ADVERTISEMENT

ಹೆಚ್ಚುವರಿಯಾಗಿ 2,823 ಆರೋಗ್ಯ ಕಾರ್ಯಕರ್ತರ ಹುದ್ದೆ ಸೃಷ್ಟಿ?

ಕೋವಿಡ್‌ನಿಂದ ಪಾಠ ಕಲಿತ ಪಾಲಿಕೆ l ತಳಮಟ್ಟದ ಆರೋಗ್ಯ ಸೇವೆ– ಕೊರತೆ ತುಂಬಲು ಕ್ರಮ

ಪ್ರವೀಣ ಕುಮಾರ್ ಪಿ.ವಿ.
Published 29 ಜುಲೈ 2021, 19:50 IST
Last Updated 29 ಜುಲೈ 2021, 19:50 IST

ಬೆಂಗಳೂರು: ಸಾಕ್ರಾಮಿಕ ರೋಗ ನಿಯಂತ್ರಣದಲ್ಲಿ ತಳಹಂತದ ಆರೋಗ್ಯ ಸೇವೆ ಹಾಗೂ ಆರೋಗ್ಯ ಕಾರ್ಯಕರ್ತರ ಮಹತ್ವ ಏನೆಂಬುದು ಬಿಬಿಎಂಪಿಗೆ ತಡವಾಗಿಯಾದರೂ ಅರಿವಾಗಿದೆ. ಕೋವಿಡ್‌ ನಿಯಂತ್ರಣದ ವಿಚಾರದಲ್ಲಿ ಪಾಠ ಕಲಿತ ಪಾಲಿಕೆ, ತಳ ಹಂತದ ಆರೋಗ್ಯ ಸೇವೆಯ ಕೊರತೆ ನೀಗಿಸಲು ಕಿರಿಯ ಆರೋಗ್ಯ ಸಹಾಯಕಿಯರು (ಎಎನ್‌ಎಂ), ಕಿರಿಯ ಆರೋಗ್ಯ ಪರಿವೀಕ್ಷಕರು (ಜೆಎಚ್‌ಐ) ಹಾಗೂ ಆಶಾ ಕಾರ್ಯಕರ್ತೆಯರು ಸೇರಿ ಒಟ್ಟು 2,823 ಆರೋಗ್ಯ ಕಾರ್ಯಕರ್ತರ ಹುದ್ದೆಗಳನ್ನು ಹೊಸತಾಗಿ ಸೃಷ್ಟಿಸುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದೆ.

1.30 ಕೋಟಿ ಜನಸಂಖ್ಯೆ ಹೊಂದಿರುವ ನಗರದಲ್ಲಿ ಸಮುದಾಯ ಆರೋಗ್ಯ ಸೇವೆಯನ್ನು ನಿಭಾಯಿಸಲು ಬಿಬಿಎಂಪಿ 429 ಕಿರಿಯ ಆರೋಗ್ಯ ಸಹಾಯಕಿಯರು ಹಾಗೂ 978 ಆಶಾ ಕಾರ್ಯಕರ್ತರನ್ನು ಹೊಂದಿತ್ತು. ಇತ್ತೀಚೆಗೆ 320 ಕಿರಿಯ ಆರೋಗ್ಯ ಪರಿವೀಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲಾಗಿತ್ತು. ಈಗ ಈ ಮೂರು ವಿಧಗಳ ಒಟ್ಟು 2,823 ಹೊಸ ಹುದ್ದೆಗಳಿಗೆ ಮಂಜೂರಾತಿ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದೆ. ಹೆಚ್ಚುವರಿಯಾಗಿ ನೇಮಿಸಿಕೊಳ್ಳುವ ಎಎನ್‌ಎಂಗಳು, ಜೆಎಚ್‌ಐಗಳು ಹಾಗೂ ಆಶಾ ಕಾರ್ಯಕರ್ತರ ವೇತನ ಹಾಗೂ ಗೌರವಧನಕ್ಕಾಗಿ ವಾರ್ಷಿಕ ₹ 2.37 ಕೋಟಿ ಆರ್ಥಿಕ ಹೊರೆ ಬೀಳಲಿದೆ.

ಹೊಸ ಸಾಂಕ್ರಾಮಿಕ ರೋಗ ಕಾಣಿಸಿಕೊಂಡಾಗ ಅದನ್ನು ಪತ್ತೆ ಹಚ್ಚುವುದು,ಸರ್ವೇಕ್ಷಣೆ ನಡೆಸುವುದು, ಜನರಲ್ಲಿ ಜಾಗೃತಿ ಮೂಡಿಸುವುದು ಮುಂತಾದ ಚಟುವಟಿಕೆಗಳಿಗೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ನೋಡಲ್‌ ಕೇಂದ್ರಗಳಿದ್ದಂತೆ. ಈ ವಿಚಾರದಲ್ಲಿ ಕಿರಿಯ ಆರೋಗ್ಯ ಸಹಾಯಕಿಯರು, ಕಿರಿಯ ಆರೋಗ್ಯ ಪರಿವೀಕ್ಷಕರು ಹಾಗೂ ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆಯರು (ಆಶಾ) ನಾಲ್ಕು ಸ್ತಂಭಗಳಂತೆ ಎನ್ನುತ್ತಾರೆ ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ (ಸಾರ್ವಜನಿಕ ಆರೋಗ್ಯ) ಡಾ.ಬಿ.ಕೆ.ವಿಜಯೇಂದ್ರ.

ADVERTISEMENT

‘ಡೆಂಗಿ ಹಾಗೂ ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ತಳಮಟ್ಟದ ಆರೋಗ್ಯ ಕಾರ್ಯಕರ್ತರ ಬಲವನ್ನು ಹೆಚ್ಚಿಸಲು ಬಿಬಿಎಂಪಿ ಈ ಹಿಂದೆಯೇ ನಿರ್ಧರಿಸಿತ್ತು. ಕೋವಿಡ್‌ ವ್ಯಾಪಿಸಿದ ಬಳಿಕವಂತೂ ಎಎನ್ಎಂ, ಜೆಎಚ್‌ಐ ಹಾಗೂ ಆಶಾ ಕಾರ್ಯಕರ್ತೆಯರ ಪ್ರಾಮುಖ್ಯತೆ ಎಷ್ಟು ಎಂಬುದು ಮನದಟ್ಟಾಗಿದೆ’ ಎನ್ನುತ್ತಾರೆ ಅವರು.

‘ಕೋವಿಡ್‌ ಹೊಸ ಪ್ರಕರಣಗಳು ಪತ್ತೆಯಾದಾಗ, ಸೋಂಕಿತರ ನೇರ ಹಾಗೂ ಪರೋಕ್ಷ ಸಂಪರ್ಕಕ್ಕೆ ಬಂದವರ ಪತ್ತೆಕಾರ್ಯ, ಮನೆಯಲ್ಲೇ ಆರೈಕೆಗೆ ಒಳಗಾಗುವವರಿಗೆ ತಿಳಿವಳಿಕೆ ನೀಡುವುದು, ಕೋವಿಡ್‌ ಪರೀಕ್ಷೆಗಳನ್ನು ನಡೆಸುವುದು, ಲಸಿಕೆ ಬಗ್ಗೆ ಜಾಗೃತಿ ಮೂಡಿಸುವುದು, ಕೋವಿಡ್‌ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾದ ಕಡೆ ಹಾಟ್‌ ಸ್ಪಾಟ್‌ಗಳನ್ನು ಗುರುತಿಸುವುದು... ಹೀಗೆ ಪ್ರತಿಯೊಂದು ಕ್ಷೇತ್ರಕಾರ್ಯಕ್ಕೂ ಆರೋಗ್ಯ ಕಾರ್ಯಕರ್ತರನ್ನು ಅವಲಂಬಿಸಬೇಕಾಗುತ್ತದೆ’ ಎಂದು ಅವರು ವಿವರಿಸಿದರು.

‘ಭವಿಷ್ಯದಲ್ಲಿ ಯಾವುದೇ ಸಾಂಕ್ರಾಮಿಕ ರೋಗ ಕಾಣಿಸಿಕೊಂಡರೂ ಅದನ್ನು ಸಮರ್ಥವಾಗಿ ನಿಯಂತ್ರಿಸಬೇಕಾದರೆ ತಳ ಮಟ್ಟದ ಆರೋಗ್ಯ ಕಾರ್ಯಕರ್ತರ ಪಡೆಯನ್ನು ಸನ್ನದ್ಧವಾಗಿ ಇಟ್ಟುಕೊಳ್ಳಬೇಕಾಗುತ್ತದೆ. ಹಾಗಾಗಿಯೇ ಎಎನ್‌ಎಂ, ಜೆಎಚ್‌ಐ ಹಾಗೂ ಆಶಾ ಕಾರ್ಯಕರ್ತರ ಬಲ ಹೆಚ್ಚಿಸಲು ಅನುಮೋದನೆ ಕೋರಿ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಅವರು ತಿಳಿಸಿದರು.

ತಾಯಿ ಮತ್ತು ಶಿಶು ಆರೈಕೆಯಲ್ಲಿ ಕಿರಿಯ ಆರೋಗ್ಯ ಸಹಾಯಕಿಯರ ಹೊಣೆ ಮಹತ್ವದ್ದು. ಮನೆ ಮನೆಗೆ ಭೇಟಿ ನೀಡುವ ಅವರು ಗರ್ಭಿಣಿಯರ, ಬಾಣಂತಿಯರ ಹಾಗೂ ಶಿಶುಗಳ ಆರೋಗ್ಯ ಕಾಳಜಿಗೆ ಸಲಹೆ ನೀಡುವುದು, ನಗರ ಆರೋಗ್ಯ ಮತ್ತು ಪೌಷ್ಟಿಕ ಆಹಾರ ದಿನಗಳನ್ನು ಏರ್ಪಡಿಸುವುದು, ರೋಗ ನಿರೋಧಕ ಚುಚ್ಚುಮದ್ದು ನೀಡುವ ಕಾರ್ಯಕ್ರಮಗಳ ಅನುಷ್ಠಾನ ಕಾರ್ಯವನ್ನು ನಿಭಾಯಿಸುತ್ತಾರೆ. ಸಮುದಾಯದ ಸಹಭಾಗಿತ್ವದಲ್ಲಿ ಕೈಗೊಳ್ಳಬೇಕಾದ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಆಶಾ ಕಾರ್ಯಕರ್ತೆಯರ ತಂಡವನ್ನು ಎಎನ್‌ಎಂಗಳೇ ಮುನ್ನಡೆಸುತ್ತಾರೆ. ಹಾಗಾಗಿ ಇವರ ಸಂಖ್ಯಾಬಲ ಹೆಚ್ಚಳಕ್ಕೆ ಪಾಲಿಕೆ ಮುಂದಾಗಿದೆ.

ಜನರ ಜೊತೆ ನೇರ ಸಂಪರ್ಕ ಸಾಧಿಸಿ, ಆರೋಗ್ಯ ರಕ್ಷಣೆ ಸಂಬಂಧ ಜನರ ನಡವಳಿಕೆಯಲ್ಲಿ ಮಾರ್ಪಾಡು ಮಾಡುವುದಕ್ಕೆ ಆಶಾ ಕಾರ್ಯಕರ್ತೆಯರನ್ನು ಬಿಬಿಎಂಪಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಉದ್ದೇಶಿಸಿದೆ.

***

ಸಾಂಕ್ರಾಮಿಕ ರೋಗಗಳ ನಿಯಂತ್ರಣದಲ್ಲಿ ಆರೋಗ್ಯ ಕಾರ್ಯಕರ್ತರ ಪಾತ್ರ ಮುಖ್ಯವಾದುದು. ಹಾಗಾಗಿ ಆರೋಗ್ಯ ಕಾರ್ಯಕರ್ತರ ಸಂಖ್ಯಾಬಲ ಹೆಚ್ಚಳದ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ

-ಗೌರವ್‌ ಗುಪ್ತ, ಮುಖ್ಯ ಆಯುಕ್ತ, ಬಿಬಿಎಂ‍ಪಿ

***

ಹೆಚ್ಚುವರಿ ಹುದ್ದೆಗಳ ಬೇಡಿಕೆ ವಿವರ

ಹುದ್ದೆ; ಈಗಿರುವುದು; ಹೆಚ್ಚುವರಿ ಬೇಡಿಕೆ; ವೇತನಕ್ಕೆ ಬೇಕಾಗುವ ವಾರ್ಷಿಕ ಮೊತ್ತ (₹ ಕೋಟಿಗಳಲ್ಲಿ)

ಎಎನ್‌ಎಂ; 429; 871; 1.31

ಜೆಎಚ್‌ಐ; 320; 330; 0.50

ಆಶಾ; 978; 1622; 0.57

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.