ಬೆಂಗಳೂರು: ಆನ್‌ಲೈನ್ ವ್ಯವಸ್ಥೆ ಜಾರಿ ಮಾಡುವಲ್ಲಿ ಇನ್ನೂ ಆಮೆ ಗತಿಯಲ್ಲೇ ಇರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಇ–ಖಾತಾ ನೀಡುವುದನ್ನೇ ಸ್ಥಗಿತಗೊಳಿಸಿದೆ. ಆಸ್ತಿ ಮಾಲೀಕರು 15 ದಿನಗಳಿಂದ ಇ–ಖಾತಾ ಸಿಗದೆ ಪರದಾಡುತ್ತಿದ್ದಾರೆ.
ನಿವೇಶನ ಮಾರಾಟ ಹಾಗೂ ಯಾವುದೇ ರೀತಿಯ ನೋಂದಣಿಗೆ ಕಂದಾಯ ಇಲಾಖೆ ಇ–ಖಾತಾವನ್ನು ಕಡ್ಡಾಯಗೊಳಿಸಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇ–ಖಾತಾ ನೀಡಲು ಹಲವು ರೀತಿಯ ಕ್ರಮಗಳನ್ನು ಕೈಗೊಂಡಿದೆ. ಆದರೆ, ಬಿಡಿಎ ತಡವಾಗಿ ಎಚ್ಚೆತ್ತುಕೊಂಡಿದ್ದು, ಇದೀಗ ಸಾಫ್ಟ್‌ವೇರ್ ಬದಲಾವಣೆಯ ಪ್ರಕ್ರಿಯೆ ಆರಂಭಿಸಿದೆ.
ಬಿಬಿಎಂಪಿಗಿಂತ ಕಡಿಮೆ ನಿವೇಶನ ಅಥವಾ ಕಟ್ಟಡಗಳನ್ನು ತನ್ನ ವ್ಯಾಪ್ತಿಯಲ್ಲಿ ಹೊಂದಿರುವ ಬಿಡಿಎ, ಆಸ್ತಿ ತೆರಿಗೆ ಪಾವತಿಯನ್ನು ಹೊರತುಪಡಿಸಿದರೆ ನಕ್ಷೆ, ಖಾತಾ ಸೇರಿದಂತೆ ಯಾವುದೇ ವ್ಯವಸ್ಥೆಯನ್ನು ಸಂಪೂರ್ಣ ಆನ್‌ಲೈನ್‌ನಲ್ಲಿ ಅಳವಡಿಸಿಕೊಂಡಿಲ್ಲ. ನಾಡಪ್ರಭು ಕೆಂಪೇಗೌಡ ಬಡಾವಣೆಯ (ಎನ್‌ಪಿಕೆಲ್) ನಿವೇಶನಗಳಿಗೆ ಇ–ಖಾತಾ ನೀಡಲಾಗಿದ್ದರೂ ಅದರಲ್ಲಿ ಎಲ್ಲವನ್ನೂ ಕಂದಾಯ ಇಲಾಖೆಯ ‘ಕಾವೇರಿ ತಂತ್ರಾಂಶ’ಕ್ಕೆ ಜೋಡಿಸಿಲ್ಲ.
ಬಿಡಿಎ ನಿವೇಶನ ಅಥವಾ ಕಟ್ಟಡಗಳಿಗೆ ಇ–ಖಾತಾ ಪಡೆಯಲು ರಾಜ್ಯ ಸರ್ಕಾರದ ‘ಸೇವಾ ಸಿಂಧು’ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬಹುದಿತ್ತು. ಕ್ರಯ/ಗುತ್ತಿಗೆ ಪತ್ರ, ಖಾತಾ ಸೇರಿದಂತೆ ಕೆಲವು ದಾಖಲೆಗಳನ್ನು ಅಪ್‌ಲೋಡ್ ಮಾಡಿದ ನಂತರ, ಸಂಬಂಧಿಸಿದ ಬಿಡಿಎ ಕಚೇರಿಗೆ ಹೋಗಿ ದಾಖಲೆಗಳನ್ನು ಪರಿಶೀಲಿಸಿಕೊಂಡು ಅಲ್ಲಿ ಇ–ಖಾತಾ ಪಡೆದುಕೊಳ್ಳುವ ವ್ಯವಸ್ಥೆ ಇತ್ತು. ಆದರೆ, ಈ ಪ್ರಕ್ರಿಯೆಯೂ ಈಗ ಸ್ಥಗಿತಗೊಂಡಿದೆ.
ಸಂಕಷ್ಟ: ಬಿಡಿಎ ಬಡಾವಣೆಗಳಲ್ಲಿರುವ ಆಸ್ತಿಗಳಿಗೆ ಇ–ಖಾತಾ ಪಡೆಯಲು ‘ಸೇವಾ ಸಿಂಧು’ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಮುಂದಾದರೆ, ‘ದತ್ತಾಂಶದ ನಿರ್ವಹಣೆಯಿಂದಾಗಿ ನವೆಂಬರ್ 15 ಮತ್ತು 16ರಂದು ಖಾತಾ ಸೇವೆ ಲಭ್ಯವಿಲ್ಲ’ ಎಂಬ ಸಂದೇಶ ನವೆಂಬರ್ 25ರಂದೂ ಬರುತ್ತಿದೆ. ಇದರಿಂದ ಆಸ್ತಿ ಮಾಲೀಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
‘ಆಸ್ತಿ ಮಾರಾಟಕ್ಕಾಗಿ ಇ–ಖಾತಾವನ್ನು ಕಡ್ಡಾಯ ಮಾಡಲಾಗಿದೆ. ಆದರೆ, ಬಿಡಿಎ ಇ–ಖಾತಾ ನೀಡುವ ಪ್ರಕ್ರಿಯೆಯನ್ನೇ ಸ್ಥಗಿತಗೊಳಿಸಿದೆ. ಆಸ್ತಿ ಮಾರಾಟ ಮಾಡಲು ಸಾಧ್ಯವಾಗದೆ, ಪೂರ್ವನಿರ್ಧರಿತ ಆರ್ಥಿಕ ವಹಿವಾಟನ್ನು ಪೂರ್ಣಗೊಳಿಸಲಾಗದೆ ಸಂಕಷ್ಟ ಎದುರಿಸುತ್ತಿದ್ದೇನೆ’ ಎಂದು ಜಯನಗರದ ರಮೇಶ್ ಹೇಳಿದರು.
‘ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಬಿಡಿಎ ನಿವೇಶನದ ಮೇಲೆ ಸಾಲ ಪಡೆಯಲು ಅರ್ಜಿ ಸಲ್ಲಿಸಿದ್ದೇನೆ. ಎಲ್ಲವೂ ಅನುಮೋದನೆಯಾಗಿದೆ. ಆದರೆ, ನಿವೇಶನವನ್ನು ಬ್ಯಾಂಕ್‌ಗೆ ಋಣಭಾರದ ನೋಂದಣಿ ಮಾಡಿಕೊಡಬೇಕು. ಇ–ಖಾತಾ ಇಲ್ಲದೆ ನೋಂದಣಿ ಸಾಧ್ಯವಿಲ್ಲ ಎಂದು ಉಪ ನೋಂದಣಾಧಿಕಾರಿ ಹೇಳುತ್ತಿದ್ದಾರೆ. ಬಿಡಿಎ ಅಧಿಕಾರಿಗಳು ಸಾಫ್ಟ್‌ವೇರ್ ಅಪ್‌ಡೇಟ್ ಆಗುತ್ತಿದೆ ಎಂದು 10 ದಿನದಿಂದಲೂ ಹೇಳುತ್ತಿದ್ದಾರೆ’ ಎಂದು ರಾಜಾಜಿನಗರದ ರವಿಕಿಶೋರ್ ತಿಳಿಸಿದರು.
‘ನಿವೇಶನ ಅಥವಾ ಕಟ್ಟಡಗಳಿಗೆ ಇ–ಖಾತಾವನ್ನು ನೀಡುವ ಎಲ್ಲ ಪ್ರಕ್ರಿಯೆಯನ್ನೂ ಆನ್‌ಲೈನ್‌ನಲ್ಲೇ ನಿರ್ವಹಣೆ ಮಾಡಲು ಸಾಫ್ಟ್‌ವೇರ್ ಅಪ್‌ಡೇಟ್ ಮಾಡಲಾಗುತ್ತಿದೆ. ಸರ್ಕಾರದ ಇ-ಆಡಳಿತ ಕೇಂದ್ರ (ಸಿಇಜಿ) ಪ್ರಕ್ರಿಯೆ ನಡೆಸುತ್ತಿದೆ. ಎರಡು ದಿನದಲ್ಲಿ ಪ್ರಕ್ರಿಯೆ ಮುಗಿಯುತ್ತದೆ ಎಂದು ಸಿಇಜಿ ಅವರು ಹೇಳಿದ್ದರು.
ಆದರೆ ಇನ್ನೂ ಮುಗಿದಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಬಿಡಿಎ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ‘ಇ–ಖಾತಾ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲೇ ಪೂರ್ಣಗೊಳಿಸಲಾಗುತ್ತದೆ. ಇದಕ್ಕಾಗಿ ಉಪ ನೋಂದಣಾಧಿಕಾರಿ ಕಚೇರಿಯ ‘ಕಾವೇರಿ ತಂತ್ರಾಂಶ’ಕ್ಕೆ ಮಾಹಿತಿಗಳನ್ನು ಅಳವಡಿಸಲಾಗುತ್ತಿದೆ. ಒಂದು ಬಾರಿ ಪ್ರಕ್ರಿಯೆ ಮುಗಿದ ಮೇಲೆ ಎಲ್ಲವೂ ಆನ್‌ಲೈನ್‌ನಲ್ಲೇ ಲಭ್ಯವಾಗುತ್ತದೆ. ಬಿಡಿಎ ಕಚೇರಿಗೆ ಬರುವಂತಿಲ್ಲ. ಈ ವ್ಯವಸ್ಥೆ ಜಾರಿಯಾಗಲು ಇನ್ನು ಮೂರ್ನಾಲ್ಕು ದಿನವಾಗಬಹುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.