ADVERTISEMENT

ಬಿಡಿಎ: 3 ವರ್ಷದಲ್ಲಿ 6 ಸಾವಿರ ಫ್ಲ್ಯಾಟ್‌

ಪ್ರಸ್ತುತ ವರ್ಷ ಯೋಜನೆಗೆ ₹300 ಕೋಟಿ ವೆಚ್ಚ; ಎಂಜಿನಿಯರ್‌ಗಳಿಂದ ಕೆಲವು ಯೋಜನೆಯಲ್ಲಿ ವಿಳಂಬ

ಆರ್. ಮಂಜುನಾಥ್
Published 9 ಸೆಪ್ಟೆಂಬರ್ 2023, 19:19 IST
Last Updated 9 ಸೆಪ್ಟೆಂಬರ್ 2023, 19:19 IST
ಕೋಣದಾಸನಪುರದಲ್ಲಿ ನಿರ್ಮಾಣ ಹಂತದಲ್ಲಿರುವ ಬಿಡಿಎ 2–3 ಬಿಎಚ್‌ಕೆ ಫ್ಲ್ಯಾಟ್‌
ಕೋಣದಾಸನಪುರದಲ್ಲಿ ನಿರ್ಮಾಣ ಹಂತದಲ್ಲಿರುವ ಬಿಡಿಎ 2–3 ಬಿಎಚ್‌ಕೆ ಫ್ಲ್ಯಾಟ್‌   

ಬೆಂಗಳೂರು: ವಸತಿ ಆಕಾಂಕ್ಷಿಗಳಿಗೆ ಹೆಚ್ಚಿನ ಅವಕಾಶ ನೀಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮುಂದಾಗಿದೆ. ಮೂರು ವರ್ಷಗಳಲ್ಲಿ ಸುಮಾರು ಆರು ಸಾವಿರ ಫ್ಲ್ಯಾಟ್‌ಗಳನ್ನು ನೀಡುವ ಯೋಜನೆ ಕಾರ್ಯಗತವಾಗುವ ಹಂತದಲ್ಲಿವೆ.

ಬಿಡಿಎ ವಸತಿ ಯೋಜನೆಗೆ ಹೆಚ್ಚಿನ ಪ್ರಾಮುಖ್ಯ ನೀಡಿದ್ದು, ಇವುಗಳ ಆರಂಭಕ್ಕೆ ಈ ವರ್ಷದ ಬಜೆಟ್‌ನಲ್ಲಿ ₹298 ಕೋಟಿಗಳನ್ನು ವೆಚ್ಚ ಮಾಡಲು ನಿರ್ಧರಿಸಲಾಗಿದೆ. ಒಟ್ಟಾರೆ ₹1,500 ಕೋಟಿ ವೆಚ್ಚದ ಅಂದಾಜು ಮಾಡಲಾಗಿದೆ. ಇದರಲ್ಲಿ ಹಲವು ಯೋಜನೆಗಳು ಪ್ರಾರಂಭವಾಗಿದ್ದರೆ, ಕೆಲವು ಯೋಜನೆಗಳ ಪ್ರಕ್ರಿಯೆಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಸರ್ವ ಯೋಜನೆಗಳ ಉಸ್ತುವಾರಿ ಹೊಂದಿರುವ ಅಧಿಕಾರಿಗಳ ಮೇಜಿನ ಮೇಲೇ ಕಡತ ವಿಲೇವಾರಿಗೆ ಬಾಕಿ ಇದೆ.

ಕೋಣದಾಸನಪುರ, ಕೊಮ್ಮಘಟ್ಟ, ಕಣಿಮಿಣಿಕೆ, ದೊಡ್ಡತೋಗೂರು, ಕುದುರೆಗೆರೆ ಸೇರಿದಂತೆ ಒಟ್ಟು 11 ವಸತಿ ಯೋಜನೆಗಳಲ್ಲಿ ಫ್ಲ್ಯಾಟ್‌ಗಳನ್ನು ನಿರ್ಮಿಸಲಾಗುತ್ತಿದೆ. ವಸತಿ ಯೋಜನೆಗಳನ್ನು ಯೋಜನೆ–1 ಮತ್ತು ಯೋಜನೆ–2 ಎಂದು ವಿಂಗಡಿಸಲಾಗಿದೆ. ಯೋಜನೆ–1ರಲ್ಲಿ ಕೆಲವು ಯೋಜನೆಗಳು ಪ್ರಗತಿ ಕ್ಷಿಪ್ರವಾಗಿದ್ದು, ಇನ್ನುಳಿದವು ಟೆಂಡರ್‌ ಸಿದ್ಧಪಡಿಸುವ ಹಂತದಲ್ಲೇ ಹೆಚ್ಚು ಸಮಯ ವ್ಯರ್ಥ ಮಾಡಲಾಗುತ್ತಿದೆ.

ADVERTISEMENT

ಯೋಜನೆ–2ರಲ್ಲಿ ಬೃಹತ್‌ ಯೋಜನೆಯೊಂದು ಮಾತ್ರ ಇದೆ. ಕೋಣದಾಸನಪುರದಲ್ಲಿ ಸುಮಾರು 2 ಸಾವಿರ ಫ್ಲ್ಯಾಟ್‌ಗಳನ್ನು ನಿರ್ಮಿಸುವ ಯೋಜನೆ ಇದಾಗಿದ್ದು, ₹200 ಕೋಟಿ ಈ ಬಜೆಟ್‌ನಲ್ಲಿ ಮೀಸಲಿಡಲಾಗಿದೆ. ಆದರೆ, ಎಂಜಿನಿಯರ್‌ಗಳ ಸೋಮಾರಿತನದಿಂದ ಯೋಜನೆ ಆಮೆಗತಿಯಲ್ಲಿದೆ. ಟೆಂಡರ್ ಮುಗಿದ ಮೇಲೆ 30 ತಿಂಗಳಲ್ಲಿ ಯೋಜನೆ ಪೂರ್ಣಗೊಳ್ಳಬೇಕಿದೆ. ಹೀಗಾಗಿ, ಬಿಡಿಎ ಹಿರಿಯ ಅಧಿಕಾರಿಗಳು ಯೋಜನೆಯನ್ನು ಬೇಗ ಆರಂಭಿಸಲು ಸೂಚಿಸಿದ್ದಾರೆ. ಯೋಜನೆ ಉಸ್ತುವಾರಿಯಿಂದ ಅನುಷ್ಠಾನಗೊಳಿಸುವವರೆಗಿನ ಎಂಜಿನಿಯರ್‌ಗಳಿಂದ ಯೋಜನೆ ವಿಳಂಬವಾಗುತ್ತಿದೆ ಎಂಬ ದೂರು ಬಿಡಿಎ ಅಧಿಕಾರಿಗಳಿಂದಲೇ ವ್ಯಕ್ತವಾಗಿದೆ.

ಈ ಬಗ್ಗೆ ಪ್ರತಿಕ್ರಿಯೆಗೆ ಬಿಡಿಎ ಆಯುಕ್ತ ಕುಮಾರ್‌ ನಾಯಕ್‌, ಎಂಜಿನಿಯರ್‌ ಸದಸ್ಯ ಶಾಂತ ರಾಜಣ್ಣ ಸಂಪರ್ಕಕ್ಕೆ ಲಭ್ಯವಾಗಲಿಲ್ಲ.

₹820 ಕೋಟಿ: ಕಣಿಮಿಣಿಕೆ 1 ಮತ್ತು 2ನೇ ಯೋಜನೆಯಲ್ಲಿ ಸುಮಾರು ಒಂದು ಸಾವಿರ ಫ್ಲ್ಯಾಟ್‌ಗಳನ್ನು ನಿರ್ಮಿಸಲಾಗುತ್ತಿದ್ದು, ಈ ಯೋಜನೆಗೆ ಮರು ಟೆಂಡರ್‌ ಕರೆಯಲಾಗಿದೆ. ಕೋಣದಾಸನಪುರ–3, ವಲಗೇರಹಳ್ಳಿ, ದೊಡ್ಡತೋಗೂರು, ಕುದುರೆಗೆರೆ ಯೋಜನೆಗಳನ್ನು ₹820 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಸೊನ್ನೇನಹಳ್ಳಿ ಯೋಜನೆ ಒಂದಷ್ಟು ಕೋಟಿ ವೆಚ್ಚವಾಗಿದ್ದು, ಭೂವ್ಯಾಜ್ಯದಿಂದ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದೆ. ಹೆಚ್ಚಿನ ಫ್ಲ್ಯಾಟ್‌ಗಳನ್ನು ಒದಗಿಸಬೇಕಾದ ವಸತಿ ಯೋಜನೆ–2ರಲ್ಲಿ ಎಂಜಿನಿಯರ್‌ಗಳು ಆಲಸ್ಯದಿಂದಿದ್ದಾರೆ. ಉಸ್ತುವಾರಿ ಎಂಜಿನಿಯರ್‌ಗಳಿಂದ ಹಿಡಿದು ಅನುಷ್ಠಾನದವರೆಗಿನ ಎಂಜಿನಿಯರ್‌ಗಳನ್ನು ಏನೇ ಕೇಳಿದರೂ ‘ಮಾಹಿತಿ ಇಲ್ಲ’ ಎಂದೇ ಹೇಳುತ್ತಾರೆ.

ವಸತಿ ಯೋಜನೆಗಳ ಜೊತೆಗೆ ಕೋಣದಾಸನಪುರ 3ನೇ ಹಂತದಲ್ಲಿ ವಾಣಿಜ್ಯ ಸಂಕೀರ್ಣ ₹50 ಕೋಟಿ ವೆಚ್ಚದಲ್ಲಿ ನಿರ್ಮಾಣ ಆರಂಭಿಸಲಾಗಿದೆ. ಈ ವರ್ಷ ₹5 ಕೋಟಿ ವೆಚ್ಚ ಮಾಡಲಾಗುತ್ತಿದೆ, ಇದಲ್ಲದೆ, ಕಣಿಮಿಣಿಕೆಯಲ್ಲಿ ಕ್ಲಬ್‌ ಹೌಸ್‌ ಅನ್ನು ಬಿಡಿಎ ನಿರ್ಮಾಣ ಮಾಡುತ್ತಿದೆ.

ಹುಣ್ಣಿಗೆರೆ ವಿಲ್ಲಾ ಪೂರ್ಣ

ಬಿಡಿಎ ಹುಣ್ಣಿಗೆರೆಯಲ್ಲಿ 322 ವಿಲ್ಲಾಗಳನ್ನು ನಿರ್ಮಿಸಿದೆ. ಈ ಯೋಜನೆ ಬಹುತೇಕ ಪೂರ್ಣ ಗೊಂಡಿದ್ದು, ದರ ನಿಗದಿ ಮಾರಾಟಕ್ಕೆ ಆದೇಶ ಹೊರಬರಬೇಕಿದೆ. ಆನ್‌ಲೈನ್‌ನಲ್ಲಿ ‘ಮೊದಲು ಬಂದವರಿಗೆ ಆದ್ಯತೆ’ ಯೋಜನೆಯಡಿ ಈ ವಿಲ್ಲಾಗಳನ್ನು ಮಾರಾಟ ಮಾಡಲು ನಿರ್ಧರಿಸಲಾಗಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದರು. ‘ಪುನೀತ್‌ ರಾಜ್‌ಕುಮಾರ್‌ ವಸತಿ ಸಂಕೀರ್ಣ’ ಎಂದು ಈ ಯೋಜನೆಗೆ ಹೆಸರಿಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.