ADVERTISEMENT

ಕಾಯಂ ಉದ್ಯೋಗ ಕಲ್ಪಿಸಲು ನೀತಿ ರೂಪಿಸಿ: ಡಾ. ಪಿ.ಪಿ.ವಾವ

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 20:33 IST
Last Updated 16 ಜುಲೈ 2021, 20:33 IST
ಪಿ.ಪಿ. ವಾವ ನೇತೃತ್ವದಲ್ಲಿ ಶುಕ್ರವಾರ ಸಭೆ ನಡೆಯಿತು. ಗೌರವ್ ಗುಪ್ತ, ಹರೀಶ್‌ಕುಮಾರ್‌ ಮತ್ತಿತರ ಅಧಿಕಾರಿಗಳು ಇದ್ದರು
ಪಿ.ಪಿ. ವಾವ ನೇತೃತ್ವದಲ್ಲಿ ಶುಕ್ರವಾರ ಸಭೆ ನಡೆಯಿತು. ಗೌರವ್ ಗುಪ್ತ, ಹರೀಶ್‌ಕುಮಾರ್‌ ಮತ್ತಿತರ ಅಧಿಕಾರಿಗಳು ಇದ್ದರು   

ಬೆಂಗಳೂರು: ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಒಳಚರಂಡಿ ಮತ್ತು ಮಲವಿಸರ್ಜನೆ ಗುಂಡಿಗಳನ್ನು ಬರಿಗೈಯಲ್ಲಿ ಸ್ವಚ್ಛಗೊಳಿಸುತ್ತಿದ್ದವರು (ಮ್ಯಾನುಯಲ್ ಸ್ಕ್ಯಾವೆಂಜರ್ಸ್‌) ಈಗ ನಿರಾಶ್ರಿತರಾಗಿದ್ದಾರೆ. ಅವರ ಜೀವನೋಪಾಯಕ್ಕಾಗಿ ಹಾಲಿನ ಬೂತ್, ಹಾಪ್ ಕಾಮ್ಸ್ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಕಾಯಂ ಉದ್ಯೊಗ ವ್ಯವಸ್ಥೆ ಮಾಡಿಕೊಡುವ ನಿಟ್ಟಿನಲ್ಲಿ ನೀತಿ ರೂಪಿಸಿ’ ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಡಾ. ಪಿ.ಪಿ.ವಾವ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದಲ್ಲಿ ಬಿಬಿಎಂಪಿ ಅಧಿಕಾರಿಗಳೊಂದಿಗೆ ಶುಕ್ರವಾರ ಸಭೆ ನಡೆಸಿದ ಅವರು, ‘ಈ ಕಾರ್ಮಿಕರು, ಒಳಚರಂಡಿ ಅಥವಾ ಮಲವಿಸರ್ಜನೆ ಗುಂಡಿಗಳಲ್ಲಿ ಇಳಿಯುವುದನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಮೊದಲು ಈ ಕೆಲಸ ಮಾಡುತ್ತಿದ್ದವರ ಜೀವನೋಪಾಯಕ್ಕಾಗಿ ಸರ್ಕಾರದಿಂದಲೇ ವ್ಯವಸ್ಥೆ ಮಾಡಬೇಕು’ ಎಂದರು.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 17 ಸಾವಿರ ಪೌರಕಾರ್ಮಿಕರು ನೇರ ವೇತನದಡಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಯಂ ಪೌರಕಾರ್ಮಿಕರನ್ನು ಹೊರತು ಪಡಿಸಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಪಾಲಿಕೆಯಿಂದ ನೇರ ವೇತನ ವ್ಯವಸ್ಥೆಯಡಿ ತಿಂಗಳ 7ನೇ ತಾರೀಖಿನ ವೇಳೆಗೆ ವೇತನವನ್ನು ನೀಡಲಾಗುತ್ತಿದೆ’ ಎಂದರು.

ADVERTISEMENT

‘ಪೌರಕಾರ್ಮಿಕರಿಗೆ ಸಮವಸ್ತ್ರವನ್ನು ನೀಡಲಾಗಿದ್ದು, ಸುರಕ್ಷಾ ಸಾಮಗ್ರಿಗಳನ್ನು ಒದಗಿಸಲಾಗಿದೆ. ಜೊತೆಗೆ ಪೌರಕಾರ್ಮಿಕರ ಕಾಲೊನಿಗಳಲ್ಲಿ ಆಗಿಂದಾಗ್ಗೆ ಸೋಂಕುನಿವಾರಕ ಸಿಂಪಡಣೆ ಹಾಗೂ ಮೂರು ತಿಂಗಳಿಗೊಮ್ಮೆ ಆರೋಗ್ಯ ಶಿಬಿರ ಮಾಡಲಾಗುತ್ತಿದೆ. ಪೌರಕಾರ್ಮಿಕರು ಕೆಲಸದ ಅವಧಿಯಲ್ಲಿ ಮೃತಪಟ್ಟರೆ ಅವರ ಅವಲಂಬಿತರಿಗೆ ₹10 ಲಕ್ಷ ಪರಿಹಾರವನ್ನು ನೀಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ವಿಶೇಷ ಆಯುಕ್ತ ಕೆ.ಹರೀಶ್ ಕುಮಾರ್, ರವೀಂದ್ರ, ಜಂಟಿ ಆಯುಕ್ತ ಸರ್ಫರಾಜ್ ಖಾನ್, ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ಬಸವರಾಜ ಕಬಾಡೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.