ಬೆಂಗಳೂರು: ‘ನೆಲಗದರನಹಳ್ಳಿ ಮುಖ್ಯ ರಸ್ತೆಯನ್ನು ₹20 ಕೋಟಿ ವೆಚ್ಚದಲ್ಲಿ 30 ಅಡಿಯಿಂದ 60 ಅಡಿಗೆ ವಿಸ್ತರಿಸುವ ಕೆಲಸ ಆರಂಭವಾಗಿದೆ. ಇದರಿಂದ ಈ ಭಾಗದಲ್ಲಿ ಬಹುತೇಕ ಸಂಚಾರ ದಟ್ಟಣೆ ಕಡಿಮೆಯಾಗಲಿದ್ದು, ಅಭಿವೃದ್ಧಿ ಹಕ್ಕು ಹಸ್ತಾಂತರ (ಟಿಡಿಆರ್) ಪ್ರಕ್ರಿಯೆಯನ್ನು ಮುಗಿಸಿ ನಿಗದಿತ ಸಮಯದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು’ ಎಂದು ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಾಲಿಕೆಯ ದಾಸರಹಳ್ಳಿ ವಲಯ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮುಖ್ಯ ಆಯುಕ್ತರು ಶುಕ್ರವಾರ ಪರಿಶೀಲಿಸಿದರು.
ಹೆಸರಘಟ್ಟ ಮುಖ್ಯ ರಸ್ತೆಯ (4 ಕಿ.ಮೀ ಉದ್ದ) ಅಭಿವೃದ್ಧಿ ಕಾಮಗಾರಿಯನ್ನು ₹15 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡಿದ್ದು, ಜಲಮಂಡಳಿಯಿಂದ ಒಳಚರಂಡಿ ಹಾಗೂ ಕುಡಿಯುವ ನೀರಿನ ಕಾಮಗಾರಿ ಮುಗಿದಿದೆ. ರಸ್ತೆ ಡಾಂಬರೀಕರಣ ಪ್ರಕ್ರಿಯೆ ಪ್ರಾರಂಭವಾಗಿದೆ. ಈ ಪೈಕಿ ರಸ್ತೆ ದುರಸ್ತಿ ಕಾರ್ಯವನ್ನು ಕೂಡಲೇ ಮುಗಿಸಬೇಕು ಎಂದೂ ಅವರು ಸೂಚಿಸಿದರು.
ಅಬ್ಬಿಗೆರೆ ಮುಖ್ಯ ರಸ್ತೆಯಿಂದ (ಅರಣ್ಯ ರಸ್ತೆ) ವೈ ನಾಗ್ ಜಂಕ್ಷನ್ ಮೂಲಕ ಗಂಗಮ್ಮ ಗುಡಿ ಠಾಣೆಯವರೆಗೆ ₹9.5 ಕೋಟಿ ವೆಚ್ಚದಲ್ಲಿ 1.35 ಕಿ.ಮೀ ಉದ್ದದ ರಸ್ತೆಯನ್ನು 80 ಅಡಿಗೆ ರಸ್ತೆ ವಿಸ್ತರಿಸುವ ಕಾಮಗಾರಿ ಪ್ರಗತಿಯಲ್ಲಿದೆ. ರಸ್ತೆ ಬದಿ ಕಾಲುವೆ, ಪಾದಚಾರಿ ಮಾರ್ಗ ಸೇರಿದಂತೆ ಬಾಕಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದೂ ತುಷಾರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.