ADVERTISEMENT

ಹೆಚ್ಚು ಕೆಲಸಕ್ಕೆ ಒತ್ತಡ: ಸಹೋದ್ಯೋಗಿ ಕೊಲೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2023, 20:09 IST
Last Updated 26 ಡಿಸೆಂಬರ್ 2023, 20:09 IST
<div class="paragraphs"><p>ಕೊಲೆ</p></div>

ಕೊಲೆ

   

ಬೆಂಗಳೂರು: ‘ಹೆಚ್ಚು ಕೆಲಸ ಮಾಡುವಂತೆ ಒತ್ತಡ ಹೇರುತ್ತಿದ್ದಾನೆ’ ಎಂಬ ಕಾರಣಕ್ಕೆ ಗುಲ್ಫಾಮ್ ಉರುಫ್ ಗುಲ್ಲು ಅವರನ್ನು ಕೊಲೆ ಮಾಡಿದ್ದ ಆರೋಪಿ ಮೊಹಮ್ಮದ್ ದಿಲ್ಖುಷ್‌ನನ್ನು ಬೇಗೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಉತ್ತರ ಪ್ರದೇಶದ ಗುಲ್ಫಾಮ್ ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದರು. ದೇವರ ಚಿಕ್ಕನಹಳ್ಳಿ ಮುಖ್ಯರಸ್ತೆಯಲ್ಲಿರುವ ಅಲಯನ್ಸ್‌ ಫ್ಯಾಬ್ರಿಕೇಷನ್ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದರು. ಇದೇ ಮಳಿಗೆಯಲ್ಲಿ ಆರೋಪಿ ದಿಲ್ಖುಷ್ ಸಹ ಕೆಲಸಕ್ಕಿದ್ದ’ ಎಂದು ಪೊಲೀಸರು ಹೇಳಿದರು.

ADVERTISEMENT

‘ಗುಲ್ಫಾಮ್ ಹಾಗೂ ದಿಲ್ಖುಷ್, ಒಂದೇ ರಾಜ್ಯದವರು. ಕೆಲಸದ ವಿಚಾರವಾಗಿ ಇಬ್ಬರೂ ಪರಸ್ಪರ ಜಗಳ ಮಾಡುತ್ತಿದ್ದರು. ‘ಕೆಲಸದಲ್ಲಿ ನಿನಗೆ ಅನುಭವ ಹೆಚ್ಚಿದೆ. ಹೀಗಾಗಿ, ನಿತ್ಯವೂ ನೀನು ಹೆಚ್ಚು ಕೆಲಸ ಮಾಡಬೇಕು’ ಎಂದು ದಿಲ್ಖುಷ್ ಮೇಲೆ ಗುಲ್ಫಾಮ್ ಒತ್ತಡ ಹೇರುತ್ತಿದ್ದರು. ‘ಹೆಚ್ಚು ಕೆಲಸ ಮಾಡುವುದಿಲ್ಲ’ ಎಂಬುದಾಗಿ ದಿಲ್ಖುಷ್ ಹೇಳುತ್ತಿದ್ದ’ ಎಂದು ಪೊಲೀಸರು ತಿಳಿಸಿದರು.

‘ಕೆಲಸದ ವಿಚಾರವಾಗಿ ಇಬ್ಬರ ನಡುವೆ ವೈಮನಸ್ಸು ಮೂಡಿತ್ತು. ಡಿ.18ರಂದು ಮಲಗಿದ್ದ ಗುಲ್ಫಾಮ್ ತಲೆ ಮೇಲೆ ಆರೋಪಿ ಕಲ್ಲು ಎತ್ತಿ ಹಾಕಿದ್ದ. ತೀವ್ರ ಗಾಯಗೊಂಡು ಗುಲ್ಫಾಮ್ ಸ್ಥಳದಲ್ಲೇ ಮೃತಪಟ್ಟಿದ್ದರು’ ಎಂದರು.

ಗೋಣಿಚೀಲದಲ್ಲಿ ಮೃತದೇಹ: ‘ಗೋಣಿಚೀಲದಲ್ಲಿ ಮೃತದೇಹ ಇರಿಸಿದ್ದ ಆರೋಪಿ, ಮಳಿಗೆ ಬಳಿಯೇ ಎಸೆದಿದ್ದ. ನಂತರ, ತನ್ನೂರಿಗೆ ಹೋಗಿದ್ದ. ಗುಲ್ಫಾಮ್ ನಾಪತ್ತೆಯಾಗಿದ್ದ ಬಗ್ಗೆ ಸಂಬಂಧಿಕರು ದೂರು ನೀಡಿದ್ದರು. ಡಿ. 21ರಂದು ಗೋಣಿಚೀಲದಲ್ಲಿ ಮೃತದೇಹ ಪತ್ತೆಯಾಗಿತ್ತು’ ಎಂದು ಪೊಲೀಸರು ಹೇಳಿದರು.

‘ದಿಲ್ಖುಷ್ ಮೇಲೆಯೇ ಹೆಚ್ಚು ಅನುಮಾನವಿತ್ತು. ಉತ್ತರ ಪ್ರದೇಶಕ್ಕೆ ಹೋಗಿದ್ದ ವಿಶೇಷ ತಂಡ, ಆತನನ್ನು ಬಂಧಿಸಿ ನಗರಕ್ಕೆ ಕರೆತಂದಿದೆ. ಹೆಚ್ಚು ಕೆಲಸ ಮಾಡು ಎಂದಿದ್ದಕ್ಕೆ ಗುಲ್ಫಾಮ್‌ನನ್ನು ಕೊಂದಿರುವುದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.