ADVERTISEMENT

ಸಮಸ್ಯೆ ಸುಳಿಯಲ್ಲಿ ಸೊರಗಿದ ಕೆಂಪೇಗೌಡ ಬಡಾವಣೆ

ನಿವೇಶನ ಖರೀದಿಸಿದ್ದರೂ ಮನೆ ಕಟ್ಟಲು ಆಗುತ್ತಿಲ್ಲ, ಮನೆ ನಿರ್ಮಿಸಿದ್ದರೂ ಅಲ್ಲಿಗೆ ತೆರಳಲು ದಾರಿ ಇಲ್ಲ!

ಆದಿತ್ಯ
Published 30 ಜೂನ್ 2023, 0:00 IST
Last Updated 30 ಜೂನ್ 2023, 0:00 IST
ಕೆಂಪೇಗೌಡ ಬಡಾವಣೆ
ಕೆಂಪೇಗೌಡ ಬಡಾವಣೆ    

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ಭೂಸ್ವಾಧೀನ ಪ್ರಕ್ರಿಯೆ ವಿಳಂಬ ಹಾಗೂ ಹೆಚ್ಚಿನ ಪರಿಹಾರಕ್ಕಾಗಿ ರೈತರು ನ್ಯಾಯಾಲಯದ ಮೆಟ್ಟಿಲೇರುವ ಪರಿಣಾಮ ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣವಾಗಿ 13 ವರ್ಷ ಕಳೆದರೂ ‘ಸಮಗ್ರ ಅಭಿವೃದ್ಧಿ’ಯನ್ನೇ ಕಂಡಿಲ್ಲ!

ಇನ್ನೂ ಸ್ವಾಧೀನ ಪಡಿಸಿಕೊಂಡಿರುವ ಸ್ಥಳದಲ್ಲೂ ಕಾಮಗಾರಿಯ ನಿರಂತರತೆ ಕಾಯ್ದುಕೊಳ್ಳಲು ಸಾಧ್ಯವಾಗದೇ ನಿವೇಶನದಾರರು ಸಮಸ್ಯೆ ಕೂಪಕ್ಕೆ ಸಿಲುಕಿದ್ದಾರೆ.

2016ರಲ್ಲೇ ನಿವೇಶನ ಖರೀದಿಸಿದ್ದ ಹಲವರಿಗೆ ಮನೆ ನಿರ್ಮಿಸಲು ಸಾಧ್ಯವಾಗಿಲ್ಲ. ನಿರ್ಮಿಸಿದ ಮನೆಗಳಿಗೆ ತೆರಳಲು ರಸ್ತೆಯೂ ಇಲ್ಲ. ಮತ್ತೊಂದು ಕಡೆ ರೈತರಿಂದ ಫಲವತ್ತಾದ ಕೃಷಿ ಜಮೀನನ್ನು ಕಸಿದುಕೊಂಡಿರುವ ಬಿಡಿಎ, ಸಂತ್ರಸ್ತ ರೈತರಿಗೆ ಪೂರ್ಣ ಪ್ರಮಾಣ ಪರಿಹಾರವನ್ನೇ ನೀಡಿಲ್ಲ. ಹೆಚ್ಚಿನ ಪರಿಹಾರಕ್ಕೆ ರೈತರು ಮನವಿ ಸಲ್ಲಿಸಿದ್ದರೂ ಪ್ರಕರಣ ಇತ್ಯರ್ಥ ಪಡಿಸಲು ಬಿಡಿಎ ಮುಂದಾಗುತ್ತಿಲ್ಲ ಎಂದು ಸಂತ್ರಸ್ತರು ಅಳಲು ತೋಡಿಕೊಳ್ಳುತ್ತಾರೆ.

ADVERTISEMENT

ಸುಪ್ರೀಂ ಕೋರ್ಟ್‌ ನಿರ್ದೇಶನದ ಮೇರೆಗೆ ಶಿವರಾಮ ಕಾರಂತ ಬಡಾವಣೆಯತ್ತ ಬಿಡಿಎ ಹೆಚ್ಚಿನ ಆಸಕ್ತಿ ವಹಿಸಿತ್ತು. ಭೂಸ್ವಾಧೀನ ಸೇರಿದಂತೆ ವಿವಿಧ ಉಸ್ತುವಾರಿ ಅಧಿಕಾರಿಗಳನ್ನು ಕಾರಂತ ಬಡಾವಣೆಗೆ ನಿಯೋಜಿಸಿದ್ದರಿಂದ ಕೆಂಪೇಗೌಡ ಬಡಾವಣೆ ಸೊರಗಿತು ಎಂದು ಕೆಂಪೇಗೌಡ ಬಡಾವಣೆ ಮುಕ್ತ ವೇದಿಕೆ ಪದಾಧಿಕಾರಿಗಳು ಹೇಳುತ್ತಾರೆ.

2010ರಲ್ಲೇ ಈ ಬಡಾವಣೆ ನಿರ್ಮಾಣಕ್ಕೆ ಮುಂದಾಗಿದ್ದ ಬಿಡಿಎ, ಬೆಂಗಳೂರು ಉತ್ತರ ತಾಲ್ಲೂಕಿನ ನಾಲ್ಕು ಗ್ರಾಮಗಳಾದ ಸೀಗೆಹಳ್ಳಿ, ಕನ್ನಲ್ಲಿ, ಕೊಡಿಗೇಹಳ್ಳಿ, ಮಂಗನಹಳ್ಳಿ, ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ ಹೋಬಳಿಯ 8 ಗ್ರಾಮಗಳಾದ ಕೊಮ್ಮಘಟ್ಟ, ಭೀಮನಕುಪ್ಪೆ, ರಾಮಸಾಗರ ಸೂಲಿಕೆರೆ, ಕೆಂಚನಪುರ, ರಾಮಸಂದ್ರ, ಕೊಮ್ಮಘಟ್ಟ ಕೃಷ್ಣಸಾಗರ, ಚಲ್ಲಘಟ್ಟ ಗ್ರಾಮಗಳಲ್ಲಿ 4,043 ಎಕರೆ 27 ಗುಂಟೆ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿತ್ತು. ಇದುವರೆಗೂ 2,642 ಎಕರೆ ಜಮೀನನ್ನು ಸ್ವಾಧೀನ ಮಾಡಿ ಅಭಿವೃದ್ಧಿಗೆ ತಾಂತ್ರಿಕ ವಿಭಾಗಕ್ಕೆ ಹಸ್ತಾಂತರಿಸಿ ಕಾಮಗಾರಿ ನಡೆಸುತ್ತಿದೆ. ಅಲ್ಲಿಯೂ ಅರೆಬರೆ ಕಾಮಗಾರಿಯನ್ನಷ್ಟೇ ನಡೆಸಲಾಗಿದೆ. ಉಳಿದಂತೆ 1,377 ಎಕರೆಯನ್ನು ತಾಂತ್ರಿಕ ವಿಭಾಗಕ್ಕೆ ಹಸ್ತಾಂತರಿಸಲು ಬಾಕಿಯಿದೆ. ಇದರಿಂದ ರಸ್ತೆ, ವಿದ್ಯುತ್‌ ಸಂಪರ್ಕ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಕಾಮಗಾರಿ ನಿರಂತರ ಸಾಧ್ಯವಾಗಿಲ್ಲ. ಇಡೀ ಬಡಾವಣೆ ಮೂಲಸೌಕರ್ಯದ ಕೊರತೆಯಿಂದ ನಲುಗುತ್ತಿದೆ.

‘600 ಎಕರೆ ಜಮೀನು ವಿವಾದವು ನ್ಯಾಯಾಲಯದಲ್ಲಿ ಇದೆ. ಅದನ್ನು ಹೊರತುಪಡಿಸಿ 751 ಎಕರೆ ಸರ್ಕಾರಿ ಜಮೀನನ್ನು ಸ್ವಾಧೀನ ಪಡಿಸಿಕೊಂಡು ಬಡಾವಣೆ ಅಭಿವೃದ್ಧಿಪಡಿಸುತ್ತೇವೆ. ನಿರಂತರವಾಗಿ ಕಾಮಗಾರಿ ಕೈಗೊಳ್ಳಲಾಗುವುದು ಬಿಡಿಎ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಅಧಿಸೂಚನೆ ಹೊರಡಿಸಿದ್ದರೂ ಭೂಸ್ವಾಧೀನ ವಿಳಂಬದಿಂದ ಬಡಾವಣೆ ಅವ್ಯವಸ್ಥೆ ಆಗರವಾಗಿದೆ’ ಎಂದು ನಿವೇಶನದಾರರು, ರೈತರು ಹೇಳಿದ್ದಾರೆ.

ಸಂಪರ್ಕ ರಸ್ತೆಯೇ ಇಲ್ಲ

‘ಮುಖ್ಯರಸ್ತೆಗೆಂದು (ಮೇಜರ್ ಆರ್ಟಿರಿಯಲ್ ರಸ್ತೆ) 260 ಎಕರೆ ಸ್ವಾಧೀನಕ್ಕೆ ಅಧಿಸೂಚನೆ ಆಗಿತ್ತು. ಅದರಲ್ಲಿ 60 ಎಕರೆ ಪ್ರದೇಶದಲ್ಲಿ ಪರಿಹಾರದ ಗೊಂದಲದಿಂದ ರಸ್ತೆ ನಿರ್ಮಿಸಲು ಸಾಧ್ಯವಾಗಿಲ್ಲ. 22 ಎಕರೆ ಸ್ವಾಧೀನಕ್ಕೆ ಬಾಕಿಯಿದೆ. ಈ ಸಮಸ್ಯೆಯನ್ನೂ ಬಗೆಹರಿಸಿ ಸುಸಜ್ಜಿತ ರಸ್ತೆ ನಿರ್ಮಿಸಬೇಕಿದೆ’ ಎಂದು ಕೆಂಪೇಗೌಡ ಬಡಾವಣೆ ಮುಕ್ತ ವೇದಿಕೆ ಸೂರ್ಯ ಕಿರಣ್‌ ಹೇಳುತ್ತಾರೆ.

ನ್ಯಾಯಾಲಯದ ತಡೆಯಾಜ್ಞೆ ಫಲಕ ಹಾಕಿರುವುದು.
ಅರೆಬರೆ ಕಾಮಗಾರಿಯಿಂದ ಚರಂಡಿಯಲ್ಲಿ ನಿಂತಿರುವ ಮಳೆ ನೀರು.

ಆರ್ಥಿಕ ಹೊರೆ

ಭೂಸ್ವಾಧೀನ ಸಮಸ್ಯೆಯಿಂದ ಎಂಜಿನಿಯರಿಂಗ್‌ ವಿಭಾಗ ಕಾಮಗಾರಿಗಳ ಖರ್ಚು ಮುಂದೆ ಹೆಚ್ಚಾಗುವ ಸಾಧ್ಯತೆಯಿದೆ. ಕಾಮಗಾರಿಗೆ ಅಂದಾಜಿಸಿದ ಮೊತ್ತಕ್ಕಿಂತ ಶೇ 5ರಿಂದ 6 ಪಟ್ಟು ಹೆಚ್ಚಾಗುವ ಸಾಧ್ಯತೆ ಎಂದು ನಿವೇಶನದಾರರು ಹೇಳುತ್ತಾರೆ.

ಭೂಸ್ವಾಧೀನ ಬಾಕಿಯಿಂದ ಆಗುತ್ತಿರುವ ತೊಂದರೆಗಳು

  • ಒಂದು ಬ್ಲಾಕ್‌ನಿಂದ ಇನ್ನೊಂದು ಬ್ಲಾಕ್‌ಗೆ ಸಂಪರ್ಕ ರಸ್ತೆ ಒಳರಸ್ತೆ ನಿರ್ಮಾಣದಲ್ಲಿ ನಿರಂತರತೆ ಇಲ್ಲವಾಗಿದೆ.

  • ಅರೆಬರೆಗೊಂಡ ವಿದ್ಯುತ್‌ ಮಾರ್ಗ ರಾಜಕಾಲುವೆ ಕುಡಿಯುವ ನೀರು ಕಾಮಗಾರಿ

  • ಆಂತರಿಕ ರಸ್ತೆಗಳು ಮತ್ತು ಪ್ರದೇಶಗಳಲ್ಲಿ ಭೂಸ್ವಾಧೀನ ಸಮಸ್ಯೆಯಿಂದ ನಿವೇಶನಗಳಲ್ಲಿ ಮನೆ ಕಟ್ಟಲು ಸಾಧ್ಯವಾಗದ ಸ್ಥಿತಿ.

ಸಮಸ್ಯೆಗೆ ಕಾರಣ ಏನು?

  • ರೈತರಿಗೆ ಭೂಪರಿಹಾರ ಮೊದಲು ಕೊಟ್ಟು ನಂತರ ನಿವೇಶನದಾರರಿಗೆ ಹಂಚಿಕೆ ಮಾಡಬೇಕಾಗಿತ್ತು. ಆದರೆ ನಿವೇಶನದಾರರಿಗೆ ಹಂಚಿ ರೈತರಿಗೆ 2ನೇ ಪ್ರಾತಿನಿಧ್ಯ ಕೊಟ್ಟಿದ್ದರಿಂದ ಸಮಸ್ಯೆ ಎದುರಾಗಿದೆ.

  • ಕೆಂಪೇಗೌಡ ಬಡಾವಣೆಯ ಭೂಸ್ವಾಧೀನ ವಿಭಾಗಕ್ಕೆ ಭೂಮಾಪಕರು ಭೂಸ್ವಾಧೀನ ಅಧಿಕಾರಿಗಳ ಕೊರತೆ.

  • ರೈತರು ಕೇಳುತ್ತಿರುವ ಪ್ರದೇಶದಲ್ಲೇ ಪರಿಹಾರವನ್ನೂ ನೀಡುತ್ತಿಲ್ಲ.

ಜಿ. ಕುಮಾರ ನಾಯಕ್‌

‘ಜಿಲ್ಲಾಡಳಿತದೊಂದಿಗೆ ಮಾತುಕತೆ’

ಸರ್ಕಾರಿ ಜಮೀನು ಸ್ವಾಧೀನ ಮತ್ತು ಪರಿಹಾರ ನೀಡುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತದೊಂದಿಗೆ ಮಾತುಕತೆ ನಡೆಯುತ್ತಿದೆ. ನ್ಯಾಯಾಲಯದಲ್ಲಿರುವ ಪ್ರಕರಣವನ್ನೂ ಆದಷ್ಟು ಬೇಗ ಇತ್ಯರ್ಥ ಪಡಿಸಲು ಪ್ರಯತ್ನಿಸಲಾಗುತ್ತಿದೆ. ಬಡಾವಣೆಗೆ ಸೋಮವಾರವಷ್ಟೇ ಭೇಟಿ ನೀಡಿದ್ದೇನೆ. ಅಲ್ಲಿನ ಸಮಸ್ಯೆ ಅರಿವಿದೆ.

– ಜಿ.ಕುಮಾರ ನಾಯಕ್ ಬಿಡಿಎ ಆಯುಕ್ತ

ಪರಿಹಾರ ರೂಪದಲ್ಲಿ ನಿವೇಶನ ಕೊಟ್ಟಿದ್ದಾರೆ. ಆದರೆ ಬಡಾವಣೆಯನ್ನೇ ಅಭಿವೃದ್ಧಿಪಡಿಸಿಲ್ಲ. ಮಲೆನಾಡಿನಂತಿದ್ದ ಕೃಷಿ ಜಮೀನನ್ನು ಬಿಡಿಎಗೆ ಕೊಟ್ಟು ತಪ್ಪು ಮಾಡಿದ್ದೇವೆ. ಬಿಡಿಎ ಕಚೇರಿಗೆ ಅಲೆದು ಸಾಕಾಗಿದೆ.
–ಸೋಮಶೇಖರ್ ರೈತ ಮುಖಂಡ ಸೂಲಿಕೆರೆ
ಅರ್ಕಾವತಿ ಬಡಾವಣೆಯವರಿಗೆ ಇಲ್ಲಿ ನಿವೇಶನ ಒದಗಿಸಲಾಗುತ್ತಿದೆ. ಆದರೆ ಕೆಂಪೇಗೌಡ ಬಡಾವಣೆಗಾಗಿ ಜಮೀನು ಕಳೆದುಕೊಂಡವರಿಗೇ ಪೂರ್ಣ ಪರಿಹಾರವನ್ನೇ ನೀಡಿಲ್ಲ.
– ಕೆ.ಜಿ.ಚನ್ನಪ್ಪ ರೈತ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.