ADVERTISEMENT

ಕಾಮಗಾರಿ ನಿಧಾನ: ಸಂಚಾರಕ್ಕೆ ಅಡ್ಡಿ

ಮಳೆ ಸುರಿದರೆ ನೀರು ನಿಂತು ಅವಾಂತರ l ಅವೈಜ್ಞಾನಿಕ ಕೆಲಸದಿಂದ ರಸ್ತೆಗಳಲ್ಲಿ ಗುಂಡಿ

​ಪ್ರಜಾವಾಣಿ ವಾರ್ತೆ
Published 17 ಮೇ 2024, 21:09 IST
Last Updated 17 ಮೇ 2024, 21:09 IST
ಜಯಮಹಲ್ ರಸ್ತೆಯಲ್ಲಿ ನಡೆದಿರುವ ಒಳಚರಂಡಿ ನಿರ್ಮಾಣ ಕಾಮಗಾರಿ
ಜಯಮಹಲ್ ರಸ್ತೆಯಲ್ಲಿ ನಡೆದಿರುವ ಒಳಚರಂಡಿ ನಿರ್ಮಾಣ ಕಾಮಗಾರಿ   

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ಜಲಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ವತಿಯಿಂದ ನಗರದ ಹಲವೆಡೆ ಕಾಮಗಾರಿಗಳು ನಿಧಾನಗತಿಯಲ್ಲಿ ನಡೆಯುತ್ತಿದ್ದು, ಇದರಿಂದಾಗಿ ಜನರ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ.

‘ಮೆಗ್ರಾತ್ ರಸ್ತೆ, ಜಯಮಹಲ್ ರಸ್ತೆ ಹಾಗೂ ಸುತ್ತಮುತ್ತ ರಸ್ತೆಗಳಲ್ಲಿ ಒಳಚರಂಡಿ ನಿರ್ಮಾಣ ಕಾಮಗಾರಿ ಆರಂಭಿಸಿ ಹಲವು ತಿಂಗಳಾಗಿದೆ. ಆದರೆ, ಇದುವರೆಗೂ ಪೂರ್ಣಗೊಂಡಿಲ್ಲ. ಕಾಮಗಾರಿಗಾಗಿ ರಸ್ತೆಯನ್ನು ಅಗೆಯಲಾಗಿದ್ದು, ಕಾಮಗಾರಿ ಪೂರ್ಣಗೊಂಡ ಕೆಲ ಜಾಗವನ್ನು ಅವೈಜ್ಞಾನಿಕವಾಗಿ ಮುಚ್ಚಲಾಗಿದೆ. ಇದರಿಂದಾಗಿ ರಸ್ತೆಗಳಲ್ಲಿ ಗುಂಡಿಗಳಾಗಿವೆ’ ಎಂದು ಸ್ಥಳೀಯರು ದೂರಿದರು.

‘ಮಳೆ ಸುರಿದ ಸಂದರ್ಭದಲ್ಲಿ ಕಾಮಗಾರಿ ಸ್ಥಳದಲ್ಲಿ ನೀರು ನಿಲ್ಲುತ್ತಿದ್ದು, ರಸ್ತೆಗಳು ಹಾಳಾಗುತ್ತಿವೆ. ಎಲ್ಲೆಂದ
ರಲ್ಲಿ ಗುಂಡಿಗಳು ಬಿದ್ದಿದ್ದು, ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗು
ತ್ತಿದೆ’ ಎಂದು ಅವರು ಬೇಸರ ವ್ಯಕ್ತ
ಪಡಿಸಿದರು.

ADVERTISEMENT

‘ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಹಾಗೂ ಬೆಂಗಳೂರು ಜಲಮಂಡಳಿ(ಬಿಡಬ್ಲ್ಯುಎಸ್‌ಎಸ್‌ಬಿ) ಅಧಿಕಾರಿಗಳು, ಕಾಮಗಾರಿಯನ್ನು ಕೆಲ ಕಂಪನಿಗಳಿಗೆ ಗುತ್ತಿಗೆ ನೀಡಿದ್ದಾರೆ. ಆದರೆ, ಕಂಪನಿಯವರು ನಿಗದಿತ ಸಮಯಕ್ಕೆ ಕಾಮಗಾರಿ ಪೂರ್ಣಗೊಳಿಸುತ್ತಿಲ್ಲ. ಇದರಿಂದಾಗಿಯೇ ಮೆಗ್ರಾತ್ ರಸ್ತೆ ಹಾಗೂ ಜಯಮಹಲ್ ರಸ್ತೆಗಳಲ್ಲಿ ಜನರ ಓಡಾಟ ಕಷ್ಟವಾಗಿದೆ’ ಎಂದು ಹೇಳಿದರು.

‘ನಿಗದಿಯಂತೆ ಕಾಮಗಾರಿ ನಡೆಯುತ್ತಿದೆ. ಒಳಚರಂಡಿ ಪೈಪ್‌ಗಳನ್ನು ಬದಲಾಯಿಸಲಾಗಿದೆ. ಮಳೆಗಾಲದ ಆರಂಭಕ್ಕೂ ಮುನ್ನವೇ ಕಾಮಗಾರಿ ಮುಗಿಸುವ ಗುರಿ ಇಟ್ಟುಕೊಂಡಿದ್ದೇವೆ’ ಎಂದು ಕಾಮಗಾರಿ ಕುರಿತು
ಬಿಡಬ್ಲ್ಯುಎಸ್‌ಎಸ್‌ಬಿ ಎಂಜಿನಿಯರ್‌ವೊಬ್ಬರು ಮಾಹಿತಿ ನೀಡಿದರು. 

ಸಂಚಾರ ದಟ್ಟಣೆ: ‘ನಗರದಲ್ಲಿ ಇತ್ತೀಚೆಗೆ ಮಳೆ ಸುರಿದ ಸಂದರ್ಭದಲ್ಲಿ ಮೆಗ್ರಾತ್ ರಸ್ತೆ ಹಾಗೂ ಜಯಮಹಲ್ ರಸ್ತೆಯಲ್ಲಿ ನೀರು ಹರಿದಿತ್ತು. ಕಾಮಗಾರಿಗಾಗಿ ಅಗೆಯಲಾಗಿದ್ದ ಜಾಗದಲ್ಲಿ ನೀರು ನಿಂತುಕೊಂಡು, ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಇದರಿಂದಾಗಿ ಕಿ.ಮೀ.ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತು, ವಿಪರೀತ ದಟ್ಟಣೆ ಕಂಡುಬಂದಿತ್ತು’ ಎಂದು ಸ್ಥಳೀಯರು ಹೇಳಿದರು.

‘ನಿತ್ಯವೂ ಇದೇ ರಸ್ತೆಯಲ್ಲಿ ಓಡಾಡುತ್ತೇನೆ. ಕಾಮಗಾರಿ ಆರಂಭವಾದಾಗಿನಿಂದ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಆದಷ್ಟು ಬೇಗನೇ ಕಾಮಗಾರಿ ಮುಕ್ತಾಯಗೊಳಿಸ ಬೇಕು’ ಎಂದು ಬೈಕ್ ಸವಾರರೊಬ್ಬರು ಆಗ್ರಹಿಸಿದರು.

‘ಬೆಳಿಗ್ಗೆ ಹಾಗೂ ಸಂಜೆ ಸಂದರ್ಭದಲ್ಲಿ ವಿಪರೀತ ದಟ್ಟಣೆ ಉಂಟಾಗುತ್ತಿದೆ. 300 ಮೀಟರ್ ಉದ್ದದ ಮೆಗ್ರಾತ್ ರಸ್ತೆಯಲ್ಲಿ ಸಂಚರಿಸಲು 2 ನಿಮಿಷದಿಂದ 30 ನಿಮಿಷ ಬೇಕಾಗುತ್ತಿದೆ’ ಎಂದು ಹೇಳಿದರು.

‘ರಸ್ತೆಯನ್ನು ಅಗೆದು ಒಳಚರಂಡಿ ನಿರ್ಮಾಣ ಮಾಡಲಾಗುತ್ತಿದೆ. ಮಳೆ ಬಂದ ಸಂದರ್ಭದಲ್ಲಿ, ಅಗೆದ ಸ್ಥಳದಲ್ಲಿ ನೀರು ತುಂಬಿಕೊಳ್ಳುತ್ತಿದೆ. ಅದೇ ನೀರು ರಸ್ತೆ ಮೇಲೆ ಹರಿದು ಜನರಿಗೆ ತೊಂದರೆ ಉಂಟಾಗುತ್ತಿದೆ. ಹೆಚ್ಚು ವಾಹನಗಳು ಸಂಚರಿಸುವ ಸಮಯದಲ್ಲಂತೂ ಜನರ ಗೋಳು ಹೇಳತೀರದು’ ಎಂದು ಸ್ಥಳೀಯರು ಅಳಲು ತೋಡಿಕೊಂಡರು.

ಮೆಗ್ರಾತ್ ರಸ್ತೆಯಲ್ಲಿ ನಡೆದಿರುವ ಒಳಚರಂಡಿ ನಿರ್ಮಾಣ ಕಾಮಗಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.