ಬೆಂಗಳೂರು: ‘ದೇಶದ ಉಕ್ಕು ಉತ್ಪಾದನಾ ಸಾಮರ್ಥ್ಯವನ್ನು ಶೇ 12ರಷ್ಟು ಏರಿಸಲು ಸಿದ್ಧತೆ ನಡೆದಿದೆ. 2020ರ ವೇಳೆಗೆ ವಾರ್ಷಿಕ 15 ಕೋಟಿ ಟನ್‌ಗಳಷ್ಟು ಉತ್ಪಾದನಾ ಗುರಿ ಮುಟ್ಟಬೇಕಿದೆ’ ಎಂದು ಕೇಂದ್ರದ ಉಕ್ಕು ಸಚಿವ ಬೀರೇಂದರ್ ಸಿಂಗ್ ಚೌಧರಿ ಹೇಳಿದರು.
ನಗರದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಉಕ್ಕು ಗ್ರಾಹಕರ ಕೌನ್ಸಿಲ್ ಸಭೆಯಲ್ಲಿ ಅವರು ಮಾತನಾಡಿದರು.
‘2017ರವರೆಗೆ ದೇಶದಲ್ಲಿ ಒಟ್ಟು 13.4 ಕೋಟಿ ಟನ್‌ಗಳಷ್ಟು ಉಕ್ಕು ಉತ್ಪಾದನೆಯಾಗುತ್ತಿತ್ತು. ಆ ವರ್ಷ 6 ಕೋಟಿ ಟನ್‌ಗಳಷ್ಟು ಉತ್ಪಾದನಾ ಸಾಮರ್ಥ್ಯ ಹೆಚ್ಚಳವಾಗಿದೆ.ರಾಷ್ಟ್ರೀಯ ಉಕ್ಕು ನೀತಿ – 2017 ಅನ್ನು ದೇಶದ ಆಂತರಿಕ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ. ವಾಹನ ಉದ್ಯಮ, ವಿದ್ಯುತ್ ಕ್ಷೇತ್ರ ಸೇರಿದಂತೆ ವಿಶೇಷ ಬಳಕೆಗಾಗಿ ಬೇಕಾಗುವ ಉತ್ಕೃಷ್ಟ ದರ್ಜೆಯ ಉಕ್ಕನ್ನು ಉತ್ಪಾದಿಸಿ ಪೂರೈಸಲಾಗುತ್ತದೆ’ ಎಂದರು.
‘ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಾಲ್ಕು ವರ್ಷಗಳಲ್ಲಿ ತಲಾವಾರು ಸ್ಟೀಲ್ ಬಳಕೆ ಪ್ರಮಾಣ ಶೇ 12ರಷ್ಟು ಹೆಚ್ಚಳವಾಗಿದೆ. ತಲಾವಾರು ಬಳಕೆ ನಾಲ್ಕು ವರ್ಷಗಳ ಹಿಂದೆ 58 ಕೆಜಿ ಇದ್ದದ್ದು ಈಗ 67 ಕೆಜಿಗೆ ಏರಿದೆ. ಎನ್‌ಡಿಎ ಸರ್ಕಾರ ಆಂತರಿಕ ಉಕ್ಕು ಉತ್ಪಾದನಾ ಕ್ಷೇತ್ರದ ಪುನಶ್ಚೇತನಕ್ಕೆ ಸಾಕಷ್ಟು ಕ್ರಮ ಕೈಗೊಂಡಿದೆ. 2013–14ರಲ್ಲಿ 8.2 ಕೋಟಿ ಟನ್‌ಗಳಿದ್ದ ಉಕ್ಕು ಉತ್ಪಾದನೆ 2017–18ರಲ್ಲಿ 10 ಕೋಟಿ ಟನ್‌ಗೆ ಏರಿದೆ. 2016– 17ನೇ ಸಾಲಿನಲ್ಲಿ ಉಕ್ಕು ರಫ್ತು ಪ್ರಮಾಣದಲ್ಲಿಯೂ ಗಣನೀಯ ಏರಿಕೆ ಕಂಡುಬಂದಿದೆ. 8.2 ಕೋಟಿ ಟನ್‌ಗಳಷ್ಟು ಉಕ್ಕು ರಫ್ತು ಮಾಡಲಾಗಿದೆ. ಶೇ 102ರಷ್ಟು ಏರಿಕೆ ದಾಖಲಾಗಿದೆ. 2017– 18ರಲ್ಲಿ0.96 ಕೋಟಿ ಟನ್‌ಗಳಷ್ಟು ರಫ್ತು ಮಾಡಲಾಗಿದೆ. ಈ ಆರ್ಥಿಕ ವರ್ಷದಲ್ಲಿ ಶೇ 17ರಷ್ಟು ರಫ್ತು ಪ್ರಮಾಣ ಏರಿಕೆ ದಾಖಲಾಗಿದೆ ಎಂದು ಅವರು ವಿವರಿಸಿದರು.
‘ಉಕ್ಕು ಕ್ಷೇತ್ರದಲ್ಲಿ ಹೊಸ ಸಂಶೋಧನೆ, ಅಭಿವೃದ್ಧಿ ಮತ್ತು ಆವಿಷ್ಕಾರ ನಡೆಯಬೇಕಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.