ಬೆಂಗಳೂರು: ನಗರದಲ್ಲಿರುವ 20 ಲಕ್ಷ ಆಸ್ತಿಗಳಿಗೆ ಸಂಬಂಧಿಸಿದಂತೆ ಜಿಪಿಎಸ್ ದತ್ತಾಂಶಗಳೊಂದಿಗೆ ನಿಖರ ಮಾಹಿತಿ ಸಂಗ್ರಹಿಸಲು ಇದೇ ಮೊದಲ ಬಾರಿಗೆ ಮನೆ, ಮನೆ ಸಮೀಕ್ಷೆ ಆರಂಭಿಸಲು ಬಿಬಿಎಂಪಿ ಮುಂದಾಗಿದೆ.
ಇದಕ್ಕಾಗಿ ಬಿಬಿಎಂಪಿಯ ಕಂದಾಯ ವಿಭಾಗದ 150 ಅಧಿಕಾರಿಗಳಿಗೆ ನೆರವಾಗಲು 200 ಸಿಬ್ಬಂದಿಯನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗಿದೆ. ದತ್ತಾಂಶ ಸಂಗ್ರಹಕ್ಕೆ ಪ್ರತ್ಯೇಕ ಮೊಬೈಲ್ ಆ್ಯಪ್ ಕೂಡ ಸಿದ್ಧವಾಗಿದೆ.
ಆಸ್ತಿಗಳ ಫೋಟೊವನ್ನು ಆಸ್ತಿ ಗುರುತಿನ ಸಂಖ್ಯೆ ಹಾಗೂ ಆಸ್ತಿ ಇರುವ ಸ್ಥಳದ ಕುರಿತು ಜಿಪಿಎಸ್ ಮೂಲಕ ಸಂಗ್ರಹಿಸಿರುವ ಅಕ್ಷಾಂಶ ಮತ್ತು ರೇಖಾಂಶಗಳನ್ನು ಜೋಡಿಸುವ ಪ್ರಸ್ತಾವ ಯೋಜನೆಯಲ್ಲಿದೆ. ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದಿರುವ ಆಸ್ತಿಗಳನ್ನು ಗುರುತಿಸಲು ಅಧಿಕಾರಿಗಳಿಗೆ ನೆರವಾಗುವುದು ಮತ್ತು ಆಸ್ತಿ ತೆರಿಗೆ ಸಂಗ್ರಹ ಹೆಚ್ಚಿಸುವುದು ಯೋಜನೆಯ ಉದ್ದೇಶಗಳಲ್ಲಿ ಸೇರಿದೆ.
ಸಮೀಕ್ಷೆಗೆ ಬರುವ ಸಿಬ್ಬಂದಿ ಆಸ್ತಿಗಳ ಮಾಲೀಕರಿಂದ ತೆರಿಗೆ ಪಾವತಿ ರಸೀದಿ ಮತ್ತು ಬೆಸ್ಕಾಂ ವಿದ್ಯುತ್ ಶುಲ್ಕದ ಬಿಲ್ ಕೇಳಬಹುದು. ಕ್ರಯಪತ್ರ ಸೇರಿದಂತೆ ಬೇರೆ ಯಾವುದೇ ದಾಖಲೆಗಳನ್ನು ಕೇಳಲು ಅವಕಾಶ ಇರುವುದಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
‘ಎಲ್ಲ ಆಸ್ತಿಗಳ ಮಾಹಿತಿ ನಿಖರವಾಗಿ ಸಂಗ್ರಹಿಸುವುದರಿಂದ ತೆರಿಗೆ ವಂಚನೆ ತಪ್ಪಿಸಬಹುದು. ಈಗ ನಮ್ಮ ಬಳಿ ಪಿಐಡಿ ಸಂಖ್ಯೆಗಳು ಮಾತ್ರ ಇವೆ. ಅದರಿಂದ ಆಸ್ತಿಯನ್ನು ನಿಖರವಾಗಿ ಗುರುತಿಸಲು ಸಾಧ್ಯವಿಲ್ಲ. ಈ ಕಾರಣದಿಂದಾಗಿಯೇ ಬಿಬಿಎಂಪಿಗೆ ತೆರಿಗೆ ಸಂಗ್ರಹದಲ್ಲಿ ಹಿನ್ನಡೆಯಾಗುತ್ತಿದೆ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು.
‘ಜಿಪಿಎಸ್ ದತ್ತಾಂಶಗಳನ್ನು ಸಂಗ್ರಹಿಸಿದ ಬಳಿಕ ವಿಶ್ಲೇಷಣೆಗೆ ತಂಡವೊಂದನ್ನು ನೇಮಿಸಲಾಗುವುದು. ಉಪಗ್ರಹ ಚಿತ್ರಗಳು ಸೇರಿದಂತೆ ವಿವಿಧ ಮೂಲಗಳ ದಾಖಲೆಗಳೊಂದಿಗೆ ತಾಳೆಮಾಡಿ ಪರಿಶೀಲಿಸಲಾಗುವುದು’ ಎಂದರು.
ಆಸ್ತಿ ತೆರಿಗೆಗೆ ಸಂಬಂಧಿಸಿದ ದಾಖಲೆಗಳ ಡಿಜಿಟಲೀಕರಣದ ಭಾಗವಾಗಿ ಇಂತಹ ಸಮೀಕ್ಷೆ ನಡೆಸುವುದಾಗಿ ಬಿಬಿಎಂಪಿ ಕಳೆದ ನವೆಂಬರ್‌ನಲ್ಲಿ ಪ್ರಕಟಿಸಿತ್ತು. ಈ ಯೋಜನೆಗೆ ಸಹಕಾರ ಕೋರಿ ಆಸ್ತಿಗಳ ಮಾಲೀಕರಿಗೆ ಎಸ್‌ಎಂಎಸ್ ಮೂಲಕ ಮನವಿಯನ್ನೂ ಕಳುಹಿಸಿತ್ತು. ಲೋಕಸಭಾ ಚುನಾವಣೆಯ ಕೆಲಸಗಳ ಒತ್ತಡ ಹೆಚ್ಚಿರುವುದಾಗಿ ಕಂದಾಯ ವಿಭಾಗದ ಅಧಿಕಾರಿಗಳು ಹೇಳಿದ್ದರಿಂದ ಸಮೀಕ್ಷೆ ನನೆಗುದಿಗೆ ಬಿದ್ದಿತ್ತು. ಆ ಬಳಿಕ ಸಮೀಕ್ಷೆಗಾಗಿ ಪ್ರತ್ಯೇಕ ತಂಡ ರಚನೆಗೆ ತೀರ್ಮಾನಿಸಲಾಗಿತ್ತು.
2024–25ರ ಆಸ್ತಿ ತೆರಿಗೆ ಪಾವತಿ ಸಂದರ್ಭದಲ್ಲೇ ಆಸ್ತಿಗಳಿರುವ ಸ್ಥಳದ ಅಕ್ಷಾಂಶ ಮತ್ತು ರೇಖಾಂಶಗಳ ವಿವರಗಳನ್ನು ನಮೂದಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು. ಹೆಚ್ಚಿನ ಆಸ್ತಿ ಮಾಲೀಕರಿಗೆ ಇದರಿಂದ ತೆರಿಗೆ ಪಾವತಿ ಅಸಾಧ್ಯವಾಗಿದ್ದರಿಂದ ಆಸ್ತಿ ಮಾಲೀಕರ ಆಯ್ಕೆಯ ಅವಕಾಶವನ್ನು ಬಿಡಲಾಗಿತ್ತು.
ದೆಹಲಿ ಮಹಾನಗರ ಪಾಲಿಕೆಯು ಈ ರೀತಿ ಆಸ್ತಿಗಳ ನಿಖರ ಮಾಹಿತಿ ಸಂಗ್ರಹಿಸಿತ್ತು. ಆಸ್ತಿಗಳ ಅಕ್ಷಾಂಶ ಮತ್ತು ರೇಖಾಂಶದ ಮಾಹಿತಿಯನ್ನು ಸಲ್ಲಿಸಿದವರಿಗೆ ಆಸ್ತಿ ತೆರಿಗೆಯಲ್ಲಿ ಶೇ 10ರಷ್ಟು ರಿಯಾಯಿತಿಯನ್ನೂ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.