ಬೆಂಗಳೂರು: ಈ ವರ್ಷದ ಗಣೇಶ ಚತುರ್ಥಿ ಹಬ್ಬ ಇರುವುದು ಸೆ.2ರಂದು. ಹಬ್ಬಕ್ಕೆ ಇನ್ನು ನಾಲ್ಕು ತಿಂಗಳು ಇರುವಾಗಲೇ ಸಾವಿರಾರು ಗಣೇಶ ಮೂರ್ತಿಗಳು ತಯಾರಾಗುತ್ತಿವೆ. ಅಚ್ಚರಿಯೆಂದರೆ ಇವುಗಳನ್ನು ತಯಾರಿಸಲು ಬಳಕೆ ಆಗುತ್ತಿರುವುದು ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ).
ಪಿಒಪಿ ಬಳಸಿ ಮೂರ್ತಿ ತಯಾರಿಸುವುದಕ್ಕೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ನಿರ್ಬಂಧ ವಿಧಿಸಿ 3 ವರ್ಷ ಕಳೆದಿವೆ. ಆದರೆ ಇದರ ಪರಿಣಾಮಕಾರಿ ಅನುಷ್ಠಾನ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ. ನಗರದ ಹೊರವಲಯದಲ್ಲಿ ಪಿಒಪಿ ಬಳಸಿ ಮೂರ್ತಿಗಳನ್ನು ತಯಾರಿಸುವ ಪ್ರಕ್ರಿಯೆ ರಾಜಾರೋಷವಾಗಿಯೇ ನಡೆಯುತ್ತಿದೆ.
ಕುಂಬಳಗೋಡು ಬಳಿ ಗಣೇಶ ವಿಗ್ರಹ ತಯಾರಿಸುವ ಘಟಕವೊಂದಿದೆ. ಅದರ ದ್ವಾರದ ಬಳಿ, ‘ಪಿಒಪಿ ಗಣೇಶ ತಯಾರಿಕೆಯನ್ನು ಕೆಎಸ್‌ಪಿಸಿಬಿ ಆದೇಶದ ಪ್ರಕಾರ ನಿಷೇಧಿಸಲಾಗಿದೆ. ಹಾಗಾಗಿ ಮೂರ್ತಿ ತಯಾರಿಸಲು ನಾವು ಪಿಒಪಿ ಬಳಸುವುದಿಲ್ಲ’ ಎಂಬ ಒಕ್ಕಣೆಯ ಭಿತ್ತಿ ಪತ್ರ ಅಂಟಿಸಲಾಗಿದೆ. ಒಳಗೆ ಹೋಗಿ ನೋಡಿದರೆ, ಅಲ್ಲಿರುವ ಮೂರ್ತಿಗಳೆಲ್ಲವೂ ಪಿಒಪಿಯಿಂದ ತಯಾರಿಸಿದವು.
‘ಕುಂಬಳಗೋಡುವಿನಲ್ಲಿರುವ ಎರಡು ಘಟಕಗಳು 4 ಎಕರೆಗಳಷ್ಟು ವ್ಯಾಪಿಸಿವೆ. ಅಲ್ಲಿ ವಿವಿಧ ಗಾತ್ರಗಳ 10 ಸಾವಿರಕ್ಕೂ ಅಧಿಕ ಮೂರ್ತಿಗಳನ್ನು ನಿರ್ಮಿಸಲಾಗುತ್ತಿದೆ. ಇದು ಮಾತ್ರವಲ್ಲ, ನಗರದಲ್ಲಿ ಅನೇಕ ಕಡೆ ಈಗಲೂ ಪಿಒಪಿ ಮೂರ್ತಿಗಳ ನಿರ್ಮಾಣ ಅವ್ಯಾಹತವಾಗಿ ನಡೆಯುತ್ತಿದೆ. ಕೆಂಗೇರಿ, ಪಾಟರಿ ಟೌನ್ ಪ್ರದೇಶಗಳಲ್ಲಿ ಇಂತಹ ಘಟಕಗಳು ಈಗಲೂ ಕಾರ್ಯನಿರ್ವಹಿಸುತ್ತಿವೆ’ ಎಂದು ದೂರಿದರು ಪರಿಸರಸ್ನೇಹಿ ಗಣೇಶಮೂರ್ತಿ ನಿರ್ಮಾಣದ ಅಗತ್ಯ ಕುರಿತು ಜಾಗೃತಿ ಮೂಡಿಸುವ ಗುರುಮೂರ್ತಾಚಾರ್.
‘ಪಾಲಿಕೆ ಅಧಿಕಾರಿಗಳು ಗಣೇಶ ಚತುರ್ಥಿಗೆ ಬೆರಳೆಣಿಕೆಗಳಷ್ಟು ದಿನಗ ಳಿರುವಾಗ ಪಿಒಪಿಯಿಂದ ಮೂರ್ತಿ ತಯಾರಿಸುವ ಘಟಕಗಳಿಗೆ ದಾಳಿ ನಡೆಸುತ್ತಾರೆ. ಅಷ್ಟರಲ್ಲಿ ಸಾವಿರಾರು ಮೂರ್ತಿಗಳು ಮಾರಾಟ ಆಗಿರುತ್ತವೆ. ಅದರ ಬದಲು ಪಿಒಪಿ ಬಳಕೆಗೆ ಮೂಲದಲ್ಲೇ ಕಡಿವಾಣ ಹಾಕಬೇಕು. ಎಲ್ಲೆಲ್ಲಿ ಪಿಒಪಿ ಮೂರ್ತಿ ತಯಾರಿಸಲಾಗುತ್ತಿದೆ ಎಂಬ ವಿಚಾರ ಅಧಿಕಾರಿಗಳಿಗೆ ತಿಳಿಯದಿರುವುದೇನಲ್ಲ. ತಯಾರಿ ಹಂತದಲ್ಲೇ ಪಿಒಪಿ ಬಳಕೆಗೆ ಕಡಿವಾಣ ಹಾಕಿದರೆ ನಗರದ ಕೆರೆಗಳು ಕಲುಷಿತಗೊಳ್ಳುವುದನ್ನು ತಡೆಯಬಹುದು’ ಎಂದು ಅವರು ವಿವರಿಸಿದರು.
‘ನಾವು ಗಣೇಶ ಹಬ್ಬದವರೆಗೆ ಕಾಯುವುದಿಲ್ಲ. ಅದಕ್ಕೆ ಮುನ್ನವೇ ಇಂತಹ ಘಟಕಗಳಿಗೆ ದಿಢೀರ್ ದಾಳಿ ನಡೆಸಿ ಮೂರ್ತಿಗಳನ್ನು ಮುಟ್ಟು ಗೋಲು ಹಾಕಿಕೊಳ್ಳುತ್ತೇವೆ. ಪಿಒಪಿ ಬಳಸಿ ಮೂರ್ತಿಗಳನ್ನು ತಯಾರಿಸಲು ಅನುವು ಮಾಡಿಕೊಟ್ಟ ಜಾಗದ ಮಾಲೀಕರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ. ಇಂತಹ ಘಟಕಗಳ ಬಗ್ಗೆ ಸಾರ್ವಜನಿಕರೂ ಪಾಲಿಕೆ ಮಾಹಿತಿ ನೀಡಬಹುದು’ ಎಂದು ಬಿಬಿಎಂಪಿ ಹೆಚ್ಚುವರಿ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ರಂದೀಪ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪಿಒಪಿಯಿಂದ ಏನು ಅಪಾಯ?
‘ಪಿಒಪಿಯಿಂದ ತಯಾರಿಸುವ ಗಣೇಶ ಮೂರ್ತಿಗೆ ಬಣ್ಣತುಂಬಲು ಅಪಾಯಕಾರಿ ರಾಸಾಯನಿಕ ಬಳಸುತ್ತಾರೆ. ಪಿಒಪಿಯಲ್ಲಿರುವ ಕ್ಯಾಲ್ಸಿಯಂ ಸಲ್ಫೇಟ್ ಹಾಗೂ ರಾಸಾಯನಿಕ ಬಣ್ಣಗಳಲ್ಲಿರುವ ಪಾದರಸ, ಕ್ರೋಮಿಯಂ, ಸೀಸ, ಮೆಗ್ನೀಷಿಯಂನಂತಹ ಭಾರಲೋಹದ ಅಂಶಗಳು ಪರಿಸರಕ್ಕೆ ಅಪಾಯಕಾರಿ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು.
‘ಇಂತಹ ಮೂರ್ತಿಗಳನ್ನು ವಿಸರ್ಜನೆ ಮಾಡುವ ನೀರಿನಲ್ಲಿ ಕಬ್ಬಿಣದ ಅಂಶವು 10 ಪಟ್ಟುಗಳಷ್ಟು ಹಾಗೂ ತಾಮ್ರದ ಅಂಶ 200 ಪಟ್ಟುಗಳಷ್ಟು ಹೆಚ್ಚಾಗುತ್ತದೆ. ಬಣ್ಣಗಳಲ್ಲಿರುವ ಭಾರಲೋಹಗಳು ಮನುಷ್ಯನ ದೇಹವನ್ನು ಸೇರಿದರೆ ಕೆಲವೊಂದು ಕಾಯಿಲೆಗಳಿಗೆ ಕಾರಣವಾಗುತ್ತವೆ. ಸೀಸದಿಂದ ನರವ್ಯೂಹಕ್ಕೆ ಹಾನಿ ಉಂಟಾಗುತ್ತದೆ. ಕ್ರೋಮಿಯಂನಿಂದ ಪಿತ್ತಕೋಶ ಹಾಗೂ ಮೂತ್ರಪಿಂಡಗಳ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮೆಗ್ನಿಷಿಯಂನಿಂದ ದೇಹದ ಸಂವೇದನಾ ವ್ಯವಸ್ಥೆ ಏರುಪೇರಾಗುತ್ತದೆ. ನಿಕ್ಕೆಲ್ ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಲ್ಲದು. ಭಾರಲೋಹಗಳಿಂದ ಜಲಚರಗಳಿಗೂ ಅಪಾಯ ತಪ್ಪಿದ್ದಲ್ಲ’ ಎಂದು ಅವರು ವಿವರಿಸಿದರು.
‘ಪಿಒಪಿ ಮೂರ್ತಿಗಳ ತ್ಯಾಜ್ಯ ನೀರಿನಲ್ಲಿ ತಿಂಗಳುಗಟ್ಟಲೆ ಹಾಗೇ ಉಳಿಯುತ್ತವೆ. ಅವುಗಳ ವಿಲೇವಾರಿ ಮತ್ತೊಂದು ಸಮಸ್ಯೆ’ ಎಂದರು.
‘ಜಾಗೃತಿ ಮೂಡಿಸಿ’
‘ಪಿಒಪಿ ಬಳಸಿ ದೇವರ ಮೂರ್ತಿ ತಯಾರಿಸುವವರ ಅನ್ನವನ್ನು ಏಕಾಏಕಿ ಕಿತ್ತುಕೊಳ್ಳುವ ಬದಲು, ಅವರು ಮಣ್ಣಿನ ಮೂರ್ತಿ ತಯಾರಿಸುವಂತೆ ಉತ್ತೇಜಿಸಬೇಕು. ಪಾಲಿಕೆ ಅವರಿಗೆ ಜಾಗೃತಿ ಶಿಬಿರ ಹಮ್ಮಿಕೊಳ್ಳಬೇಕು’ ಎಂದು ಸಲಹೆ ನೀಡುತ್ತಾರೆ ಗುರುಮೂರ್ತಾಚಾರ್.
ಪಿಒಪಿ ಮೂರ್ತಿ ಬಳಕೆ ಇಳಿಕೆ
ಪಿಒಪಿ ಗಣೇಶ ಮೂರ್ತಿಗಳ ಮೇಲೆ 2016ರಲ್ಲಿ ಬಿಬಿಎಂಪಿ ನಿರ್ಬಂಧ ಹೇರಿದ ಬಳಿಕ ಅವುಗಳ ಬಳಕೆ ಗಣನೀಯವಾಗಿ ಇಳಿದಿದೆ. ಆದರೆ ಸಂಪೂರ್ಣವಾಗಿ ನಿಂತಿಲ್ಲ. 2017ರಲ್ಲಿ 16,353 ಪಿಒಪಿ ಮೂರ್ತಿಗಳನ್ನು (ಸಣ್ಣ ಮೂರ್ತಿ ಹೊರತುಪಡಿಸಿ) ಬಿಬಿಎಂಪಿ ವ್ಯಾಪ್ತಿಯ ಕೆರೆಗಳಲ್ಲಿ ವಿಸರ್ಜನೆ ಮಾಡಲಾಗಿತ್ತು. 2018ರಲ್ಲಿ ಈ ಪ್ರಮಾಣ 7,252ಕ್ಕೆ ಇಳಿದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.