ಬೆಂಗಳೂರು: ‘ಚಿತ್ರಮಂದಿರಗಳಲ್ಲಿ ಶೇ 50ರಷ್ಟು ಜನರಿಗೆ ಮಾತ್ರ ಅವಕಾಶ, ಬಿಬಿಎಂಪಿ ಪಾರ್ಕ್‌ಗಳಲ್ಲಿನ ಜಿಮ್‌ಗಳನ್ನು ಮುಚ್ಚುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥಪ್ರಸಾದ್ ತಿಳಿಸಿದರು.
‘ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರೊಂದಿಗೆ ಮಾತನಾಡಲಾಗಿದೆ’ ಎಂದು ಹೇಳಿದರು.
‘ನಗರದಲ್ಲಿ ಗುರುವಾರ ಒಂದೇ ದಿನ 1,048 ಕೋವಿಡ್ ಪ್ರಕರಣಗಳು ವರದಿಯಾಗಿದೆ. ಹೊರ ರಾಜ್ಯದಿಂದ ಬಂದವರಲ್ಲೇ ಹೆಚ್ಚಾಗಿ ಸೋಂಕು ಪತ್ತೆಯಾಗುತ್ತಿದೆ. ಸ್ಲಂಗಳಲ್ಲಿ ಸೋಂಕು ಹರಡುತ್ತಿಲ್ಲ. ಬದಲಿಗೆ ಅಪಾರ್ಟ್‌ಮೆಂಟ್ ಸಮುಚ್ಚಯಗಳಲ್ಲಿ ಹರಡುತ್ತಿದೆ. ಅಲ್ಲಿನ ಆಟದ ಮೈದಾನ, ಜಿಮ್, ಪಾರ್ಟಿ ಹಾಲ್, ಈಜುಕೊಳಗಳನ್ನು ಬಂದ್ ಮಾಡುವ ಬಗ್ಗೆಯೂ ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ’ ಎಂದು ವಿವರಿಸಿದರು.
‘ಮದುವೆ ಸಮಾರಂಭ, ಹೋಟೆಲ್ ಸಭಾಂಗಣದಲ್ಲಿ ನಡೆಯುತ್ತಿರುವ ವಸ್ತುಪ್ರದರ್ಶನಗಳಲ್ಲಿ ಕೋವಿಡ್ ನಿಯಮ ಪಾಲನೆ ಆಗದಿದ್ದರೆ ಆಯೋಜಕರು ಮತ್ತು ಹೋಟೆಲ್, ಕಲ್ಯಾಣ ಮಂಟಪಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
‘ಪೂರ್ವ, ಪಶ್ಚಿಮ, ದಕ್ಷಿಣ, ಮಹದೇವಪುರ, ಬೊಮ್ಮನಹಳ್ಳಿ ವಲಯಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿವೆ. ಯಲಹಂಕ, ದಾಸರಹಳ್ಳಿ, ರಾಜರಾಜೇಶ್ವರಿನಗರ ವಲಯದಲ್ಲಿ ಕಡಿಮೆ ಪ್ರಮಾಣದಲ್ಲಿ ಇದೆ. ಪ್ರತಿದಿನ 44 ಸಾವಿರ ಜನರಿಗೆ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಒಂದು ವಾರದಲ್ಲಿ ಇದನ್ನು 50 ಸಾವಿರಕ್ಕೆ ಹೆಚ್ಚಿಸಲಾಗುವುದು‘ ಎಂದು ತಿಳಿಸಿದರು.
‘ಸೋಂಕು ದೃಢಪಟ್ಟ ಕುಟುಂಬದವರನ್ನ ಪರೀಕ್ಷೆಗೆ ಒಳಪಡಿಸಿದಾಗ ಎಲ್ಲರಿಗೂ ಪಾಸಿಟಿವ್ ವರದಿ ಬರುತ್ತಿದೆ. ಲಕ್ಷಣ ಕಾಣಿಸಿಕೊಂಡ ಕೂಡಲೇ ಪ್ರತ್ಯೇಕವಾಗಿ ಇರದ ಕಾರಣ ಈ ರೀತಿ ಆಗುತ್ತಿದೆ. ಲಕ್ಷಣ ಇದ್ದವರು ಕೂಡಲೇ ಪ್ರತ್ಯೇಕವಾಗಿ ಇರಬೇಕು. 10 ವರ್ಷಕ್ಕೂ ಒಳಗಿನ ಮತ್ತು 60 ವರ್ಷ ಮೇಲ್ಪಟ್ಟವರು ಸಾಧ್ಯವಾದಷ್ಟು ಮನೆಯಲ್ಲೇ ಇರಬೇಕು’ ಎಂದು ಮನವಿ ಮಾಡಿದರು.
12 ಕಂಟೈನ್‌ಮೆಂಟ್ ವಲಯ
‘ಒಂದೇ ಕಡೆ 5ಕ್ಕೂ ಹೆಚ್ಚು ಜನರಿಗೆ ಕೋವಿಡ್ ದೃಢಪಟ್ಟರೆ ಅವುಗಳನ್ನು ಕ್ಲಸ್ಟರ್ ಎಂದು ಪರಿಗಣಿಸಿ ಕಂಟೈನ್‌ಮೆಂಟ್ ವಲಯ ಎಂದು ಘೋಷಿಸಲಾಗುತ್ತದೆ. ಈ ರೀತಿಯ 12 ವಲಯಗಳು ಬೆಂಗಳೂರಿನಲ್ಲಿವೆ’ ಎಂದು ಎನ್. ಮಂಜುನಾಥಪ್ರಸಾದ್ ತಿಳಿಸಿದರು.
‘ನಗರದ 198 ವಾರ್ಡ್‌ಗಳಿಗೂ ತಲಾ ಒಂದು ಆಂಬುಲೆನ್ಸ್ ನಿಯೋಜಿಸಲಾಗುತ್ತಿದೆ. ಆಂಬುಲೆನ್ಸ್‌ಗಳನ್ನು ಬಾಡಿಗೆಗೆ ಪಡೆಯಲಾಗುವುದು. ಸರ್ಕಾರಿ ಆಸ್ಪತ್ರೆಗಳಲ್ಲೇ ಸಾಕಷ್ಟು ಹಾಸಿಗೆ ಲಭ್ಯ ಇರುವ ಕಾರಣ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸುವ ಅಗತ್ಯ ಸದ್ಯಕ್ಕೆ ಇಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.