ADVERTISEMENT

ಬೆಂಗಳೂರು: ರಸ್ತೆ ಗುಂಡಿ ಗುರುತಿಸಲು ‘ರಸ್ತೆ ಗುಂಡಿ ಗಮನ- ಮೊಬೈಲ್ ಅಪ್ಲಿಕೇಶನ್’

​ಪ್ರಜಾವಾಣಿ ವಾರ್ತೆ
Published 28 ಜುಲೈ 2024, 15:25 IST
Last Updated 28 ಜುಲೈ 2024, 15:25 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿಗಳನ್ನು ಗುರುತಿಸಲು ಮತ್ತು ನಿಗದಿತ ಅವಧಿಯಲ್ಲಿ ದುರಸ್ತಿ ಕಾಮಗಾರಿ ಕೈಗೊಳ್ಳಲು ಬಿಬಿಎಂಪಿ ‘ರಸ್ತೆ ಗುಂಡಿ ಗಮನ- ಮೊಬೈಲ್ ಅಪ್ಲಿಕೇಶನ್’’ ತಯಾರಿಸಿದೆ.

ಪಾಲಿಕೆ ವ್ಯಾಪ್ತಿಯ ಎಲ್ಲ ರಸ್ತೆಗಳನ್ನು ಜಿಪಿಎಸ್ ಆಧಾರದ ಮೇಲೆ ಗುರುತಿಸಲಾಗುತ್ತದೆ. ಆ ರಸ್ತೆಗಳಲ್ಲಿ ಉಂಟಾಗಬಹುದಾದ ಗುಂಡಿಗಳನ್ನು ಅಕ್ಷಾಂಶ ಮತ್ತು ರೇಖಾಂಶದಲ್ಲಿ ನಿಖರವಾಗಿ ಗುರುತಿಸಿ, ಮೊಬೈಲ್‌ನಲ್ಲಿ ಗುಂಡಿಯ ಅಳತೆಯನ್ನು ನಮೂದಿಸಲಾಗುತ್ತದೆ. ಪ್ರತ್ಯೇಕ ಕಾರ್ಯಾದೇಶ ತಯಾರಿಸಿ ಗುಂಡಿ ಮುಚ್ಚಲು ಕ್ರಮವಹಿಸುವ ಪದ್ಧತಿಯನ್ನು ಮೊಬೈಲ್ ಆ್ಯಪ್‌ನಲ್ಲಿ ಅಳವಡಿಸಲಾಗಿದೆ.

ADVERTISEMENT

ಈ ತಂತ್ರಾಂಶ ಅಳವಡಿಸುವುದರಿಂದ ರಸ್ತೆ ಗುಂಡಿ ಗುರುತಿಸುವ ಮತ್ತು ಅವುಗಳನ್ನು ಮುಚ್ಚುವ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಲಿದೆ. ವೆಚ್ಚದ ಮೇಲೆ ನಿಯಂತ್ರಣ ಇಡಲು ಸಾಧ್ಯವಾಗುತ್ತದೆ. ನಿಗಾ ಇಡುವುದು ಸುಲಭವಾಗುತ್ತದೆ. ಸಾಂದರ್ಭಿಕ ಅಂದಾಜು ವೆಚ್ಚದ ಪಟ್ಟಿ ತಯಾರಿ ಸಹಿತ ಅನೇಕ ಕಾರ್ಯಗಳ ಅಗತ್ಯ ಇರುವುದಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಗುಂಡಿ ಮುಚ್ಚಲು 2024-25ನೇ ಸಾಲಿನಲ್ಲಿ ಪ್ರತಿ ವಾರ್ಡ್‌ಗಳಿಗೆ ₹ 15 ಲಕ್ಷದಂತೆ 225 ವಾರ್ಡ್‌ಗಳಿಗೆ ₹ 33.75 ಕೋಟಿ ಮೀಸಲಿಡಲಾಗಿದೆ. 

ರಸ್ತೆಜಾಲ:

ನಗರದಲ್ಲಿ 12,828 ಕಿ.ಮೀ ಉದ್ದದ ರಸ್ತೆ ಜಾಲವಿದೆ. ಈ ಪೈಕಿ 1,344 ಕಿ.ಮೀ ಪ್ರಮುಖ ರಸ್ತೆಗಳು ಹಾಗೂ 11,533 ಕಿ.ಮೀ ವಲಯ ಮಟ್ಟದ ರಸ್ತೆಗಳು ಇವೆ. ಈ ರಸ್ತೆಗಳ ತಳಭಾಗದಲ್ಲಿ ಬೆಸ್ಕಾಂ ಕೇಬಲ್, ನೀರು ಸರಬಾರಜು ಮತ್ತು ಒಳಚರಂಡಿ ಕೊಳವೆಗಳು, ಅನಿಲ ಕೊಳವೆಗಳು, ಒಎಫ್‌ಸಿ, ಕೆಪಿಟಿಸಿಎಲ್‌ನ ಹೆಚ್ಚಿನ ಸಾಮರ್ಥ್ಯದ ಕೇಬಲ್‌ಗಳ ಅಳವಡಿಕೆಯಿಂದ ರಸ್ತೆಗಳ ಮೇಲ್ಮೈ ಭಾಗವು ಶಿಥಿಲಗೊಂಡು ರಸ್ತೆಗಳಲ್ಲಿ ಗುಂಡಿಗಳು ಬೀಳುತ್ತಿವೆ.

ಸಾರ್ವಜನಿಕರಿಗೂ ಅವಕಾಶ:

‘ರಸ್ತೆ ಗುಂಡಿ ಗಮನ’ ತಂತ್ರಾಂಶದಲ್ಲಿ ಬಿಬಿಎಂಪಿ ಅಧಿಕಾರಿಗಳು, ಸಂಚಾರ ಠಾಣೆಗಳ ಪೊಲೀಸರು ಮಾತ್ರವಲ್ಲದೇ ಸಾರ್ವಜನಿಕರೂ ಗುಂಡಿಗಳ ಬಗ್ಗೆ ಮಾಹಿತಿ ಅಪ್‌ಲೋಡ್‌ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆ್ಯಪ್‌ ಡೌನ್‌ಲೋಡ್‌ (https://play.google.com/store/apps/details?id=com.indigo.bbmp.fixpothole) ಮಾಡಿಕೊಂಡು ಗುಂಡಿಗಳ ಫೋಟೊ, ದುರಸ್ತಿ ಫೋಟೊಗಳ ಸಹಿತ ಮಾಹಿತಿ ನೀಡಬಹುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.