ADVERTISEMENT

ಕೆರೆ ಒತ್ತುವರಿ: ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2023, 23:26 IST
Last Updated 13 ಮಾರ್ಚ್ 2023, 23:26 IST

ಬೆಂಗಳೂರು: ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ಕೆರೆ ಒತ್ತುವರಿ, ರಾತ್ರೋರಾತ್ರಿ ರಸ್ತೆಯಲ್ಲಿ ಮನೆ ನಿರ್ಮಾಣ, ಬಿಡಿಎಯಿಂದ ಅತಿಕ್ರಮ ತೆರವು ಕುರಿತ ಸುದ್ದಿಗಳನ್ನು ಆಧರಿಸಿ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಸ್ವಪ್ರೇರಣೆಯಿಂದ ಪ್ರಕರಣವನ್ನು ದಾಖಲಿಸಿಕೊಂಡು, ನೋಟಿಸ್‌ ಜಾರಿ ಮಾಡಿದೆ.

2022ರ ಸೆ.16ರಂದು ‘ಕೆರೆ ಒತ್ತುವರಿಯಲ್ಲಿ ಹಲವರ ಪಾಲು’ ಶೀರ್ಷಿಕೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 201 ಕೆರೆಗಳಿದ್ದು, 951 ಎಕರೆ 11 ಗುಂಟೆ ಒತ್ತುವರಿ ಆಗಿದೆ. ನಗರ ಜಿಲ್ಲೆಯಲ್ಲಿ 837 ಕೆರೆಗಳಿದ್ದು 305 ಕೆರೆಗಳಲ್ಲಿ 2,366 ಎಕರೆ ಒತ್ತುವರಿ ಕುರಿತ ಸುದ್ದಿ ಪ್ರಕಟವಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಬಿಬಿಎಂಪಿಯ ಎಂಟೂ ವಲಯದ ಜಂಟಿ ಆಯುಕ್ತರಿಗೆ ನೋಟಿಸ್‌ ಜಾರಿ ಮಾಡಲಾಗಿದೆ.

‘ಒತ್ತುವರಿ ಬಗ್ಗೆ, ಒತ್ತುವರಿದಾರರ ಹೆಸರು ಮತ್ತು ವಿಳಾಸವನ್ನು ವರದಿಯೊಂದಿಗೆ ಸಲ್ಲಿಸಲು ಸೂಚಿಸಿ, ಏ.27ಕ್ಕೆ ಪ್ರಕರಣದ ವಿಚಾರಣೆಯನ್ನು ಮುಂದೂ ಡಲಾಗಿದೆ’ ಎಂದು ಸರ್ಕಾರಿ ಅಭಿಯೋಜಕಿ ಎ. ಚಂದ್ರಕಲಾ ತಿಳಿಸಿದ್ದಾರೆ.

ADVERTISEMENT

2023ರ ಫೆ.18ರಂದು ಪ್ರಕಟವಾಗಿದ್ದ ಬೇಗೂರು ರಸ್ತೆಯ ಮೈಕೋ ಬಡಾವಣೆಯ ಡಾಂಬರೀಕರಣಗೊಂಡ 15ನೇ ಮುಖ್ಯರಸ್ತೆಯಲ್ಲಿ ರಾತ್ರೋರಾತ್ರಿ ಮನೆ ನಿರ್ಮಿಸಿರುವ ವರದಿ ಬಗ್ಗೆ ಸ್ವಪ್ರೇರಣೆಯಿಂದ ಪ್ರಕರಣ ದಾಖಲಾಗಿದೆ. ಬಿಬಿಎಂಪಿಯ ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತರಿಗೆ ವರದಿ ಸಲ್ಲಿಸಲು ಸೂಚಿಸಿ, ಪ್ರಕರಣದ ವಿಚಾರಣೆಯನ್ನು ಮಾ.17ಕ್ಕೆ ಮುಂದೂಡಲಾಗಿದೆ.

ಫೆ.21ರಂದು ಪ್ರಕಟವಾಗಿದ್ದ ಬಿಡಿಎಯಿಂದ ಅತಿಕ್ರಮ ಕಾಂಪೌಂಡ್‌ ತೆರವು, ₹65 ಕೋಟಿ ಮೌಲ್ಯದ ಆಸ್ತಿ ವಶಕ್ಕೆ ಸಂಬಂಧಿಸಿದ ವರದಿ ಬಗ್ಗೆ ವಿಶೇಷ ನ್ಯಾಯಾಲಯ ಸ್ವಯಂಪ್ರೇರಣೆಯಿಂದ ದೂರು ದಾಖಲಿಸಿಕೊಂಡಿದೆ. ಬಿಡಿಎ ಆಯುಕ್ತ ರಿಗೆ ವರದಿ ಸಲ್ಲಿಸಲು ನೋಟಿಸ್‌ ನೀಡಿದ್ದು, ಏ.4ಕ್ಕೆ ವಿಚಾರಣೆ ಮುಂದೂಡಲಾಗಿದೆ ಎಂದು ಚಂದ್ರಕಲಾ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.