ಬೆಂಗಳೂರು: ಬಿಬಿಎಂಪಿಯು 2019–20ನೇ ಸಾಲಿನಿಂದ ಜಾರಿಗೆ ಬರುವಂತೆ ಆಸ್ತಿ ತೆರಿಗೆ ಹೆಚ್ಚಿಸಲು ಮುಂದಾಗಿದೆ. ವಸತಿ ಸ್ವತ್ತುಗಳಿಗೆ ಶೇಕಡ 25ರಷ್ಟು ಹಾಗೂ ವಸತಿಯೇತರ ಸ್ವತ್ತುಗಳಿಗೆ ಶೇಕಡ 30ರಷ್ಟು ಹೆಚ್ಚಿಸುವ ಬಗ್ಗೆ ಪಾಲಿಕೆ ಪ್ರಸ್ತಾವ ಸಿದ್ಧಪಡಿಸಿದೆ.
ಆಯುಕ್ತ ಎನ್. ಮಂಜುನಾಥ ಪ್ರಸಾದ್ ಅವರು ಆಸ್ತಿ ತೆರಿಗೆ ಪರಿಷ್ಕರಣೆಯ ಪ್ರಸ್ತಾವ ಸಿದ್ಧಪಡಿಸಿ, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಹಾಗೂ ಬಿಬಿಎಂಪಿ ಕೌನ್ಸಿಲ್ ಸಭೆಯ ಮುಂದೆ ಮಂಡಿಸಿದ್ದಾರೆ. ಸ್ಥಾಯಿ ಸಮಿತಿಯ ಅಧಿಕಾರಾವಧಿ ನ. 9ಕ್ಕೆ ಕೊನೆಗೊಂಡಿದೆ. ಹೊಸ ಸಮಿತಿ ಇನ್ನೂ ರಚನೆ ಆಗಿಲ್ಲ. ಹಾಗಾಗಿ ಪ್ರಸ್ತಾವ ನೇರವಾಗಿ ಈ ತಿಂಗಳ 28 ಹಾಗೂ 29ರಂದು ನಡೆಯಲಿರುವ ಕೌನ್ಸಿಲ್ ಸಭೆಯಲ್ಲಿ ಚರ್ಚೆ ಆಗಲಿದೆ.
‘1976ರ ಕೆಎಂಸಿ ಕಾಯ್ದೆಯ ಪ್ರಕಾರ ಪ್ರತಿ ಮೂರು ವರ್ಷಗಳಿಗೊಮ್ಮೆ ತೆರಿಗೆ ಪರಿಷ್ಕರಣೆ ಮಾಡುವುದು ಕಡ್ಡಾಯ.ಈ ಹಿಂದೆ 2016ರಲ್ಲಿ ಆಸ್ತಿ ತೆರಿಗೆ ಪರಿಷ್ಕರಣೆ ಮಾಡಲಾಗಿತ್ತು. ಆ ಪ್ರಕಾರ 2019ರ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಮತ್ತೆ ತೆರಿಗೆ ಪರಿಷ್ಕರಣೆ ಮಾಡಬೇಕಾಗಿದೆ. ಈ ಸಲುವಾಗಿ ಟಿಪ್ಪಣಿ ಸಿದ್ಧಪಡಿಸಿದ್ದೇವೆ. ಈ ಬಗ್ಗೆ ಕೌನ್ಸಿಲ್ ಸಭೆಯಲ್ಲಿ ತೀರ್ಮಾನ ಕೈಗೊಳ್ಳಬೇಕಿದೆ. ಹಾಗಾಗಿ ಸಭೆಯಲ್ಲಿ ಈ ಕುರಿತು ಟಿಪ್ಪಣಿಯನ್ನು ಮಂಡಿಸಲಿದ್ದೇವೆ’ ಎಂದು ಆಯುಕ್ತರು ‘ಪ್ರಜಾವಾಣಿ’ಗೆ ತಿಳಿಸಿದರು.
ತೆರಿಗೆ ಪರಿಷ್ಕರಣೆಗೆ ಕೌನ್ಸಿಲ್ ಅನುಮೋದನೆ ಸಿಕ್ಕರೆ, ಆ ನಿರ್ಣಯಕ್ಕೆ ಸರ್ಕಾರದ ಅನುಮೋದನೆ ಪಡೆಯಬೇಕಾಗುತ್ತದೆ. ಆ ಬಳಿಕವಷ್ಟೇ ಪರಿಷ್ಕೃತ ತೆರಿಗೆ ದರ ಜಾರಿಗೆ ಬರಲಿದೆ. ಕೌನ್ಸಿಲ್ ಸಭೆಯಲ್ಲಿ ಈ ಪ್ರಸ್ತಾವಕ್ಕೆ ಅನುಮೋದನೆ ಸಿಗಲಿದೆಯೇ ಎಂಬುದು ಪ್ರಶ್ನೆ.
ಬಿಬಿಎಂಪಿ ಈಗಾಗಲೇ ಆರ್ಥಿಕ ಸಮಸ್ಯೆ ಎದುರಿಸುತ್ತಿದೆ. ಬಜೆಟ್‌ನಲ್ಲಿ ಘೋಷಿಸಿರುವ ಕಾರ್ಯಕ್ರಮಗಳ ಅನುಷ್ಠಾನಕ್ಕೂ ಹಣ ಹೊಂದಿಸಲು ಕಷ್ಟಪಡಬೇಕಾಗಿದೆ. ಹೊಸ ಯೋಜನೆಗಳನ್ನು ಕೈಗೊಳ್ಳುವುದಕ್ಕೂ ಸಮಸ್ಯೆ ಎದುರಾಗುತ್ತಿದೆ. ಪೂರ್ಣಗೊಂಡ ಅನೇಕ ಕಾಮಗಾರಿಗಳಿಗೆ ಸಂಬಂಧಿಸಿ ಗುತ್ತಿಗೆದಾರರಿಗೆ ಹಣ ಪಾವತಿ ಬಾಕಿ ಇದೆ. ಹಾಗಾಗಿ ತೆರಿಗೆ ಪರಿಷ್ಕರಣೆ ಅನಿವಾರ್ಯ ಎಂಬ ಸ್ಥಿತಿಯಲ್ಲಿ ಪಾಲಿಕೆ ಇದೆ.
ಕೆಎಂಸಿ ಕಾಯ್ದೆ ಹಾಗೂ ಅದರಡಿ ರಚಿಸಲಾದ ನಿಯಮಾವಳಿಗಳ ಪ್ರಕಾರ ಆಸ್ತಿ ತೆರಿಗೆಯನ್ನು ಪ್ರತಿ ಮೂರು ವರ್ಷಕ್ಕೊಮ್ಮೆ ಚಾಲ್ತಿಯಲ್ಲಿರುವ ಪ್ರದೇಶವಾರು ಯೂನಿಟ್ ದರಗಳ ಮೇಲೆ ಕನಿಷ್ಠ ಶೇಕಡ 15ರಷ್ಟು ಹಾಗೂ ಗರಿಷ್ಠ ಶೇಕಡ 30ರಷ್ಟು ಹೆಚ್ಚಳ ಮಾಡಲು ಅವಕಾಶ ಇದೆ.
ಈ ಹಿಂದೆ 2016ರ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ತೆರಿಗೆ ಪರಿಷ್ಕರಣೆ ಮಾಡಲಾಗಿತ್ತು. ಆಗ ವಸತಿ ಸ್ವತ್ತುಗಳಿಗೆ ಹಿಂದಿನ ದರಕ್ಕಿಂತ ಶೇಕಡ 15ರಷ್ಟು ಹಾಗೂ ವಸತಿಯೇತರ ಸ್ವತ್ತುಗಳಿಗೆ ಶೇಕಡ 30ರಷ್ಟು ತೆರಿಗೆ ಹೆಚ್ಚಳ ಮಾಡಲಾಗಿತ್ತು. ಆ ಬಳಿಕ ತೆರಿಗೆ ಹೆಚ್ಚಳ ಆಗಿಲ್ಲ.
‘5 ವರ್ಷಕ್ಕೊಮ್ಮೆ ಪರಿಷ್ಕರಣೆಗೆ ಸಿಗದ ಒಪ್ಪಿಗೆ’
ತೆರಿಗೆ ದರವನ್ನು ಪ್ರತಿ ಮೂರು ವರ್ಷದ ಬದಲು ಪ್ರತಿ ಐದು ವರ್ಷಗಳಿಗೊಮ್ಮೆ ಪರಿಷ್ಕರಣೆ ಮಾಡುವಂತೆ ಕೆಎಂಸಿ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು 2012ರಲ್ಲಿ ಪಾಲಿಕೆ ಸಭೆ ನಿರ್ಣಯ ಕೈಗೊಂಡಿತ್ತು. ಆದರೆ, ನಗರಾಭಿವೃದ್ಧಿ ಇಲಾಖೆ ಈ ಪ್ರಸ್ತಾವವನ್ನು ತಿರಸ್ಕರಿಸಿತ್ತು.
‘ಬಿಬಿಎಂಪಿಯ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ದೈನಂದಿನ ಕೆಲಸ ಕಾರ್ಯಗಳಿಗಾಗಿ ಪಾಲಿಕೆಯು ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಬೇಕಾದ ಸ್ಥಿತಿಯನ್ನು ಎದುರಿಸುತ್ತಿದೆ. ಹಾಗಾಗಿ ಪ್ರತಿ ಮೂರು ವರ್ಷದ ಬದಲು ಪ್ರತಿ ಐದು ವರ್ಷಗಳಿಗೊಮ್ಮೆ ತೆರಿಗೆ ಪರಿಷ್ಕರಿಸುವ ಪ್ರಸ್ತಾವ ಸಾಧುವಲ್ಲ’ ಎಂಬ ಕಾರಣ ನೀಡಿ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರು ಈ ಪ್ರಸ್ತಾವವನ್ನು ತಳ್ಳಿಹಾಕಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.