ADVERTISEMENT

ಮೇಯರ್‌ ಚುನಾವಣೆ: ಬಿಜೆಪಿಯಲ್ಲಿ ಪೈಪೋಟಿ

ಕಮಲ ಪಾಳಯದಲ್ಲಿ ಈಗಲೇ ತಂತ್ರಗಾರಿಕೆ: ನಗರ ಪ್ರತಿನಿಧಿಸುವ ನಾಲ್ವರು ಶಾಸಕರು ಅನರ್ಹ

​ಪ್ರಜಾವಾಣಿ ವಾರ್ತೆ
Published 28 ಜುಲೈ 2019, 19:33 IST
Last Updated 28 ಜುಲೈ 2019, 19:33 IST
   

ಬೆಂಗಳೂರು: ರಾಜ್ಯದಲ್ಲಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಚನೆಗೊಂಡ ಬೆನ್ನಲ್ಲೇ, ಬಿಬಿಎಂಪಿ ಚುಕ್ಕಾಣಿಯನ್ನು ಕೈವಶ ಮಾಡಿಕೊಳ್ಳಲು ಕಮಲ ಪಾಳಯದ ಕಟ್ಟಾಳುಗಳು ತಂತ್ರಗಾರಿಕೆ ಹೆಣೆದಿದ್ದಾರೆ. ಬೆಂಗಳೂರು ನಗರವನ್ನು ಪ್ರತಿನಿಧಿಸುವ ಕಾಂಗ್ರೆಸ್‌–ಜೆಡಿಎಸ್‌ನ ನಾಲ್ವರು ಶಾಸಕರು ಅನರ್ಹಗೊಂಡಿದ್ದರಿಂದ ಬಿಜೆ‍ಪಿಯ ಹಾದಿ ಇನ್ನಷ್ಟು ಸುಗಮವಾದಂತಾಗಿದೆ.

ಮೇಯರ್‌ ಗಂಗಾಂಬಿಕೆ ಅವರ ಅಧಿಕಾರದ ಅವಧಿ ಮುಂಬರುವ ಸೆ.28ಕ್ಕೆ ಕೊನೆಗೊಳ್ಳಲಿದೆ. ಪಾಲಿಕೆಯಲ್ಲಿ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿಕೂಟವು ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು ಕಾಂಗ್ರೆಸ್‌ನ ಶಾಸಕರಾದ ರಾಮಲಿಂಗಾ ರೆಡ್ಡಿ, ಎಸ್‌.ಟಿ. ಸೊಮಶೇಖರ್‌, ಮುನಿರತ್ನ ಹಾಗೂ ಬೈರತಿ ಬಸವರಾಜು. 2015ರ ಬಿಬಿಎಂಪಿ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗದೇ ಇದ್ದಾಗ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳ ಪಾಲಿಕೆ ಸದಸ್ಯರು ಬಿಜೆಪಿ ನಾಯಕರ ಆಮಿಷಗಳಿಗೆ ಬಲಿಯಾಗದಂತೆ ನೋಡಿಕೊಂಡವರೇ ಈ ಶಾಸಕರು. ಮೇಯರ್‌ ಆಯ್ಕೆ ವೇಳೆ ಪ್ರತಿ ಬಾರಿ ಕಗ್ಗಂಟು ಎದುರಾದಾಗಲೂ, ಪಕ್ಷೇತರ ಸದಸ್ಯರ ಬೆಂಬಲ ಪಡೆದು ತಮ್ಮ ಪಕ್ಷದವರೇ ಪ್ರಥಮ ಪ್ರಜೆಯಾಗಿ ಆರಿಸಿ ಬರುವಂತೆ ಕಾರ್ಯತಂತ್ರ ರೂಪಿಸುವಲ್ಲಿಯೂ ಈ ನಾಲ್ವರು ಶಾಸಕರೇ ನಿರ್ಣಾಯಕ ಪಾತ್ರ ವಹಿಸಿದ್ದರು.

ಶಾಸಕ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ರಾಮಲಿಂಗಾ ರೆಡ್ಡಿ ವಾಪಸ್ ಪಡೆದಿದ್ದಾರೆ. ಎಸ್‌.ಟಿ.ಸೋಮಶೇಖರ್‌, ಮುನಿರತ್ನ, ಬೈರತಿ ಬಸವರಾಜು ಹಾಗೂ ಜೆಡಿಎಸ್‌ನ ಕೆ.ಗೋಪಾಲಯ್ಯ ಅವರನ್ನು ಶಾಸಕ ಸ್ಥಾನದಿಂದ ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಭಾನುವಾರ ಅನರ್ಹಗೊಳಿಸಿದ್ದಾರೆ.

ADVERTISEMENT

ಈಗಿನ ಬಲಾಬಲದ ಪ್ರಕಾರ ಮೇಯರ್‌ ಚುನಾವಣೆಯಲ್ಲಿ ಒಟ್ಟು 257 ಮಂದಿಗೆ ಮತದಾನದ ಹಕ್ಕು ಇದೆ. ಈಗಿನ ಲೆಕ್ಕಾಚಾರದ ಪ್ರಕಾರ ಬಿಜೆಪಿ 125 ಹಾಗೂ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿಕೂಟ 125 ಮತಗಳನ್ನು ಹೊಂದಿವೆ.

ಜೆಡಿಎಸ್‌ ಚಿಹ್ನೆಯಿಂದ ಆಯ್ಕೆಯಾಗಿರುವ 14 ಸದಸ್ಯರ ಪೈಕಿ ಇಬ್ಬರು ಹಾಗೂ ಏಳು ಪಕ್ಷೇತರ ಸದಸ್ಯರ ಪೈಕಿ ಇಬ್ಬರು ಬಿಜೆಪಿ ಜೊತೆ ಗುರುತಿಸಿಕೊಂಡಿದ್ದರು. 2018ರಲ್ಲಿ ಮೇಯರ್‌ ಆಯ್ಕೆ ಚುನಾವಣೆಯಲ್ಲಿ ಮೈತ್ರಿಕೂಟವನ್ನು ಬೆಂಬಲಿಸಿದ್ದ ಕೆಲವು ಪಕ್ಷೇತರ ಸದಸ್ಯರು ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನ ಸಿಕ್ಕಿಲ್ಲ ಎಂಬ ಕಾರಣಕ್ಕೆ ಬೇಸರಗೊಂಡಿದ್ದಾರೆ. ಪಕ್ಷೇತರ ಸದಸ್ಯರ ಒಲವು ಯಾರ ಕಡೆಗೆ ಇದೆ ಎಂಬುದು ಇನ್ನೂ ಗೊತ್ತಾಗಿಲ್ಲ.

ಮುನಿರತ್ನ, ಸೋಮಶೇಖರ್‌ ಹಾಗೂ ಬೈರತಿ ಬಸವರಾಜು ಗುಂಪಿನ ಪಾಲಿಕೆ ಸದಸ್ಯರ ಸಂಖ್ಯೆ 10ಕ್ಕೂ ಅಧಿಕ ಇದೆ. ಈ ಸದಸ್ಯರು ಸಹ ಬಿಜೆಪಿ ಕಡೆಗೆ ವಾಲಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ಕಮಲ ಪಾಳಯದ ನಾಯಕರಿದ್ದಾರೆ.

ಮೂವರು ಆಕಾಂಕ್ಷಿಗಳು

2019–20ನೇ ಸಾಲಿನಲ್ಲಿ ಮೇಯರ್‌ ಹಾಗೂ ಉಪಮೇಯರ್‌ ಸ್ಥಾನಗಳೆರಡೂ ಸಾಮಾನ್ಯ ವರ್ಗಕ್ಕೆ ಮೀಸಲು. ಬಿಜೆಪಿಯಿಂದ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ಕುಮಾರಸ್ವಾಮಿ ಲೇಔಟ್‌ನ ಸದಸ್ಯ ಎಲ್‌.ಶ್ರೀನಿವಾಸ್‌ ಹಾಗೂ ಗೋವಿಂದರಾಜನಗರ ವಾರ್ಡ್‌ನ ಉಮೇಶ್‌ ಶೆಟ್ಟಿ ಅವರು ಮೇಯರ್‌ ಸ್ಥಾನದ ಆಕಾಂಕ್ಷಿಗಳು. ಪದ್ಮನಾಭ ರೆಡ್ಡಿ ಅವರು ನಾಲ್ಕು ವರ್ಷಗಳಿಂದ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಆಡಳಿತ ಪಕ್ಷದ ವಿರುದ್ಧ ದೊಡ್ಡ ಮಟ್ಟದ ಹೋರಾಟ ಸಂಘಟಿಸುವಲ್ಲಿ ವಿಫಲರಾಗಿದ್ದಾರೆ ಎಂಬ ಆಕ್ಷೇಪವೂ ಪಕ್ಷದ ವಲಯದಲ್ಲಿದೆ. ಅವರು ಈ ಹಿಂದೆ ಜೆಡಿಎಸ್‌ನಲ್ಲಿದ್ದರು.

ಮೂರನೇ ಸಲ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿರುವ ಎಲ್‌.ಶ್ರೀನಿವಾಸ್‌ ಅವರು ಮೇಯರ್‌ ಸ್ಥಾನದ ಪ್ರಮುಖ ಆಕಾಂಕ್ಷಿ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್‌.ಸಂತೋಷ್‌ ಹಾಗೂ ಪದ್ಮನಾಭನಗರದ ಶಾಸಕ ಆರ್‌.ಅಶೋಕ್‌ ಕೂಡಾ ಅವರ ಬೆನ್ನಿಗೆ ನಿಂತಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಡಿ. ವೆಂಕಟೇಶಮೂರ್ತಿ ಮೇಯರ್‌ ಆಗಿದ್ದಾಗ ಶ್ರೀನಿವಾಸ್‌ ಉಪಮೇಯರ್‌ ಆಗಿದ್ದರು.

ಕಳೆದ ಅವಧಿಯಲ್ಲಿ ಬಿಜೆಪಿ ಪಾಲಿಕೆಯ ಚುಕ್ಕಾಣಿ ಹಿಡಿದಿತ್ತು. ಆಗ ಎಸ್‌.ಕೆ.ನಟರಾಜ್‌, ಶಾರದಮ್ಮ, ಡಿ.ವೆಂಕಟೇಶಮೂರ್ತಿ, ಬಿ.ಎಸ್‌.ಸತ್ಯನಾರಾಯಣ ಹಾಗೂ ಶಾಂತಕುಮಾರಿ ಮೇಯರ್‌ ಆಗಿದ್ದರು. ಈ ಸಲ ಒಕ್ಕಲಿಗ ಸಮುದಾಯದವರಿಗೆ ಆದ್ಯತೆ ನೀಡಬೇಕು ಎಂಬ ಬೇಡಿಕೆ ಪಕ್ಷದ ವಲಯದಲ್ಲಿದೆ.

ಕಾಂಗ್ರೆಸ್‌ನಿಂದ ಯಾರು?

ಕಾಂಗ್ರೆಸ್‌ನಿಂದ ಶಂಕರ ಮಠ ವಾರ್ಡ್‌ನ ಸದಸ್ಯ ಎಂ.ಶಿವರಾಜು, ದತ್ತಾತ್ರೇಯ ದೇವಸ್ಥಾನ ವಾರ್ಡ್‌ನ ಸದಸ್ಯ ಆರ್‌.ಎಸ್‌. ಸತ್ಯನಾರಾಯಣ ಹಾಗೂ ಜಯಮಹಲ್‌ ವಾರ್ಡ್‌ನ ಸದಸ್ಯ ಎಂ.ಕೆ.ಗುಣಶೇಖರ್ ಅವರು ಮೇಯರ್‌ ಸ್ಥಾನದ ಆಕಾಂಕ್ಷಿಗಳು. ಉಪ ಮೇಯರ್‌ ಸ್ಥಾನಕ್ಕೆ ಕಾವಲ್‌ಭೈರಸಂದ್ರ ವಾರ್ಡ್‌ನ ನೇತ್ರಾ ನಾರಾಯಣ್‌ ಹಾಗೂ ಪಾದರಾಯನಪುರ ವಾರ್ಡ್‌ನ ಇಮ್ರಾನ್‌ ಪಾಷಾ ಆಕಾಂಕ್ಷಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.