ಬೆಂಗಳೂರು: ಪಾಲಿಕೆ ವ್ಯಾಪ್ತಿಯ ಎಲ್ಲ ವಲಯಗಳಲ್ಲೂ ಬೀದಿನಾಯಿಗಳ ಸಂತಾನಶಕ್ತಿ ಹರಣ (ಎಬಿಸಿ) ಶಸ್ತ್ರಚಿಕಿತ್ಸೆ ಸಮರ್ಪಕವಾಗಿ ನಡೆಯದ ಬಗ್ಗೆ ಮೇಯರ್ ಗಂಗಾಂಬಿಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪಶುಸಂಗೋಪನಾ ವಿಭಾಗದ ಅಧಿಕಾರಿಗಳಿಂದ ವಿವರಣೆ ಕೇಳಿದ್ದಾರೆ.
‘ಪಶುಸಂಗೋಪನಾ ವಿಭಾಗದ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿಲ್ಲ. ದೂರುಗಳು ಬಂದರೆ ಮಾತ್ರ ನಾಯಿಗಳಿಗೆ ಎಬಿಸಿ ಶಸ್ತ್ರಚಿಕಿತ್ಸೆ ಮಾಡುವುದಾಗಿ ಹೇಳಿದ್ದಾರೆ. ಎಬಿಸಿ ಸಮರ್ಪಕವಾಗಿ ಆಗಿದ್ದಿದ್ದರೆ ಬೀದಿನಾಯಿಗಳ ಸಂಖ್ಯೆ ಇಷ್ಟು ಪ್ರಮಾಣದಲ್ಲಿ ಇರುತ್ತಿರಲಿಲ್ಲ. ಅವರ ಕಾರ್ಯವೈಖರಿ ಹೇಗೆ ಎಂಬುದೇ ಅರ್ಥವಾಗುತ್ತಿಲ್ಲ. ಅಧಿಕಾರಿಗಳು ಕೆಲಸ ಮಾಡದ ಮೇಲೆ ಪಶು ಸಂಗೋಪನೆ ವಿಭಾಗಕ್ಕೆ ಇಷ್ಟೊಂದು ಸಿಬ್ಬಂದಿ ಏಕೆ’ ಎಂದು ಮೇಯರ್ ಪ್ರಶ್ನಿಸಿದರು.
‘ಎಬಿಸಿ ಶಸ್ತ್ರಚಿಕಿತ್ಸೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪ ಇದೆ. ಕೆಲವು ವಲಯಗಳ ಎಬಿಸಿ ಶಸ್ತ್ರಚಕಿತ್ಸೆಯ ಟೆಂಡರ್ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಇದನ್ನು ವಾರದೊಳಗೆ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಸಮಗ್ರವಾಗಿ ತನಿಖೆ ಮಾಡುವಂತೆ ಆಯುಕ್ತರಿಗೆ ಸೂಚಿಸಿದ್ದೇನೆ. ಶಸ್ತ್ರಚಿಕಿತ್ಸೆ ಬಗ್ಗೆ ವಲಯವಾರು ಮಾಹಿತಿ ನೀಡುವಂತೆಯೂ ಕೇಳಿದ್ದೇನೆ’ ಎಂದರು.
‘ಕೆಲವು ಋತುಗಳಲ್ಲಿ ನಾಯಿಗಳ ವರ್ತನೆ ಭಿನ್ನವಾಗಿರುತ್ತದೆ. ಈ ಸಂದರ್ಭದಲ್ಲಿ ಕೆಲವು ನಾಯಿಗಳು ಮಕ್ಕಳ ಮೇಲೆ ದಾಳಿ ನಡೆಸುವ ಸಾಧ್ಯತೆ ಹೆಚ್ಚು ಎಂದು ಪ್ರಾಣಿ ದಯಾ ಸಂಘದವರು ತಿಳಿಸಿದ್ದಾರೆ. ಈ ಹಾವಳಿ ತಡೆಗೆ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಿದ್ದೇವೆ’ ಎಂದರು.
ಬೀದಿನಾಯಿ ದಾಳಿಯಿಂದ ಬಾಲಕ ದುರ್ಗೇಶ್ ಮೃತಪಟ್ಟ ಹಿನ್ನೆಲೆಯಲ್ಲಿ ಮೇಯರ್ ಅವರು ಬೀದಿ ನಾಯಿ ಹಾವಳಿ ಹೆಚ್ಚಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಆಸ್ಟಿನ್ ಟೌನ್‌ನ ಬಾಲಕರ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಲಾ ಆವರಣದಲ್ಲೇ ಸುಮಾರು 15-20 ನಾಯಿಗಳಿದ್ದವು. ಶಾಲಾ ಆವರಣದಲ್ಲಿ ಕಸದ ಖಾಲಿ ಲಾರಿ ನಿಲ್ಲಿಸದಂತೆ ಹಾಗೂ ಉಳಿದ ಊಟವನ್ನು ಅಲ್ಲಲ್ಲಿ ಎಸೆಯದಂತೆ ಸೂಚಿಸಿದರು. ಬೀದಿನಾಯಿ ಹಾವಳಿ ಬಗ್ಗೆ ದೂರು ನೀಡಿದರೂ ಕ್ರಮ ಕೈಗೊಳ್ಳದ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
ಈ ಶಾಲಾ ಆವರಣದಲ್ಲಿ ಅನಧಿಕೃತವಾಗಿ ವಾಸವಾಗಿರುವ ರಾಗಿಣಿ ಅವರು ನಾಯಿಗಳಿಗೆ ಆಹಾರ ಹಾಕಿ ಸಲಹುತ್ತಿದ್ದಾರೆ ಎಂದು ಸ್ಥಳೀಯರು ದೂರಿದರು. ಮಹಿಳೆಯ ಮನೆಯನ್ನು ತೆರವುಗೊಳಿಸಲು ಕ್ರಮ ವಹಿಸುವಂತೆ ಮೇಯರ್ ಸೂಚಿಸಿದರು.
ನೀಲಸಂದ್ರದಲ್ಲಿನ ರೋಸ್ ಗಾರ್ಡನ್‌ನಲ್ಲಿ ಬೀದಿ ನಾಯಿಗಳಿಂದ ದಾಳಿಗೊಳಗಾದ ಬಾಲಕಿ ಮನೆಗೂ ಭೇಟಿ ನೀಡಿದರು. ಆಕೆಯ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಭರವಸೆ ನೀಡಿದರು.
ಮೂರು ವಲಯಗಳಲ್ಲಿ ಮಾತ್ರ ಎಬಿಸಿ ಶಸ್ತ್ರಚಿಕಿತ್ಸೆ
ಎಂಟು ವಲಯಗಳ ಪೈಕಿ ಪ್ರಸ್ತುತ ಮೂರು ವಲಯಗಳಲ್ಲಿ ಮಾತ್ರ ಬೀದಿನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಸರಿಯಾಗಿ ನಡೆಯುತ್ತಿದೆ.
‘ಎಬಿಸಿ ಶಸ್ತ್ರಚಿಕಿತ್ಸೆ ನಡೆಸಲು ಸ್ವಯಂಸೇವಾ ಸಂಸ್ಥೆಗಳನ್ನು ಆಹ್ವಾನಿಸಲು ಫೆಬ್ರುವರಿಯಲ್ಲಿ ಟೆಂಡರ್ ಆಹ್ವಾನಿಸಿದ್ದೆವು. ಲೋಕಸಭಾ ಚುನಾವಣೆಯ ನೀತಿಸಂಹಿತೆಯಿಂದಾಗಿ ಈ ಪ್ರಕ್ರಿಯೆ ವಿಳಂಬವಾಯಿತು. ಮಹದೇವಪುರ, ಯಲಹಂಕ ಹಾಗೂ ಪೂರ್ವ ವಲಯಗಳಲ್ಲಿ ಮಾತ್ರ ಎಬಿಸಿ ಶಸ್ತ್ರಚಿಕಿತ್ಸೆ ನಡೆಯುತ್ತಿದೆ. ಆದರೆ, ಪಶ್ಚಿಮ ವಲಯ ಹಾಗೂ ದಕ್ಷಿಣ ವಲಯದಲ್ಲಿ ಯಾರೂ ಅರ್ಜಿ ಹಾಕಿರಲಿಲ್ಲ. ಹಾಗಾಗಿ ಮರು ಟೆಂಡರ್ ಕರೆದಿದ್ದೇವೆ. ಟೆಂಡರ್ ಬಿಡ್‌ಗಳನ್ನು ಜು. 6ರಂದು ತೆರೆಯಲಿದ್ದೇವೆ. ಬೊಮ್ಮನಹಳ್ಳಿ ಹಾಗೂ ಆರ್.ಆರ್.ನಗರ ವಲಯಗಳಲ್ಲಿ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಜು.1 ರಿಂದ ಎಬಿಸಿ ಶಸ್ತ್ರಚಿಕಿತ್ಸೆ ಆರಂಭವಾಗಲಿದೆ’ ಎಂದು ಪಶುಸಂಗೋಪನಾ ವಿಭಾಗದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಯಾವ ವಲಯಗಳಲ್ಲಿ ಶಸ್ತ್ರಚಿಕಿತ್ಸೆಗೆ ಸಂಸ್ಥೆಗಳನ್ನು ಗುರುತಿಸಿಲ್ಲವೋ ಅಲ್ಲಿನ ನಾಯಿಗಳ ಶಸ್ತ್ರಚಿಕಿತ್ಸೆಗೆ ಬೇರೆ ವಲಯದ ಶಸ್ತ್ರಚಿಕಿತ್ಸಾ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಿದ್ದೇವೆ’ ಎಂದು ಅವರು ಹೇಳಿದರು.
ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ನಾಯಿಗಳು ಸಂತಾನೋತ್ಪಾದನಾ ಚಟುವಟಿಕೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತವೆ. ಇಷ್ಟರಲ್ಲೇ ಬೀದಿನಾಯಿಗಳನ್ನು ಸಂತಾನಶಕ್ತಿಹರಣ ಶಸ್ತ್ರಚುಕಿತ್ಸೆಗೆ ಒಳಪಡಿಸಬೇಕಿತ್ತು. ಆ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ದೂರುತ್ತಾರೆ ಸಾರ್ವಜನಿಕರು.
‘ಕೆಂಪೇಗೌಡ ಪ್ರಶಸ್ತಿಗೆ 800 ಅರ್ಜಿ’
ಬಿಬಿಎಂಪಿ ವತಿಯಿಂದ ನೀಡುವ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗೆ 800ಕ್ಕೂ ಅಧಿಕ ಅರ್ಜಿಗಳು ಬಂದಿವೆ.
‘ಅರ್ಜಿ ಸಲ್ಲಿಸಲು ಜೂ.20 ಕೊನೆಯ ದಿನವಾಗಿತ್ತು. ಕೆಲವು ಅರ್ಜಿಗಳು ಅದರ ನಂತರವೂ ಬಂದಿವೆ. ಯಾರಿಗೆ ಪ್ರಶಸ್ತಿ ನೀಡಬೇಕು ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲು ತಜ್ಞರ ಸಮಿತಿ ರಚಿಸಲಿದ್ದೇವೆ’ ಎಂದು ಮೇಯರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.