ADVERTISEMENT

ಬೆಂಗಳೂರು: ಶಾಲೆ ಜಾಗದಲ್ಲಿ ಸಿಮೆಂಟ್ ಟ್ರಕ್‌ಗಳು

ಬಿಡಿಎ ಸರ್‌ ಎಂ. ವಿಶ್ವೇಶ್ವರಯ್ಯ ಬಡಾವಣೆ 6ನೇ ಬ್ಲಾಕ್‌ ಸಿ.ಎ. ನಿವೇಶನದಲ್ಲಿ ವಾಣಿಜ್ಯ ಚಟುವಟಿಕೆ

ಆರ್. ಮಂಜುನಾಥ್
Published 28 ಆಗಸ್ಟ್ 2023, 23:49 IST
Last Updated 28 ಆಗಸ್ಟ್ 2023, 23:49 IST
ಸರ್‌ ಎಂ. ವಿಶ್ವೇಶ್ವರಯ್ಯ ಬಡಾವಣೆ 6ನೇ ಬ್ಲಾಕ್‌ನಲ್ಲಿ ‘ಪಾಲಿ ವಿದ್ಯಾಸಂಸ್ಥೆ’ ನಿವೇಶನದಲ್ಲಿ ಸಿಮೆಂಟ್‌ ಟ್ರಕ್‌ಗಳ ಕಾರ್ಯಾಚರಣೆ ನಡೆಯುತ್ತಿರುವುದು
ಸರ್‌ ಎಂ. ವಿಶ್ವೇಶ್ವರಯ್ಯ ಬಡಾವಣೆ 6ನೇ ಬ್ಲಾಕ್‌ನಲ್ಲಿ ‘ಪಾಲಿ ವಿದ್ಯಾಸಂಸ್ಥೆ’ ನಿವೇಶನದಲ್ಲಿ ಸಿಮೆಂಟ್‌ ಟ್ರಕ್‌ಗಳ ಕಾರ್ಯಾಚರಣೆ ನಡೆಯುತ್ತಿರುವುದು   

ಬೆಂಗಳೂರು: ಸರ್‌ ಎಂ. ವಿಶ್ವೇಶ್ವರಯ್ಯ ಬಡಾವಣೆ 6ನೇ ಬ್ಲಾಕ್‌ನಲ್ಲಿ ಶಾಲೆ–ಕಾಲೇಜು ನಿರ್ಮಾಣ ಮಾಡಲು ಹಂಚಿಕೆಯಾಗಿರುವ ನಾಗರಿಕ ಸೌಲಭ್ಯ ನಿವೇಶನದಲ್ಲಿ ವಾಣಿಜ್ಯ ಚಟುವಟಿಕೆ ನಡೆಯುತ್ತಿದ್ದು, ಈ ಬಗ್ಗೆ ತನಿಖೆ ನಡೆಸಲು ಬಿಡಿಎ ಮುಂದಾಗಿದೆ.

6ನೇ ಬ್ಲಾಕ್‌ನಲ್ಲಿ ನಂ.5/ಎ ಸಿ.ಎ ನಿವೇಶನವನ್ನು ‘ಪಾಲಿ ಎಜುಕೇಷನ್‌ ಸೊಸೈಟಿಗೆ’ ಬಿಡಿಎ ಮಂಜೂರು ಮಾಡಿದೆ. ‘ಪಾಲಿ ವಿದ್ಯಾಸಂಸ್ಥೆ ಸ್ವತ್ತು’ ಎಂದು ಕಾಂಪೌಂಡ್‌ ಮೇಲೆ ದೊಡ್ಡದಾಗಿ ಬರೆಯಲಾಗಿದೆ. ಆದರೆ, ಈ ನಿವೇಶನದಲ್ಲಿ ಸಿಮೆಂಟ್‌ ದಾಸ್ತಾನು ಮಾಡುತ್ತಿದ್ದು, ಹತ್ತಾರು ದೊಡ್ಡ ಟ್ರಕ್‌ಗಳು ಇಲ್ಲಿ ನಿಲುಗಡೆ ಆಗುತ್ತಿವೆ. ಟ್ರಕ್‌ಗಳಿಂದ ನೂರಾರು ಚಿಕ್ಕ ಲಾರಿ, ಟೆಂಪೊಗಳಿಗೆ ಸಿಮೆಂಟ್‌ ವರ್ಗಾಯಿಸುವ ಚಟುವಟಿಕೆ ಕೆಲವು ತಿಂಗಳಿಂದ ಇಲ್ಲಿ ನಡೆಯುತ್ತಿದೆ.

‘ಸಾಮಾಜಿಕ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ನಾಗರಿಕ ಸೌಲಭ್ಯ (ಸಿ.ಎ) ನಿವೇಶನವನ್ನು ಹಂಚಿಕೆ ಮಾಡಿಸಿಕೊಂಡಿರುವ ಪಾಲಿ ಎಜುಕೇಷನ್ ಸೊಸೈಟಿ, ನಿವೇಶನವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಸ್ಥಳೀಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಚಟುವಟಿಕೆ ಇಲ್ಲಿ ನಡೆಯುತ್ತಿದೆ’ ಎಂದು ನುಗ್ಗಿಪಾಳ್ಯದ ನಿವಾಸಿಗಳು ದೂರು ನೀಡಿದ್ದಾರೆ.

ADVERTISEMENT

ಬಿಡಿಎ ಆಯುಕ್ತರಿಗೆ ಪತ್ರ ಬರೆದಿರುವ ನಿವಾಸಿಗಳು, ‘ವಿದ್ಯಾಸಂಸ್ಥೆಯ ಸಿ.ಎ ನಿವೇಶನದಲ್ಲಿ ನಿತ್ಯವೂ ನೂರಾರು ಬೃಹತ್‌ ಗಾತ್ರದ ಸಿಮೆಂಟ್‌ ಟ್ರಕ್‌ಗಳನ್ನು ನಿಂತಿರುತ್ತವೆ. ಸಿಮೆಂಟ್‌ ಮೂಟೆಗಳನ್ನು ಬದಲಿಸುತ್ತಾರೆ. ಇದರಿಂದ ಸಿಮೆಂಟ್ ದೂಳು ಸ್ಥಳೀಯ ನಿವಾಸಿಗಳ ಮನೆಗಳಿಗೆ ನುಗ್ಗುತ್ತಿದೆ. ವಯೋವೃದ್ಧರಿಗೆ ಉಸಿರಾಟ ಸೇರಿದಂತೆ ಹಲವು ರೀತಿಯ ತೊಂದರೆಗಳಾಗಿವೆ’ ಎಂದು ಗ್ರಾಮಸ್ಥರಾದ ಅನಿಲ್‌ಕುಮಾರ್‌, ವೆಂಕಟೇಶ, ಆನಂದ, ಚೈತ್ರ, ಅಶ್ವತ್ಥ್‌ ದೂರಿದ್ದಾರೆ.

ಹಗಲು–ರಾತ್ರಿ ಕೂಗಾಟ: ‘ಈ ನಿವೇಶನದಲ್ಲಿ ಹಗಲು–ರಾತ್ರಿ ಎನ್ನದೆ ಯಾವಾಗಲೂ ಲಾರಿಗಳು ಬರುತ್ತವೆ, ಹೋಗುತ್ತವೆ. ಸುತ್ತಲೂ ದೂಳು ಆವರಿಸಿಕೊಂಡಿರುತ್ತದೆ. ಅಲ್ಲದೆ, ನೂರಾರು ಕೂಲಿಗಾರರು ಇಲ್ಲಿ ವಾಸವಿದ್ದು, ರಾತ್ರಿಯಿಡೀ ಇವರು ಕೂಗಾಡುತ್ತಲೇ ಇರುತ್ತಾರೆ. ಪಾಲಿ ಎಜುಕೇಷನ್‌ ಸೊಸೈಟಿಯವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು, ನಿವೇಶನ ಹಂಚಿಕೆಯನ್ನು ರದ್ದು ಮಾಡಬೇಕು’ ಎಂದು ಬಿಡಿಎಗೆ ಬರೆದಿರುವ ಪತ್ರದಲ್ಲಿ ಚಂದ್ರವ್ವ, ವೆಂಕಟೇಶ್‌, ರಾಮಕೃಷ್ಣಯ್ಯ, ಸಂಪಂಗಯ್ಯ, ಕಮಲಮ್ಮ ಆಗ್ರಹಿಸಿದ್ದಾರೆ.

ಕ್ರಮಕ್ಕೆ ಸೂಚನೆ: ‘ಬಿಡಿಎ ಆಯುಕ್ತರು ದೂರಿನ ಬಗ್ಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ. ಪಾಲಿ ಎಜುಕೇಷನ್‌ ಸೊಸೈಟಿಯವರು ಕಟ್ಟಡ ನಕ್ಷೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅದರ ಸಂಪೂರ್ಣ ಕಡತ ಎಂಜಿನಿಯರಿಂಗ್‌ ವಿಭಾಗದಲ್ಲಿದ್ದು ಅವರು ಕ್ರಮ ಕೈಗೊಳ್ಳಬೇಕಿದೆ’ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದರು.

1600 ಸಿ.ಎ ನಿವೇಶನಗಳ ತನಿಖೆ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತನ್ನ ಎಲ್ಲ ಬಡಾವಣೆಗಳಲ್ಲಿ ಸುಮಾರು 1600 ಸಿ.ಎ ನಿವೇಶನಗಳನ್ನು ಹಂಚಿದೆ. ಇಂತಹ ನಿವೇಶನಗಳನ್ನು ಯಾವ ಉದ್ದೇಶಕ್ಕೆ ಹಂಚಿಕೆ ಮಾಡಲಾಗಿದೆಯೋ ಅದಕ್ಕೇ ಬಳಕೆ ಮಾಡಿಕೊಳ್ಳಬೇಕು. ಆ ಉದ್ದೇಶದ ಜೊತೆಗೆ ವಾಣಿಜ್ಯ ಚಟುವಟಿಕೆ ನಡೆಸುವುದು ಅಂದರೆ ಮಳಿಗೆ ನಿರ್ಮಿಸಿ ಅದರಿಂದ ಬಾಡಿಗೆ ಪಡೆಯುವುದು ಶೆಡ್‌ ಇತ್ಯಾದಿಗಳಿಂದ ಬಾಡಿಗೆ ತೆಗೆದುಕೊಳ್ಳುವುದು ಅಕ್ರಮವಾಗಿದೆ. ಈ ಬಗ್ಗೆ ತನಿಖೆ ನಡೆಸಲು ಬಿಡಿಎ ನಿರ್ಧರಿಸಿದೆ. ‘ಇತ್ತೀಚಿನ ದಿನಗಳಲ್ಲಿ ಸಿ.ಎ ನಿವೇಶನಗಳಲ್ಲಿ ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿರುವುದು ಬಿಡಿಎ ಗಮನಕ್ಕೆ ಬಂದಿದೆ. ಹಂತ ಹಂತವಾಗಿ ಇವುಗಳನ್ನು ಪರಿಶೀಲನೆ ಮಾಡಲು ನಿರ್ಧರಿಸಲಾಗಿದೆ.  ನಾಗರಿಕರು ನೀಡುವ ದೂರಿನನ್ವಯವೂ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.