ಬೆಂಗಳೂರು: ಬಿಬಿಎಂಪಿಯಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮುಂದುವರಿಸಲು ಜೆಡಿಎಸ್ ಒಲವು ತೋರಿಸಿದೆ.
ಶುಕ್ರವಾರ ಇಲ್ಲಿನ ಪಕ್ಷದ ಕಚೇರಿಯಲ್ಲಿ ನಡೆದ ಹಾಗೂ ಬಳಿಕ ಶಾಸಕಾಂಗ ಪಕ್ಷದ ನಾಯಕ ಎಚ್. ಡಿ. ಕುಮಾರಸ್ವಾಮಿ ಅವರ ಮನೆಗೆ ಸ್ಥಳಾಂತರಗೊಂಡ ಸಭೆಯಲ್ಲಿ ಸ್ವತಃ ಕುಮಾರಸ್ವಾಮಿ ಅವರೇ ಈ ವಿಷಯ ತಿಳಿಸಿದರು.
‘ಕಾಂಗ್ರೆಸ್ ನಾಯಕರು ದೋಸ್ತಿಗೆ ಒಪ್ಪಿದರೆ ದೋಸ್ತಿ ಮೂಲಕವೇ ಮೇಯರ್– ಉಪಮೇಯರ್ ಚುನಾವಣೆ ಎದುರಿಸಬಹುದು. ಈ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಶಾಸಕ ರಾಮಲಿಂಗಾ ರೆಡ್ಡಿ ಅವರ ಜತೆಗೆ ಮಾತುಕತೆ ನಡೆಸುವಂತೆ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಅವರಿಗೆ ಕುಮಾರಸ್ವಾಮಿ ಸೂಚಿಸಿದರು’ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸಭೆಯಲ್ಲಿ ದಾಸರಹಳ್ಳಿಯ ಜೆಡಿಎಸ್ ಶಾಸಕ ಆರ್. ಮಂಜು ನಾಥ್, ಬೆಂಗಳೂರು ನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ, ಉಪಮೇಯರ್‌ಭದ್ರೇಗೌಡ ಸೇರಿದಂತೆ ಜೆಡಿಎಸ್‌ನಎಲ್ಲಾ ಬಿಬಿಎಂಪಿ ಸದಸ್ಯರು ಹಾಜರಿದ್ದರು.
‘ಅನರ್ಹಗೊಂಡ ನಾಲ್ವರು ಶಾಸಕರ ಬೆಂಬಲಿಗ ಕಾರ್ಪೊರೇಟರ್‌ಗಳ ನಿಲುವೇ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸಲಿದೆ. ಕಾಂಗ್ರೆಸ್–ಜೆಡಿಎಸ್ ದೋಸ್ತಿ ಮಾಡಿಕೊಂಡರೆ ಬಿಜೆಪಿಗೆ ಸರಿಸಮನಾದ ಸಂಖ್ಯೆ ಸಾಧಿಸುವುದು ಸಾಧ್ಯವಿದೆ’ ಎಂದು ಜೆಡಿಎಸ್‌ನ ಹಿರಿಯ ಮುಖಂಡರೊಬ್ಬರು ಅಭಿಪ್ರಾಯಪಟ್ಟರು.
ಮಧ್ಯಂತರ ತಡೆ
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮೇಯರ್ ಹಾಗೂ ಉಪ ಮೇಯರ್ ಚುನಾವಣೆಯ ಜೊತೆಗೆ ಅಕ್ಟೋಬರ್ 1ರಂದು ನಡೆಯಬೇಕಿದ್ದ 12 ಸ್ಥಾಯಿ ಸಮಿತಿ ಚುನಾವಣೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಈ ಕುರಿತಂತೆ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ಪಾಲಿಕೆ ಸದಸ್ಯ ಇಮ್ರಾನ್ ಪಾಷಾ ಸೇರಿದಂತೆ ಎಂಟು ಜನರು ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಪ್ರತಿವಾದಿಗಳಾದ ಬಿಬಿಎಂಪಿ ಆಯುಕ್ತರು ಹಾಗೂ ಪ್ರಾದೇಶಿಕ ಆಯುಕ್ತರೂ ಆದ ಚುನಾವಣಾಧಿಕಾರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಲಾಗಿದೆ.
‘2019ರ ಡಿಸೆಂಬರ್ 4ಕ್ಕೆ ಸ್ಥಾಯಿ ಸಮಿತಿಯ ಮುಂದಿನ ಚುನಾವಣೆ ನಡೆಯಬೇಕು. ಅವಧಿಗೂ ಮುನ್ನ ಚುನಾವಣೆ ಘೋಷಣೆ ಕಾನೂನು ಬಾಹಿರ’ ಎಂಬುದು ಅರ್ಜಿದಾರರ ಆಕ್ಷೇಪ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.