ADVERTISEMENT

ಮೂರು ದಿನ ಪೂರೈಸಿದ ಪೌರಕಾರ್ಮಿಕರ ಅನಿರ್ದಿಷ್ಟಾವಧಿ ಮುಷ್ಕರ

‘ಕೆಲಸ ಕಾಯಂ ಆಗುವ ತನಕ ಹೋರಾಟ’: ಬೇಡಿಕೆ ಈಡೇರಿಸಲು ಪಟ್ಟು

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 18:54 IST
Last Updated 3 ಜುಲೈ 2022, 18:54 IST
ಕರ್ನಾಟಕ ರಾಜ್ಯ ನಗರ ಪಾಲಿಕೆ ನಗರ ಸಭೆ ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದ ಸದಸ್ಯರು ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಹೋರಾಟದ ಮುಂದಿನ ರೂಪುರೇಷೆಗಳ ಬಗ್ಗೆ ಮುಖಂಡರುಗಳ ಸಭೆಯಲ್ಲಿ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದ ಅಧ್ಯಕ್ಷ ನಾರಾಯಣ (ಮೈಸೂರು) ಮಾತನಾಡಿದರು     –ಪ್ರಜಾವಾಣಿ ಚಿತ್ರ
ಕರ್ನಾಟಕ ರಾಜ್ಯ ನಗರ ಪಾಲಿಕೆ ನಗರ ಸಭೆ ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದ ಸದಸ್ಯರು ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಹೋರಾಟದ ಮುಂದಿನ ರೂಪುರೇಷೆಗಳ ಬಗ್ಗೆ ಮುಖಂಡರುಗಳ ಸಭೆಯಲ್ಲಿ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದ ಅಧ್ಯಕ್ಷ ನಾರಾಯಣ (ಮೈಸೂರು) ಮಾತನಾಡಿದರು     –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕೆಲಸ ಕಾಯಂಗೊಳಿಸಬೇಕು’ ಎನ್ನುವುದೂ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪೌರಕಾರ್ಮಿಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಭಾನುವಾರವೂ ಮುಂದುವರಿಯಿತು. ಲಿಖಿತ ಭರವಸೆ ನೀಡುವವರೆಗೂ ಮುಷ್ಕರ ಕೈಬಿಡುವುದಿಲ್ಲವೆಂದು ಪೌರಕಾರ್ಮಿಕರು ಪಟ್ಟು ಹಿಡಿದಿದ್ದಾರೆ.

ಪೌರಕಾರ್ಮಿಕರ ಸಂಘಟನೆಗಳ ಜಂಟಿ ಹೋರಾಟ ಸಮಿತಿ, ರಾಜ್ಯ ನಗರಪಾಲಿಕೆ- ಪುರಸಭೆ- ನಗರಸಭೆ ಪೌರಕಾರ್ಮಿಕರ ಮಹಾ ಸಂಘ ಹಾಗೂ ಬಿಬಿಎಂಪಿ ಪೌರ ಕಾರ್ಮಿಕರ ಸಂಘ ಸಹಯೋಗದಲ್ಲಿ ಪೌರಕಾರ್ಮಿಕರು ಜುಲೈ 1ರಿಂದ ಮುಷ್ಕರ ಆರಂಭಿಸಿದ್ದಾರೆ.

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನ ಹಾಗೂ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಮುಷ್ಕರ ನಡೆಯುತ್ತಿದ್ದು, ಕೆಲಸಕ್ಕೆ ಗೈರಾಗಿ ಪೌರಕಾರ್ಮಿಕರು ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ‘ಎಲ್ಲಿಯ ತನಕ ಹೋರಾಟ, ಕಾಯಂ ಆಗುವ ತನಕ ಹೋರಾಟ’ ಸೇರಿದಂತೆ ವಿವಿಧ ಘೋಷಣೆಯುಳ್ಳ ಫಲಕ ಪ್ರದರ್ಶಿಸಿ, ಸರ್ಕಾರ ವಿರುದ್ಧ ಆಕ್ರೋಶ ಹೊರಹಾಕಿದರು.

ADVERTISEMENT

‘ಬೆಂಗಳೂರು ಹಾಗೂ ಇತರೆ ನಗರಗಳನ್ನು ಸ್ವಚ್ಛವಾಗಿಡಲು ಪೌರಕಾರ್ಮಿಕರ ಪಾತ್ರ ಮಹತ್ವದ್ದು. ರಾಜ್ಯದಲ್ಲಿ ಸುಮಾರು 54,512 ಗುತ್ತಿಗೆ ಪೌರ ಕಾರ್ಮಿಕರಿದ್ದು, ಈ ಪೈಕಿ 10,775 ಕಾರ್ಮಿಕರನ್ನು ಮಾತ್ರ ಕಾಯಂಗೊಳಿಸಲಾಗಿದೆ. ಉಳಿದ ಕಾರ್ಮಿಕರ ಕಾಯಂ ಮಾಡುವಂತೆ ಈ ಮುಷ್ಕರ ಆರಂಭಿಸಲಾಗಿದೆ’ ಎಂದು ಪ್ರತಿಭಟನಕಾರರು ಹೇಳಿದರು.

‘ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ತಿಂಗಳಿಗೆ ಕೇವಲ ₹14 ಸಾವಿರ ವೇತನ ಬರುತ್ತಿದೆ. ಈ ವೇತನ ಯಾವುದಕ್ಕೂ ಸಾಲುತ್ತಿಲ್ಲ. ಹೀಗಾಗಿ, ಕನಿಷ್ಠ ವೇತನವನ್ನು ₹ 30 ಸಾವಿರಕ್ಕೆ ಹೆಚ್ಚಿಸಬೇಕು. ಕಸ ಸಾಗಣೆ ವಾಹನದ ಚಾಲಕ ಹಾಗೂ ಲೋಡರ್‌ಗಳ ಸೇವೆಯನ್ನೂ ಕಾಯಂಗೊಳಿಸಬೇಕು. ಪೌರಕಾರ್ಮಿಕರ ಕಲ್ಯಾಣಕ್ಕೆ
ಸಮಗ್ರ ನೀತಿ ರೂಪಿಸಬೇಕು. ಪೌರಕಾರ್ಮಿಕರು ಹಾಗೂ ಅವರ ಅವಲಂಬಿತರ ಆರೋಗ್ಯಕ್ಕೆ ವಿಶೇಷ ಆದ್ಯತೆ ನೀಡಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಬೇಕು’ ಎಂದೂ ಅವರು ಒತ್ತಾಯಿಸಿದರು.

ರಸ್ತೆ ಸ್ವಚ್ಛತೆಗೆ ಖಾಸಗಿ ನೌಕರರು: ಬಿಬಿಎಂಪಿ

ಬೆಂಗಳೂರು‌: ಪೌರಕಾರ್ಮಿಕರ ಮುಷ್ಕರದ ಹಿನ್ನೆಲೆಯಲ್ಲಿ ನಗರದಲ್ಲಿ ರಸ್ತೆಗಳನ್ನು ಸ್ವಚ್ಛವಾಗಿರಿಸಿಕೊಳ್ಳುವ ನಿಟ್ಟಿನಲ್ಲಿ ಖಾಸಗಿ ಸಂಸ್ಥೆಗಳಿಂದ ನೌಕರರು ಹಾಗೂ ಯಂತ್ರಗಳನ್ನು ತೆಗೆದುಕೊಳ್ಳಲು ಬಿಬಿಎಂಪಿ ಚಿಂತನೆ ನಡೆಸಿದೆ.

‘ನಗರದಲ್ಲಿ ತ್ಯಾಜ್ಯ ನಿರ್ವಹಣೆಗೆ ಎಲ್ಲೂ ತೊಂದರೆಯಾಗಿಲ್ಲ. ಮನೆಗಳಿಂದ ಕಸ ಸಂಗ್ರಹಿಸಲಾಗುತ್ತಿದೆ. ಆದರೆ ರಸ್ತೆ ಸ್ವಚ್ಛತೆಗೆ ಹಿನ್ನಡೆಯಾಗಿದೆ. ಬಿಬಿಎಂಪಿಯಲ್ಲಿರುವ 12 ಸಾವಿರ ಸಿಬ್ಬಂದಿ ಪೈಕಿ ಮೂರು ಸಾವಿರ ಪೌರ ಕಾರ್ಮಿಕರು ಭಾನುವಾರ ಕಾರ್ಯನಿರ್ವಹಿಸಿದ್ದಾರೆ’ ಎಂದು ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ವಿಭಾಗ ವಿಶೇಷ ಆಯುಕ್ತ ಹರೀಶ್‌ ಕುಮಾರ್‌ ತಿಳಿಸಿದರು.

‘ರಸ್ತೆಯಲ್ಲಿನ ಕಸ ಸ್ವಚ್ಛಗೊಳಿಸಲು ಹೆಚ್ಚುವರಿಯಾಗಿ ಯಂತ್ರಗಳನ್ನು ಖಾಸಗಿಯಾಗಿ ತೆಗೆದುಕೊಳ್ಳಲಾಗುತ್ತಿದೆ. ಇದಕ್ಕಾಗಿ ಟೆಂಡರ್‌ ಕೂಡ ಕರೆಯ ಲಾಗಿದೆ. ಶೇ 20ರಷ್ಟು ಖಾಸಗಿ ನೌಕರರನ್ನೂ ತೆಗೆದುಕೊಳ್ಳಲು ಬಿಬಿಎಂಪಿ ಆಲೋಚಿಸುತ್ತಿದೆ. ಸೋಮವಾರ ಮುಷ್ಕರ ಮುಗಿಯದಿದ್ದರೆ ಖಾಸಗಿಯಾಗಿ ನಾವು ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುತ್ತೇವೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.