ADVERTISEMENT

ಖಾಸಗಿಗೆ ಬಿಡಿಎ ಕಾಂಪ್ಲೆಕ್ಸ್‌ | ಮಳಿಗೆ ಖಾಲಿ ಮಾಡುವಂತೆ ವ್ಯಾಪಾರಸ್ಥರಿಗೆ ನೋಟಿಸ್

ಪ್ರಜಾವಾಣಿ ವಿಶೇಷ
Published 18 ಜೂನ್ 2024, 23:30 IST
Last Updated 18 ಜೂನ್ 2024, 23:30 IST
ಕೋರಮಂಗಲ ಬಿಡಿಎ ವಾಣಿಜ್ಯ ಸಂಕೀರ್ಣ
ಕೋರಮಂಗಲ ಬಿಡಿಎ ವಾಣಿಜ್ಯ ಸಂಕೀರ್ಣ   

ಬೊಮ್ಮನಹಳ್ಳಿ: ಕೋರಮಂಗಲದ ಬಿಡಿಎ ವಾಣಿಜ್ಯ ಸಂಕೀರ್ಣವನ್ನು ಮಾಲ್‌ ಆಗಿ ಪರಿವರ್ತಿಸಲು ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಯೋಜನೆಯಡಿ ‘ಎಂ-ಫಾರ್ ಡೆವಪಲರ್ಸ್ ಪ್ರೈ. ಲಿ.,’ ಕಂಪನಿಗೆ ಸರ್ಕಾರ ಗುತ್ತಿಗೆ ನೀಡಿದೆ. ಇದರನ್ವಯ ಮಳಿಗೆಗಳನ್ನು ಖಾಲಿ ಮಾಡುವಂತೆ ಅಂಗಡಿ ಮಾಲೀಕರಿಗೆ ನೋಟಿಸ್ ನೀಡಲಾಗಿದ್ದು, ಇದಕ್ಕೆ ವ್ಯಾಪಾರಸ್ಥರು ಹಾಗೂ ನಾಗರಿಕರಿಂದ ವಿರೋಧವ್ಯಕ್ತವಾಗಿದೆ.

ಪಿಪಿಪಿ ಯೋಜನೆಯಡಿ 70:30 ಅನುಪಾತದಲ್ಲಿ 30 ವರ್ಷ ಭೋಗ್ಯಕ್ಕೆ ನೀಡಲು ಕಂಪನಿಯೊಂದಿಗೆ ಕರಾರು ಒಪ್ಪಂದವಾಗಿದೆ. ಇದನ್ನು 60 ವರ್ಷದವರೆಗೆ ವಿಸ್ತರಿಸಲು ಅವಕಾಶ ಕಲ್ಪಿಸಲಾಗಿದೆ. ಕಂಪನಿಯು ಬಿಡಿಎ ಕಾಂಪ್ಲೆಕ್ಸ್‌ಗಳನ್ನು ನೆಲಸಮಗೊಳಿಸಿ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸುತ್ತದೆ. ಇದರಲ್ಲಿನ ಶೇ 30 ರಷ್ಟು ವಾಣಿಜ್ಯ ಮಳಿಗೆಗಳನ್ನು ಮಾತ್ರ ಸರ್ಕಾರಕ್ಕೆ ಬಿಟ್ಟುಕೊಡುತ್ತದೆ, ಉಳಿದ ಶೇ 70ರಷ್ಟು ಮಳಿಗೆಗಳನ್ನು ಖಾಸಗಿ ಸಂಸ್ಥೆಯೇ ಉಳಿಸಿಕೊಳ್ಳುವಂತೆ ಒಪ್ಪಂದ ಮಾಡಿಕೊಳ್ಳಲಾಗಿದೆ.

‘ಐಷಾರಾಮಿ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಿಸಿ, ಪ್ರತಿಯೊಂದಕ್ಕೂ ದುಬಾರಿ ದರ ನಿಗದಿ ಮಾಡುತ್ತಾರೆ. ಸಣ್ಣ ವ್ಯಾಪಾರಸ್ಥರು ಉದ್ಯೋಗ ಕಳೆದುಕೊಳ್ಳುತ್ತಾರೆ. ಇದರಿಂದ ಸಂಚಾರ ದಟ್ಟಣೆಯೂ ಹೆಚ್ಚಾಗುತ್ತದೆ. ಸರ್ಕಾರಕ್ಕೆ ಆದಾಯ ತರುವ ಆಸ್ತಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವುದರಿಂದ ಸರ್ಕಾರಕ್ಕೆ ಬರುವ ವರಮಾನ ನಿಲ್ಲುತ್ತದೆ. ಈ ಜನವಿರೋಧಿ ಕ್ರಮವನ್ನು ರಾಜ್ಯ ಸರ್ಕಾರ ಕೈಬಿಡಬೇಕು‘ ಎಂದು ಬಿಡುಗಡೆ ಚಿರತೆಗಳು ಸಂಘಟನೆಯ ರಾಜ್ಯ ಸಂಚಾಲಕ ಅಬ್ದುಲ್ ನಜೀಬ್ ಆಗ್ರಹಿಸಿದರು.

ADVERTISEMENT

‘ಅಂಗಡಿ ಮಳಿಗೆಗಳ ಮಾಲಿಕರ ಜತೆ ಯಾವುದೇ ಸಭೆ ನಡೆಸಿಲ್ಲ. ಅಭಿಪ್ರಾಯವನ್ನೂ ಕೇಳಿಲ್ಲ. ಏಕಾಏಕಿ ಕಾಂಪ್ಲೆಕ್ಸ್ ಒಡೆಯಲು ಮುಂದಾಗಿದ್ದಾರೆ. ಹೀಗಾಗಿ ನಾವು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದೇವೆ. ಇದನ್ನು ಖಾಸಗಿಯವರಿಗೆ ವಹಿಸಲು ನಾವು ಬಿಡುವುದಿಲ್ಲ. ಸರ್ಕಾರದ ನೆರವಿನೊಂದಿಗೆ ಬಿಡಿಎ ಕಾಂಪ್ಲೆಕ್ಸ್‌ ಅನ್ನು ಅಭಿವೃದ್ಧಿಪಡಿಸಲಿ. ಸಣ್ಣ ವ್ಯಾಪಾರಿಗಳನ್ನು ಬಲಿಕೊಟ್ಟು, ಬಂಡವಾಳದಾರರನ್ನು ಉದ್ದಾರ ಮಾಡುವ ಸರ್ಕಾರದ ನಿರ್ಧಾರವನ್ನು ನಾವು ವಿರೋಧಿಸುತ್ತೇವೆ’ ಎಂದು ಜೆರಾಕ್ಸ್ ಅಂಗಡಿಯ ಧನಪಾಲ್ ಹೇಳಿದರು.

‘ಪಿಪಿಪಿ ಯೋಜನೆ ಸಾರ್ವಜನಿಕ ಕ್ಷೇತ್ರದ ಆಸ್ತಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ಯೋಜನೆಯಾಗಿದೆ. ಸಹಭಾಗಿತ್ವ ಎಂಬುದು ಹೆಸರಿಗಷ್ಟೇ ಇರುತ್ತದೆ. ಎಲ್ಲವೂ ಖಾಸಗಿಯವರ ಪಾಲಾಗುತ್ತದೆ. ಇದರ ವಿರುದ್ಧ ನಾವು ಜನಾಂದೋಲನ ರೂಪಿಸುತ್ತೇವೆ’ ಎಂದು ಸಿಪಿಐ(ಎಂ) ಮುಖಂಡ ಕೆ.ಪ್ರಕಾಶ್ ಹೇಳಿದರು.

ಬಿಡಿಎ ನಿರ್ಮಿಸಿದ ಬಡಾವಣೆಗಳ ನಿವಾಸಿಗಳ ಅನುಕೂಲಕ್ಕಾಗಿ ನಿಯಮಾವಳಿಯಂತೆ ಅಲ್ಲಿನ ಬಡಾವಣೆಗಳ ಸಿ.ಎ. ನಿವೇಶನಗಳಲ್ಲಿ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಲಾಗಿದೆ. ಹೀಗಿರುವಾಗ ವಾಣಿಜ್ಯ ಸಂಕೀರ್ಣವನ್ನು ಖಾಸಗಿಯವರಿಗೆ ವಹಿಸುವಾಗ ಬಡಾವಣೆಯ ನಿವಾಸಿಗಳ ಅಭಿಪ್ರಾಯವನ್ನೂ ಕೇಳದಿರುವುದು ಸರಿಯಲ್ಲ.
-ಪಿ.ಮಧು, ಕೋರಮಂಗಲ ನಿವಾಸಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.