ADVERTISEMENT

ಬಿಡಿಎ: ಪರ್ಯಾಯ ನಿವೇಶನ ಹಂಚಿಕೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2024, 16:32 IST
Last Updated 1 ಆಗಸ್ಟ್ 2024, 16:32 IST
ಸುರೇಶ್‌ ಕುಮಾರ್ 
ಸುರೇಶ್‌ ಕುಮಾರ್    

ಬೆಂಗಳೂರು: ‘ಬನಶಂಕರಿ 6ನೇ ಹಂತದ ಬಡಾವಣೆಯಲ್ಲಿ 1500ಕ್ಕೂ ಹೆಚ್ಚು ನಿವೇಶನ ಮಾಲೀಕರಿಗೆ ಡಾ.ಶಿವರಾಮ ಕಾರಂತ ಬಡಾವಣೆಯಲ್ಲಿ ಪರ್ಯಾಯ ನಿವೇಶನಗಳನ್ನು ಹಂಚಬೇಕು’ ಎಂದು ಶಾಸಕ ಸುರೇಶ್‌ ಕುಮಾರ್‌ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಪತ್ರ ಬರೆದಿದ್ದಾರೆ.

‘ಬನಶಂಕರಿ 6ನೇ ಹಂತದ ಬಡಾವಣೆಯಲ್ಲಿ, ಬಿಡಿಎ ಅರಣ್ಯ ಪ್ರದೇಶದಲ್ಲಿ (ತುರಹಳ್ಳಿ ಅರಣ್ಯ ಪ್ರದೇಶ) ಮತ್ತು ಅರಣ್ಯ ಪ್ರದೇಶದ ಬಫರ್ ವಲಯದಲ್ಲಿ 2003-2004 ರಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಇದರಿಂದ ಅಲ್ಲಿನ 1,500ಕ್ಕೂ ಹೆಚ್ಚು ನಿವೇಶನಗಳ ಮಾಲೀಕರು ಮನೆಗಳನ್ನು ನಿರ್ಮಿಸಲು ಸಾಧ್ಯವಾಗಿರುವುದಿಲ್ಲ. 20 ವರ್ಷ ಕಳೆದರೂ ಬಿಡಿಎ, ಅರಣ್ಯ ಇಲಾಖೆ ಅಧಿಕಾರಿಗಳು ಜಮೀನು ಮಾಲೀಕತ್ವದ ಬಗ್ಗೆ ಒಪ್ಪಂದಕ್ಕೆ ಬರಲು ಸಾಧ್ಯವಾಗಿಲ್ಲ’ ಎಂದಿದ್ದಾರೆ.

‘ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ವಿವಿಧ ನ್ಯಾಯಾಲಯಗಳಲ್ಲಿ ಅನೇಕ ದಾವೆಗಳು ಬಾಕಿ ಇರುವುದರಿಂದ ಬನಶಂಕರಿ 6ನೇ ಹಂತ, ಅರ್ಕಾವತಿ ಲೇಔಟ್, ವಿಶ್ವೇಶ್ವರಯ್ಯ ಲೇಔಟ್ ಹಾಗೂ ಅಂಜನಾಪುರದಂತಹ ಬಿಡಿಎ ಅಭಿವೃದ್ಧಿಪಡಿಸಿರುವ ಕೆಲವು ಬಡಾವಣೆಗಳಲ್ಲಿನ ಸುಮಾರು ಐದು ಸಾವಿರಕ್ಕೂ ಹೆಚ್ಚು ನಿವೇಶನಗಳ ಮಾಲೀಕರು ಜಮೀನಿನ ನೈಜ ಸ್ವಾಧೀನದಲ್ಲಿಲ್ಲದ ಕಾರಣ ಮನೆಗಳನ್ನು ಕಟ್ಟಿಕೊಳ್ಳಲು ಸಾಧ್ಯವಾಗಿಲ್ಲ. ಅವರ ಪರಿಸ್ಥಿತಿ, ಸಂಕಟ ಹೇಳತೀರದು’ ಎಂದು ಹೇಳಿದ್ದಾರೆ.

ADVERTISEMENT

‘ಈ ಕಾರಣದಿಂದ ನಿವೇಶನದಾರರ ಕುಂದು ಕೊರತೆಗಳನ್ನು ಆದ್ಯತೆಯ ಮೇರೆಗೆ ಪರಿಗಣಿಸಿ, ಡಾ. ಶಿವರಾಮ ಕಾರಂತ ಬಡಾವಣೆಯಲ್ಲಿ ಲಭ್ಯವಿರುವ ನಿವೇಶನಗಳನ್ನು ಸಾರ್ವಜನಿಕರಿಂದ ಹಂಚಿಕೆಗಾಗಿ ಅರ್ಜಿಗಳನ್ನು ಆಹ್ವಾನಿಸುವ ಮುನ್ನ, ಈ ಸಂತ್ರಸ್ತರಿಗೆ ಪರ್ಯಾಯ ನಿವೇಶನ ನೀಡಬೇಕು’ ಎಂದು ಸುರೇಶ್‌ ಕುಮಾರ್‌ ವಿನಂತಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.