ಬೆಂಗಳೂರು: ಒಂದು ಬಾರಿ ಪರಿಹಾರ (ಒಟಿಎಸ್) ಯೋಜನೆ ನವೆಂಬರ್ ಅಂತ್ಯಕ್ಕೆ ಕೊನೆಯಾಗಲಿದ್ದು, ನಂತರ ಸುಸ್ತಿದಾರರು ದುಪ್ಪಟ್ಟಿಗಿಂತ ಹೆಚ್ಚು ಆಸ್ತಿ ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
‘ಒಟಿಎಸ್ ಮೂಲಕ ಬಡ್ಡಿ ಹಾಗೂ ದಂಡಕ್ಕೆ ವಿನಾಯಿತಿ ನೀಡಲಾಗಿದೆ. ಈ ಅವಕಾಶ ಮತ್ತೆ ಸಿಗುವುದಿಲ್ಲ. ಕೊನೆಯ ದಿನಗಳಲ್ಲಿ ಇನ್ನೆರಡು ದಿನ ಸಮಯ ಕೊಡಿ ಎಂದರೆ ಅದಕ್ಕೆ ಅವಕಾಶ ಇರುವುದಿಲ್ಲ’ ಎಂದು ಸುದ್ದಿಗಾರರಿಗೆ ಸೋಮವಾರ ಮಾಹಿತಿ ನೀಡಿದರು.
ಒಟಿಎಸ್ ಯೋಜನೆ ಯಡಿ ಬಾಕಿ ಆಸ್ತಿ ತೆರಿಗೆ ₹25 ಸಾವಿರ ಇದ್ದರೆ, ಯೋಜನೆ ಅವಧಿ ಮುಗಿದ ಮೇಲೆ ಕನಿಷ್ಠ ₹63 ಸಾವಿರ ಪಾವತಿಸಬೇಕಾಗುತ್ತದೆ. ಬಡ್ಡಿ, ದಂಡಕ್ಕೆಲ್ಲ ಇದೀಗ ವಿನಾ ಯಿತಿ ಇದ್ದು, ಕೂಡಲೇ ಆಸ್ತಿದಾರರು ತೆರಿಗೆಯನ್ನು ಪಾವತಿಸಿ ಹೆಚ್ಚಿನ ಹೊರೆಯನ್ನು ತಗ್ಗಿಸಿಕೊಳ್ಳಬಹುದು ಎಂದು ಹೇಳಿದರು.
ಬೀಗಮುದ್ರೆ: ಅತಿಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ವಾಣಿಜ್ಯ ಕಟ್ಟಡಗಳಿಗೆ ಬೀಗಮುದ್ರೆ ಹಾಕಿ ತೆರಿಗೆ ವಸೂಲಿ ಮಾಡಲಾಗುತ್ತಿದೆ. ಈ ಪ್ರಕ್ರಿಯೆ ಇನ್ನು ವೇಗ ಪಡೆಯಲಿದೆ ಎಂದರು.
ಸ್ವಯಂ ಆಸ್ತಿ ತೆರಿಗೆ ಘೋಷಣೆಯಂತೆ (ಎಸ್‌ಎಎಸ್) ನಿಗದಿಯಾಗಿರುವ ತೆರಿಗೆಯನ್ನು ಪುನರ್‌ವಿಮರ್ಶೆ ಮಾಡಿದಾಗ, ತಪ್ಪು ಕಂಡು ಬಂದಿದ್ದರೆ ಅದನ್ನು ನಮೂದಿಸಿ ತೆರಿಗೆ ವಸೂಲಿಗೆ ನೋಟಿಸ್ ನೀಡಲಾಗುತ್ತಿದೆ ಎಂದರು.
ಒತ್ತುವರಿ ತೆರವು
‘ನಗರದಲ್ಲಿರುವ ರಾಜಕಾಲುವೆಗಳ ಬಫರ್ ವಲಯ ನಿಗದಿ ಮಾಡಿದ್ದೇವೆ. ಈ ಪ್ರದೇಶಗಳಲ್ಲಿ ಅಕ್ರಮಕ್ಕೆ ಅವಕಾಶ ನೀಡಿದರೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ತುಷಾರ್ ಗಿರಿನಾಥ್ ತಿಳಿಸಿದರು. ಕಂದಾಯ ಇಲಾಖೆಯ ದಾಖಲೆಗಳಂತೆ ಕೆಲವು ರಾಜಕಾಲುವೆಗಳ ಒತ್ತುವರಿಯನ್ನು ತೆರವುಗೊಳಿಸಿದರೆ ಪ್ರಯೋಜನಕ್ಕೆ ಬರುವುದಿಲ್ಲ. ಪರ್ಯಾಯ ರಾಜಕಾಲುವೆಗಳಾಗಿದ್ದು, ಅವುಗಳಲ್ಲಿ ನೀರು ಹರಿಯುತ್ತಿದೆ. ಹೀಗಾಗಿ, ಆ ಸಮಸ್ಯೆಯನ್ನು ಕಂದಾಯ ಇಲಾಖೆಯೇ ನಿವಾರಿಸಿಕೊಳ್ಳಲು ತಿಳಿಸಲಾಗಿದೆ. ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥಪಡಿಸಿಕೊಳ್ಳಬಹುದು ಎಂದರು.
ದಾಖಲೆ ಸಂಗ್ರಹವಾಗಿದ್ದರೂ ಕಡಿಮೆಯಾಗದ ಬಾಕಿ
ಬಿಬಿಎಂಪಿಯ 2024–25ನೇ ಸಾಲಿನ ಆಸ್ತಿ ತೆರಿಗೆ ಗುರಿಯಲ್ಲಿ ಶೇ 69.74ರಷ್ಟು ಸಾಧನೆ ಮಾಡಿ, ₹3,633 ಕೋಟಿ ಸಂಗ್ರಹಿಸಿದ್ದರೂ ಸುಸ್ತಿದಾರರಿಂದ ಇನ್ನೂ ₹397.29 ಕೋಟಿ ಸಂಗ್ರಹವಾಗಬೇಕಿದೆ.
2.34 ಲಕ್ಷ ಆಸ್ತಿಗಳ ಮಾಲೀಕರು ಸುಸ್ತಿದಾರರಾಗಿದ್ದಾರೆ. 2024ರ ಏಪ್ರಿಲ್ 1ರಂತೆ 3.95 ಲಕ್ಷ ಸುಸ್ತಿದಾರರು ₹733.61 ಕೋಟಿ ಆಸ್ತಿ ತೆರಿಗೆ ಪಾವತಿಸಬೇಕಾಗಿತ್ತು. ಈ ಆರ್ಥಿಕ ವರ್ಷದಲ್ಲಿ 1.60 ಲಕ್ಷ ಸುಸ್ತಿದಾರರು ₹336 ಕೋಟಿಯನ್ನು ಪಾವತಿಸಿದ್ದಾರೆ.
82 ಸಾವಿರ ಆಸ್ತಿ ಮುಟ್ಟುಗೋಲು
ಆಸ್ತಿ ತೆರಿಗೆ ಸುಸ್ತಿದಾರರಿಗೆ ಹಲವು ಬಾರಿ ನೋಟಿಸ್ ಜಾರಿ ಮಾಡಲಾಗಿದ್ದರೂ, ತೆರಿಗೆ ಪಾವತಿಸಿಲ್ಲ. ಹೀಗಾಗಿ, ಪ್ರಸ್ತುತ ಆರ್ಥಿಕ ವರ್ಷದಲ್ಲಿ ಈವರೆಗೆ 82,602 ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಆಸ್ತಿ ತೆರಿಗೆ ಪಾವತಿಸದ 6,069 ವಾಣಿಜ್ಯ ಕಟ್ಟಡಗಳಿಗೆ ಪ್ರಸ್ತುತ ಆರ್ಥಿಕ ವರ್ಷದಲ್ಲಿ ಬೀಗಮುದ್ರೆ ಹಾಕಲಾಗಿದೆ. ಒಂದು ವಾರದಲ್ಲಿ 175 ಕಟ್ಟಡಗಳಿಗೆ ಬೀಗ ಹಾಕಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ನೀಡಿದರು.
ಆಸ್ತಿ ತೆರಿಗೆಯನ್ನು ತಪ್ಪಾಗಿ ಪಾವತಿಸುತ್ತಿದ್ದ 15,731 ಸ್ವತ್ತುಗಳ ತೆರಿಗೆಯನ್ನು ಪುನರ್ ವಿಮರ್ಶೆ ಮಡಲಾಗಿದ್ದು, ₹398.49 ಕೋಟಿ ವ್ಯತ್ಯಾಸ ಮೊತ್ತ ಪಾವತಿಯಾಗಬೇಕಿದೆ. 7,145 ಆಸ್ತಿಗಳಿಂದ ₹101.94 ಕೋಟಿ ಸಂಗ್ರಹವಾಗಿದೆ. ಇನ್ನೂ 10,641 ಆಸ್ತಿಗಳಿಂದ ₹192.66 ಕೋಟಿ ಪಾವತಿಯಾಗಬೇಕಿದೆ ಎಂದರು.
ಬೆಂಗಳೂರು ಒನ್‌ನಲ್ಲಿ ಇ–ಖಾತಾ
ಆಸ್ತಿ ಮಾಲೀಕರು ಇ–ಖಾತಾ ಪಡೆಯುವ ವ್ಯವಸ್ಥೆಯನ್ನು ಇನ್ನಷ್ಟು ಸರಳೀಕರಣ ಮಾಡಲಾಗಿದೆ. ‘ಬೆಂಗಳೂರು ಒನ್’ ಕೇಂದ್ರಗಳಲ್ಲೂ ಇ–ಖಾತಾ ಪಡೆಯಬಹುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ಇ–ಖಾತಾ ದಾಖಲೆಗಳನ್ನು ಅಪ್‌ಲೋಡ್ ಮಾಡಲು ಹಲವರು ಸುಮಾರು ₹5 ಸಾವಿರ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಇ–ಖಾತಾಗೆ ಅಗತ್ಯವಿರುವ ಅರ್ಜಿ, ದಾಖಲೆಗಳನ್ನು ಆನ್‌ಲೈನ್‌ನಲ್ಲಿ ‘ಬೆಂಗಳೂರು ಒನ್ ಕೇಂದ್ರದಲ್ಲಿ’ ಅಪ್‌ಲೋಡ್ ಮಾಡಲಾಗುತ್ತದೆ. ಈ ಸೇವೆಗೆ ₹45 ವೆಚ್ಚ ನಿಗದಿಪಡಿಸಲಾಗಿದೆ ಎಂದರು.
ಇ-ಖಾತಾ ಪಡೆಯಲು ಅರ್ಜಿ ಹಾಕುವ ಹಾಗೂ ದಾಖಲೆಗಳನ್ನು ಅಪ್‌ಲೋಡ್ ಪ್ರಕ್ರಿಯೆಯನ್ನು ಪಾಲಿಕೆಯ ಯುಟ್ಯೂಬ್ ಲಿಂಕ್ https://youtube.com/@bbmpcares?si=YStwr7xLhX5aRxFT ನಲ್ಲಿ ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ವಿಡಿಯೊ ಮೂಲಕ ವಿವರಿಸಲಾಗಿದೆ ಎಂದರು.
ಇ-ಖಾತಾ ಪಡೆಯಲು ತಾಂತ್ರಿಕ ಸಮಸ್ಯೆಯಿದ್ದರೆ ಅದನ್ನು ಬಗೆಹರಿಸಲು ವಲಯವಾರು 13 ಸಹಾಯ ತಂಡಗಳನ್ನು ರಚಿಸಲಾಗಿದೆ. ಸಹಾಯ ತಂಡಗಳ ಸಂಪರ್ಕಕ್ಕೆ ಮೊಬೈಲ್ ಸಂಖ್ಯೆಗಳ ವಿವರ ಹೀಗಿದೆ...
ಬೊಮ್ಮನಹಳ್ಳಿ ವಲಯ: 9480683182 /9480683712, ದಾಸರಹಳ್ಳಿ ವಲಯ: 9480683710, ಮಹಾದೇವಪುರ ವಲಯ: 9480683718 / 9480683720, ಪೂರ್ವ ವಲಯ: 9480683203, ಪಶ್ಚಿಮ ವಲಯ: 9480683653 / 9480683204, ದಕ್ಷಿಣ ವಲಯ: 9480683638 / 9480683179, ರಾಜರಾಜೇಶ್ವರಿ ನಗರ ವಲಯ: 9480683576, ಯಲಹಂಕ ವಲಯ: 9480683645 / 9480683516.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.