ಬೆಂಗಳೂರು:ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ಹೂಳನ್ನು ರೈತರಿಗೆ ನೀಡಲು ನಿರ್ಧರಿಸಲಾಗಿದೆ.
ಬೆಳ್ಳಂದೂರು ಕೆರೆಯಿಂದ 60.60 ಲಕ್ಷ ಕ್ಯೂಬಿಕ್ ಮೀಟರ್ ಹಾಗೂ ವರ್ತೂರಿನಿಂದ 30.87 ಲಕ್ಷ ಕ್ಯೂಬಿಕ್ ಮೀಟರ್‌ನಷ್ಟು ಹೂಳು ಎತ್ತಲು ಯೋಜಿಸಲಾಗಿದೆ. ಮೂಲಗಳ ಪ್ರಕಾರ, ಈ ಹೂಳನ್ನು 15 ಸಾವಿರ ಎಕರೆಗೂ ಹೆಚ್ಚು ಪ್ರದೇಶಕ್ಕೆ ಗೊಬ್ಬರವಾಗಿ ಬಳಸಬಹುದಾಗಿದೆ.
ಕೆರೆಗಳಿಂದ ತೆಗೆಯಲಾಗುವ ಹೂಳನ್ನು ಎಲ್ಲಿ ವಿಲೇವಾರಿ ಮಾಡಬೇಕು ಎಂಬ ಬಗ್ಗೆ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಬಿಡಿಎ) ಇನ್ನೂ ನಿರ್ಧಾರ ಮಾಡಿಲ್ಲ. ಈಗಾಗಲೇ ಗುರುತಿಸಲಾಗಿರುವ ಕ್ವಾರಿಗಳಲ್ಲಿ ಹೂಳನ್ನು ಹಾಕುವ ಬಗ್ಗೆ ಮಾತುಕತೆ ನಡೆಯುತ್ತಿದೆ.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ನಿರ್ದೇಶನದ ಮೇರೆಗೆ, ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ ಹೆಗ್ಡೆ ನೇತೃತ್ವದಲ್ಲಿ ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ಪುನರುಜ್ಜೀವನ ಕುರಿತು ವರದಿ ನೀಡಲು 2018ರಲ್ಲಿ ಸಮಿತಿ ರಚನೆ ಮಾಡಲಾಗಿದೆ.
‘ಹೂಳನ್ನು ಪರೀಕ್ಷಿಸಿದ ನಂತರ, ರೈತರಿಗೆ ನೀಡುವ ಕುರಿತು ಸಮಿತಿಯು ಮಾತುಕತೆ ನಡೆಸಿದೆ’ ಎಂದು ಐಐಎಸ್‌ಸಿ ವಿಜ್ಞಾನಿ ಟಿ.ವಿ. ರಾಮಚಂದ್ರ ದೃಢಪಡಿಸಿದರು.
ಕಲುಷಿತವಲ್ಲದ ಹೂಳನ್ನು ನೀಡಬೇಕು ಎಂಬುದು ರೈತರ ಬೇಡಿಕೆಯಾಗಿದೆ.
‘ಬಿಡಿಎ ಮತ್ತು ಬಿಬಿಎಂಪಿಯ ಅಧಿಕಾರಿಗಳು ಈ ಕೆರೆಗಳ ಹೂಳನ್ನು ರೈತರಿಗೆ ಉಚಿತವಾಗಿ ನೀಡುವುದಾಗಿ ಹೇಳುತ್ತಿದ್ದಾರೆ. ಆದರೆ, ಇದು ಕಲುಷಿತಗೊಂಡಿರಬಾರದು. ಪರೀಕ್ಷಿಸದೆ ನಮಗೆ ನೀಡಬಾರದು. ಈ ಹಿಂದೆ, ಕೆರೆಯೊಂದರ ಹೂಳನ್ನು ರಿಯಾಯಿತಿ ದರದಲ್ಲಿ ನಮಗೆ ನೀಡಿತ್ತು. ಆದರೆ, ಹೂಳನ್ನು ಪರೀಕ್ಷೆ ಮಾಡಿರಲಿಲ್ಲ. ಅದನ್ನು ಬಳಸಿದ್ದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಿತ್ತು’ ಎಂದು ವರ್ತೂರಿನ ರೈತರೊಬ್ಬರು ಹೇಳಿದರು.
‘ಹೂಳಿನ ಒಂದು ಪದರ ಮಾತ್ರ ಬಳಸಲು ಯೋಗ್ಯವಾಗಿರುತ್ತದೆ. ಕೆರೆಯಲ್ಲಿನ ಸಾವಯವ ಅಂಶಗಳಿಂದ ಇದು ರೂಪುಗೊಂಡಿರುವುದರಿಂದ ಇದನ್ನು ಬಳಸಬಹುದಾಗಿದೆ. ಹೂಳಿನಲ್ಲಿ ಹಾನಿಕಾರಕ ಅಂಶಗಳಿದ್ದರೆ ಅದನ್ನು ರೈತರಿಗೆ ನೀಡಬಾರದು’ ಎಂದು ಕೆರೆ ವಾರ್ಡನ್ ಜಗದೀಶ ರೆಡ್ಡಿ ಹೇಳಿದರು.
‘ಬಳಸಲು ಯೋಗ್ಯವಲ್ಲದ ಹೂಳನ್ನು ಈಗಾಗಲೇ ಗುರುತಿಸಲಾಗಿರುವ ಕ್ವಾರಿಗಳಲ್ಲಿ ಹಾಕಲಾಗುವುದು’ ಎಂದು ಅವರು ತಿಳಿಸಿದರು.
ಗಡುವು ವಿಸ್ತರಣೆಗೆ ಮನವಿ
ವರದಿ ಸಲ್ಲಿಸಲು ನೀಡಲಾಗಿದ್ದ ಗಡುವು ವಿಸ್ತರಣೆ ಮಾಡಬೇಕು ಎಂದು ಸಂತೋಷ ಹೆಗ್ಡೆ ನೇತೃತ್ವದ ಸಮಿತಿ ಎನ್‌ಜಿಟಿಗೆ ಮನವಿ ಮಾಡಿದೆ. ಇದೇ ತಿಂಗಳಿನಲ್ಲಿ ವರದಿ ನೀಡಬೇಕಿತ್ತು.
ವರದಿಗೆ ಎನ್‌ಟಿಜಿ ಹಸಿರು ನಿಶಾನೆ ನೀಡಿದರೆ, ಬೆಳ್ಳಂದೂರು–ವರ್ತೂರು ಕೆರೆಗಳ ಪುನರುಜ್ಜೀವನ ಕಾರ್ಯ ಆರಂಭಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.