ADVERTISEMENT

ಅನುದಾನ ದುರುಪಯೋಗದ ಶಂಕೆ: ವೈಟ್‌ಟಾಪಿಂಗ್‌, ಟೆಂಡರ್‌ಶ್ಯೂರ್‌ ತನಿಖೆ

ವೈಟ್‌ ಟಾಪಿಂಗ್‌ 3ನೇ ಹಂತದ ಕಾಮಗಾರಿಗೆ ತಡೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2019, 19:49 IST
Last Updated 19 ಆಗಸ್ಟ್ 2019, 19:49 IST
ಮೈಸೂರು ರಸ್ತೆಯಲ್ಲಿ ವೈಟ್‌ ಟಾಪಿಂಗ್‌ ಕಾಮಗಾರಿ
ಮೈಸೂರು ರಸ್ತೆಯಲ್ಲಿ ವೈಟ್‌ ಟಾಪಿಂಗ್‌ ಕಾಮಗಾರಿ   

ಬೆಂಗಳೂರು: ಮುಖ್ಯಮಂತ್ರಿ ನಗರೋತ್ಥಾನ ಯೋಜನೆಯಡಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೊಂಡಿರುವ ವೈಟ್‌ ಟಾಪಿಂಗ್‌ ಹಾಗೂ ಟೆಂಡರ್‌ ಶ್ಯೂರ್‌ ಕಾಮಗಾರಿಗಳ ಸಮಗ್ರ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ನಗರಾಭಿವೃದ್ಧಿ ಇಲಾಖೆಗೆ ಆದೇಶ ಮಾಡಿದ್ದಾರೆ.

ಈ ಕಾಮಗಾರಿಗಳಿಗೆ ಮಂಜೂರಾದ ಅನುದಾನದ ದುರುಪಯೋಗವಾಗಿದೆ ಎಂದು ಬಿಜೆಪಿ ಶಾಸಕರು ಹಾಗೂ ಮುಖಂಡರು ದೂರಿದ್ದರು.

ಇನ್ನಷ್ಟೇ ಆರಂಭವಾಗಬೇಕಿರುವ ವೈಟ್‌ ಟಾಪಿಂಗ್‌ ಮೂರನೇ ಹಂತದ ಕಾಮಗಾರಿಗಳ ಅನುಷ್ಠಾನವನ್ನು ತಡೆಹಿಡಿಯುವಂತೆಯೂ ಯಡಿಯೂರಪ್ಪ ಸೂಚಿಸಿದ್ದಾರೆ. ಮೂರನೇ ಹಂತದ ಕಾಮಗಾರಿಗೆ 2018–19ನೇ ಸಾಲಿನಲ್ಲಿ ₹ 1,139 ಕೋಟಿ ಮಂಜೂರಾಗಿತ್ತು.

ADVERTISEMENT

ಮುಖ್ಯಮಂತ್ರಿ ನಗರೋತ್ಥಾನ ಯೋಜನೆಯಡಿ ನಾಲ್ಕು ಪ್ಯಾಕೇಜ್‌ಗಳಲ್ಲಿ ಒಟ್ಟು 25 ರಸ್ತೆಗಳನ್ನು ಟೆಂಡರ್‌ಶ್ಯೂರ್‌ ಅಡಿ ಅಭಿವೃದ್ಧಿಪಡಿಸಲಾಗುತ್ತಿದೆ. ಎರಡು ಹಂತಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ಈ ಕಾಮಗಾರಿಗಳ ಪೈಕಿ ಮೊದಲ ಹಂತಕ್ಕೆ ₹ 201.79 ಕೋಟಿ ಹಾಗೂ ಎರಡನೇ ಹಂತದ ಕಾಮಗಾರಿಗಳಿಗಾಗಿ ₹ 442.99 ಕೋಟಿ ಅನುದಾನ ಮಂಜೂರಾಗಿತ್ತು. ಮೊದಲ ಹಂತದ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿವೆ. ಎರಡನೇ ಹಂತದ ಕಾಮಗಾರಿಗಳು ಪ್ರಗತಿಯಲ್ಲಿವೆ.

ಮೆಜೆಸ್ಟಿಕ್‌ ಆಸುಪಾಸಿನ ಬಹುತೇಕ ರಸ್ತೆಗಳನ್ನು ಟೆಂಡರ್‌ ಶ್ಯೂರ್‌ ಅಡಿ ಅಭಿವೃದ್ಧಿಪಡಿಸಲಾಗುತ್ತಿದೆ. ಧನ್ವಂತರಿ ಮುಖ್ಯ ರಸ್ತೆ ಹಾಗೂ 11 ಅಡ್ಡ ರಸ್ತೆಗಳ ಕಾಮಗಾರಿಗಳು ಈಗಾಗಲೇ ‍ಪೂರ್ಣಗೊಂಡಿವೆ. ಇನ್ನುಳಿದ 5 ಮುಖ್ಯರಸ್ತೆಗಳು ಹಾಗೂ 6 ಅಡ್ಡರಸ್ತೆಗಳ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. 600 ಮೀಟರ್ ಉದ್ದದ ಸುಬೇದಾರ್ ಛತ್ರ ರಸ್ತೆಯಲ್ಲಿ ಸುಮಾರು 400 ಮೀಟರ್‌ಗಳಷ್ಟು ಕಾಮಗಾರಿ ಪೂರ್ಣಗೊಂಡಿದೆ. 200 ಮೀ. ಉದ್ದದ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ಒಟ್ಟು ಮೂರು ಹಂತಗಳಲ್ಲಿ 159 ಪ್ರಮುಖ ರಸ್ತೆಗಳ ವೈಟ್‌ ಟಾಪಿಂಗ್‌ ಕಾಮಗಾರಿಗಳನ್ನು ಈ ಯೋಜನೆ ಅಡಿ ಅಭಿವೃದ್ಧಿಪಡಿಸಲಾಗುತ್ತಿದೆ. ಮೊದಲ ಹಂತದ ಕಾಮಗಾರಿಗಳಲ್ಲಿ ಬಹುತೇಕ ಪೂರ್ಣಗೊಂಡಿವೆ. ಎರಡನೇ ಹಂತ ದ ಕಾಮಗಾರಿಗಳು ಅನುಷ್ಠಾನ ಹಂತದಲ್ಲಿವೆ. 3ನೇ ಹಂತದ ಕಾಮಗಾರಿ ಗಳು ಇನ್ನಷ್ಟೇ ಆರಂಭವಾಗಬೇಕಿದೆ.

* ವೈಟ್ ಟಾಪಿಂಗ್ ಕಾಮಗಾರಿಗಳ ಬಗ್ಗೆ ತನಿಖೆ ನಡೆಸುವ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇನೆ. ತನಿಖೆಗೆ ಪಾಲಿಕೆ ಸಂಪೂರ್ಣ ಸಹಕಾರ ನೀಡಲಿದೆ

–ಗಂಗಾಂಬಿಕೆ, ಮೇಯರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.