ಬೆಂಗಳೂರು: ‘ಬೇರೆ ಬೇರೆ ಜಿಲ್ಲೆಗಳಲ್ಲಿ ವಾಸವಿರುವ ವಿಧಾನ ಪರಿಷತ್ತಿನ ಮೂವರು ಸದಸ್ಯರ ಹೆಸರನ್ನು ಬಿಬಿಎಂಪಿ ವ್ಯಾಪ್ತಿಯ ಮತದಾರರ ಪಟ್ಟಿಗೆ ಅಕ್ರಮವಾಗಿ ಸೇರಿಸುವ ಮೂಲಕ, ಅವರಿಗೆ ಮೇಯರ್ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕನ್ನು ಕಲ್ಪಿಸಲಾಗುತ್ತಿದೆ’ ಎಂದು ಪಾಲಿಕೆಯ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಆರೋಪಿಸಿದರು.
‘ದಾವಣಗೆರೆ ಜಿಲ್ಲೆಯವರಾದ ಮೋಹನ್ ಕೊಂಡಜ್ಜಿ ಅವರನ್ನು ಬೆಂಗಳೂರಿನ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗಿದ್ದು, ಇನ್ನೂ ಇಬ್ಬರನ್ನು ಇದೇ ರೀತಿ ಸೇರಿಸಲಾಗುತ್ತಿದೆ ಎಂದು ಗೊತ್ತಾಗಿದೆ. ಅವರು ಯಾರು ಎಂಬುದರ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ’ ಎಂದು ಸೋಮವಾರ ಇಲ್ಲಿ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
‘ಪಾಲಿಕೆಯಲ್ಲಿ 102 ಬಿಜೆಪಿ ಸದಸ್ಯರಿದ್ದಾರೆ. ಕಾಂಗ್ರೆಸ್‌ನ 76 ಮತ್ತು ಜೆಡಿಎಸ್‌ನ 14 ಸದಸ್ಯರು ಇದ್ದಾರೆ. ಆದರೆ, ಮೈತ್ರಿಕೂಟದವರು ನಗರದ ಮತದಾರರ ತೀರ್ಪಿಗೆ ವಿರುದ್ಧವಾಗಿ ನಾಲ್ಕು ವರ್ಷಗಳಿಂದ ಅಧಿಕಾರ ನಡೆಸುತ್ತಿದ್ದಾರೆ. ಕೊನೆಯ ವರ್ಷದ ಮೇಯರ್ ಚುನಾವಣೆಯಲ್ಲೂ ಅಕ್ರಮವಾಗಿ ಅಧಿಕಾರ ಹಿಡಿಯಲು ಹುನ್ನಾರ ನಡೆಸಿದ್ದಾರೆ’ ಎಂದು ದೂರಿದರು.
‘ವಿಧಾನ ಪರಿಷತ್ ಸದಸ್ಯರಾದಎಂ.ಸಿ. ವೇಣುಗೋಪಾಲ, ಯು.ಬಿ. ವೆಂಕಟೇಶ್ ಮತ್ತು ರಮೇಶ್‌ಗೌಡ ಅವರ ಹೆಸರನ್ನೂ ಸೇರ್ಪಡೆ ಮಾಡಲಾಗಿದೆ. ಈ ಮೂವರು ಮೂಲತಃ ನಗರದ ನಿವಾಸಿಗಳೇ ಆಗಿರುವ ಕಾರಣಇದಕ್ಕೆ ನಮ್ಮ ವಿರೋಧ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.
ಬೋಗಸ್ ಮತದಾರರನ್ನು ಸೇರಿಸಿದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ಹೋರಾಟ ನಡೆಸಲಾಗುವುದು. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಅವರು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಈ ಸಂಬಂಧ ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದರು.
ಮುಂದಿನ ದಿನಗಳಲ್ಲಿ ಬಿಜೆಪಿಯವರೇ ವಿಧಾನ ಪರಿಷತ್ತಿನ ಸಭಾಪತಿ ಆಗಲಿದ್ದು, ಆಗ ಅವರ ವಿರುದ್ಧ ಕ್ರಮ ಕೈಗೊಳ್ಳಲು ದೂರು ನೀಡಲಾಗುವುದು ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.