ADVERTISEMENT

ಬಿಬಿಎಂಪಿ ಚುನಾವಣೆ: ‘ಕಾಂಗ್ರೆಸ್‌ನದ್ದು ದಾದಾಗಿರಿ ಜಯ’

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2018, 18:51 IST
Last Updated 28 ಸೆಪ್ಟೆಂಬರ್ 2018, 18:51 IST
   

ಬೆಂಗಳೂರು: ‘ಮೂವರು ಪಕ್ಷೇತರ ಸದಸ್ಯರು ಬಿಜೆಪಿ ಪರ ಮತ ಚಲಾಯಿಸಲು ಸಿದ್ಧರಿದ್ದರು. ಆದರೆ, ಕಾಂಗ್ರೆಸ್‌ ಸದಸ್ಯರು ಅವರನ್ನು ಬೆದರಿಸಿ ಎಳೆದೊಯ್ದರು. ದಾದಾಗಿರಿ, ವಾಮಮಾರ್ಗದಿಂದ ಅವರು ಅಧಿಕಾರ ಹಿಡಿದಿದ್ದಾರೆ’ ಎಂದು ಬಿಬಿಎಂಪಿಯ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಆರೋಪಿಸಿದರು.

‘ಕಾಂಗ್ರೆಸ್‌ನೆಡೆಗೆ ಬರದಿದ್ದರೆ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಕಿರುಕುಳ ನೀಡುತ್ತೇವೆ’ ಎಂದು ಪಕ್ಷೇತರರಿಗೆ ಧಮಕಿ ಹಾಕಿದರು. ‘ರಾಜ್ಯದಲ್ಲಿ ನಮ್ಮದೇ ಸರ್ಕಾರವಿದೆ. ಪಾಲಿಕೆಯಲ್ಲಿಯೂ ನಾವಿದ್ದರೆ, ಅನುದಾನ ಹೆಚ್ಚು ಸಿಗಲಿದೆ’ ಎಂದು ಆಮಿಷ ಒಡ್ಡಿ ಪಕ್ಷೇತರರನ್ನು ಸೆಳೆದರು. ಇದರಿಂದ ಒಂದೆರಡು ಮತಗಳಿಂದ ನಮ್ಮ ಅಭ್ಯರ್ಥಿಗೆ ಸೋಲು ಆಗಬಹುದು ಎಂಬ ಭಯದಿಂದ ಸಭಾತ್ಯಾಗ ಮಾಡಿದೆವು’ ಎಂದು ಸಮಜಾಯಿಷಿ ನೀಡಿದರು.

‘ಮೇಯರ್‌ ಆಯ್ಕೆ ಪಾರದರ್ಶಕವಾಗಿ ನಡೆದಿಲ್ಲ. ಅಧಿಕಾರಿಗಳು ಸರ್ಕಾರದ ಕೈಗೊಂಬೆಯಂತೆ ವರ್ತಿಸಿದರು. ಈ ಕುರಿತು ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡುತ್ತೇವೆ’ ಎಂದು ಹೇಳಿದರು.

‘ಪಾಲಿಕೆಯ ಆಡಳಿತದ ಕುರಿತು ಹೈಕೋರ್ಟ್‌ ಪ್ರತಿನಿತ್ಯ ಚಾಟಿ ಬೀಸುತ್ತಿದೆ. ನಗರದಲ್ಲಿನ ರಸ್ತೆಗುಂಡಿಗಳು, ಅಕ್ರಮ ಜಾಹೀರಾತು ಫಲಕಗಳು, ಕಸದ ಸಮಸ್ಯೆಯನ್ನು ಸರಿಯಾಗಿ ನಿಭಾಯಿಸಿಲ್ಲ ಎಂದು ಛೀಮಾರಿ ಹಾಕುತ್ತಿದೆ. ಇನ್ನು ಮುಂದಾದರೂ ಪಾಲಿಕೆಗೆ ಕಳಂಕ ಬಾರದ ರೀತಿಯಲ್ಲಿ ಆಡಳಿತ ನಡೆಸಲಿ’ ಎಂದು ಹಾರೈಸಿದರು.

**

ಮೇಯರ್‌: ಗಂಗಾಂಬಿಕೆ

ವಾರ್ಡ್‌: 153, ಜಯನಗರ

ವಯಸ್ಸು: 40 ವರ್ಷ

ವಿದ್ಯಾರ್ಹತೆ: ಬಿ.ಕಾಂ.

ಪತಿ: ಬಿ.ಮಲ್ಲಿಕಾರ್ಜುನ, ಕಾಂಗ್ರೆಸ್ ಮುಖಂಡ

ಮಕ್ಕಳು: ಪ್ರಜ್ವಲ್‌ ಹಾಗೂ ನಂದಿನಿ

* ಪಾಲಿಕೆಗೆ 2010 ಮತ್ತು 2015ರಲ್ಲಿ ಆಯ್ಕೆ

**

ಉಪಮೇಯರ್‌: ರಮೀಳಾ ಉಮಾಶಂಕರ್

ವಾರ್ಡ್‌: 103, ಕಾವೇರಿಪುರ

ವಯಸ್ಸು: 44 ವರ್ಷ

ವಿದ್ಯಾರ್ಹತೆ: ಡಿಪ್ಲೊಮಾ

ಪತಿ: ಡಿ.ಉಮಾಶಂಕರ್‌, ಜೆಡಿಎಸ್‌ ಮುಖಂಡ

ಮಕ್ಕಳು: ಮಗ ವರುಣ್‌ ಕುಮಾರ್‌ ಉದ್ಯಮಿ, ಮಗಳು ಭೂಮಿಕಾ ರಾಣಿ ಪಿಯುಸಿ ಓದುತ್ತಿದ್ದಾರೆ.

* ಪಾಲಿಕೆಗೆ 2015ರಲ್ಲಿ ಮೊದಲ ಬಾರಿಗೆ ಆಯ್ಕೆ

**

ಮತದಾರರ ಸ್ವಾಗತಕ್ಕೆ ಪೊಲೀಸ್‌ ಬ್ಯಾಂಡ್‌

ಮೇಯರ್‌ ಆಯ್ಕೆ ಚುನಾವಣೆಯಲ್ಲಿ ಮತದಾನ ಮಾಡಲು ಬರುತ್ತಿದ್ದ ಜನಪ್ರತಿನಿಧಿಗಳನ್ನು ಪಾಲಿಕೆ ಸಭಾಂಗಣ ಕಟ್ಟಡ ಎಡ–ಬಲದಲ್ಲಿದ್ದ ಪೊಲೀಸ್‌ ಮತ್ತು ಆರ್ಮಿ ಬ್ಯಾಂಡ್‌ಗಳು ಸುಶ್ರಾವ್ಯ ಸಂಗೀತದಿಂದ ಸ್ವಾಗತಿಸಿದವು.

ಸಿಟಿ ರಿಸರ್ವ್‌ ಆರ್ಮಿ ಪೊಲೀಸ್‌ ಮತ್ತು ದೊಗ್ರಾ ರೆಜಿಮೆಂಟ್‌ ಬ್ಯಾಂಡ್‌ ತಂಡಗಳು ದೇಶಭಕ್ತಿ ಮತ್ತು ನಾಡು ನುಡಿಯ ಮಹತ್ವ ಸಾರುವ ಗೀತೆಗಳ ಸಂಗೀತವನ್ನು ಸಾದರಪಡಿಸಿದವು. ನಿರ್ಗಮಿತ ಮೇಯರ್‌ ಸಂಪತ್‌ರಾಜ್‌ ಇದೇ ಮೊದಲ ಬಾರಿಗೆ ಈ ವ್ಯವಸ್ಥೆಯನ್ನು ಮಾಡಿಸಿದ್ದರು.

**

ಅಭಿಪ್ರಾಯಗಳು

ಕಾಂಗ್ರೆಸ್‌ ಪಕ್ಷೇತರರನ್ನು ಹೈಜಾಕ್‌ ಮಾಡಿದೆ. ಅಕ್ರಮ ಮಾರ್ಗದಿಂದ ಪಾಲಿಕೆಯ ಆಡಳಿತ ಹಿಡಿದಿದೆ.
–ಆರ್‌.ಅಶೋಕ್‌, ಬಿಜೆಪಿ ಶಾಸಕ
**
ನಾವು ಯಾವ ತೋಳ್ಬಲ ಬಳಸಿಲ್ಲ, ಹಣದ ಆಮಿಷವನ್ನೂಒಡ್ಡಿಲ್ಲ. ಪಕ್ಷೇತರರು ಸ್ವಯಂಪ್ರೇರಿತರಾಗಿ ನಮ್ಮೆಡೆಗೆ ಬಂದಿದ್ದಾರೆ.
–ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ
*
ಸಮಯಮೀರಿ ಬಂದ ಸದಸ್ಯರಿಗೂ ಮತದಾನ ಮಾಡಲು ಅವಕಾಶ ನೀಡಿದರು. ಹಿಂದಿನಂತೆ ಈ ಬಾರಿಯೂಕಾಂಗ್ರೆಸ್‌ ಅಕ್ರಮವಾಗಿ ಗೆದ್ದಿದೆ.
– ಸದಾನಂದ ಗೌಡ, ಬಿಜೆಪಿ ಸಂಸದ
*
ನಾವು ಕಾನೂನಾತ್ಮಕವಾಗಿಯೇ ಗೆದ್ದಿದ್ದೇವೆ. ಬಿಜೆಪಿಯವರಿಗೆ ಚುನಾವಣಾ ಪ್ರಕ್ರಿಯೆಯಲ್ಲಿ ಸಂಶಯವಿದ್ದರೆ,ಚುನಾವಾಣಾ ಆಯೋಗಕ್ಕೆ ದೂರು ನೀಡಲಿ.
–ಜಿ.ಪರಮೇಶ್ವರ, ಉಪಮುಖ್ಯಮಂತ್ರಿ
*
ವಾಮಮಾರ್ಗದಿಂದ ಕಾಂಗ್ರೆಸ್‌ ಮತ್ತೆ ಅಧಿಕಾರ ಹಿಡಿದಿದೆ. ಜನರುಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ.
– ಪಿ.ಸಿ.ಮೋಹನ್‌, ಬಿಜೆಪಿ ಸಂಸದ
*
ಗೆಲ್ಲಲು ಬಿಜೆಪಿ ಮುಖಂಡರು ಸಾಕಷ್ಟು ಪ್ರಯತ್ನಪಟ್ಟರು. ಆದರೆ, ಅವರ ಆಟ ನಡೆದಿಲ್ಲ. ಸೋಲಿನ ಹತಾಶೆಯಿಂದ ಮನಬಂದಂತೆ ಮಾತನಾಡುತ್ತಿದ್ದಾರೆ
–ಸಿದ್ದರಾಮಯ್ಯ, ಸಮನ್ವಯ ಸಮಿತಿ ಅಧ್ಯಕ್ಷ
*
ಮೇಯರ್‌ ಆಯ್ಕೆಯನ್ನು ‘ಹೈವೋಲ್ಟೇಜ್‌’ ಚುನಾವಣೆಯಾಗಿ ಪರಿವರ್ತಿಸಲು ಹೋದವರಿಗೆ ಕರೆಂಟೇ ಸಿಗಲಿಲ್ಲ. ಈಗ ಬಿಜೆಪಿಗೆ ಫ್ಯೂಸ್‌ ಹೋಗಿದೆ, ಅವರ ಸರ್ಕಸ್‌ ಫಲ ನೀಡಲಿಲ್ಲ.
–ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ
*
ಆಡಳಿತ ಪಕ್ಷದ ಎಲ್ಲ ಸದಸ್ಯರ ಸಭೆ ಕರೆದು ಸ್ಥಾಯಿ ಸಮಿತಿಗಳ ಅಧ್ಯಕ್ಷರನ್ನು ಆಯ್ಕೆ ಮಾಡುತ್ತೇವೆ. ಸುಗಮ ಆಡಳಿತಕ್ಕಾಗಿ ಹೊಸ ಮೇಯರ್‌ಗೆ ಬಿಜೆಪಿಯೂ ಸಹಕಾರ ನೀಡಲಿ.
–ರಾಮಲಿಂಗಾ ರೆಡ್ಡಿ, ಕಾಂಗ್ರೆಸ್‌ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.