ADVERTISEMENT

ಬೆಳ್ಳಂದೂರು ಕೆರೆ ಹೂಳೆತ್ತುವ ಕಾಮಗಾರಿ ಸ್ಥಗಿತ: ಎನ್‌ಜಿಟಿಗೆ ಬಿಡಿಎ ‍ಪ್ರಮಾಣಪತ್ರ

ಶೇ 70 ಕಾಮಗಾರಿ ಪೂರ್ಣ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 16:38 IST
Last Updated 25 ಅಕ್ಟೋಬರ್ 2024, 16:38 IST
<div class="paragraphs"><p>ಬೆಳ್ಳಂದೂರು ಕೆರೆ</p></div>

ಬೆಳ್ಳಂದೂರು ಕೆರೆ

   

ನವದೆಹಲಿ: ಒಳಚರಂಡಿಯ ಕೊಳಚೆ ನೀರು ಸೇರಿ ಕಲುಷಿತಗೊಂಡಿರುವ ಬೆಳ್ಳಂದೂರು ಕೆರೆಯ ಹೂಳೆತ್ತುವ ಕಾಮಗಾರಿ ನಾಲ್ಕು ವರ್ಷಗಳಿಂದ ಆಮೆಗತಿಯಿಂದ ಸಾಗಿದೆ. ಮಳೆಯ ನೆಪವೊಡ್ಡಿ ಮೇ ತಿಂಗಳಿಂದ ಹೂಳೆತ್ತುವ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. 

ಜಲಕಾಯದ ಅಭಿವೃದ್ಧಿ ಕೆಲಸಗಳ ಪ್ರಗತಿ ಕುರಿತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಚೆನ್ನೈ ಪೀಠಕ್ಕೆ ಪ್ರಮಾಣಪತ್ರ ಸಲ್ಲಿಸಿದೆ. 

ADVERTISEMENT

ಕೆರೆಯಂಗಳದಲ್ಲಿ ನಿರ್ಮಾಣ ಕಾಮಗಾರಿ ನಡೆಸಲಾಗುತ್ತಿದೆ ಎಂದು ಆರೋಪಿಸಿ ಬೆಂಗಳೂರಿನ ನಿವಾಸಿ ಹರಿಕೃಷ್ಣ ಪೈಡಿ ಎಂಬವರು ಎನ್‌ಜಿಟಿಯಲ್ಲಿ ಪ್ರಕರಣ ದಾಖಲಿಸಿದ್ದರು. ‘ಜಲಕಾಯದಲ್ಲಿ ಯಾವುದೇ ನಿರ್ಮಾಣ ಕಾಮಗಾರಿ ನಡೆಸುತ್ತಿಲ್ಲ. ಕೆರೆ ಅಭಿವೃದ್ಧಿ ಸಂಬಂಧ ಎನ್‌ಜಿಟಿ ‍ಪ್ರಧಾನ ಪೀಠ 2017ರಲ್ಲಿ ನೀಡಿರುವ ಆದೇಶ ಅನುಷ್ಠಾನಗೊಳಿಸಲಾಗುತ್ತಿದೆ’ ಎಂದು ಬಿಡಿಎ ಸ್ಪಷ್ಟಪಡಿಸಿತ್ತು. 

ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳ ಮಾಲಿನ್ಯದ ಬಗ್ಗೆ ಹಾಗೂ ಇವುಗಳ ಅಭಿವೃದ್ಧಿಯನ್ನು ಕಡೆಗಣಿಸಿದ ಬಗ್ಗೆ ಹಸಿರು ನ್ಯಾಯ ಮಂಡಳಿ ತರಾಟೆಗೆ ತೆಗೆದುಕೊಂಡ ಬಳಿಕ ಇವುಗಳ ಅಭಿವೃದ್ಧಿಗೆ ಬಿಡಿಎ ಯೋಜನೆ ರೂಪಿಸಿತ್ತು. 2020ರ ಫೆಬ್ರುವರಿಯಲ್ಲಿ ಟೆಂಡರ್‌ ಆಹ್ವಾನಿಸಿತ್ತು. ರಾಜಕಾಲುವೆಯ ನೀರು ಈ ಕೆರೆಗಳ ಒಡಲನ್ನು ಸೇರದಂತೆ ತಡೆಯಲು ಪ್ರತ್ಯೇಕ ಕಾಲುವೆ ನಿಮಿಸಿ, ಈ ಕೆರೆಗಳಲ್ಲಿದ್ದ ನೀರನ್ನು ಖಾಲಿ ಮಾಡಿಸಿತ್ತು. ಹೂಳೆತ್ತುವ ಕಾಮಗಾರಿ ಆರಂಭವಾಗುವಷ್ಟರಲ್ಲಿ ಕೋವಿಡ್‌ 19 ನಿಯಂತ್ರಣಕ್ಕೆ ಲಾಕ್‌ಡೌನ್‌ ಜಾರಿಯಾಗಿತ್ತು.

ಈ ಎರಡು ಕೆರೆಗಳಲ್ಲಿ 85 ಲಕ್ಷ ಟನ್‌ಗಳಷ್ಟು ಹೂಳು ತುಂಬಿದೆ ಎಂದು ಬಿಡಿಎ ಅಂದಾಜು ಮಾಡಿದೆ. ಒಳಚರಂಡಿ ನೀರು ಮತ್ತು ಕೈಗಾರಿಕೆಗಳ ತ್ಯಾಜ್ಯನೀರಿನಿಂದಾಗಿ ಈ ಕೆರೆಯನ್ನು ಸೇರಿದ ರಾಸಾಯನಿಕಗಳಿಂದ ಕಲುಷಿತಗೊಂಡಿರುವ ಹೂಳಿನ ವಿಲೇವಾರಿಯೂ ಪ್ರಾಧಿಕಾರದ ಪಾಲಿಗೆ ಸವಾಲಿನದಾಗಿದೆ.

ಕೆರೆಯಲ್ಲಿ 32.33 ಲಕ್ಷ ಕ್ಯೂಬಿಕ್‌ ಮೀಟರ್‌ನಷ್ಟು ಹೂಳು ಇದೆ. ಇದರಲ್ಲಿ 22.69 ಲಕ್ಷ ಕ್ಯೂಬಿಕ್‌ ಮೀಟರ್‌ನಷ್ಟು ಹೂಳನ್ನು ವಿಲೇವಾರಿ ಮಾಡಲಾಗಿದೆ. ಅಂದರೆ, ಶೇ 70ರಷ್ಟು ಹೂಳೆತ್ತಲಾಗಿದೆ. ಈ ವರ್ಷದ ಮೇ ಮೊದಲ ವಾರದಲ್ಲಿ ಮಳೆ ಆರಂಭವಾಯಿತು. ಇದರಿಂದಾಗಿ, ಕಾಮಗಾರಿ ಪ್ರದೇಶದಲ್ಲಿ ಮಳೆ ನೀರು ನಿಂತು ಕಾಮಗಾರಿಗೆ ತೊಂದರೆ ಉಂಟಾಯಿತು. ಮಳೆ ಹೆಚ್ಚಿದ್ದರಿಂದ ಕಾಮಗಾರಿ ಸ್ಥಗಿತಗೊಂಡಿತು. ಆ ಬಳಿಕ ಹೂಳೆತ್ತುವ ಕೆಲಸಕ್ಕೆ ಮರುಚಾಲನೆ ನೀಡಿಲ್ಲ ಎಂದು ಬಿಡಿಎ ಆಯುಕ್ತರು ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ. 

ಅಭಿವೃದ್ಧಿ ಯೋಜನೆಯ ಮೇಲ್ವಿಚಾರಣೆ ನೋಡಿಕೊಳ್ಳಲು ನಿವೃತ್ತ ಲೋಕಾಯುಕ್ತ ಎನ್‌.ಸಂತೋಷ್ ಹೆಗ್ಡೆ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ಎನ್‌ಜಿಟಿ ರಚಿಸಿತ್ತು. ಈ ಸಮಿತಿಯು ವರದಿ ಸಲ್ಲಿಸಿತ್ತು. ಈ ಸಮಿತಿಯಲ್ಲಿದ್ದ ವಿಜ್ಞಾನಿ ಟಿ.ವಿ.ರಾಮಚಂದ್ರ ಸಲಹೆಯ ಮೇರೆಗೆ ಜೌಗು ‍ಪ್ರದೇಶ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಕೋರಮಂಗಲ ಹಾಗೂ ಅಗರ ಮುಖ್ಯ ಕಾಲುವೆಯಲ್ಲಿ ನಡೆಯುತ್ತಿರುವ ಈ ಕೆಲಸ ಶೇ 30ರಷ್ಟು ಪೂರ್ಣಗೊಂಡಿದೆ. ಮಳೆಯಿಂದಾಗಿ ಈ ಕೆಲಸವೂ ನಿಂತಿದೆ ಎಂದು ಆಯುಕ್ತರು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.