ಬೆಂಗಳೂರು: ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕ ಸ್ಥಳಗಳಲ್ಲಿ ಸಮಾರಂಭ ಆಯೋಜನೆಗೆ ಅನುಮತಿ ನೀಡಲು ಬಿಬಿಎಂಪಿಯ 63 ಉಪವಿಭಾಗ ಕಚೇರಿಗಳಲ್ಲಿ ಏಕಗವಾಕ್ಷಿ ಕೇಂದ್ರ ತೆರೆಯಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ಗಣೇಶ ಚತುರ್ಥಿ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಬಿಬಿಎಂಪಿ ಮತ್ತು ಬೆಂಗಳೂರು ನಗರ ಪೊಲೀಸ್ ಜಂಟಿ ಸಹಯೋಗದಲ್ಲಿ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಬುಧವಾರ ಆಯೋಜಿಸಿದ್ದ ‘ಶಾಂತಿ ಸೌಹಾರ್ದ ಸಭೆ’ಯಲ್ಲಿ ಅವರು ಮಾತನಾಡಿದರು.
ಬಿಬಿಎಂಪಿ, ಪೊಲೀಸ್, ಬೆಸ್ಕಾಂ ಮತ್ತು ಅಗ್ನಿಶಾಮಕ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಿ, ಏಕಗವಾಕ್ಷಿ ಕೇಂದ್ರಗಳನ್ನು ತೆರೆಯಲಾಗುವುದು. ಇಲಾಖೆಗಳ ನೋಡಲ್ ಅಧಿಕಾರಿಗಳ ಮಾಹಿತಿಯನ್ನು ಶೀಘ್ರವೇ ಬಿಡುಗಡೆ ಮಾಡಲಾಗುತ್ತದೆ. ಅದರಂತೆ ಗಣೇಶ ಮೂರ್ತಿ ಕೂರಿಸುವವರು, ಕೇಂದ್ರಕ್ಕೆ ಭೇಟಿ ನೀಡಿ ದಾಖಲೆ ಸಲ್ಲಿಸಿ, ಅನುಮತಿ ಪತ್ರ ಪಡೆಯಬಹುದು. ಪಿಒಪಿ ಗಣೇಶ ಮೂರ್ತಿಗಳನ್ನು ನಿಷೇಧಿಸಲಾಗಿದ್ದು, ಪರಿಸರಸ್ನೇಹಿ ಮೂರ್ತಿಗಳನ್ನು ಮಾತ್ರ ಪೂಜಿಸಬೇಕು ಎಂದು ಸೂಚಿಸಿದರು.
ಕೆರೆಗಳ ಬಳಿಯಿರುವ ಕಲ್ಯಾಣಿಗಳಲ್ಲಿ ಮೂರ್ತಿ ವಿಸರ್ಜನೆ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಪ್ರಮುಖ ಸ್ಥಳ/ ಜಂಕ್ಷನ್ ಮತ್ತು ವಾರ್ಡ್‌ವಾರು ತಾತ್ಕಾಲಿಕವಾಗಿ ಸಂಚಾರಿ ವಿಸರ್ಜನಾ ಘಟಕಗಳ ವ್ಯವಸ್ಥೆ ಮಾಡಲಾಗುತ್ತದೆ. ಪೊಲೀಸ್ ವ್ಯವಸ್ಥೆಯ ಜೊತೆಗೆ ಬ್ಯಾರಿಕೇಡ್, ಸಿಸಿ ಟಿವಿ ಕ್ಯಾಮೆರಾ, ವಿದ್ಯುತ್ ದ್ವೀಪ, ನುರಿತ ಈಜುಗಾರರ ವ್ಯವಸ್ಥೆ, ಕ್ರೇನ್‌ಗಳ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ್ ಮಾತನಾಡಿ, ಪ್ರತಿ ವರ್ಷದಂತೆ ಶಾಂತಿ ಸೌಹಾರ್ದದಿಂದ ಗಣೇಶ ಹಬ್ಬ ಆಚರಿಸಬೇಕು. ಮಾರ್ಗಸೂಚಿಗಳನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದರು.
ಪಾಲಿಕೆ, ಪೊಲೀಸ್ ಇಲಾಖೆ ನೀಡುವ ಸಲಹೆ, ಸೂಚನೆಗಳನ್ನು ಎಲ್ಲರೂ ತಪ್ಪದೆ ಪಾಲಿಸಬೇಕು. ಮೆರವಣಿಗೆ, ಮೆರವಣಿಗೆಯ ಮಾರ್ಗಕ್ಕೆ ಎಲ್ಲರೂ ಸಹಕಾರ ನೀಡಬೇಕು. ಹಬ್ಬದ ವೇಳೆ ಅನಾನುಕೂಲ, ಅಚಾತುರ್ಯ ನಡೆಯದಂತೆ ನೋಡಿಕೊಳ್ಳಲಾಗುವುದು. ಎಲ್ಲಿಯೂ ಸಂಚಾರ ದಟ್ಟಣೆಯಾಗದಂತೆ ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
‘ರಸ್ತೆ ಮಧ್ಯದಲ್ಲಿ ಗಣೇಶ ಮೂರ್ತಿಗಳನ್ನಿಡುವಂತಿಲ್ಲ. ಅನುಕೂಲಕರ ಜಾಗ ಗುರುತಿಸಿ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ. ಕಾನೂನು ವ್ಯವಸ್ಥೆಯಲ್ಲಿ ಯಾವುದೇ ರೀತಿಯ ಧಕ್ಕೆಯಾಗದಂತೆ ಸಂಭ್ರಮದಿಂದ, ಶಾಂತಿ ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸೋಣ’ ಎಂದು ಸಭೆಯಲ್ಲಿ ಹಾಜರಿದ್ದ ಕಾರ್ಯಕ್ರಮ ಆಯೋಜಕರಿಗೆ ಕರೆ ನೀಡಿದರು.
ಹೆಚ್ಚುವರಿ ಪೊಲೀಸ್ ಕಮಿಷನರ್‌ಗಳಾದ ಸತೀಶ್ ಕುಮಾರ್, ರಮಣ ಗುಪ್ತಾ, ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಅನುಚೇತ್, ಬೆಸ್ಕಾಂ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ಅಗ್ನಿಶಾಮಕ ಅಧಿಕಾರಿಗಳು, ಗಣೇಶ ಪ್ರತಿಷ್ಠಾನದ ಆಯೋಜಕರು, ವಿವಿಧ ಸಮುದಾಯದ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.