ADVERTISEMENT

BBMP: ಆಸ್ತಿ ತೆರಿಗೆ ಪಾವತಿಗೆ ಜುಲೈ 31ರ ಗಡುವು

​ಪ್ರಜಾವಾಣಿ ವಾರ್ತೆ
Published 12 ಜೂನ್ 2024, 3:28 IST
Last Updated 12 ಜೂನ್ 2024, 3:28 IST
   

ಬೆಂಗಳೂರು: ‘ಆಸ್ತಿ ತೆರಿಗೆ ಪಾವತಿಸ ದವರಿಗೆ ಬಿಬಿಎಂಪಿ ನೀಡಿರುವ ಒಂದು ಬಾರಿ ತೀರುವಳಿ (ಒಟಿಎಸ್) ಅವಕಾಶ ಜುಲೈ 31ರವರೆಗೆ ಮಾತ್ರ ಇರಲಿದೆ. ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು’ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಒಟಿಎಸ್‌ ಅವಕಾಶವನ್ನು ಯಾವುದೇ ಕಾರಣಕ್ಕೂ ವಿಸ್ತರಿಸುವುದಿಲ್ಲ. ಈ ಅವಕಾಶದಲ್ಲಿ ದಂಡದ ಮೇಲೆ ಶೇ 50ರಷ್ಟು ವಿನಾಯಿತಿ, ಶೇ 100ರಷ್ಟು ಬಡ್ಡಿ ಮನ್ನಾ ಮಾಡಲಾಗುವುದು’ ಎಂದರು.

‘20 ಲಕ್ಷ ಕಟ್ಟಡಗಳು ಆಸ್ತಿ ತೆರಿಗೆ ವ್ಯಾಪ್ತಿಯಲ್ಲಿದ್ದು, ಅನೇಕರು ಹೊರಗಿದ್ದಾರೆ. ತೆರಿಗೆ ಪಾವತಿಸಲು ಅವರಿಗೂ ಅವಕಾಶ ಕಲ್ಪಿಸಲಾಗಿದೆ. ಅವರು ತೆರಿಗೆ ಪಾವತಿಸಿ 90 ದಿನಗಳ ಒಳಗೆ ಸೂಕ್ತ ದಾಖಲೆ ನೀಡಿದರೆ ಸೂಕ್ತ ಖಾತೆ ನೀಡಲಾಗುವುದು. ಇನ್ನೂ 4 ಲಕ್ಷ ಮಂದಿ ಆಸ್ತಿ ತೆರಿಗೆ ಪಾವತಿಸಿಲ್ಲ. ಒಟಿಎಸ್ ಅವಕಾಶ ಬಳಸಿಕೊಂಡು ಈಗಾಗಲೇ 50 ಸಾವಿರ ಮಂದಿ ಆಸ್ತಿ ತೆರಿಗೆ ಪಾವತಿಸಿದ್ದಾರೆ’ ಎಂದು ಹೇಳಿದರು.

ADVERTISEMENT

‘ಸದ್ಯದ ಲೆಕ್ಕಾಚಾರದ ಪ್ರಕಾರ ₹5,200 ಕೋಟಿಯಷ್ಟು ತೆರಿಗೆ ಸಂಗ್ರಹ ಆಗಬೇಕಿತ್ತು. ಆದರೆ, ₹1,300 ಕೋಟಿ ಮಾತ್ರ ಸಂಗ್ರಹವಾಗಿದೆ. ತೆರಿಗೆ ಪಾವತಿಸದವರು ಆಗಸ್ಟ್ 1ರಿಂದ ಸುಸ್ತಿದಾರರ ಪಟ್ಟಿಗೆ ಸೇರುತ್ತಾರೆ’ ಎಂದೂ ಹೇಳಿದರು.

ಮೂರು ತಿಂಗಳಲ್ಲಿ ಆಸ್ತಿ ದಾಖಲೆ ಡಿಜಿಟಲೀಕರಣ ಪೂರ್ಣ: ‘20 ಲಕ್ಷ ಆಸ್ತಿಗಳ ಪೈಕಿ 8 ಲಕ್ಷ ಆಸ್ತಿಗಳ ದಾಖಲೆಗಳ ಡಿಜಿಟಲೀಕರಣ ಪ್ರಕ್ರಿಯೆ ಪೂರ್ಣವಾಗಿದೆ. ಮುಂದಿನ ಮೂರು ತಿಂಗಳಲ್ಲಿ ಉಳಿದ ಆಸ್ತಿಗಳ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗುವುದು’ ಎಂದು ಹೇಳಿದರು.

‘ವಿಶ್ವ ಪರಿಸರ ದಿನ ಕಾರ್ಯಕ್ರಮವನ್ನು ಜೂನ್ 5ರಂದು ಮಾಡಬೇಕಿತ್ತು. ಚುನಾವಣಾ ನೀತಿಸಂಹಿತೆ ಕಾರಣ ಮಾಡಲು ಆಗಿರಲಿಲ್ಲ. ಹೀಗಾಗಿ, ಜೂನ್ 14ರಂದು ಬಾಲಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.

‘ಹವಾಮಾನ ವೈಪರೀತ್ಯ ವಿಚಾರವಾಗಿ ಜಾಗತಿಕ ಮಟ್ಟದಲ್ಲಿ ಬೆಂಗಳೂರು ಸಿ40 ವಿಭಾಗದಲ್ಲಿ ಸ್ಥಾನ ಪಡೆದಿತ್ತು. ಬಿಬಿಎಂಪಿ ಕಳೆದ ವರ್ಷ ನವೆಂಬರ್ 27ರಂದು ಮೊದಲ ಹವಾಮಾನ ವೈಪರೀತ್ಯ ಕಾರ್ಯ ಯೋಜನೆಯನ್ನು ಅನಾವರಣಗೊಳಿ ಸಿತ್ತು’ ಎಂದೂ ಮಾಹಿತಿ ನೀಡಿದರು.

‘ಬ್ಲೂ ಗ್ರೀನ್ ಊರು ಅಭಿಯಾನ’

‘ಬೆಂಗಳೂರು ನಗರವನ್ನು ಹಸಿರಾಗಿಡಲು ‘ಬ್ಲೂ ಗ್ರೀನ್ ಊರು’ ಎಂಬ ಅಭಿಯಾನ ಆರಂಭಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮರಗಳನ್ನು ನೆಡಲು ಸಿದ್ಧತೆ ಮಾಡಲಾಗಿದೆ. ಜೊತೆಗೆ, ಕ್ಲೈಮೆಟ್ ಆ್ಯಕ್ಷನ್ ಸೆಲ್ ಕೂಡ ರಚಿಸಲಾಗಿದೆ. ಇದರಲ್ಲಿ ಜಲ ಮಂಡಳಿ, ಬೆಸ್ಕಾಂ, ಬಿಎಂಟಿಸಿ, ಬಿಟಿಪಿ, ಬಿಎಂಆರ್‌ಸಿಎಲ್, ಡೆಲ್ಟ್, ಘನತ್ಯಾಜ್ಯ ನಿರ್ವಹಣೆ, ಮಾಲಿನ್ಯ ನಿಯಂತ್ರಣ ಮಂಡಳಿ, ಅರಣ್ಯ, ಕೈಗಾರಿಕೆ, ಗಣಿಗಾರಿಗೆ ಸೇರಿದಂತೆ ಎಲ್ಲ ಇಲಾಖೆಗಳನ್ನು ಸೇರಿಸಲಾಗಿದೆ. ಈ ‌ಮಾಹಿತಿ ಬಿಬಿಎಂಪಿ ಜಾಲತಾಣದಲ್ಲಿ ಲಭ್ಯವಿದೆ’ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

‘2 ಲಕ್ಷ ಸಸಿ ನೆಡುವ ಗುರಿ’

‘ಶಾಲಾ ಮಕ್ಕಳು ತಮ್ಮ ಪ್ರದೇಶದಲ್ಲಿ ಗಿಡ ನೆಟ್ಟು ಬೆಳೆಸುವ ‘ಹಸಿರು ರಕ್ಷಕ’ ಕಾರ್ಯಕ್ರಮವನ್ನು ಕಳೆದ ವರ್ಷ ಅನಾವರಣ ಮಾಡಲಾಗಿತ್ತು. 250 ಶಾಲೆಗಳ ಸಹಯೋಗದಲ್ಲಿ ಈಗಾಗಲೇ 52 ಸಾವಿರ ಗಿಡಗಳನ್ನು ನೆಡಲಾಗಿದೆ. ಈ ಪೈಕಿ, ಶೇ 80ರಷ್ಟು ಗಿಡಗಳು ಉಳಿದುಕೊಂಡಿವೆ. ಶೇ 20ರಷ್ಟು ಬದಲಿ ಗಿಡ ನೆಡಲಾಗುವುದು. ಈ ಕಾರ್ಯಕ್ರಮದ ಭಾಗವಾಗಿ ಈ ವರ್ಷ ಹೆಚ್ಚಿನ ಶಾಲೆಗಳನ್ನು ಸೇರಿಸಿಕೊಂಡು 2 ಲಕ್ಷ ಗಿಡಗಳನ್ನು ನೆಡುವ ಗುರಿ ಹೊಂದಲಾಗಿದೆ’ ಎಂದು ಸಚಿವರು ಹೇಳಿದರು.

‘ಶಾಲೆಗಳು ಪಾಲಿಕೆ ಜತೆ ಒಡಂಬಡಿಕೆ ಮಾಡಿಕೊಂಡಿದ್ದು, ಈ ಗಿಡಗಳು ಆರೋಗ್ಯಕರವಾಗಿ ಬೆಳೆಯುತ್ತಿವೆಯೇ ಎಂದು ಪರಿಶೀಲಿಸಲು ಮೊಬೈಲ್ ತಂತ್ರಾಂಶ ಸಿದ್ಧಪಡಿಸಲಾಗಿದೆ’ ಎಂದರು.

‘ಬಿಬಿಎಂಪಿ ವತಿಯಿಂದ ವಲಯವಾರು ಮರಗಣತಿ ಮಾಡಲು ಟೆಂಡರ್ ಕರೆಯಲಾಗಿದೆ. ಬೊಮ್ಮನಹಳ್ಳಿ ವಲಯದ ವಿದ್ಯಾಪೀಠ, ಕತ್ತರಿಗುಪ್ಪೆ ವಾರ್ಡ್‌ಗಳಲ್ಲಿ ಈಗಾಗಲೇ 94 ಸಾವಿರ ಮರಗಳ ಸರಿಯಾದ ಬೆಳವಣಿಗೆಗೆ ಕ್ರಮ ಕೈಗೊಳ್ಳಲಾಗಿದೆ. ಅಂತರ್ಜಲ ಮಟ್ಟ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ‌ನಗರದಲ್ಲಿರುವ ತೆರೆದ ಬಾವಿಗಳ ಮಾಹಿತಿ ಪಡೆದು ಅಭಿವೃದ್ಧಿಪಡಿಸಲಾಗುವುದು. ನಗರದಲ್ಲಿ ಏಳು ಸಾವಿರ ಕೊಳವೆ ಬಾವಿಗಳು ಬತ್ತಿದ್ದವು. ಅವುಗಳ ಪುನಶ್ಚೇತನಕ್ಕಾಗಿ ಕೆರೆಗಳಿಗೆ ಸಂಸ್ಕರಿಸಿದ ನೀರು ತುಂಬಿಸಲು ನಿರ್ಧರಿಸಲಾಗಿದೆ’ ಎಂದರು.

‘ಬೆಳಿಗ್ಗೆ 5ರಿಂದ ರಾತ್ರಿ 10‌ರವರೆಗೆ ಎಲ್ಲಾ ಮುಕ್ತ ಉದ್ಯಾನಗಳು’

‘ನಗರದ ಎಲ್ಲ ಉದ್ಯಾನಗಳನ್ನು ಬೆಳಿಗ್ಗೆ 5 ಗಂಟೆಯಿಂದ ರಾತ್ರಿ 10ರವರೆಗೆ ತೆರೆಯಲು ನಿರ್ಧರಿಸಲಾಗಿದೆ. ಕಬ್ಬನ್ ಪಾರ್ಕ್ ತೋಟಗಾರಿಕಾ ಇಲಾಖೆ ವ್ಯಾಪ್ತಿಯಲ್ಲಿದೆ. ಅಲ್ಲಿಗೆ ಈ ಸಮಯ ಅನ್ವಯವಾಗುವುದಿಲ್ಲ. ಉದ್ಯಾನಗಳಲ್ಲಿ ಕಾನೂನುಬಾಹಿರ ಚಟುವಟಿಕೆ ನಿಯಂತ್ರಿಸಲು ಪೊಲೀಸರ ಗಸ್ತು, ಮಾರ್ಷಲ್‌ ಗಳನ್ನು ನಿಯೋಜಿಸಲಾಗುವುದು. ಅಲ್ಲದೆ, ಪಾಲಿಕೆಯ ದೂರವಾಣಿ ಸಂಖ್ಯೆಗೆ (22660000, 22221188) ಕರೆ ಮಾಡಿ ದೂರು ನೀಡಬಹುದು. ವಾಟ್ಸ್‌ಆ್ಯಪ್‌ ಮೂಲಕವೂ (9480685700) ಮಾಹಿತಿ ನೀಡಬಹುದು’ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

‘ಅನಧಿಕೃತ ಫ್ಲೆಕ್ಸ್– ಎಆರ್‌ಒ ವಿರುದ್ಧವೂ ಪ್ರಕರಣ’: ‘ಪಾಲಿಕೆ ವತಿಯಿಂದ ಅನಧಿಕೃತ ಫ್ಲೆಕ್ಸ್‌ಗಳನ್ನು ನಿಷೇಧಿಸಿದ್ದರೂ, ಎಲ್ಲ ರಾಜಕೀಯ ಪಕ್ಷಗಳ ವತಿಯಿಂದ ಫ್ಲೆಕ್ಸ್ ಹಾಕಲಾಗುತ್ತಿದೆ. ಅದನ್ನು ನಿಯಂತ್ರಿಸುವುದು ಸಹಾಯಕ ಕಂದಾಯ ಅಧಿಕಾರಿಯ (ಎಆರ್‌ಒ) ಜವಾಬ್ದಾರಿ. ಇನ್ನು ಮುಂದೆ ಅನಧಿಕೃತ ಫ್ಲೆಕ್ಸ್ ಅಳವಡಿಸಿದರೆ, ಅಳವಡಿಸಿದವರ ಜೊತೆಗೆ ಎಆರ್‌ಒಗಳ ಮೇಲೆಯೂ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅನಧಿಕೃತ ಫ್ಲೆಕ್ಸ್‌ಗಳ ಬಗ್ಗೆಯೂ ಸಾರ್ವಜನಿಕರು ಸಹಾಯವಾಣಿ (1533) ಮೂಲಕ ದೂರು ನೀಡಬಹುದು. ವಾಟ್ಸ್‌ಆ್ಯಪ್‌ (9480683939) ಮೂಲಕವೂ ಅನಧಿಕೃತ ಫ್ಲೆಕ್ಸ್‌ಗಳ ಭಾವಚಿತ್ರ ಮತ್ತು ವಿಳಾಸವನ್ನು ಕಳುಹಿಸಬಹುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.