ADVERTISEMENT

ಕೆಂಪೇಗೌಡ ಬಡಾವಣೆ | ಬಿಡಿಎ ಕಾರ್ಯಾಚರಣೆ: 7 ಶೆಡ್, 3 ಕಟ್ಟಡ ತೆರವು

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2023, 15:29 IST
Last Updated 17 ಅಕ್ಟೋಬರ್ 2023, 15:29 IST
ಅನಧಿಕೃತ ಕಟ್ಟಡ ತೆರವುಗೊಳಿಸಿದ ಜೆಸಿಬಿ ಯಂತ್ರ.
ಅನಧಿಕೃತ ಕಟ್ಟಡ ತೆರವುಗೊಳಿಸಿದ ಜೆಸಿಬಿ ಯಂತ್ರ.   

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆ ಮುಂದುವರಿಸಿದ್ದು, ಮಂಗಳವಾರ ನಡೆದ ಕಾರ್ಯಾಚರಣೆಯಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿ ವಶಕ್ಕೆ ಪಡೆದುಕೊಂಡಿದೆ.

ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಅನಧಿಕೃತವಾಗಿ ತಲೆಯೆತ್ತಿದ್ದ ನಿರ್ಮಾಣಗಳನ್ನು ತೆರವುಗೊಳಿಸಿ ಪ್ರಾಧಿಕಾರದ ಆಸ್ತಿಯನ್ನು ಮರುವಶಕ್ಕೆ ಪಡೆದುಕೊಂಡಿದೆ.

ಕೊಡಿಗೇಹಳ್ಳಿ ಗ್ರಾಮದ ಸರ್ವೇ ನಂ. 108 ರಲ್ಲಿನ 5 ಎಕರೆ ಪ್ರದೇಶವನ್ನು ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಭೂಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಅದರಲ್ಲಿ 3 ಎಕರೆ 35 ಗುಂಟೆಯಲ್ಲಿ ಕಂದಾಯ ನಿವೇಶನಗಳನ್ನು ರಚಿಸಲಾಗುತ್ತಿತ್ತು. ಅನಧಿಕೃತ ಕಟ್ಟಡ ನಿರ್ಮಿಸುತ್ತಿದ್ದವರಿಗೆ ಅನೇಕ ಬಾರಿ ನೋಟಿಸ್‌ ನೀಡಿದ್ದರೂ ನಿರ್ಮಾಣ ಕಾರ್ಯ ಮುಂದುವರಿಸಲಾಗಿತ್ತು. ಮಂಗಳವಾರ ಬೆಳಿಗ್ಗೆ ನಡೆದ ಕಾರ್ಯಾಚರಣೆಯಲ್ಲಿ 7 ಶೆಡ್ ಹಾಗೂ 3 ಕಾಂಕ್ರೀಟ್ ಕಟ್ಟಡ ತೆರವುಗೊಳಿಸಲಾಯಿತು. ಪ್ರಾಧಿಕಾರ ಸುಮಾರು ₹ 25 ಕೋಟಿ ಮೌಲ್ಯದ ಆಸ್ತಿಯನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ಅಲ್ಲದೇ ಒತ್ತುವರಿದಾರರ ವಿರುದ್ಧ ಭೂಕಬಳಿಕೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು  ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಪ್ರಾಧಿಕಾರದ ಆಯುಕ್ತರ ನಿರ್ದೇಶನದಂತೆ ಪ್ರಾಧಿಕಾರದ ಎಸ್‌ಪಿ ಕೆ.ನಂಜುಂಡೇಗೌಡ, ಪಶ್ಚಿಮ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಅಶೋಕ್ ನೇತೃತ್ವದಲ್ಲಿ ತೆರವು ಕಾರ್ಯ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.