರ ಈ ನಿರ್ಧಾರದ ಬಗ್ಗೆ ಬಿಜೆಪಿ ಸದಸ್ಯರು ಬೇಸರ ವ್ಯಕ್ತಪಡಿಸಿದರು.
ನಿರ್ಮಲಾ ಸೀತಾರಾಮನ್ ಅವರು ಮತದಾನಕ್ಕೆ ಬಾರದ ಬಗ್ಗೆಯೂ ಬಿಜೆಪಿಯ ಕೆಲವರು ಅಸಮಾಧಾನ ವ್ಯಕ್ತಪಡಿಸಿದರು.
‘ನಮಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಇದಕ್ಕೆ ನಾಯಕರಲ್ಲಿನ ಭಿನ್ನಾಭಿಪ್ರಾಯವೂ ಕಾರಣ’ ಎಂದು ಹೆಸರು ಹೇಳಲಿಚ್ಚಿಸದ ಬಿಜೆಪಿ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
**
ಹೊಡೆದಾಡಿದ ಬಳಿಕ ಹೆಗಲಿಗೆ ಕೈ ಹಾಕಿದರು
ಪಾಲಿಕೆ ಸಭೆ ಆರಂಭವಾದಾಗ ಜಿದ್ದಿಗೆ ಬಿದ್ದು ಗುದ್ದಾಡಿದ ಮೂರು ಪಕ್ಷಗಳ ನಾಯಕರ ವರಸೆ ಇನ್ನೇನು ಮತದಾನ ಆರಂಭವಾಗಲಿದೆ ಎಂದಾಗ ಬದಲಾಗಿತ್ತು. ಯಾವ ಅಭ್ಯರ್ಥಿ ಗೆಲ್ಲುತ್ತಾರೆ ಎಂಬ ಬಗ್ಗೆ ಎರಡೂ ಪಕ್ಷದ ನಾಯಕರಲ್ಲಿ ಆತ್ಮವಿಶ್ವಾಸ ಇರಲಿಲ್ಲ.
ಕಾಂಗ್ರೆಸ್‌ನ ರಾಮಲಿಂಗಾ ರೆಡ್ಡಿ, ಜಮೀರ್ ಅಹಮದ್ ಖಾನ್, ಜೆಡಿಎಸ್‌ನ ಕುಪೇಂದ್ರ ರೆಡ್ಡಿ ಅವರು ಬಿಜೆಪಿ ನಾಯಕರಾದ ಆರ್.ಅಶೋಕ, ಪಿ.ಸಿ.ಮೋಹನ, ಸತೀಶ ರೆಡ್ಡಿ ಅವರತ್ತ ಧಾವಿಸಿ ಮಾತುಕತೆ ನಡೆಸಿದರು. ನಾಮಪತ್ರ ಹಿಂಪಡೆಯುವಂತೆ ಒತ್ತಾಯಿಸಿದರು. ಹೊಡೆದಾಟ ನಡೆದ ಅರೆಗಳಿಗೆಯಲ್ಲೇ ಮೂರೂ ಪಕ್ಷಗಳ ನಾಯಕರು ಹೆಗಲಿಗೆ ಕೈ ಹಾಕಿ ಮಾತನಾಡಿದ ಪರಿಯನ್ನು ಕಂಡು ಸಾರ್ವಜನಿಕರ ಗ್ಯಾಲರಿಯಲ್ಲಿದ್ದವರು ಅಚ್ಚರಿಪಟ್ಟರು.
ಕಿವಿಯಲ್ಲಿ ಪಿಸುಮಾತು:ಸಭಾಂಗಣದ ತುಂಬಾ ಚುರುಕಿನಿಂದ ಓಡಾಡಿದ ಜಮೀರ್ ಅಹ್ಮದ್, ಕಾಂಗ್ರೆಸ್ ಮುಖಂಡರು ಮಾತ್ರವಲ್ಲದೆ ಬಿಜೆಪಿ ಮುಖಂಡರ ಬಳಿಯೂ ತೆರಳಿ ಕಿವಿಯಲ್ಲಿ ಏನೋ ಪಿಸುಗುಡುತ್ತಿದ್ದುದು ಗಮನಸೆಳೆಯಿತು.
**
ಗಂಗಾಂಬಿಕೆ ಮೇಯರ್, ರಮೀಳಾ ಉಪಮೇಯರ್
ಬಿಬಿಎಂಪಿಯಲ್ಲಿ ಕಾಂಗ್ರೆಸ್– ಜೆಡಿಎಸ್ ಮೈತ್ರಿಕೂಟವು ಸತತ ನಾಲ್ಕನೇ ವರ್ಷವೂ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಸದಸ್ಯೆ ಗಂಗಾಂಬಿಕೆ ಅವರು ನಗರದ 52ನೇ ಮೇಯರ್ ಆಗಿ ಹಾಗೂ ಜೆಡಿಎಸ್‌ನ ರಮೀಳಾ ಉಮಶಂಕರ್ ಉಪಮೇಯರ್ ಆಗಿ ಶುಕ್ರವಾರ ಆಯ್ಕೆಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.