ಬೆಂಗಳೂರು: ಅಮೃತ ನಗರೋತ್ಥಾನ ಯೋಜನೆಯಲ್ಲಿ ವಿಧಾನಸಭೆ ಕ್ಷೇತ್ರವಾರು ಅನುದಾನ ಪಡೆದುಕೊಳ್ಳುವಲ್ಲಿ ಅಗ್ರಸ್ಥಾನದಲ್ಲಿರುವ ರಾಜರಾಜೇಶ್ವರಿ ನಗರ, ರಸ್ತೆ ಮೂಲಸೌಕರ್ಯ ಯೋಜನೆಗಳಲ್ಲೂ ಅಧಿಕ ಪ್ರಮಾಣ ವನ್ನೇ ಪಡೆದುಕೊಂಡಿದೆ. ₹700 ಕೋಟಿಗಳಲ್ಲಿ ಸಚಿವರಾದ ಮುನಿರತ್ನ, ಸೋಮಶೇಖರ್ ಅವರಿಗೇ ಸಿಂಹಪಾಲು.
ಮುಖ್ಯಮಂತ್ರಿಯವರ ಅಮೃತ ನಗರೋತ್ಥಾನ ಯೋಜನೆಯಲ್ಲಿ ರಸ್ತೆ ಮೂಲಸೌಕರ್ಯ ವಿಭಾಗದಿಂದ ಒಟ್ಟು 227 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ರಸ್ತೆ ಮೂಲಸೌಕರ್ಯಕ್ಕಾಗಿ ಒಂಬತ್ತು ವಿಭಾಗಗಳಲ್ಲಿ ಕಾಮಗಾರಿಗೆ ಹಣ ಹಂಚಲಾಗಿದೆ. ಇದರಲ್ಲಿ ಮತ್ತೆ ರಾಜರಾಜೇಶ್ವರಿ ನಗರ ವಲಯವೇ ಅತಿಹೆಚ್ಚು ಪಾಲನ್ನು ಪಡೆದಿದೆ. ಇದು ಕಾಂಗ್ರೆಸ್ ಶಾಸಕರ ಜೊತೆಗೆ ಬಿಜೆಪಿ ಶಾಸಕರನ್ನೂ ಕೆರಳಿಸಿದೆ.
ರಸ್ತೆ ಮೂಲಸೌಕರ್ಯದ ರಾಜರಾಜೇಶ್ವರಿ ನಗರ ವಿಭಾಗದ ಕಾಮಗಾರಿಗಳು ರಾಜರಾಜೇಶ್ವರಿನಗರ ಹಾಗೂ ಯಶವಂತಪುರ ವಿಧಾನಸಭೆ ಕ್ಷೇತ್ರಕ್ಕೆ ಸಂಬಂಧಿಸಿದ್ದವಾಗಿವೆ. ಇವೇ ವಿಧಾನಸಭೆ ಕ್ಷೇತ್ರಗಳಿಗೆ ಅನುದಾನವಾಗಿ ಕ್ರಮವಾಗಿ ₹208 ಮತ್ತು ₹202 ಕೋಟಿಗಳನ್ನು ನೀಡಲಾಗಿದೆ. ಈಗ ಇವೆರಡು ಕ್ಷೇತ್ರಗಳ ರಸ್ತೆ, ಚರಂಡಿಗಾಗಿ ₹190 ಕೋಟಿ ನೀಡಿರುವುದು ಎಲ್ಲರ ಕಣ್ಣನ್ನು ಕೆಂಪಾಗಿಸಿದೆ.
ರಸ್ತೆಗಳ ಅಭಿವೃದ್ಧಿ, ಚರಂಡಿ ನಿರ್ಮಾಣ, ನಿರ್ವಹಣೆ, ಡಾಂಬರು ಇಂತಹದ್ದೇ ಕಾಮಗಾರಿಗಳನ್ನು ರಸ್ತೆ ಮೂಲಸೌಕರ್ಯದ ಹಣದಲ್ಲಿ ಮಾಡಲಾಗುತ್ತಿದೆ. ಪೂರ್ವ ವಿಭಾಗದಲ್ಲಿ ತಲಾ ₹50 ಲಕ್ಷದಿಂದ ₹6.5 ಕೋಟಿವರೆಗೂ ಕಾಮಗಾರಿಗಳಿವೆ. ಪಶ್ಚಿಮ ವಿಭಾಗದಲ್ಲಿ ₹50 ಲಕ್ಷದಿಂದ ₹22.50 ಕೋಟಿವರೆಗೆ ಇದೆ. ಪ್ರಮುಖ ಹಾಗೂ ಮುಖ್ಯ ರಸ್ತೆಗಳಅಭಿವೃದ್ಧಿಗೆ ಮಲ್ಲೇಶ್ವರ ವಿಧಾನಸಭೆ ಕ್ಷೇತ್ರಕ್ಕೆ ₹20 ಕೋಟಿ, ಮಹಾಲಕ್ಷ್ಮಿ ಬಡಾವಣೆ ಕ್ಷೇತ್ರಕ್ಕೆ ₹22.50 ಕೋಟಿ, ರಾಜಾಜಿನಗರ ಕ್ಷೇತ್ರಕ್ಕೆ ₹15 ಕೋಟಿ ಹಂಚಲಾಗಿದೆ.
ದಕ್ಷಿಣ ವಿಭಾಗದಲ್ಲಿ ₹35 ಲಕ್ಷದಿಂದ ₹17 ಕೋಟಿವರೆಗಿನ ಕಾಮಗಾರಿಗಳಿವೆ. ಇಟ್ಟಮಡು ರಸ್ತೆಯಲ್ಲಿ ವಿಸ್ತರಣೆ, ಅಭಿವೃದ್ಧಿಗೆ ₹17 ಕೋಟಿ ಹಾಗೂ ಚಿಕ್ಕಪೇಟೆ ಕ್ಷೇತ್ರದಲ್ಲಿ ರಸ್ತೆಗಳ ಮರುಅಭಿವೃದ್ಧಿಗೆ ₹10 ಕೋಟಿ ಅನುಮೋದನೆ ನೀಡಲಾಗಿದೆ. ಮಹದೇವಪುರ ವಿಭಾಗದಲ್ಲಿ ₹20 ಲಕ್ಷದಿಂದ ₹11 ಕೋಟಿವರೆಗಿನ ಕಾಮಗಾರಿಗಳಲ್ಲಿ ಪಣತ್ತೂರು–ಬಾಲಗೆರೆ ರಸ್ತೆ ನಿರ್ಮಾಣಕ್ಕೆ ಅಧಿಕ ಹಣ ನೀಡಲಾಗಿದೆ. ಕೆ.ಆರ್.ಪುರ ವಿಭಾಗದಲ್ಲಿ 7 ಕಾಮಗಾರಿಗಳಲ್ಲಿ ₹13 ಕೋಟಿಯನ್ನು ಹಳೆ ಮದ್ರಾಸ್ ರಸ್ತೆ ಅಭಿವೃದ್ಧಿಗೆ ಮೀಸಲಿಡಲಾಗಿದೆ.
ಬೊಮ್ಮನಹಳ್ಳಿ ವಿಭಾಗದಲ್ಲಿ ₹40 ಲಕ್ಷದಿಂದ ₹5 ಕೋಟಿವರೆಗಿನ ಕಾಮಗಾರಿಗಳಿವೆ. ಬೊಮ್ಮನಹಳ್ಳಿ ಕ್ಷೇತ್ರದ ಕಾಮಗಾರಿಗಳಿಗೆ ಗರಿಷ್ಠ ಹಣ ಮೀಸಲಾಗಿದೆ. ದಾಸರಹಳ್ಳಿ ವಿಭಾಗದಲ್ಲಿ ಮೂರು ಕಾಮಗಾರಿ ಮಾತ್ರ ಇದ್ದು, ಒಟ್ಟಾರೆ ₹10 ಕೋಟಿ ವಿನಿಯೋಗವಾಗಲಿದೆ. ಯಲಹಂಕ ವಿಭಾಗದಲ್ಲಿ ₹30 ಲಕ್ಷದಿಂದ ₹6 ಕೋಟಿವರೆಗಿನ ಕಾಮಗಾರಿಗಳಿದ್ದು, ಯಲಹಂಕ ಕ್ಷೇತ್ರದಲ್ಲಿ ಬಹುತೇಕ ಹಣ ವ್ಯಯವಾಗಲಿದೆ.
₹1 ಕೋಟಿಗಿಂತ ಕಡಿಮೆ ಇಲ್ಲ: ಆರ್.ಆರ್. ನಗರ ವಿಭಾಗದಲ್ಲಿ ಒಟ್ಟು 49 ಕಾಮಗಾರಿಗಳು ₹190 ಕೋಟಿ ವೆಚ್ಚದಲ್ಲಿ ನಡೆಯಲಿವೆ. ಇದರಲ್ಲಿ ₹1 ಕೋಟಿಗಿಂತ ಕಡಿಮೆಯ ಯಾವ ಕಾಮಗಾರಿಯೂ ಇಲ್ಲ. ಬಿಇಎಲ್ ವೃತ್ತದಲ್ಲಿ ರಸ್ತೆ ವಿಸ್ತರಣೆಗೆ ₹70 ಕೋಟಿ, ಅಂದ್ರಹಳ್ಳಿ ರಸ್ತೆ ಅಭಿವೃದ್ಧಿಗೆ ₹11 ಕೋಟಿ ವೆಚ್ಚ ಮಾಡಲಾಗುತ್ತದೆ. ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ಹೆಚ್ಚು ಹಣದ ಕಾಮಗಾರಿಗಳು ಅನುಮೋದನೆಯಾಗಿವೆ. ಇಷ್ಟೇ ಅಲ್ಲ, ಮುಖ್ಯಮಂತ್ರಿಯವರ ವಿವೇಚನೆಯಲ್ಲಿ ಕಾಯ್ದಿಟ್ಟಿರುವ ₹50 ಕೋಟಿ ಮೌಲ್ಯದ ಹಣವೂ ರಾಜರಾಜೇಶ್ವರಿ ನಗರ ವಿಭಾಗದಲ್ಲೇ ಇದೆ.
ಬಿಜೆಪಿ ಶಾಸಕರ ಅಸಮಾಧಾನ
‘ನಾವು ಪಕ್ಷದ ಶಾಸಕರೇ ಅಲ್ಲವೇ? ನಮ್ಮ ಕ್ಷೇತ್ರಗಳಲ್ಲೂ ಬಹಳಷ್ಟು ರಸ್ತೆಗಳು, ಚರಂಡಿಗಳು ಹಾಳಾಗಿಹೋಗಿವೆ. ಆದರೆ, ನಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ರಸ್ತೆ ಮೂಲಸೌಕರ್ಯದ ವತಿಯಿಂದ ಕಡಿಮೆ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಕ್ಷೇತ್ರಕ್ಕೆ ನೀಡುವ ಅನುದಾನದಲ್ಲೂ ಒಂದಿಬ್ಬರಿಗೇ ಹೆಚ್ಚು ನೀಡಿದ್ದಾರೆ. ಅದರಲ್ಲೂ ನಮಗೆ ಅನ್ಯಾಯವಾಗಿದೆ. ನಮ್ಮ ಕ್ಷೇತ್ರದ ರಸ್ತೆಗೆ ಸಂಬಂಧಿಸಿದ ಕಾಮಗಾರಿಗಳಿಗೂ ಅನುಮತಿ ನೀಡಿಲ್ಲ. ನಮ್ಮ ಮನೆಯಲ್ಲೇ ನಾವು ಪರಕೀಯರಂತಾಗಿದ್ದೇವೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ, ಬಿಜೆಪಿಯ ನಾಲ್ವರು ಶಾಸಕರು ಅಸಮಾಧಾನ ತೋಡಿಕೊಂಡರು.
ಒಂದೇ ರಸ್ತೆಗೆ ಮತ್ತೆ ಮತ್ತೆ ಹಣ
‘ರಸ್ತೆ ಮೂಲಸೌಕರ್ಯ ವಿಭಾಗದ ₹700 ಕೋಟಿ ಅನುದಾನ ಕ್ರಿಯಾಯೋಜನೆಗಳಲ್ಲಿ ಸಾಕಷ್ಟು ಕಾಮಗಾರಿಗಳು ಮತ್ತೆ ಕಾಣಿಸಿಕೊಂಡಿವೆ. ಹಿಂದೆ ಅಭಿವೃದ್ಧಿ ಮಾಡಲಾಗಿದ್ದ ರಸ್ತೆಗೆ ತಿರುಗಾ–ಮುರುಗಾ ಹೆಸರು ಬದಲಿಸಿ ಮತ್ತದೇ ಕಾಮಗಾರಿಗೆ ಅನುಮೋದನೆ ಪಡೆಯಲಾಗಿದೆ. ಅನುದಾನಕ್ಕಾಗಿಯೇ ಪಟ್ಟಿಯಲ್ಲಿ ಇಂತಹ ಕಾಮಗಾರಿಗಳನ್ನು ತೋರಲಾಗಿದೆ’ ಎಂದು ಪಕ್ಷಭೇದ ಮರೆತು ಬಿಬಿಎಂಪಿಯ ಕೆಲವು ಮಾಜಿ ಸದಸ್ಯರು ಆರೋಪಿಸಿದರು. ಈ ಬಗ್ಗೆ ಪ್ರತಿಕ್ರಿಯೆಗೆ ಸಾಕಷ್ಟು ಬಾರಿ ಪ್ರಯತ್ನಿಸಿದರೂ ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ಪ್ರತಿಕ್ರಿಯಿಸಲಿಲ್ಲ.
ರಸ್ತೆ ಮೂಲಸೌಕರ್ಯ ಕಾಮಗಾರಿಗಳು
ವಿಭಾಗ;ಕಾಮಗಾರಿಗಳು;ವೆಚ್ಚ (ಕೋಟಿಗಳಲ್ಲಿ)
ಆರ್.ಆರ್. ನಗರ;28;₹190
ಪಶ್ಚಿಮ;33;₹125
ದಕ್ಷಿಣ;43;₹105
ಪೂರ್ವ;39;₹75
ಬೊಮ್ಮನಹಳ್ಳಿ;38;₹75
ಯಲಹಂಕ;21;₹50
ಮಹದೇವಪುರ;43;₹35
ಕೆ.ಆರ್.ಪುರ;7;₹35
ದಾಸರಹಳ್ಳಿ;3;₹10
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.