ADVERTISEMENT

ಬಿಬಿಎಂಪಿ | ಹೊಸ ಜಾಹೀರಾತು ನೀತಿ ಪ್ರಕಟ: ಎಲ್ಲೆಲ್ಲಿ ಎಷ್ಟು ದರ?

ರಸ್ತೆಯ ಪ್ರತಿ 100 ಮೀಟರ್‌ಗೆ ಜಾಹೀರಾತು; ಮಾರ್ಗಸೂಚಿ ದರದಂತೆ ಶುಲ್ಕ ನಿಗದಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 21:58 IST
Last Updated 20 ಜುಲೈ 2024, 21:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಸಾರ್ವಜನಿಕ ಸ್ಥಳ, ರಸ್ತೆಗಳಲ್ಲಿ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುವ ಹೊಸ ಜಾಹೀರಾತು ನೀತಿಯ ಕರಡು ಅಧಿಸೂಚನೆಯನ್ನು ಸರ್ಕಾರ ಶನಿವಾರ ಪ್ರಕಟಿಸಿದೆ. ಆಕ್ಷೇಪಣೆ ಸಲ್ಲಿಸಲು 30 ದಿನ ಕಾಲಾವಕಾಶ ನೀಡಲಾಗಿದೆ.

ರಸ್ತೆಗೆ ಅಗಲದ ವಿಸ್ತೀರ್ಣಕ್ಕೆ ಅನುಗುಣವಾಗಿ ಪ್ರತಿ 100 ಮೀಟರ್‌ಗೆ ಎಷ್ಟು ಅಳತೆಯ ಜಾಹೀರಾತುಗಳನ್ನು ಪ್ರದರ್ಶಿಸಬಹುದು. ಈ ಜಾಹೀರಾತುಗಳ ಉದ್ದ 40 ಅಡಿ ಮೀರುವಂತಿಲ್ಲ. ಆಯಾ ಪ್ರದೇಶದಲ್ಲಿ ಮಾರ್ಗಸೂಚಿ ದರಕ್ಕೆ ಅನುಗುಣವಾಗಿ ಜಾಹೀರಾತು ಶುಲ್ಕವನ್ನು ನಿಗದಿಪಡಿಸಲಾಗಿದೆ

ರಸ್ತೆ ಅಗಲ 60 ಅಡಿಯಿಂದ 80 ಅಡಿ ಇದ್ದರೆ ಪ್ರತಿ 100 ಮೀಟರ್‌ ಉದ್ದ ರಸ್ತೆಯ ಎರಡೂ ಬದಿ ಸೇರಿ 800 ಚದರಡಿ, ರಸ್ತೆ 80 ಅಡಿಯಿಂದ 100 ಅಡಿ ಇದ್ದರೆ ಎರಡೂ ಬದಿ 1000 ಚದರ ಅಡಿ, ರಸ್ತೆ 100 ಅಡಿಯಿಂದ  200 ಅಡಿ ಇದ್ದರೆ 1,100 ಚದರಡಿ, ರಸ್ತೆ ಅಗಲ 200 ಅಡಿಗಿಂತ ಹೆಚ್ಚಿದ್ದರೆ 1,200 ಚದರಡಿ ಜಾಹೀರಾತು ಪ್ರದರ್ಶಿಸಬಹುದು.

ADVERTISEMENT

ವೃತ್ತಗಳಲ್ಲಿ ಪ್ರತಿ ಒಂದು ಲಕ್ಷ ವರ್ತುಲ ಪ್ರದೇಶಕ್ಕೆ 300 ಚದರಡಿ ಜಾಹೀರಾತು ಪ್ರದರ್ಶಿಸಬಹುದು. ಉದ್ದ 60 ಅಡಿ ಮೀರುವಂತಿಲ್ಲ.

60 ಅಡಿಗಿಂತ ಕಡಿಮೆಯಿರುವ ರಸ್ತೆ ಇರುವ ವಾಣಿಜ್ಯ ಅಥವಾ ಕೈಗಾರಿಕಾ ಪ್ರದೇಶಗಳಲ್ಲಿ ಪ್ರತಿ ಲಕ್ಷ ಚದರಡಿ ವರ್ತುಲ ಪ್ರದೇಶಕ್ಕೆ 300 ಚದರ ಅಡಿ ಜಾಹೀರಾತು ಪ್ರದರ್ಶಿಸಬಹುದು. ಉದ್ದ 30 ಅಡಿ ಮೀರುವಂತಿಲ್ಲ.

ಟೆಂಡರ್‌ ಮೂಲಕ ಹರಾಜು: ರಸ್ತೆಗಳು, ವೃತ್ತಗಳು ಹಾಗೂ ಪ್ರದೇಶಗಳ ಮುಕ್ತ ಹರಾಜು ಅಥವಾ ಟೆಂಡರ್‌ ಅನ್ನು ಪ್ರತ್ಯೇಕ ಅಥವಾ ಲಾಟ್‌ಗಳಲ್ಲಿ ಒಟ್ಟುಗೂಡಿಸಿ ಪರವಾನಗಿ ನೀಡುವ ನಿರ್ಧಾರವನ್ನು ಬಿಬಿಎಂಪಿ ಮುಖ್ಯ ಆಯುಕ್ತರು ತೆಗೆದುಕೊಳ್ಳುತ್ತಾರೆ.

ಖಾಸಗಿ ಪ್ರದೇಶಕ್ಕೂ ಅನುಮತಿ: ಸರ್ಕಾರಿ ರಸ್ತೆ, ವೃತ್ತ, ಕಟ್ಟಡ, ನಿವೇಶನಗಳಲ್ಲದೆ ಖಾಸಗಿ ರಸ್ತೆ, ವಾಣಿಜ್ಯ ನಿವೇಶನ, ಕಟ್ಟಡಗಳಲ್ಲೂ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಮೆಟ್ರೊ ಕಂಬಗಳು, ನಿಲ್ದಾಣಗಳು, ಮೂಲಸೌಕರ್ಯಗಳ ತಾಣಗಳಲ್ಲಿ ಯಾರೇ ಜಾಹೀರಾತು ಪ್ರದರ್ಶಿಸಬೇಕಾದರೂ ಬಿಬಿಎಂಪಿಯಿಂದಲೇ ಗುತ್ತಿಗೆ ಪಡೆಯಬೇಕು.

ವಸತಿ ಪ್ರದೇಶ, ಕಟ್ಟಡ ಎಂದು ಆಸ್ತಿ ತೆರಿಗೆ ಪಾವತಿಸುತ್ತಿರುವ ಸ್ಥಳಗಳಲ್ಲಿ ಜಾಹೀರಾತು ಪ್ರದರ್ಶಿಸಿದರೆ, ಆಸ್ತಿ ತೆರಿಗೆಯ ಶೇ 10ರಷ್ಟು ಮೊತ್ತವನ್ನು ದಂಡ ಹಾಕಲಾಗುತ್ತದೆ. ಅಲ್ಲದೆ ಯಾವುದೇ ಸಂದರ್ಭದಲ್ಲೂ ಬಿಬಿಎಂಪಿ ಅದನ್ನು ತೆಗೆದುಹಾಕಬಹುದು.  ಬಿ–ನೋಂದಣಿ ಆಸ್ತಿಯಲ್ಲಿ ಜಾಹೀರಾತು ಪ್ರದರ್ಶಿಸಿದರೆ ಆಸ್ತಿ ತೆರಿಗೆ ಶೇ 100ರಷ್ಟು ದಂಡವನ್ನು ಆಸ್ತಿ ಮಾಲೀಕರು ಪಾವತಿಸಬೇಕಾಗುತ್ತದೆ. ಆಸ್ತಿಗೆ ಯಾವುದೇ ರೀತಿಯ ಖಾತೆಯನ್ನು ಹೊಂದಿಲ್ಲದಿದ್ದರೆ, ಆಸ್ತಿ ತೆರಿಗೆಯ ಎರಡು ಪಟ್ಟು ಮೊತ್ತವನ್ನು ದಂಡವನ್ನು ಮಾಲೀಕರು ಪಾವತಿಸಬೇಕು.

ಬಿಬಿಎಂಪಿ ಶುಲ್ಕ ಪಡೆದು ನೀಡುವ ಪರವಾನಗಿಯು ಜಾಹೀರಾತು ಪ್ರದರ್ಶನಕ್ಕೆ ಮಾತ್ರವಾಗಿದೆ. ಜಾಹೀರಾತು ಪ್ರದರ್ಶಿಸುವ ಪ್ರದೇಶದ ಮಾಲೀಕರಿಂದ ಪ್ರತ್ಯೇಕವಾಗಿ ಅನುಮತಿ ಪಡೆದುಕೊಂಡು, ಅದಕ್ಕೆ ಒಪ್ಪಂದ ಮಾಡಿಕೊಂಡಿರಬೇಕು. ಇಂತಹ ಒಪ್ಪಂದ ಇಲ್ಲದಿದ್ದರೆ ಪರವಾನಗಿ ನೀಡಲಾಗುವುದಿಲ್ಲ.

ಪರವಾನಗಿ ಅಗತ್ಯ: ಬಿಬಿಎಂಪಿಯಲ್ಲಿ ನೋಂದಾಯಿತವಾಗಿ, ಪರವಾನಗಿ ಹೊಂದಿರುವ ಜಾಹೀರಾತುದಾರರು ಮಾತ್ರ ಜಾಹೀರಾತು ಪ‍್ರದರ್ಶಿಸಲು ಹರಾಜು ಅಥವಾ ಟೆಂಡರ್‌ನಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಮುಖ್ಯ ಆಯುಕ್ತರು ಕಾಲಕಾಲಕ್ಕೆ ನಿರ್ಧರಿಸಬಹುದಾದ ಪರವಾನಗಿ ಶುಲ್ಕ, ನೋಂದಣಿ ಶುಲ್ಕ ಮತ್ತು ಭದ್ರತಾ ಠೇವಣಿಯನ್ನು ಜಾಹೀರಾತುದಾರರು ಪಾವತಿಸಬೇಕು.

ಪರವಾನಗಿ ಜಾಹೀರಾತುದಾರರಾಗಿ ನೋಂದಣಿಯಾಗಲು ಅರ್ಜಿ ಸಲ್ಲಿಸುವಾಗ ₹5 ಲಕ್ಷ ಶುಲ್ಕವನ್ನು ಪಾವತಿಸಬೇಕು. ಅರ್ಹರಿಗೆ ಮೂರು ವರ್ಷ ಪರವಾನಗಿ ನೀಡಲಾಗುತ್ತದೆ.

ಜಾಹೀರಾತುದಾರರು ನಿಯಮಗಳನ್ನು ಉಲ್ಲಂಘಿಸಿದರೆ ಏಳು ದಿನಗಳಲ್ಲಿ ಮುಖ್ಯ ಆಯುಕ್ತರು ಅಂತಹ ಜಾಹೀರಾತು ತೆರವಿಗೆ ಆದೇಶ ಮಾಡುತ್ತಾರೆ. ಶುಲ್ಕ ಪಾವತಿ ವಿಳಂಬ ಮಾಡಿದರೆ, ವರ್ಷಕ್ಕೆ ಶೇ 18ರಷ್ಟು ಬಡ್ಡಿ ಹಾಕಲಾಗುತ್ತದೆ. ಬಡ್ಡಿ, ದಂಡಗಳನ್ನು ಪಾವತಿಸಲು ವಿಫಲವಾದರೆ ಶೋ–ಕಾಸ್‌ ನೋಟಿಸ್‌ ನೀಡಿ ಏಳು ದಿನಗಳಲ್ಲಿ ಉತ್ತರ ಬಾರದಿದ್ದರೆ ವಲಯ ಆಯುಕ್ತರು 20 ದಿನಗಳೊಳಗೆ ಆದೇಶ ನೀಡಬೇಕು. ಅವುಗಳನ್ನು ತೆರವುಗೊಳಿಸಬೇಕು, ಆ ವೆಚ್ಚವನ್ನು ಜಾಹೀರಾತುದಾರರಿಂದ ಅಥವಾ ಭೂಮಿಯ ಮಾಲೀಕರಿಂದ ವಸೂಲಿ ಮಾಡಬಹುದು.

ಎಲ್ಲೆಲ್ಲಿ ಅವಕಾಶ ಇಲ್ಲ?

  • ಕುಮಾರಕೃಪ ರಸ್ತೆ ವಿಂಡ್ಸರ್‌ ಮ್ಯಾನರ್‌ ಜಂಕ್ಷನ್‌ನಿಂದ ಶಿವಾನಂದ ವೃತ್ತ

  • ರಾಜಭವನ ರಸ್ತೆ ಹೈಗ್ರೌಂಡ್ಸ್‌ನಿಂದ ಮಿನ್ಸ್ಕ್‌ ಸ್ಕ್ವೇರ್‌

  • ಸ್ಯಾಂಕಿ ರಸ್ತೆ ಹೈಗ್ರೌಂಡ್ಸ್‌ನಿಂದ ವಿಂಡ್ಸರ್‌ ಹಿಲ್ಡ್‌ ಸಿಗ್ನಲ್‌

  • ಅಂಬೇಡ್ಕರ್‌ ವೀಧಿ ಕೆ.ಆರ್‌. ವೃತ್ತದಿಂದ ಇನ್‌ಫೆಂಟ್ರಿ ಜಂಕ್ಷನ್‌ ಪೋಸ್ಟ್‌ ಆಫೀಸ್‌ ರಸ್ತೆ

  • ಕೆ.ಆರ್‌. ವೃತ್ತದಿಂದ ಎಸ್‌ಬಿಐ ವೃತ್ತ (ಕೆ.ಜಿ ರಸ್ತೆ) ಚಾಲುಕ್ಯ ವೃತ್ತ

  • ಮಹಾರಾಣಿ ಕಾಲೇಜ್‌ ರಸ್ತೆ

  • ಶೇಷಾದ್ರಿ ರಸ್ತೆ

  • ಕೆ.ಆರ್‌. ವೃತ್ತ

  • ಕಬ್ಬನ್‌ ಪಾರ್ಕ್‌ ಹಾಗೂ ಲಾಲ್‌ಬಾಗ್‌ ಆವರಣ

  • ನೃಪತುಂಗ ರಸ್ತೆ

  • ಕೆ.ಆರ್‌. ವೃತ್ತದಿಂದ ಪೊಲೀಸ್‌ ಕಾರ್ನರ್‌ ಜಂಕ್ಷನ್‌

  • ಪ್ಯಾಲೇಸ್ ರಸ್ತೆ ಎಸ್‌ಬಿಐ ವೃತ್ತದಿಂದ ಚಾಲುಕ್ಯ ವೃತ್ತ

ಈಗಾಗಲೇ ಅಸ್ತಿತ್ವದಲ್ಲಿರುವ ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಯೋಜನೆಯಡಿಯ ಪಾದಚಾರಿ ಮೇಲ್ಸೇತುವೆ ಬಸ್‌ ತಂಗುದಾಣಗಳು ಇ–ಶೌಚಾಲಯಗಳಲ್ಲಿನ ಜಾಹೀರಾತು ಪ್ರದರ್ಶನಕ್ಕೆ ವಿನಾಯಿತಿ ಇದೆ. ಅಗತ್ಯವೆಂದು ಕಂಡುಬಂದರೆ ಬಿಬಿಎಂಪಿ ಮುಖ್ಯ ಆಯುಕ್ತರು ಹೆಚ್ಚುವರಿ ಪ್ರದೇಶಗಳನ್ನು ಜಾಹೀರಾತು ಪ್ರದರ್ಶನಕ್ಕೆ ಅವಕಾಶ ಇಲ್ಲದಂತೆ ಆದೇಶಿಸಬಹುದು.

ನಗರದ ಯಾವುದೇ ಪ್ರದೇಶದಲ್ಲಿ ವೈಯಕ್ತಿಕ ಜಾಹೀರಾತುಗಳನ್ನು ಹಾಕಲು ಮುಖ್ಯ ಆಯುಕ್ತರ ಪೂರ್ವ ಲಿಖಿತ ಅನುಮತಿ ಪಡೆದುಕೊಳ್ಳಬೇಕು. ದೇವಾಲಯ ಮಸೀದಿ ಗುರುದ್ವಾರ ಚರ್ಚ್‌ ಮತ್ತು ಇತರ ಧಾರ್ಮಿಕ ಸ್ಥಳಗಳಿಂದ ನೂರು ಮೀಟರ್‌ ಒಳಗೆ ಮೇಲ್ಸೇತುವೆ ಎಲಿವೇಟೆಡ್‌ ಕಾರಿಡಾರ್ ಸಂವಹನ ಗೋಪುರ ವಿಶ್ವ ಪಾರಂಪರಿಕ ತಾಣ ರಾಷ್ಟ್ರೀಯ ಉದ್ಯಾನಗಳು ಅರಣ್ಯ ಜಲಮೂಲ ಪ್ರಾದೇಶಿಕ ಪರಿಸರ ವ್ಯವಸ್ಥೆಗಳ ಅವಶೇಷಗಳ ಪ್ರದೇಶ ಸ್ಮಾರಕ ವಿದ್ಯುತ್‌ ಕಂಬಗಳಲ್ಲಿ ಜಾಹೀರಾತು ಪ್ರದರ್ಶನವನ್ನು ನಿಷೇಧಿಸಲಾಗಿದೆ.

ವಾಹನ ಚಾಲಕರ ಏಕಾಗ್ರತೆಗೆ ಭಂಗವನ್ನು ಉಂಟು ಮಾಡುವ ಜಾಹೀರಾತು ಸಂಚಾರ ಸಿಗ್ನಲ್‌ ದೀಪಗಳ ಬಣ್ಣ ನಗರದ ವಿರೂಪಕ್ಕೆ ಕಾರಣವಾಗಬಹುದಾದ ಭಿತ್ತಿಪತ್ರ ಗೀಚುಬರಹ ಮರದ ಮೇಲೆ ಅಂಟಿಸಲಾದ ಮೊಳೆ ಹೊಡೆದ ಕಟ್ಟಿದ ಲಗತ್ತಿಸಿದ ಜೋಡಿಸಿದ ಜಾಹೀರಾತನ್ನು ನಿಷೇಧಿಸಲಾಗಿದೆ.

ನಿಯಾನ್‌– ಚಿಹ್ನೆಗಳನ್ನು ನಿಷೇಧಿಸಲಾಗಿದೆ. ಎಲ್‌ಇಡಿ ಪ್ರದರ್ಶನ ಅಥವಾ ಡಿಜಿಟಲ್‌ ವಿಡಿಯೊ ಜಾಹೀರಾತುಗಳಿಗೆ ಅನುಮತಿ ಇಲ್ಲ. 10 ಸೆಕೆಂಡುಗಳಿಗೆ ಚಿತ್ರ ಬದಲಿಸಲು ಮಾತ್ರ ಅನುಮತಿ ಇದೆ.

ಮೆಟ್ರೊ ಜಾಹೀರಾತು ಸಮಾನ ಹಂಚಿಕೆ

ಬಿಬಿಎಂಪಿಯ ರಸ್ತೆಗಳಲ್ಲಿ ‘ನಮ್ಮ ಮೆಟ್ರೊ’ (ಬಿಎಂಆರ್‌ಸಿಎಲ್‌) ಸ್ವತ್ತುಗಳಿಂದ ಬರುವ ಜಾಹೀರಾತು ಆದಾಯವನ್ನು ಬಿಬಿಎಂಪಿ  ಮತ್ತು ಬಿಎಂಆರ್‌ಸಿಎಲ್‌ ಸಮಾನವಾಗಿ ಹಂಚಿಕೊಳ್ಳಬೇಕು. ಕೆಎಸ್‌ಆರ್‌ಟಿಸಿ ಬಿಎಂಟಿಸಿ ಹಾಗೂ ಇತರೆ ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ಘಟಕಗಳ ಸ್ವತ್ತುಗಳೊಳಗೆ ಜಾಹೀರಾತು ನಿಯೋಜನೆ ಹರಾಜುಗಳನ್ನು ಆಯಾ ಏಜೆನ್ಸಿಗಳು ಸ್ವಂತ ನಿಯಮಗಳು ಕಾರ್ಯವಿಧಾನಗಳ ಪ್ರಕಾರ ನಿರ್ಧರಿಸಬಹುದು. ಆದಾಯವನ್ನು ಆ ಏಜೆನ್ಸಿಗಳೇ ಸಂಪೂರ್ಣವಾಗಿ ಉಳಿಸಿಕೊಳ್ಳಬಹುದು. ಆದರೆ ಈ ಏಜೆನ್ಸಿಗಳು ಅನುಮೋದಿಸಿರುವ ಜಾಹೀರಾತುಗಳು ಸಾರ್ವಜನಿಕ ಬೀದಿ ಅಥವಾ ರಸ್ತೆಗಳಲ್ಲಿ ಗೋಚರಿಸಿದರೆ ಬಿಬಿಎಂಪಿಯಿಂದಲೇ ಟೆಂಡರ್/ ಹರಾಜು ನಿರ್ವಹಿಸಬೇಕು. ಜಾಹೀರಾತು ಶುಲ್ಕವನ್ನು ಬಿಬಿಎಂಪಿಗೇ ಪಾವತಿಸಬೇಕು. ಏಜೆನ್ಸಿಗಳು ಜಾಹೀರಾತು ಕಂಪನಿಗಳಿಂದ ನೆಲಬಾಡಿಗೆ ಸಂಗ್ರಹಿಸಬಹುದು.

ವಾಹನಗಳ ಜಾಹೀರಾತಿಗೆ ಶುಲ್ಕ

ಬಿಎಂಟಿಸಿ ಬಸ್‌ಗಳು ಸರ್ಕಾರಿ ಖಾಸಗಿ ಸಂಸ್ಥೆಗಳೂ ಸೇರಿದಂತೆ ಯಾವುದೇ ವಾಹನಗಳಲ್ಲಿ ‘ಸಂಚಾರಿ ಜಾಹೀರಾತು’ಗಳನ್ನು ಪ್ರದರ್ಶಿಸಲು ಬಿಬಿಎಂಪಿಯಿಂದ ಪೂರ್ವಾನುಮತಿ ಪಡೆದುಕೊಳ್ಳಬೇಕು. ಪ್ರದರ್ಶನದ ಅವಧಿ ಉದ್ದೇಶ ವಾಹನ ಸಂಖ್ಯೆ ವಾಹನಗಳ ಪಟ್ಟಿಯನ್ನು ನೀಡಿ ಪಾಲಿಕೆಯಿಂದ ನಿರಾಕ್ಷೇಪಣಾ ಪತ್ರ ಪಡೆದುಕೊಳ್ಳಬೇಕು. ಜಾಹೀರಾತಿಗೆ ಅನುಗುಣವಾಗಿ ತೆರಿಗೆ ಲೆಕ್ಕಹಾಕಿ ಮೊತ್ತವನ್ನು ಏಜೆನ್ಸಿಗೆ ಬಿಬಿಎಂಪಿ ತಿಳಿಸುತ್ತದೆ. ಜಾಹೀರಾತು ನಿಯಂತ್ರಣ ಸಮಿತಿ ಸಾರ್ವಜನಿಕ ಸುರಕ್ಷತೆಗೆ ಬಾಧಕವಾಗುವ ಅನಧಿಕೃತ ಜಾಹೀರಾತು ತೆಗೆದುಹಾಕಲು ಜಾಹೀರಾತು ನಿಯಂತ್ರಣ ಸಮಿತಿಯನ್ನು ರಚಿಸಲಾಗುತ್ತದೆ. ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷರಾಗಲಿದ್ದು ನಗರ ಪೊಲೀಸ್‌ ಕಮಿಷನರ್‌ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಬಿಬಿಎಂಪಿ ತೆರಿಗೆ ಮತ್ತು ಹಣಕಾಸು ಸಮಿತಿ ಅಧ್ಯಕ್ಷ ಜಾಹೀರಾತು ಜಂಟಿ/ ಉಪ ಆಯುಕ್ತ ಎಸ್ಟೇಟ್‌ ವಿಶೇಷ ಆಯುಕ್ತ ಜಾಹೀರಾತು ಸಂಘದಿಂದ ಉದ್ಯಮದ ಪ್ರತಿನಿಧಿ ಬಿಬಿಎಂಪಿ ರಸ್ತೆ ಮೂಲಸೌಕರ್ಯ ಮುಖ್ಯ ಎಂಜಿನಿಯರ್‌ ಸದಸ್ಯರಾಗಿರುತ್ತಾರೆ. ಜಾಹೀರಾತುಗಳ ವಿಶೇಷ ಆಯುಕ್ತರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.