ADVERTISEMENT

ಬಿಡಿಎ ವಿಲ್ಲಾ: ಏಪ್ರಿಲ್‌ನಲ್ಲಿ ಸಿದ್ಧ

‘ಪುನೀತ್‌ ರಾಜ್‌ಕುಮಾರ್‌ ವಸತಿ ಸಂಕೀರ್ಣ ಯೋಜನೆ’ಯಡಿ ಆರ್ಥಿಕವಾಗಿ ಹಿಂದುಳಿದವರಿಗೂ ಫ್ಲ್ಯಾಟ್‌

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2023, 22:15 IST
Last Updated 21 ಫೆಬ್ರುವರಿ 2023, 22:15 IST
ಹುಣ್ಣಿಗೆರೆಯಲ್ಲಿ ನಿರ್ಮಿಸುತ್ತಿರುವ ಬಿಡಿಎ ವಿಲ್ಲಾಗಳ ಕಾಮಗಾರಿ ಅಂತಿಮ ಹಂತದಲ್ಲಿದೆ (ಎಡಚಿತ್ರ) ಬಿಡಿಎ ವಿಲ್ಲಾದ ಒಳನೋಟ
ಹುಣ್ಣಿಗೆರೆಯಲ್ಲಿ ನಿರ್ಮಿಸುತ್ತಿರುವ ಬಿಡಿಎ ವಿಲ್ಲಾಗಳ ಕಾಮಗಾರಿ ಅಂತಿಮ ಹಂತದಲ್ಲಿದೆ (ಎಡಚಿತ್ರ) ಬಿಡಿಎ ವಿಲ್ಲಾದ ಒಳನೋಟ   

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅತ್ಯಾಧುನಿಕ ವಿಲ್ಲಾ ಯೋಜನೆ ಅಂತಿಮ ಘಟ್ಟಕ್ಕೆ ಬಂದಿದೆ. ‘ಪುನೀತ್‌ ರಾಜ್‌ಕುಮಾರ್‌ ವಸತಿ ಸಂಕೀರ್ಣ ಯೋಜನೆ’ಯಡಿ ಪ್ರಾರಂಭಿಕ ಹಂತದ ವಿಲ್ಲಾಗಳನ್ನು ಏಪ್ರಿಲ್‌ನಿಂದ ಮಾರಾಟ ಮಾಡಲು ಬಿಡಿಎ ತುರ್ತು ಸಿದ್ಧತೆ ನಡೆಸಿದೆ.

ಆಲೂರಿನಲ್ಲಿ ನಿರ್ಮಿಸಿದ್ದ 452 ವಿಲ್ಲಾಗಳು ಮಾರಾಟವಾದ ಮೇಲೆ ಸಾಮಾನ್ಯ ಜನರು ವಿಲ್ಲಾ ಖರೀದಿಸಲು ಇನ್ನಷ್ಟು ಅವಕಾಶ ಒದಗಿಸಲು ಬಿಡಿಎ ಈ ಯೋಜನೆಯನ್ನು 2017ರಲ್ಲಿ ಆರಂಭಿಸಿತು. ಇದೀಗ ಈ ವಿಲ್ಲಾಗಳ ನಿರ್ಮಾಣ ಕೊನೆಯ ಘಟ್ಟಕ್ಕೆ ಬಂದಿದ್ದು, ಯೋಜನೆಯ ಎಲ್ಲ ಹಂತದ ಕಾಮಗಾರಿಗಳು ಮುಗಿಯಲು ಇನ್ನು ಆರು ತಿಂಗಳಾದರೂ ಬೇಕು. ಆದರೆ, ಮೊದಲ ಹಂತದಲ್ಲಿ 100 ವಿಲ್ಲಾಗಳನ್ನು ಏಪ್ರಿಲ್‌ನಲ್ಲಿ ಆನ್‌ಲೈನ್‌ ಮೂಲಕ ಮಾರಾಟ ಮಾಡಲು ಯೋಜಿಸಲಾಗಿದೆ.

ದಾಸನಪುರ ಹೋಬಳಿಯ ಹುಣ್ಣಿಗೆರೆಯಲ್ಲಿ ನಾಲ್ಕು ಬಿಎಚ್‌ಕೆ ಹಾಗೂ ಮೂರು ಬಿಎಚ್‌ಕೆಗಳಲ್ಲಿ 322 ವಿಲ್ಲಾಗಳು 27 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿವೆ. ತುಮಕೂರು ರಸ್ತೆ ಹಾಗೂ ಮಾಗಡಿ ರಸ್ತೆಯ ಮಧ್ಯೆ ಇರುವ ವಸತಿ ಸಂಕೀರ್ಣಕ್ಕೆ ಕಡಬಗೆರೆ, ಬೈಯಂಡಹಳ್ಳಿ, ಕಿತ್ತನಹಳ್ಳಿ ಮೂಲಕವೂ ಹೋಗಬಹುದು. ಅತ್ಯಾಧುನಿಕವಾಗಿ ಎಲ್ಲ ಸೌಲಭ್ಯಗಳನ್ನೂ ಒದಗಿಸುವ, ಬಾಗಿಲು, ಮೆಟ್ಟಿಲು ಸೇರಿದಂತೆ ಸಂಪೂರ್ಣ ಟೀಕ್‌ನಲ್ಲೇ ನಿರ್ಮಾಣವಾಗಿರುವ ಪ್ರಥಮ ಬಿಡಿಎ ಯೋಜನೆ ಇದಾಗಿದೆ. ಒಳಾಂಗಣದಲ್ಲಿ ಎರಡು ಕಾರುಗಳ ನಿಲುಗಡೆಗೆ ಅವಕಾಶವಿದ್ದು, ಎಲೆಕ್ಟ್ರಿಕ್‌ ಚಾರ್ಚಿಂಗ್‌ ಪಾಯಿಂಟ್‌ ಕೂಡ ಲಭ್ಯವಿದೆ.

ADVERTISEMENT
ಹುಣ್ಣಿಗೆರೆಯಲ್ಲಿನ ಬಿಡಿಎ ವಿಲ್ಲಾದ ಒಳನೋಟ

ನೆಲಮಹಡಿ ಹಾಗೂ ಮೊದಲ ಅಂತಸ್ತಿನಲ್ಲಿ ವಿಲ್ಲಾಗಳನ್ನು ವಿನ್ಯಾಸಗೊಳಿಸಲಾಗಿದೆ. ಹೊಂಬಾಳೆ ಕನ್‌ಸ್ಟ್ರಕ್ಷನ್‌ ಆ್ಯಂಡ್‌ ಎಸ್ಟೇಟ್ಸ್‌ ಈ ಯೋಜನೆಯನ್ನು ₹271 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸುತ್ತಿದೆ. 27 ಸಣ್ಣ ಉದ್ಯಾನ ಹಾಗೂ ಹೈಟೆನ್ಷನ್‌ ಲೈನ್‌ನ ಕೆಳಭಾಗದಲ್ಲಿ ಬೃಹತ್ ಉದ್ಯಾನ ನಿರ್ಮಿಸಲಾಗುತ್ತಿದೆ. ಕಾಂಪೌಂಡ್‌ ಹೊರ ಹಾಗೂ ಒಳಭಾಗದಲ್ಲಿ ದೊಡ್ಡದಾಗಿ ಬೆಳೆಯುವ ಮರಗಳನ್ನು ಈಗಾಗಲೇ ಬೆಳಸಲಾಗಿದೆ. ವಿಲ್ಲಾಗಳ ನಡುವೆ 10 ಅಡಿಯ ಸ್ಥಳಾವಕಾಶವಿದ್ದು, ಗಿಡಗಳೇ ಗೋಡೆಗಳಾಗಿವೆ. ಬಹುತೇಕ ವಿಲ್ಲಾಗಳ ನಿರ್ಮಾಣ ಕಾರ್ಯ ಮುಗಿದಿದ್ದರೂ, ರಸ್ತೆ ಕಾಮಗಾರಿ ಇನ್ನೂ ಆಗಬೇಕಿದೆ.

ವಿಲ್ಲಾಗಳ ದರ ₹80 ಲಕ್ಷದಿಂದ ₹1.10 ಕೋಟಿಯವರೆಗೆ ನಿಗದಿಪಡಿಸುವ ಸಾಧ್ಯತೆ ಇದ್ದು, ಆನ್‌ಲೈನ್‌ನಲ್ಲಿ ‘ಮೊದಲು ಬಂದವರಿಗೆ ಪ್ರಥಮ ಆದ್ಯತೆ’ ಆಧಾರದಲ್ಲಿ ಖರೀದಿ ಮಾಡಬಹುದು. ಏಪ್ರಿಲ್‌ ಅಂತ್ಯದಲ್ಲಿ ಒಂದು ನೂರು ವಿಲ್ಲಾಗಳನ್ನಾದರೂ ಮಾರಾಟ ಮಾಡುವ ಗುರಿ ಇದೆ ಎಂದು ಅಧಿಕಾರಿಗಳು ಹೇಳಿದರು.

ಸೌಲಭ್ಯಗಳೇನು?

ಈಜುಕೊಳಗಳೊಂದಿಗೆ 40 ಸಾವಿರ ಚದರ ಅಡಿಯ ಕ್ಲಬ್‌ಹೌಸ್‌. ಒಳರಸ್ತೆಗಳನ್ನು ಇಂಟರ್‌ಲಾಕಿಂಗ್‌ ಪೇವರ್ಸ್‌ನಲ್ಲಿ ನಿರ್ಮಿಸಲಾಗುತ್ತಿದೆ. ಮಳೆ ನೀರು ಸಂಗ್ರಹಕ್ಕೆ ಪ್ರತಿ ರಸ್ತೆಯಿಂದ ವ್ಯವಸ್ಥೆ ಕಲ್ಪಿಸಲಾಗಿದ್ದು, ಕೊಳವೆಬಾವಿಗಳ ಮರುಪೂರಣ ಮಾಡಲಾಗುತ್ತದೆ. 10 ಬೋರ್‌ವೆಲ್‌ಗಳಿದ್ದು, ಮಳೆ ನೀರಿನ ಸಂಗ್ರಹದ ವ್ಯವಸ್ಥೆಯಿಂದ ನೀರು ಒದಗಿಸಲು ಪ್ರತ್ಯೇಕ ಕೊಳವೆ ಮಾರ್ಗವಿದೆ. 600 ಕಿಲೋಲೀಟರ್‌ ನಿತ್ಯ ಸಂಸ್ಕರಿಸುವ ಎಸ್‌ಟಿಪಿಯೂ ಇದ್ದು, ಆ ನೀರನ್ನು ಉದ್ಯಾನಗಳಿಗೆ ಪೂರೈಸಲಾಗುತ್ತದೆ. ವಿಲ್ಲಾಗಳ ಮೇಲೆಯೂ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸೋಲಾರ್‌ ವಿದ್ಯುತ್ ಉತ್ಪಾದನೆ ವ್ಯವಸ್ಥೆಯಿದ್ದು, ಹೆಚ್ಚುವರಿ ವಿದ್ಯುತ್‌ ಅನ್ನು ಗ್ರಿಡ್‌ ಮೂಲಕ ಬೆಸ್ಕಾಂಗೆ ನೀಡಲಾಗುತ್ತದೆ. ಜನರೇಟರ್‌ ಸೌಲಭ್ಯವಿದ್ದು, 24 ಗಂಟೆಯೂ ವಿದ್ಯುತ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಬ್ಯಾಸ್ಕೆಟ್‌ ಬಾಲ್‌, ಕ್ರಿಕೆಟ್‌, ಮಕ್ಕಳ ಆಟದ ಮೈದಾನ, ಮಳಿಗೆಗಳೂ ಇರಲಿವೆ ಎಂದು ಬಿಡಿಎ ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.