ಬೆಂಗಳೂರು: ಮಳೆ ಕೊರತೆಯಿಂದಾಗಿ ಸೊಪ್ಪು, ತರಕಾರಿ ಬೆಳೆಯುವ ಪ್ರಮಾಣವೂ ಕಡಿಮೆಯಾಗುತ್ತಿದೆ. ಬೆಳೆದವರಿಗೆ ಸರಿಯಾದ ಇಳುವರಿ ಸಿಗದ ಕಾರಣ, ಮಾರುಕಟ್ಟೆಗೆ ಪೂರೈಕೆಯಾಗುತ್ತಿರುವ ಪ್ರಮಾಣದಲ್ಲೂ ವತ್ಯಯವಾಗಿದೆ. ಪರಿಣಾಮವಾಗಿ ಕೆಲ ತರಕಾರಿ ಮತ್ತು ಸೊಪ್ಪಿನ ಬೆಲೆ ಹೆಚ್ಚಾಗಿದ್ದು, ಅದರಲ್ಲೂ ಬೀನ್ಸ್(ಹುರುಳಿಕಾಯಿ) ದರ ₹120ರ ಗಡಿ ದಾಟಿದೆ !
ರಾಜ್ಯದ ಕೆಲವು ಭಾಗಗಳಲ್ಲಿ ಮಳೆಯಾಗಿದ್ದರೂ, ಬಿಸಿಲಿನ ತಾಪ ಕಡಿಮೆಯಾಗಿಲ್ಲ. ನೀರಿನ ಕೊರತೆ ಮುಂದುವರಿದಿದೆ. ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ತರಕಾರಿಗಳು ಪೂರೈಕೆಯಾಗುತ್ತಿಲ್ಲ. ಜೊತೆಗೆ, ಬೇಡಿಕೆಯೂ ಹೆಚ್ಚಾದ ಕಾರಣ, ಸಹಜವಾಗಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದೆ.
‘ಚಿಕ್ಕಬಳ್ಳಾಪುರ, ಕೋಲಾರ, ಕುಣಿಗಲ್, ತುಮಕೂರು ಮತ್ತು ತಮಿಳುನಾಡಿನಿಂದ ಮಾರುಕಟ್ಟೆಗೆ ಬರುತ್ತಿದ್ದ ಬೀನ್ಸ್ ಪ್ರಮಾಣ ಕಡಿಮೆಯಾಗಿದೆ. ಇದರಿಂದ ಬೆಲೆಯೂ ಹೆಚ್ಚಾಗಿದೆ. ಗ್ರಾಹಕರಿಗೆ ಮತ್ತು ಮದುವೆ ಮತ್ತಿತರ ಸಮಾರಂಭ ಆಯೋಜಿಸುವವರಿಗೆ ಸ್ವಲ್ಪ ತೊಂದರೆಯಾಗಿದೆ. ಮತ್ತೊಂದೆಡೆ ಸಮರ್ಪಕ ಇಳುವರಿ ಬಾರದ ಕಾರಣ ರೈತರಿಗೂ ಹೆಚ್ಚಿನ ಲಾಭವಾಗುತ್ತಿಲ್ಲ’ ಎನ್ನುತ್ತಾರೆ ಕೆ.ಆರ್. ಮಾರುಕಟ್ಟೆಯ ತರಕಾರಿ ವ್ಯಾಪಾರಿಗಳು.
ಕಳೆದ ವಾರ ಕೆ.ಜಿಗೆ ₹80ರಂತೆ ಮಾರಾಟವಾಗುತ್ತಿದ್ದ ಬೀನ್ಸ್ ಈಗ ₹120ರ ಗಡಿ ದಾಟಿದೆ. ಪ್ರತಿ ಕೆ.ಜಿ ಕ್ಯಾರೆಟ್ ಹಾಗೂ ಕ್ಯಾಪ್ಸಿಕಮ್ ₹60, ಹಿರೇಕಾಯಿ ₹70, ಮೆಣಸಿನಕಾಯಿ ₹80, ಬಟಾಣಿ ₹180, ಹೂಕೋಸು ₹50, ಬದನೆಕಾಯಿ ₹60, ಬೆಳ್ಳುಳ್ಳಿ ₹180 ಹಾಗೂ ಶುಂಠಿ ₹200 ರಂತೆ ಮಾರಾಟವಾಗುತ್ತಿದೆ.
ಕಳೆದ ವಾರದಂತೆ ಅಗತ್ಯ ಪ್ರಮಾಣದ ತರಕಾರಿಗಳು ಮಾರುಕಟ್ಟೆಗೆ ಪೂರೈಕೆಯಾಗುತ್ತಿಲ್ಲ. ಸರಿಯಾಗಿ ಮಳೆಯಾಗುವವರೆಗೂ ತರಕಾರಿ ದರ ಇಳಿಯುವ ಸಾಧ್ಯತೆ ಕಡಿಮೆ’ ಎನ್ನುತ್ತಾರೆ ಕೆ.ಆರ್. ಮಾರುಕಟ್ಟೆಯ ತರಕಾರಿ ವ್ಯಾಪಾರಿಗಳಾದ ಸುಹೇಲ್, ಅಕ್ರಂ ಪಾಷಾ, ರಾಜೇಶ್.
ಸೊಪ್ಪಿನ ದರ ಹೆಚ್ಚಳ: ಕಳೆದ ವಾರ ಒಂದು ಕಟ್ಟು ಕೊತ್ತಂಬರಿ ₹20ರಂತೆ ಮಾರಾಟವಾಗುತ್ತಿತ್ತು. ಈಗ ₹30ಕ್ಕೆ ಏರಿದೆ. ಮೆಂತೆ, ಸಬ್ಸಿಗೆ ಪ್ರತಿ ಕಟ್ಟಿಗೆ ₹20ರಂತೆ ಮಾರಾಟವಾಗುತ್ತಿದೆ.
ತರಕಾರಿ; ಕಳೆದ ವಾರದ ದರ; ಈ ವಾರದ ದರ (ಕೆ.ಆರ್. ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿಗೆ ₹ಗಳಲ್ಲಿ)
ಬೀನ್ಸ್;80;120
ಕ್ಯಾಪ್ಸಿಕಮ್;60;60
ಕ್ಯಾರೆಟ್;50;60
ಹೀರೆಕಾಯಿ;60;60
ಬೆಂಡೇಕಾಯಿ;50;40
ಚವಳಿಕಾಯಿ;60;60
ಮೆಣಸಿನಕಾಯಿ;80;80
ಬಟಾಣಿ;200;160
ಆಲೂಗಡ್ಡೆ;20;30
ಟೊಮೆಟೊ;20;30
ಈರುಳ್ಳಿ;20;20
ಹೂಕೋಸು;30;50
ಬದನೆಕಾಯಿ;60;60
ಕ್ಯಾಬೇಜ್;40;40
ತೊಂಡೆಕಾಯಿ;60;60
ಸೌತೆಕಾಯಿ;60;40
ಬಿಟ್‌ರೂಟ್;40;40
ಮೂಲಂಗಿ;40;60
ಹಾಗಲಕಾಯಿ;60;60
ಕುಂಬಳಕಾಯಿ;30;40
ಬೆಳ್ಳುಳ್ಳಿ;200;180
ಶುಂಠಿ;180;200
ಸೊಪ್ಪು;ಚಿಲ್ಲರೆ ದರ (ಪ್ರತಿ ಕಟ್ಟಿಗೆ ₹ಗಳಲ್ಲಿ)
ಕೊತ್ತಂಬರಿ;20;30
ಮೆಂತ್ಯ;20;20
ಸಬ್ಸಿಗೆ ;15;20
ಪಾಲಕ್;10;20
ಪುದೀನ;10;30
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.