ADVERTISEMENT

ಶಿಥಿಲಾವಸ್ಥೆ ಕಟ್ಟಡ: ಮರು ಸಮೀಕ್ಷೆ 15 ದಿನಗಳ ಗಡುವು

2019ರ ಬಳಿಕ 10 ಕಟ್ಟಡ ನೆಲಸಮ: ಗೌರವ ಗುಪ್ತ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2021, 12:55 IST
Last Updated 29 ಸೆಪ್ಟೆಂಬರ್ 2021, 12:55 IST

ಬೆಂಗಳೂರು: ಲಕ್ಕಸಂದ್ರದಲ್ಲಿ ಬಹುಮಹಡಿ‌ ಕಟ್ಟಡ ಕುಸಿತ ಹಾಗೂ ಬೆಂಗಳೂರು ಹಾಲು ಒಕ್ಕೂಟದ (ಬಮೂಲ್) ಆವರಣದಲ್ಲಿದ್ದ ಎರಡು ಅಂತಸ್ತುಗಳ ಕಟ್ಟಡ ಭಾಗಶಃ ಕುಸಿದ ಘಟನೆಗಳಿಂದ ಎಚ್ಚೆತ್ತುಕೊಂಡಿರುವ ಬಿಬಿಎಂಪಿಯು ನಗರದಲ್ಲಿರುವ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಸಮಗ್ರ ಸಮೀಕ್ಷೆ ನಡೆಸಲು ಮುಂದಾಗಿದೆ. ಸಮೀಕ್ಷೆಯನ್ನು 15 ದಿನಗಳಲ್ಲಿ ಪೂರ್ಣಗೊಳಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ಗಡುವು ನಿಗದಿಪಡಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಶಿಥಿಲಾವಸ್ಥೆ ಕಟ್ಟಡಗಳ ಬಗ್ಗೆ 2019ರಲ್ಲಿ ಸಮೀಕ್ಷೆ ನಡೆಸಲಾಗಿತ್ತು. 185 ಕಟ್ಟಡಗಳು ಶಿಥಿಲಾವಸ್ಥೆಯಲ್ಲಿರುವುದು ಸಮೀಕ್ಷೆಯಲ್ಲಿ ಕಂಡುಬಂದಿತ್ತು. ಅವುಗಳಲ್ಲಿ ಬೀಳುವ ಹಂತದಲ್ಲಿದ್ದ 10 ಕಟ್ಟಡಗಳನ್ನು ನೆಲಸಮ ಮಾಡಲಾಗಿತ್ತು. ಬಿಬಿಎಂಪಿ ವ್ಯಾಪ್ತಿಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಮರು ಸಮೀಕ್ಷೆ ನಡೆಸಲು ಯೋಜನಾ ವಿಭಾಗದ ವಿಶೇಷ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚಿಸುವಂತೆ ಮುಖ್ಯ ಆಯುಕ್ತ ಗೌರವ ಗುಪ್ತ ಸೂಚನೆ ನೀಡಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ಸಮೀಕ್ಷೆ ಕೈಗೊಳ್ಳುವ ಕುರಿತು ಮುಖ್ಯ ಆಯುಕ್ತರು ಎಲ್ಲ ವಲಯದ ಅಧಿಕಾರಿಗಳ ಜೊತೆ ವರ್ಚುವಲ್ ರೂಪದಲ್ಲಿ ಬುಧವಾರ ಸಭೆ ನಡೆಸಿದರು. ‘ದುರ್ಬಲ ಕಟ್ಟಡಗಳ ಬಗ್ಗೆ ಸಮಿತಿಯು ಮರು ಸಮೀಕ್ಷೆ ನಡೆಸಬೇಕು. ಶಿಥಿಲಾವಸ್ಥೆಗೊಂಡಿರುವ ಕಟ್ಟಡಗಳು ಎಷ್ಟಿವೆ ಎಂಬ ಕುರಿತು 15 ದಿನಗಳಲ್ಲಿ ನಿಖರ ವರದಿ ನೀಡಬೇಕು’ ಎಂದೂ ಮುಖ್ಯ ಆಯುಕ್ತರು ಎಲ್ಲಾ ವಲಯಗಳ ಜಂಟಿ ಆಯುಕ್ತರು ಹಾಗೂ ಮುಖ್ಯ ಎಂಜಿನಿಯರ್‌ಗಳಿಗೆ ನಿರ್ದೇಶನ ನೀಡಿದರು.

ADVERTISEMENT

‘ಬೀಳುವ ಸ್ಥಿತಿಯಲ್ಲಿರುವ ಕಟ್ಟಡಗಳ ವಿವರಗಳನ್ನು ಮರು ಪರಿಶೀಲಿಸಲು ಆಯಾ ವಲಯಗಳಲ್ಲಿ ಸಂಬಂಧಪಟ್ಟ ಎಂಜಿನಿಯರ್‌ಗಳು ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡುವ ಮೂಲಕ ನಿಖರ ಮಾಹಿತಿಯನ್ನು ನೀಡಬೇಕು. ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ನೆಲಸಮ ಮಾಡಲು 15 ದಿನಗಳಲ್ಲಿ ವಲಯವಾರು ಗುತ್ತಿಗೆದಾರರನ್ನು ನೇಮಿಸಬೇಕು’ ಎಂದೂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

2019ರ ಸಮೀಕ್ಷೆಯಲ್ಲಿ ಗುರುತಿಸಲಾದ ಶಿಥಿಲಾವಸ್ಥೆಯ ಕಟ್ಟಡಗಳಲ್ಲಿ ಎಷ್ಟಕ್ಕೆ ನೋಟಿಸ್ ನೀಡಲಾಗಿದೆ, ಎಷ್ಟು ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ ಎಂಬುದರ ಬಗ್ಗೆ ಆಯುಕ್ತರು ಎಂಟೂ ವಲಯಗಳಿಂದ ಮಾಹಿತಿ ಪಡೆದರು. ಇನ್ನಷ್ಟೇ ನೆಲಸಮ ಮಾಡಬೇಕಿರುವ 175 ಶಿಥಿಲಾವಸ್ಥೆಯ ಕಟ್ಟಡಗಳ ಮಾಲೀಕರಿಗೆ ಶೀಘ್ರವೇ ನೋಟಿಸ್ ನೀಡಬೇಕು ಎಂದು ವಲಯ ಆಯುಕ್ತರು ಹಾಗೂ ಜಂಟಿ ಆಯುಕ್ತರುಗಳಿಗೆ ಸೂಚಿಸಿದರು.

ಎಲ್ಲ ವಲಯ ಆಯುಕ್ತರು, ಜಂಟಿ ಆಯುಕ್ತರು, ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು, ಎಲ್ಲಾ ವಲಯಗಳ ಮುಖ್ಯ ಎಂಜಿನಿಯರ್‌ಗಳು, ವಿಭಾಗೀಯ ಕಾರ್ಯಪಾಲಕ ಎಂಜಿನಿಯರ್‌ಗಳು ಉಪಸ್ಥಿತರಿದ್ದರು.

–0–

ಬಿಬಿಎಂಪಿ ವ್ಯಾಪ್ತಿಯ ಶಿಥಿಲ ಕಟ್ಟಡಗಳ ವಿವರ

(2019ರ ಸಮೀಕ್ಷೆ ಪ್ರಕಾರ)

ವಲಯ; ಶಿಥಿಲ ಕಟ್ಟಡಗಳು; ನೆಲಸಮ ಮಾಡಿರುವುದು

ದಕ್ಷಿಣ; 33; 8
ಪೂರ್ವ; 46; 0
ಪಶ್ಚಿಮ; 34; 0
ಮಹದೇವಪುರ; 3; 0
ಯಲಹಂಕ; 60; 0
ದಾಸರಹಳ್ಳಿ; 8; 01
ಆರ್.ಆರ್.ನಗರ; 01; 01
ಬೊಮ್ಮನಹಳ್ಳಿ; 0; 0

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.