ADVERTISEMENT

ಬಿಡಿಎ ಕಾಂ‍ಪ್ಲೆಕ್ಸ್‌ ಮರು ನಿರ್ಮಾಣಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2018, 20:15 IST
Last Updated 11 ಆಗಸ್ಟ್ 2018, 20:15 IST
ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಬಿಡಿಎ ಅವಕಾಶ ನೀಡಿರುವುದನ್ನು ವಿರೋಧಿಸಿ ಶನಿವಾರ ಸಂಜೆ ಸುರಿಯುವ ಮಳೆಯಲ್ಲೇ ಬಿಡಿಎ ಕಾಂಪ್ಲೆಕ್ಸ್ ಮುಂಭಾಗ ‘ಐ ಚೇಂಜ್‌ ಇಂದಿರಾನಗರ’ ಮತ್ತು ‘ಯುನೈಡೆಟ್‌ ಬೆಂಗಳೂರು’ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ
ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಬಿಡಿಎ ಅವಕಾಶ ನೀಡಿರುವುದನ್ನು ವಿರೋಧಿಸಿ ಶನಿವಾರ ಸಂಜೆ ಸುರಿಯುವ ಮಳೆಯಲ್ಲೇ ಬಿಡಿಎ ಕಾಂಪ್ಲೆಕ್ಸ್ ಮುಂಭಾಗ ‘ಐ ಚೇಂಜ್‌ ಇಂದಿರಾನಗರ’ ಮತ್ತು ‘ಯುನೈಡೆಟ್‌ ಬೆಂಗಳೂರು’ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಲು ಹೊರಟಿರುವುದನ್ನು ವಿರೋಧಿಸಿ ಶನಿವಾರ ಸಂಜೆ ಬಿಡಿಎ ಕಾಂಪ್ಲೆಕ್ಸ್ ಮುಂಭಾಗ ಇಂದಿರಾನಗರದ ‌ನಿವಾಸಿಗಳು ಪ್ರತಿಭಟನೆ‌‌‌ ನಡೆಸಿದರು.

ಐ ಚೇಂಜ್‌ ಇಂದಿರಾನಗರ ಮತ್ತು ಯುನೈಡೆಟ್‌ ಬೆಂಗಳೂರು ಸಂಘಟನೆಗಳ ಸದಸ್ಯರು ಒಟ್ಟಾಗಿ ಪ್ರತಿಭಟನೆ ಮಾಡಿದರು. ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ, ಸಂಸದ ಪಿ.ಸಿ.ಮೋಹನ್, ಶಾಸಕ ರಘು, ಪರಿಸರವಾದಿ ವಿಜಯ್ ನಿಶಾಂತ್ ಹೋರಾಟವನ್ನು ಬೆಂಬಲಿಸಿದರು.

‘ಇಂದಿರಾನಗರ ಬಿಡಿಎ ಕಾಂಪ್ಲೆಕ್ಸ್ 35–40 ವರ್ಷಗಳಷ್ಟು ಹಳೆಯ ಕಟ್ಟಡವಾಗಿದೆ. ಬಿಡಿಎ ಅದನ್ನು ನೆಲಸಮಗೊಳಿಸಿ,ಖಾಸಗಿ ಸಂಸ್ಥೆಗಳ ಸಹಭಾಗಿತ್ವ ಮೂಲಕ ₹ 657 ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ. ಇದಕ್ಕೆ ನಮ್ಮ ವಿರೋಧವಿದೆ’ ಎಂದು ಸ್ಥಳೀಯ ನಿವಾಸಿಗಳು ಒಕ್ಕೊರಲಿನಿಂದ ಹೇಳಿದರು.

ADVERTISEMENT

‘ನಮ್ಮ ಬಡಾವಣೆಯಲ್ಲಿ ವಾಣಿಜ್ಯ ಸಂಕೀರ್ಣಗಳು, ಪಬ್‌, ರೆಸ್ಟೋರೆಂಟ್‌ ಹಾಗೂ ಹೋಟೆಲ್‌ಗಳು ತಲೆ ಎತ್ತಿವೆ. ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡುವಂತಿಲ್ಲ. ಆದರೆ, ನಿಯಮ ಉಲ್ಲಂಘಿಸಿದವರ ವಿರುದ್ಧ ಬಿಬಿಎಂಪಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ದೂರಿದರು.

‘ಈ ಜಾಗದಲ್ಲಿ ಬೇಕಾದರೆ ಉತ್ತಮವಾದ ಪಾರ್ಕ್‌ ನಿರ್ಮಿಸಲಿ. ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಕೊಟ್ಟರೆ, ಇಲ್ಲಿನ ಭಿನ್ನಮಂಗಲ ಕೆರೆ ಅಂಚಿನಲ್ಲಿರುವ 171 ಮರಗಳನ್ನು ಕಡಿಯಲಾಗುತ್ತದೆ’ ಎಂದು ಹೇಳಿದರು.

‘ಕೆರೆ ಮೀಸಲು ಪ್ರದೇಶ (ಬಫರ್‌ಜೋನ್‌) 100 ಮೀಟರ್ ಸುತ್ತಮುತ್ತ ಕಟ್ಟಡ ನಿರ್ಮಾಣ ಮಾಡಬಾರದು. ಕೆರೆಯಿಂದ 75 ಮೀಟರ್‌ ದೂರ ಮಾತ್ರ ಕಟ್ಟಡ ಇದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಆದೇಶವನ್ನು ಬಿಡಿಎ ಉಲ್ಲಂಘಿಸಿದೆ’ ಎಂದರು.

‘ಇಲ್ಲಿರುವ ಮರಗಳಿಂದಾಗಿ ಸ್ವಲ್ಪವಾದರೂ ವಾಯುಮಾಲಿನ್ಯ ನಿಯಂತ್ರಣದಲ್ಲಿದೆ. ಮರಗಳ ಕಡಿತಕ್ಕೆ ಮುಂದಾದರೆ, ಕಟ್ಟಡ ನಿರ್ಮಾಣದ ದೂಳಿನಿಂದ ಮಾಲಿನ್ಯ ಇನ್ನಷ್ಟು ಹದಗೆಡಲಿದೆ’ ಎಂದು ಸ್ಥಳೀಯ ನಿವಾಸಿ ಸ್ವರ್ಣ ಬೇಸರ ವ್ಯಕ್ತಪಡಿಸಿದರು.

ಕಟ್ಟಡದ ಆವರಣದಲ್ಲಿರುವ ಮರಗಳು

ಆಲದಮರ, ಸಿಲ್ವರ್ ಓಕ್, ಆರ್ಕಿಡ್, ಚೆರ್ರಿ, ಚಂಪಕ, ಜಾವಾ ಪ್ಲಮ್, ಮಾವಿನಮರ, ಬೇವಿನಮರ, ಕಸ್ಟರ್ಡ್ ಆಪಲ್, ತೆಂಗು ಸೇರಿದಂತೆ ಮುಂತಾದ ವೈವಿಧ್ಯಮಯ ಮರಗಳಿವೆ.

ಮೂರು ದಿನ ಪ್ರತಿಭಟನೆ

‘ಕಟ್ಟಡ ನಿರ್ಮಾಣದ ಆದೇಶವನ್ನು ರದ್ದುಪಡಿಸುವಂತೆ ಬಿಡಿಎ ಕಚೇರಿಯ ಮುಂದೆ ಸೋಮವಾರ, ಬಿಬಿಎಂಪಿ ಕಚೇರಿ ಎದುರು ಮಂಗಳವಾರ, ಡಿಸಿಪಿ ಕಚೇರಿ ಮುಂಭಾಗ ಬುಧವಾರ ಪ್ರತಿಭಟನೆ ಮಾಡಲಾಗುವುದು. ನ್ಯಾಯ ದೊರಕುವವರೆಗೂ ಹೋರಾಟ ಮುಂದುವರಿಯಲಿದೆ’ ಎಂದು ಸಂಸದ ಪಿ.ಸಿ.ಮೋಹನ್‌ ಹೇಳಿದರು.

‘ಹಗರಣದಿಂದ ಕೂಡಿದೆ’

‘ಸುಸಜ್ಜಿತವಾದ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಬಿಡಿಎ ಉದ್ದೇಶಿಸಿದೆ. ಆದರೆ ಇದು ಅಕ್ರಮ, ಹಗರಣದಿಂದ ಕೂಡಿದ ಯೋಜನೆ. ಪಬ್‌ಗಳಲ್ಲಿ ಧ್ವನಿವರ್ಧಕ ಬಳಕೆ ಮಾಡುವುದರಿಂದ ಅಬ್ಬರ ಸಂಗೀತ ಕೇಳಿಬರುತ್ತದೆ. ಈ ಬಗ್ಗೆ ಪೊಲೀಸರು ಕ್ರಮ ಕೈಗೊಂಡಿಲ್ಲ’ ಎಂದು ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ದೂರಿದರು.

ಕಟ್ಟಡದ ಆವರಣದಲ್ಲಿರುವ ಮರಗಳು: ಆಲದಮರ, ಸಿಲ್ವರ್ ಓಕ್, ಆರ್ಕಿಡ್, ಚೆರ್ರಿ, ಚಂಪಕ, ಜಾವಾ ಪ್ಲಮ್, ಮಾವಿನಮರ, ಬೇವಿನಮರ, ಕಸ್ಟರ್ಡ್ ಆಪಲ್, ತೆಂಗು ಸೇರಿದಂತೆ ಮುಂತಾದ ವೈವಿಧ್ಯಮಯ ಮರಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.