ADVERTISEMENT

ಕೋವಿಡ್‌ ಮುನ್ನೆಚ್ಚರಿಕೆ ವಹಿಸದಿದ್ದರೆ ಮತ್ತೆ ಸಮಸ್ಯೆ: ಎನ್‌.ಮಂಜುನಾಥ ಪ್ರಸಾದ್

ಕೇರಳದಿಂದ ಬರುವಾಗ ಕೋವಿಡ್ ಪರೀಕ್ಷೆ ವರದಿ ತರುವುದು ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2021, 6:48 IST
Last Updated 20 ಫೆಬ್ರುವರಿ 2021, 6:48 IST
ಎನ್‌.ಮಂಜುನಾಥ ಪ್ರಸಾದ್
ಎನ್‌.ಮಂಜುನಾಥ ಪ್ರಸಾದ್   

ಬೆಂಗಳೂರು: ‘ಕೇರಳದಿಂದ ಬೆಂಗಳೂರಿಗೆ ಬರುವ ಪ್ರಯಾಣಿಕರು ಕೋವಿಡ್ ಪರೀಕ್ಷೆ ನಡೆಸಿದ ನೆಗೆಟಿವ್ ವರದಿ ತರುವುದು ಕಡ್ಡಾಯ’ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ತಿಳಿಸಿದರು.‌

ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಹೆಚ್ಚಾಗುತ್ತಿರುವ ಕೋವಿಡ್ ಪ್ರಕರಣಗಳು ಬೆಂಗಳೂರಿಗೆ ಹಬ್ಬುವುದನ್ನು ತಡೆಯುವ ನಿಟ್ಟಿನಲ್ಲಿ ಪಾಲಿಕೆಯ ಎಲ್ಲ ವಿಶೇಷ ಆಯುಕ್ತರು, ಜಂಟಿ ಆಯುಕ್ತರು, ಆರೋಗ್ಯಾಧಿಕಾರಿಗಳು, ಆರೋಗ್ಯ ವೈದ್ಯಾಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.

‘ರೂಪಾಂತರಗೊಂಡಿರುವ ಕೊರೊನಾ ಸೋಂಕು ನೆರೆಯ ರಾಜ್ಯಗಳಲ್ಲಿ ತನ್ನ ಆರ್ಭಟ ತೋರಿಸುತ್ತಿದೆ. ಕೇರಳದಿಂದ ಬಂದವರಿಂದ ಎರಡು ಕಡೆಗಳಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಅದನ್ನು ನಿಯಂತ್ರಣಕ್ಕೆ ತಂದಿದ್ದೇವೆ. ಈಗಲೇ ಎಚ್ಚೆತ್ತುಕೊಳ್ಳದೆ ಇದ್ದರೆ ಮುಂದಿನ ದಿನಗಳಲ್ಲಿ ಮತ್ತೆ ಸಮಸ್ಯೆಗೆ ಸಿಲುಕಿಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ADVERTISEMENT

‘ಕೇರಳದಿಂದ ಬಂದವರಿಗೆ ಕೋವಿಡ್‌ ಪರೀಕ್ಷೆ ಆಗಿದೆಯೇ ಎಂಬುದನ್ನು ಪರಿಶೀಲನೆ ನಡೆಸುವುದು ಉದ್ಯೋಗದಾತ ಕಂಪನಿಗಳು ಮತ್ತು ವಾಸವಿರುವ ಅಪಾರ್ಟ್‌ಮೆಂಟ್ ಸಮುಚ್ಚಯಗಳ ಅಥವಾ ಮನೆಗಳ ಮುಖ್ಯಸ್ಥರ ಜವಾಬ್ದಾರಿ. ಕೋವಿಡ್ ಪರೀಕ್ಷೆ ಮಾಡಿಸದೆ ಬಂದವರಿಗೆ ಕರ್ತವ್ಯ ನಿರ್ವಹಿಸಲು ಅಥವಾ ಉಳಿದುಕೊಳ್ಳಲು ಅವಕಾಶ ನೀಡಿದರೆ ಆ ಸಂಸ್ಥೆ ಮುಖ್ಯಸ್ಥರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು’ ಎಂದರು.

‘ಒಂದು ವೇಳೆ ಪರೀಕ್ಷೆ ಮಾಡಿಸಿಕೊಳ್ಳದೆ ಬಂದರೆ ಅಂತವರನ್ನು ಕ್ವಾರಂಟೈನ್‌ನಲ್ಲಿ ಇಟ್ಟು ಪರೀಕ್ಷೆ ನಡೆಸಲಾಗುವುದು. ಕೋವಿಡ್ ಇಲ್ಲ ಎಂಬುದು ದೃಢವಾದ ಬಳಿಕ ಹೊರಗೆ ಬಿಡಲಾಗುವುದು. ಮಹಾರಾಷ್ಟ್ರದಿಂದ ಸೋಂಕು ಹರಡದಂತೆ ತಡೆಯಲು ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಸದ್ಯದಲ್ಲೇ ಸರ್ಕಾರ ಆದೇಶ ಹೊರಡಿಸಲಿದೆ’ ಎಂದು ಹೇಳಿದರು.

‘ಮಾಸ್ಕ್ ಧರಿಸಬೇಕು ಮತ್ತು ಅಂತರ ಕಾಪಾಡಬೇಕು ಎಂಬ ನಿಯಮ ಪಾಲಿಸದೆ ಉದಾಸೀನ ತೋರುವ ಜನರಿಗೆ ಮುಲಾಜಿಲ್ಲದೆ ದಂಡ ಹಾಕಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಮಹಾರಾಷ್ಟ್ರದ ಕೆಲ ಜಿಲ್ಲೆಗಳಲ್ಲಿ ಲಾಕ್‌ಡೌನ್ ಇದೆ. ಆ ಪರಿಸ್ಥಿತಿ ನಮಗೂ ಬಾರದಂತೆ ಈಗಲೇ ಎಚ್ಚೆತ್ತುಕೊಳ್ಳಬೇಕು. ಹೀಗಾಗಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು’ ಎಂದು ತಾಕೀತು ಮಾಡಿದರು.

‘ಅಪಾರ್ಟ್‌ಮೆಂಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಜತೆ ಸಂಪರ್ಕ ಇಟ್ಟುಕೊಂಡು ಕೋವಿಡ್ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು. ಮದುವೆ ಸಮಾರಂಭಗಳು, ಸಿನಿಮಾ ಮಂದಿರಗಳಲ್ಲಿ ನಿಯಮ ಪಾಲಿಸಲಾಗುತ್ತಿದೆಯೇ ಎಂಬುದನ್ನು ಆಗಾಗ ಪರಿಶೀಲನೆ ನಡೆಸಬೇಕು’ ಎಂದು ಅವರು ಸೂಚನೆ ನೀಡಿದರು.

ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ನಿಂದ ಮೃತಪಟ್ಟವರ ವಿವರವನ್ನು ಅದೇ ದಿನ ಕೊಡಬೇಕು. ಆದರೆ, ಕೆಲ ಆಸ್ಪತ್ರೆಗಳಲ್ಲಿ ತಡವಾಗಿ ಪಾಲಿಕೆಗೆ ವರದಿ ನೀಡುತ್ತಿದ್ದಾರೆ. ಅಂತಹ ಆಸ್ಪತ್ರೆಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.