ADVERTISEMENT

ಶಾಪಿಂಗ್‌ ಮಾಲ್‌ ಆಗಿ ಬಿಡಿಎ ಕಾಂಪ್ಲೆಕ್ಸ್: ಎಎಪಿ ಪ್ರತಿಭಟನೆ

ಕೋರಮಂಗಲದಲ್ಲಿ ಕಟ್ಟಡದ ತೆರವು ಸ್ಥಳದಲ್ಲಿ ಖಂಡನೆ, ಸರ್ಕಾರದ ಕ್ರಮಕ್ಕೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 20 ಮೇ 2024, 15:37 IST
Last Updated 20 ಮೇ 2024, 15:37 IST
ಬಿಡಿಎ ಕಾಂಪ್ಲೆಕ್ಸ್ ತೆರವು ಕ್ರಮ ಖಂಡಿಸಿ ಕೋರಮಂಗಲದಲ್ಲಿ ಸೋಮವಾರ ಎಎಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಬಿಡಿಎ ಕಾಂಪ್ಲೆಕ್ಸ್ ತೆರವು ಕ್ರಮ ಖಂಡಿಸಿ ಕೋರಮಂಗಲದಲ್ಲಿ ಸೋಮವಾರ ಎಎಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.   

ಬೆಂಗಳೂರು: ‘ನಗರದಲ್ಲಿರುವ ಬಿಡಿಎ ಕಾಂಪ್ಲೆಕ್ಸ್‌ಗಳನ್ನು ತೆರವುಗೊಳಿಸಿ, ಆ ಸ್ಥಳದಲ್ಲಿ ಶಾಪಿಂಗ್‌ ಮಾಲ್ ನಿರ್ಮಿಸಲಾಗುತ್ತಿದೆ’ ಎಂದು ಆರೋಪಿಸಿರುವ ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು ಹಾಗೂ ಸ್ಥಳೀಯರು ಬಿಡಿಎ ಕ್ರಮ ಖಂಡಿಸಿ ಕೋರಮಂಗಲದ ಬಿಡಿಎ ಕಾಂಪ್ಲೆಕ್ಸ್‌ ಬಳಿ ಸೋಮವಾರ ಪ್ರತಿಭಟಿಸಿದರು.

ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಸೆರಾವು ನೇತೃತ್ವದಲ್ಲಿ ಕೋರಮಂಗಲದ ಬಿ.ಡಿ.ಎ ಕಾಂಪ್ಲೆಕ್ಸ್‌ ಬಳಿ ಪ್ರತಿಭಟನೆ ನಡೆಯಿತು. ಸರ್ಕಾರದ ತೀರ್ಮಾನಕ್ಕೆ ಪ್ರತಿಭಟನಕಾರರು ಆಕ್ರೋಶ ಹೊರಹಾಕಿದರು.

‘ಹಳೇ ಯೋಜನೆಗೆ ಸರ್ಕಾರ ಈಗ ಮರುಜೀವ ನೀಡಲು ಮುಂದಾಗಿದೆ. ಬಿಡಿಎಗೆ ಸೇರಿದ ಏಳು ಕಾಂಪ್ಲೆಕ್ಸ್‌ಗಳನ್ನು ಶಾಪಿಂಗ್ ಮಾಲ್‌ಗಳಾಗಿ ಪರಿವರ್ತಿಸಲು ಮುಂದಾಗಿದೆ’ ಎಂದು ಕಾರ್ಯಕರ್ತರು ಆಪಾದಿಸಿದರು.

ADVERTISEMENT

ಪ್ರತಿಭಟನೆ ವೇಳೆ ವೀಣಾ ಸೆರಾವು ಮಾತನಾಡಿ, ‘ಯಶಸ್ವಿಯಾಗಿ ನಡೆಯುತ್ತಿರುವ ಬಿಡಿಎ ಕಾಂಪ್ಲೆಕ್ಸ್ ಅನ್ನು ತೆರವು ಮಾಡುತ್ತಿರುವ ಕ್ರಮ ಸರಿಯಲ್ಲ. ಈಗಾಗಲೇ ಸಾಕಷ್ಟು ಸಂಚಾರ ದಟ್ಟಣೆಯಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಶಾಪಿಂಗ್‌ ಮಾಲ್‌ ನಿರ್ಮಿಸಿದರೆ ಸಮಸ್ಯೆ ಮತ್ತಷ್ಟು ಹೆಚ್ಚಲಿದೆ. ಈ ಪ್ರದೇಶಕ್ಕೆ ಸರಿಯಾದ ಮೇಲ್ಸೇತುವೆ ಮತ್ತು ಮೆಟ್ರೊ ಸಂಪರ್ಕ ಸಹ ಇರುವುದಿಲ್ಲ. ಸರ್ಕಾರಿ ಆಸ್ತಿಯನ್ನು ಖಾಸಗೀಕರಣ ಮಾಡುತ್ತಿರುವ ನಿರ್ಧಾರ ಸರಿಯಲ್ಲ. ಸ್ಥಳದಲ್ಲಿದ್ದ ಮರಗಳನ್ನು ಕಡಿಯಲಾಗಿದೆ’ ಎಂದು ಆಪಾದಿಸಿದದರು.

‘ಖಾಸಗೀಕರಣ ಮಾಡಿ ಅದರಿಂದ ಲಾಭ ಪಡೆಯುವ ಉದ್ದೇಶ ಸರಿಯಲ್ಲ. ಬ್ರ್ಯಾಂಡ್‌ ಬೆಂಗಳೂರು ಅಂದರೆ ಖಾಸಗೀಕರಣವೇ? ಶಾಪಿಂಗ್‌ ಮಾಲ್‌ನಿಂದ ಸಾರ್ವಜನಿಕರಿಗೆ ಯಾವುದೇ ಪ್ರಯೋಜನ ಇಲ್ಲ. ಬಿಡಿಎ ಕಾಂಪ‍್ಲೆಕ್ಸ್‌ಗಳನ್ನು ತೆರವು ಮಾಡಲು ಬಿಡುವುದಿಲ್ಲ’ ಎಂದು ಎಚ್ಚರಿಸಿದರು.

ಆಮ್ ಆದ್ಮಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಮಾತನಾಡಿ, ‘ಬಿಡಿಎ ಕಾಂಪ್ಲೆಕ್ಸ್ ಕಟ್ಟಡದ ಕೆಳಭಾಗದಲ್ಲಿ ಹಲವು ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ. ಹೀಗಿದ್ದರೂ, ಮೇಲ್ಭಾಗದಲ್ಲಿ ಕಟ್ಟಡವನ್ನು ತೆರವು ಮಾಡಲು ಮುಂದಾಗಿದ್ದಾರೆ. ನಮ್ಮ ಹೋರಾಟದ ಬಳಿಕ ತೆರವು ಕಾರ್ಯಾಚರಣೆ ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಸದ್ಯಕ್ಕೆ ಹೋರಾಟವನ್ನು ನಿಲ್ಲಿಸುತ್ತೇವೆ. ತೆರವು ಮುಂದುವರಿದರೆ ಮತ್ತೆ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ನಗರ ಮಾಧ್ಯಮ ಉಸ್ತುವಾರಿ ಅನಿಲ್ ನಾಚಪ್ಪ ಮಾತನಾಡಿ, ‘ಕಾಂಪ್ಲೆಕ್ಸ್‌ಗಳನ್ನು ಶಾಪಿಂಗ್ ಮಾಲ್‌ಗಳನ್ನಾಗಿ ಪರಿವರ್ತಿಸಲು 60 ವರ್ಷಗಳಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಪ್ರತಿವರ್ಷ ಬಿಡಿಎಗೆ ₹40 ಕೋಟಿಗೂ ಅಧಿಕ ಆದಾಯ ಬರಲಿದೆ ಎನ್ನಲಾಗಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಈ ಯೋಜನೆಯ ಒಪ್ಪಂದಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಕೋರಮಂಗಲ, ಎಚ್‌ಎಸ್‌ಆರ್ ಲೇಔಟ್, ಆರ್‌ಟಿ ನಗರ ಮತ್ತು ಸದಾಶಿವನಗರದಲ್ಲಿ ಇರುವ ಬಿಡಿಎ ಕಾಂಪ್ಲೆಕ್ಸ್‌ಗಳನ್ನು ಸಂಸ್ಥೆಯೊಂದಕ್ಕೆ ಬಿಡಿಎ ಗುತ್ತಿಗೆ ನೀಡಿದೆ’ ಎಂದು ಆಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.