ADVERTISEMENT

ಬೆಂಗಳೂರು: 11 ಸ್ಕೈವಾಕ್‌ ನಿರ್ಮಾಣಕ್ಕೆ ಬಿಬಿಎಂಪಿ ಚಿಂತನೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2024, 22:35 IST
Last Updated 23 ಜನವರಿ 2024, 22:35 IST
   

ಬೆಂಗಳೂರು: ಹೆಚ್ಚು ಅಪಘಾತಗಳು ಸಂಭವಿಸುತ್ತಿರುವ ಪ್ರಮುಖ ರಸ್ತೆಗಳಲ್ಲಿ ಸ್ಕೈವಾಕ್‌ ನಿರ್ಮಿಸಬೇಕು ಎಂದು ನಗರ ಸಂಚಾರ ಪೊಲೀಸರು ಸಲಹೆ ನೀಡಿದ್ದು, 11 ಸ್ಥಳಗಳಲ್ಲಿ ಇದರ ಕಾರ್ಯಸಾಧ್ಯತಾ ವರದಿ ತಯಾರಿಸಲು ಬಿಬಿಎಂಪಿ ಮುಂದಾಗಿದೆ.

ನಗರದಲ್ಲಿ ಅಪಘಾತಗಳು ನಡೆಯುತ್ತಿರುವ ಸ್ಥಳಗಳನ್ನು ಸಂಚಾರ ಪೊಲೀಸರು ಗುರುತಿಸಿದ್ದಾರೆ. ಇದರಲ್ಲಿ ‘ಬ್ಲ್ಯಾಕ್‌ ಸ್ಪಾಟ್‌’ ಎಂದು 11 ಪ್ರದೇಶಗಳನ್ನು ಗುರುತಿಸಿದೆ. ಇಲ್ಲಿ ರಸ್ತೆ ದಾಟುವ ಸಂದರ್ಭದಲ್ಲಿ ಪಾದಚಾರಿಗಳಿಗೆ ಹೆಚ್ಚಿನ ಅಪಘಾತವಾಗುತ್ತಿದೆ ಹಾಗೂ ವಾಹನ ಸಂಚಾರಕ್ಕೂ ಅಡೆತಡೆಯಾಗುತ್ತಿದೆ. ಹೀಗಾಗಿ ಸ್ಕೈವಾಕ್‌ಗಳನ್ನು ನಿರ್ಮಿಸಬೇಕು ಎಂದು ಬಿಬಿಎಂಪಿಗೆ ಸಂಚಾರ ಪೊಲೀಸರು ವರದಿ ಸಲ್ಲಿಸಿದ್ದಾರೆ.

‘ಪೊಲೀಸರ ಸಲಹೆಯಂತೆ ಬಿಬಿಎಂಪಿ ಸ್ಕೈವಾಕ್‌ಗಳ ನಿರ್ಮಾಣಕ್ಕೆ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲು ಟೆಂಡರ್‌ ಆಹ್ವಾನಿಸಿದೆ. ಫೆಬ್ರುವರಿ ಮೊದಲ ವಾರದಲ್ಲಿ ಸಂಸ್ಥೆ ನಿಗದಿ ಮಾಡಿ, 90 ದಿನಗಳಲ್ಲಿ ವರದಿ ನೀಡಲು ಸೂಚಿಸಲಾಗುತ್ತದೆ. ಆ ವರದಿ ಬಂದ ನಂತರ ಯಾವ ಅನುದಾನದಲ್ಲಿ ನಿರ್ಮಿಸಬೇಕು ಅಥವಾ ಸಾರ್ವಜನಿಕ– ಖಾಸಗಿ ಸಹಭಾಗಿತ್ವದ (ಪಿಪಿಪಿ) ಮಾದರಿಗೆ ಆದ್ಯತೆ ಕೊಡಬೇಕೇ ಎಂಬುದನ್ನು ನಿರ್ಧರಿಸಲಾಗುತ್ತದೆ’ ಎಂದು ಬಿಬಿಎಂಪಿ ತಾಂತ್ರಿಕ ಕೋಶದ ಎಂಜಿನಿಯರ್‌ಗಳು ತಿಳಿಸಿದರು.

ADVERTISEMENT

ಎಲ್ಲೆಲ್ಲಿ ಸ್ಕೈವಾಕ್ ಪ್ರಸ್ತಾವ: ಟ್ಯಾಂಕ್‌ ಬಂಡ್‌ ರಸ್ತೆ, ಹೊರವರ್ತುಲ ರಸ್ತೆಯ ಚೌಡೇಶ್ವರಿ ಅಂಡರ್‌ಪಾಸ್‌ ಬಳಿ, ಕೈಕೊಂಡನಹಳ್ಳಿ ಜಂಕ್ಷನ್‌, ತುಮಕೂರು ರಸ್ತೆಯ ಆರ್‌ಎಂಸಿ ಯಾರ್ಡ್‌ ಸಮೀಪ, ಹೊರವರ್ತುಲ ರಸ್ತೆಯ ಎನ್‌ಸಿಸಿ ಅಪಾರ್ಟ್‌ಮೆಂಟ್ ಬಳಿ, ಹೊರ ವರ್ತುಲ ರಸ್ತೆಯ ಬಾಗ್ಮನೆ ಟೆಕ್‌ಪಾರ್ಕ್‌ ಸಮೀಪ, ಹೂಡಿ ಜಂಕ್ಷನ್‌, ಹಳೇ ಮದ್ರಾಸ್‌ ರಸ್ತೆಯ ಜಿಆರ್‌ಟಿ ಜ್ಯುವೆಲರ್ಸ್‌ ಎದುರು, ಹಳೇ ಮದ್ರಾಸ್ ರಸ್ತೆಯ ಕಾರ್ಲ್ಟನ್‌ ಟವರ್‌ ಬಳಿ, ಮೈಸೂರು ರಸ್ತೆಯ ಬಿಎಚ್‌ಇಎಲ್‌ ಸಮೀಪ, ಸರ್ಜಾಪುರ ರಸ್ತೆಯ ಕೃಪಾನಿಧಿ ಕಾಲೇಜು ಬಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.