ADVERTISEMENT

ಒಎಫ್‌ಸಿ ಅಳವಡಿಕೆಗೆ ನೀಡಿದ್ದ ಅನುಮತಿ ರದ್ದು

ಪಾಲಿಕೆ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಸಭೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2019, 19:54 IST
Last Updated 15 ಅಕ್ಟೋಬರ್ 2019, 19:54 IST

ಬೆಂಗಳೂರು: ಆಪ್ಟಿಕಲ್ ಫೈಬರ್‌ ಕೇಬಲ್ (ಒಎಫ್‌ಸಿ) ಅಳವಡಿಸಲು ವಿವಿಧ ಕಂಪನಿಗಳಿಗೆ ನೀಡಿದ್ದ ಅನುಮತಿಯನ್ನು ಬಿಬಿಎಂಪಿ ಮಂಗಳವಾರ ದಿಢೀರ್‌ ರದ್ದುಪಡಿಸಿದೆ.

ಪಾಲಿಕೆ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಅಧ್ಯಕ್ಷತೆಯಲ್ಲಿ ನಡೆದ ವಿವಿಧ ವಿಭಾಗಗಳ ಮುಖ್ಯಸ್ಥರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇನ್ನು ಯಾರಾದರೂ ಒಎಫ್‌ಸಿ ಅಳವಡಿಕೆ ಸಲುವಾಗಿ ರಸ್ತೆಗಳನ್ನು ಅಗೆಯುವುದು ಕಂಡು ಬಂದರೆ ಅಂತಹ ಸಂಸ್ಥೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪಾಲಿಕೆ ಎಚ್ಚರಿಸಿದೆ.

‘ಒಎಫ್‌ಸಿ ಅಳವಡಿಕೆಗೆ ಅನುಮತಿ ನೀಡುವ ವಿಧಾನವನ್ನು ಇನ್ನಷ್ಟು ಕಟ್ಟುನಿಟ್ಟುಗೊಳಿಸುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದು ತಾತ್ಕಾಲಿಕ ನಿರ್ಧಾರ. ಒಎಫ್‌ಸಿ ಅಳವಡಿಕೆಗೆ ಸ್ಪಷ್ಟ ನೀತಿಯನ್ನು ರೂಪಿಸಿದ ಬಳಿಕ ಈ ನಿರ್ಧಾರವನ್ನು ಹಿಂದಕ್ಕೆ ಪಡೆಯಲಾಗುತ್ತದೆ’ ಎಂದು ಒಎಫ್‌ಸಿ ವಿಭಾಗದ ಮುಖ್ಯ ಎಂಜಿನಿಯರ್‌ ಎಂ.ವಿ.ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಒಎಫ್‌ಸಿ ಅಳವಡಿಕೆಗೆ ಅನುಮತಿ ಪಡೆದಿರುವ ದೂರಸಂಪರ್ಕ ಸೇವಾ ಸಂಸ್ಥೆಗಳಿಗೆ ಶುಲ್ಕ ಮರುಪಾವತಿಸಬೇಕೇ ಅಥವಾ ಭವಿಷ್ಯದಲ್ಲಿ ಒಎಫ್‌ಸಿ ನೀತಿ ರೂಪಿಸಿದ ಬಳಿಕ ಸರಿದೂಗಿಸಿಕೊಳ್ಳಬೇಕೇ ಎಂಬ ಬಗ್ಗೆ ಸದ್ಯ ತೀರ್ಮಾನ ಕೈಗೊಂಡಿಲ್ಲ. ಈ ಬಗ್ಗೆ ಶೀಘ್ರವೇ ನಿರ್ಧಾರಕ್ಕೆ ಬರಲಾಗುವುದು’ ಎಂದು ಅವರು ತಿಳಿಸಿದರು.

‘ಟೆಂಡರ್‌ ಶ್ಯೂರ್‌ ರಸ್ತೆಗಳಲ್ಲಿ ಒಎಫ್‌ಸಿ ಅಳವಡಿಕೆಗಾಗಿಯೇ ಪ್ರತ್ಯೇಕ ಕೊಳವೆ ಮಾರ್ಗವನ್ನು ಕಾಯ್ದಿರಿಸಲಾಗಿದೆ. ಅಂತಹ ಕಡೆ ನಿಗದಿತ ಶುಲ್ಕ ಪಾವತಿಸಿ ಒಎಫ್‌ಸಿ ಅಳವಡಿಸುವುದಕ್ಕೆ ಅಭ್ಯಂತರ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ಹೊಸತಾಗಿ ನಿರ್ಮಿಸಿದ್ದ ರಸ್ತೆಗಳನ್ನೂ ಒಎಫ್‌ಸಿ ಅಳವಡಿಕೆ ಸಲುವಾಗಿ ಇತ್ತೀಚೆಗೆ ಕೆಲವು ಸಂಸ್ಥೆಗಳು ಅಗೆದಿದ್ದರು. ಹೊಸ ರಸ್ತೆಗಳಲ್ಲೂ ಗುಂಡಿಗಳು ಕಾಣಿಸಿಕೊಂಡ ಬಗ್ಗೆ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಒಎಫ್‌ಸಿ ಅಳವಡಿಕೆಗೆ ನೀಡಿದ್ದ ಅನುಮತಿಗಳನ್ನೇ ರದ್ದುಪಡಿಸುವ ಕಠಿಣ ನಿರ್ಧಾರವನ್ನು ಬಿಬಿಎಂಪಿ ತಳೆದಿದೆ.

ಅನುಮತಿ ಪಡೆದೇ ಒಎಫ್‌ಸಿ ಅಳವಡಿಕೆ: ಏರ್‌ಟೆಲ್‌

ಬಿಬಿಎಂಪಿಯಿಂದ ಪೂರ್ವಾನುಮತಿ ಪಡೆಯದೆಯೇ ಒಎಫ್‌ಸಿ ಅಳವಡಿಸಿಲ್ಲ ಎಂದು ಏರ್‌ಟೆಲ್‌ ಸಂಸ್ಥೆ ಸ್ಪಷ್ಟಪಡಿಸಿದೆ.

‘ನಾವು ಒಎಫ್‌ಸಿ ಅಳವಡಿಕೆ ಸಂಬಂಧ ಬಿಬಿಎಂಪಿಯಿಂದ ಅಗತ್ಯ ಪೂರ್ವಾನುಮತಿ ಹಾಗೂ ಪರವಾನಗಿ ಪಡೆದಿದ್ದೆವು. ನಾವು ಪ್ರತಿ ಹಂತದಲ್ಲೂ ಕಾನೂನುಗಳನ್ನು ಹಾಗೂ ಸ್ಥಳೀಯ ಆಡಳಿತದ ನಿಯಮಗಳನ್ನು ತಪ್ಪದೇ ಪಾಲಿಸುತ್ತೇವೆ’ ಎಂದು ಏರ್‌ಟೆಲ್‌ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ರಸ್ತೆ ವಿಸ್ತರಣೆ ವಿಭಾಗದಿಂದ ಪೂರ್ವಾನುಮತಿ ಪಡೆಯದೆ ಒಎಫ್‌ಸಿ ಕೇಬಲ್‌ ಅಳವಡಿಸಲು ಬನ್ನೇರುಘಟ್ಟ ಮುಖ್ಯರಸ್ತೆಯ ಕೆಲವಡೆ ಅಗೆದು, ಸರ್ಕಾರಕ್ಕೆ ₹ 6 ಲಕ್ಷ ನಷ್ಟ ಉಂಟು ಮಾಡಿದ ಆರೋಪದ ಮೇಲೆ ಏರ್‌ಟೆಲ್‌ ಕಂಪನಿ ವಿರುದ್ಧ ಹುಳಿಮಾವು ಠಾಣೆಯಲ್ಲಿ ಬಿಬಿಎಂಪಿ ಎಫ್‌ಐಆರ್‌ ದಾಖಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.