ಬೆಂಗಳೂರು: ಕಲಾವಿದ, ನಿವೃತ್ತ ಉಪ ಮುಖ್ಯ ಸಂಚಾರ ವ್ಯವಸ್ಥಾಪಕ ಬೀರಪ್ಪ ಅವರಿಗೆ ‘ಬೀರಪ್ಪ–85’ ಅಭಿನಂದನಾ ಕಾರ್ಯಕ್ರಮವನ್ನು ಜುಲೈ 13ರಂದು ಮಧ್ಯಾಹ್ನ 3ಕ್ಕೆ ವಸಂತನಗರದ ಡಿ. ದೇವರಾಜ ಅರಸು ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
‘ಬೀರಪ್ಪ–85 ಅಭಿನಂದನಾ ಸಮಿತಿ’ ಗೌರವಾಧ್ಯಕ್ಷ ಎಚ್.ಎಂ. ರೇವಣ್ಣ ಅವರು ಈ ಬಗ್ಗೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬಿಟಿಎಸ್‌ನಲ್ಲಿ ಸಣ್ಣ ಉದ್ಯೋಗಕ್ಕೆ ಸೇರಿದ್ದ ಅವರು ಓದು ಮತ್ತು ಪ್ರಯತ್ನದಿಂದ ಕೆಎಸ್‌ಆರ್‌ಟಿಸಿಯ ಉಪ ಮುಖ್ಯ ಸಂಚಾರ ವ್ಯವಸ್ಥಾಪಕ ಹುದ್ದೆವರೆಗೆ ಬಡ್ತಿ ಪಡೆದು ನಿವೃತ್ತರಾಗಿದ್ದಾರೆ. ಹವ್ಯಾಸಕ್ಕಾಗಿ ನಾಟಕ ಮಾಡುತ್ತಿದ್ದ ಅವರು ಮುಂದೆ ಚಿತ್ರ ನಿರ್ಮಾಣ ಮಾಡಿದ್ದರು. ಚಿತ್ರನಟನಾಗಿಯೂ ಹೆಸರು ಮಾಡಿದ್ದಾರೆ ಎಂದರು.
ಸಮಾನ ಮನಸ್ಕರೊಂದಿಗೆ ಸೇರಿ ಏಳೂವರೆ ವರ್ಷಗಳಿಂದ ನಿಮ್ಹಾನ್ಸ್ ಕಾಂಪೌಂಡ್‌ನಲ್ಲಿ ಪ್ರತಿದಿನ 800 ರೋಗಿಗಳು ಮತ್ತು ಅವರ ಸಂಬಂಧಿಗಳಿಗೆ ಆಹಾರ ವಿತರಣೆ ಮಾಡುತ್ತಿದ್ದಾರೆ. ಕುರುಬ ಸಮಾಜದ ಹೆಣ್ಣುಮಕ್ಕಳಿಗಾಗಿಯೇ ವಸತಿನಿಲಯ ತೆರೆಯಲು ಕಾರಣೀಭೂತರಲ್ಲಿ ಅವರು ಒಬ್ಬರು ಎಂದು ತಿಳಿಸಿದರು.
ಅಭಿಮಾನಿ ಬಳಗವು ರೂಪಿಸಿರುವ ‘ಸರಿಕೆ’ ಅಭಿನಂದನಾ ಹೊತ್ತಿಗೆಯನ್ನು ಮತ್ತು ಹುಲಿ ಚಂದ್ರಶೇಖರ್ ಅವರ ನಿರ್ದೇಶನದ ‘ಸಂವೇದನಾಶೀಲ ಸಾಹಸಿ’ ಕಿರುಚಿತ್ರವನ್ನು ಅನಾವರಣಗೊಳಿಸಿ ಅಭಿನಂದನೆ ಸಲ್ಲಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ರಾಮಲಿಂಗಾರೆಡ್ಡಿ, ಬೈರತಿ ಸುರೇಶ ಭಾಗವಹಿಸಲಿದ್ದಾರೆ. ವಿಜಯಪುರದ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಓಂಕಾರ ಕಾಕಡೆ, ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಬಿ.ಕೆ. ರವಿ ಮಾತನಾಡಲಿದ್ದಾರೆ. ಬೆಂಗಳೂರು ಕನಕಗುರು ಪೀಠದ ಸಿದ್ಧರಾಮಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.